ನಮ್ಮ ಸಾರ್ವಜನಿಕ-ಸಾಮಾಜಿಕ ಪ್ರಜ್ಞೆಗೆ ಏನಾಗಿದೆ?

ಸುತ್ತಲಿನ ಹಿಂಸೆ, ಕ್ರೌರ್ಯ ಮತ್ತು ದೌರ್ಜನ್ಯಗಳು ಕೇವಲ ಕಾನೂನು ಸುವ್ಯವಸ್ಥೆಯ ಪ್ರಶ್ನೆಯೇ?

Update: 2023-01-05 05:29 GMT

ನಾವೇ ಸೃಷ್ಟಿಸಿಕೊಂಡಿರುವ ಜಾತಿ-ಮತ-ಲಿಂಗ ಮತ್ತಿತರ ಅಸ್ಮಿತೆಗಳಿಂದಾಚೆಗಿನ ಘಟನೆಗಳು ಎಷ್ಟೇ ಅಮಾನುಷವಾಗಿದ್ದರೂ, ಎಷ್ಟೇ ಹೃದಯವಿದ್ರಾವಕವಾಗಿದ್ದರೂ ಅದು ಸಮಾಜದಲ್ಲಿ ಸಂಚಲನ ಉಂಟುಮಾಡುವುದಿಲ್ಲ ಎಂಬ ದುರಂತ ವಾಸ್ತವದ ನೆಲೆಯಲ್ಲೇ ನಾವು ನಮ್ಮ ಹಾಗೂ ನಮ್ಮನ್ನಾಳುವ ಸರಕಾರಗಳ ಸಾಮಾಜಿಕ ಜವಾಬ್ದಾರಿಯನ್ನು ಪ್ರಶ್ನಿಸಿಕೊಳ್ಳಬೇಕಿದೆ.

ಸಮಾಜದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಒಂದು ಆರೋಗ್ಯಕರ ವಾತಾವರಣವನ್ನು ಉಂಟುಮಾಡುವ ಜವಾಬ್ದಾರಿ ಯಾರದು? ಬಹುಶಃ ಕಳೆದ ಒಂದು ವರ್ಷದಲ್ಲಿ ಕರ್ನಾಟಕದಲ್ಲಿ ನಡೆದಿರುವ ಹತ್ಯೆ, ಹಲ್ಲೆ, ಅತಿಕ್ರಮ ದಾಳಿ, ಅತ್ಯಾಚಾರ, ದೌರ್ಜನ್ಯ, ಅಸ್ಪೃಶ್ಯತೆಯ ಪ್ರಕರಣಗಳು ಇವೆಲ್ಲವನ್ನೂ ಗಮನಿಸಿದಾಗ ಈ ಪ್ರಶ್ನೆ ಮತ್ತಷ್ಟು ಗಹನವಾಗುತ್ತದೆ.

ದೈನಂದಿನ ಸಾರ್ವಜನಿಕ ಬದುಕಿನಲ್ಲಿ ನಡೆಯುವ ಅಕ್ರಮ ಮತ್ತು ಅತಿಕ್ರಮಗಳ ವಿರುದ್ಧ ಸಮಾಜದ ಒಳಗಿನಿಂದಲೇ ಪ್ರತಿರೋಧ, ವಿರೋಧ ವ್ಯಕ್ತವಾಗುತ್ತಲೇ ಇರುತ್ತದೆ. ಕೆಲವೊಮ್ಮೆ ಹತಾಶೆ, ಆಕ್ರೋಶಗಳೂ ಸ್ಫೋಟಗೊಳ್ಳುವುದನ್ನು ಕಂಡಿದ್ದೇವೆ. ಎಂತಹುದೇ ಆಘಾತಕಾರಿ ಘಟನೆಯಾದರೂ ಆಡಳಿತ ವ್ಯವಸ್ಥೆಯ ಪ್ರತಿಕ್ರಿಯೆ ಡಿಜಿಟಲ್ ಭಾಷೆಯಲ್ಲಿ ಹೇಳುವುದಾದರೆ ಒಂದು ಛಿಞಟ್ಝಠಿಛಿ ಮಾದರಿಯಲ್ಲಿರುತ್ತದೆ. ‘‘ಗಂಭೀರ ತನಿಖೆ ನಡೆಸಲಾಗುತ್ತದೆ, ಆರೋಪಿಗಳನ್ನು ಬಂಧಿಸಲಾಗಿದೆ, ಅಪರಾಧಿಗಳಿಗೆ ಸೂಕ್ತ ಶಿಕ್ಷೆ ನೀಡಲಾಗುತ್ತದೆ ಮತ್ತು ಸಂತ್ರಸ್ತರಿಗೆ ನ್ಯಾಯ ದೊರಕಿಸಲಾಗುತ್ತದೆ’’ ಎನ್ನುವ ಈ ಛಿಞಟ್ಝಠಿಛಿನಿಂದ ಹೊರತಾಗಿಯೂ ಸುತ್ತಲಿನ ಬೆಳವಣಿಗೆಗಳ ಬಗ್ಗೆ ಕಣ್ಣಾಡಿಸಿದಾಗ, ನಾಗರಿಕತೆಯ ಉನ್ನತ ಹಂತದಲ್ಲಿರುವ ಒಂದು ಸಮಾಜ, ಅಮಾನುಷತೆಯನ್ನು ಹೇಗೆ ಸಹಿಸಿಕೊಳ್ಳಲು ಸಾಧ್ಯ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ.

ಕ್ರೌರ್ಯ ಮತ್ತು ಹಿಂಸೆಯ ಪರಾಕಾಷ್ಠೆ

ಕೆಲವು ದಿನಗಳ ಹಿಂದೆ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಘಟನೆ ಅಧುನಿಕ ಮಾಧ್ಯಮ ಪರಿಭಾಷೆಯಲ್ಲಿ ಹೇಳುವುದಾದರೆ ಜಗತ್ತನ್ನೇ ‘ಬೆಚ್ಚಿ ಬೀಳಿಸಬೇಕಿತ್ತು’. ಬೆಂಗಳೂರಿನ ಹೊರವಲಯದಲ್ಲಿರುವ ಈ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ 19 ವರ್ಷದ ಬಿ.ಟೆಕ್. ವಿದ್ಯಾರ್ಥಿನಿಯೊಬ್ಬಳನ್ನು, ಮತ್ತೊಂದು ಕಾಲೇಜಿನ ಹುಡುಗ ಶಾಲೆಯ ಕೊಠಡಿಗೇ ನುಗ್ಗಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ತಾನೂ ಇರಿದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾನೆ. ಇದು ಕಾಲೇಜು ತೆರೆದಿದ್ದಾಗಲೇ, ಅನ್ಯ ವಿದ್ಯಾರ್ಥಿಗಳ ಎದುರಿನಲ್ಲೇ ನಡೆದಿರುವ ಘಟನೆ.

ಮತ್ತೊಂದು ಘಟನೆಯಲ್ಲಿ ನರಗುಂದ ತಾಲೂಕಿನ ಹಡಲಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕ ನೊಬ್ಬ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 10 ವರ್ಷದ ಬಾಲಕನನ್ನು ಕಬ್ಬಿಣದ ಸಲಾಕೆಯಿಂದ ಥಳಿಸಿರುವುದೇ ಅಲ್ಲದೆ ಆ ಬಾಲಕನನ್ನು ಮೊದಲನೇ ಮಹಡಿಯಿಂದ ಕೆಳಕ್ಕೆಸೆದು ಹತ್ಯೆ ಮಾಡಿದ್ದಾನೆ. ಬಾಲಕನ ತಾಯಿಯ ಮೇಲೆಯೂ ಹಲ್ಲೆ ನಡೆಸಿದ್ದಾನೆ. ಈ ಘಟನೆ ಹತ್ತಾರು ಶಾಲಾ ಬಾಲಕರ ಸಮ್ಮುಖದಲ್ಲೇ ನಡೆದಿದೆ. ಪಾಂಡವಪುರದ ಬಾಲಕಿಯರ ಸರಕಾರಿ ಹಾಸ್ಟೆಲ್ ಒಂದರಲ್ಲಿ ವಿದ್ಯಾರ್ಥಿನಿಯರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಪ್ರೌಢಶಾಲಾ ಮುಖ್ಯ ಶಿಕ್ಷಕನನ್ನು ಥಳಿಸಿರುವ ಘಟನೆಯೂ ನಡೆದಿದೆ. ತಮ್ಮ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನು ದಿಟ್ಟತನದಿಂದ ಎದುರಿಸಿದ ಬಾಲಕಿಯರು ಎಲ್ಲರ ಪ್ರಶಂಸೆಗೊಳಗಾಗಿರುವುದು ಸಹಜವೇ ಆಗಿದೆ.

ಆದರೂ ಈ ಘಟನೆಯನ್ನು ಕೇವಲವಾಗಿ ಪರಿಗಣಿಸಲಾಗುವುದಿಲ್ಲ. ಅಕ್ಟೋಬರ್‌ನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಮಳವಳ್ಳಿಯಲ್ಲಿ ಟ್ಯೂಷನ್‌ಗೆಂದು ಬರುತ್ತಿದ್ದ 10 ವರ್ಷದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಹತ್ಯೆ ಮಾಡಿರುವ ಶಿಕ್ಷಕ ಮೃತ ದೇಹವನ್ನು ನೀರಿನ ತೊಟ್ಟಿಯೊಂದರಲ್ಲಿ ಎಸೆದು ಪರಾರಿಯಾಗಿದ್ದಾನೆ. ದಿಲ್ಲಿಯಲ್ಲಿ ನಡೆದ ಶ್ರದ್ಧಾ ವಾಲ್ಕರ್ ಹತ್ಯೆ ಮತ್ತು ಇದೇ ರೀತಿಯ ಹಲವು ಘಟನೆಗಳೂ ಕಳೆದ ಆರು ತಿಂಗಳಲ್ಲಿ ವರದಿಯಾಗಿವೆೆ. ಹತ್ಯೆ ಮಾಡಿ ಮೃತ ದೇಹವನ್ನು ಕತ್ತರಿಸಿ ಎಸೆಯುವ ಕ್ರೂರ ಮನಸ್ಥಿತಿಯನ್ನು ಕೆಲವು ಪ್ರಕರಣಗಳು ಬಿಂಬಿಸಿವೆ.

ಇದರೊಂದಿಗೇ ಗಮನಿಸಬೇಕಾದ್ದು ಕರ್ನಾಟಕದ ಕರಾವಳಿಯಲ್ಲಿ, ರಾಜಧಾನಿಯಲ್ಲೂ ನಡೆದಂತಹ ಕೆಲವು ರಾಜಕೀಯ ಪ್ರೇರಿತ, ಕೋಮುದ್ವೇಷದ, ಮತದ್ವೇಷ ಪ್ರೇರಿತ ಹತ್ಯೆಗಳು. ಹಲವು ಯುವಕರು ದ್ವೇಷ ರಾಜಕಾರಣದ ಹರಕೆಯ ಕುರಿಗಳಾಗಿ ಜೀವ ತೆತ್ತಿದ್ದಾರೆ. ಈ ಘಟನೆಗಳ ನಡುವೆಯೇ ಚಿತ್ರದುರ್ಗದ ಮುರುಘಾ ಮಠದ ಪ್ರಕರಣ ವಿಕೃತ-ಕ್ರೂರ ಸಮಾಜದ ಮತ್ತೊಂದು ಮುಖವಾಡವನ್ನು ನಮ್ಮ ಮುಂದೆ ತೆರೆದಿಟ್ಟಿದೆ.

ಈ ಎಲ್ಲ ಘಟನೆಗಳ ಬಗ್ಗೆ ತನಿಖೆ ನಡೆಯುತ್ತಿದ್ದು ಶೋಧ, ಬಂಧನ, ವಿಚಾರಣೆ, ನ್ಯಾಯಾಂಗ ಪ್ರಕ್ರಿಯೆಗಳು ಸಹಜವಾಗಿಯೇ ನಡೆಯುತ್ತದೆ. ಎಷ್ಟೋ ವರ್ಷಗಳ ತನಿಖೆ ಮತ್ತು ವಿಚಾರಣೆಯ ನಂತರ ಸಾಕ್ಷ್ಯಾಧಾರಗಳ ಕೊರತೆಯಿಂದ ಅಪರಾಧಗಳು ವಿಸ್ಮತಿಗೆ ಜಾರುವ ಸಾಧ್ಯತೆಗಳೂ ಇವೆ. ಕೆಲವರಿಗೆ ಶಿಕ್ಷೆಯಾಗಲೂಬಹುದು. ಕಾನೂನು ಮತ್ತು ನ್ಯಾಯಾಂಗ ವ್ಯಾಪ್ತಿಯ ಈ ಪ್ರಕ್ರಿಯೆಗಳ ಹೊರತಾಗಿಯೂ ಒಂದು ಪ್ರಜ್ಞಾವಂತ ಸಮಾಜವಾಗಿ, ಈ ಸಮಾಜದ ಉಸ್ತುವಾರಿ ಹೊತ್ತಿರುವ ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯಾಗಿ ನಾವು ಯೋಚಿಸಬೇಕಿರುವುದೇನನ್ನು? ಅಸ್ಮಿತೆಗಳಿಂದ ಮುಕ್ತವಾದ ಸಾಮಾಜಿಕ ಜವಾಬ್ದಾರಿ

ನಾವೇ ಸೃಷ್ಟಿಸಿಕೊಂಡಿರುವ ಜಾತಿ-ಮತ-ಲಿಂಗ ಮತ್ತಿತರ ಅಸ್ಮಿತೆಗಳಿಂದಾಚೆಗಿನ ಘಟನೆಗಳು ಎಷ್ಟೇ ಅಮಾನುಷವಾಗಿದ್ದರೂ, ಎಷ್ಟೇ ಹೃದಯವಿದ್ರಾವಕವಾಗಿದ್ದರೂ ಅದು ಸಮಾಜದಲ್ಲಿ ಸಂಚಲನ ಉಂಟುಮಾಡುವುದಿಲ್ಲ ಎಂಬ ದುರಂತ ವಾಸ್ತವದ ನೆಲೆಯಲ್ಲೇ ನಾವು ನಮ್ಮ ಹಾಗೂ ನಮ್ಮನ್ನಾಳುವ ಸರಕಾರಗಳ ಸಾಮಾಜಿಕ ಜವಾಬ್ದಾರಿಯನ್ನು ಪ್ರಶ್ನಿಸಿಕೊಳ್ಳಬೇಕಿದೆ. ನರಗುಂದ ಶಾಲೆಯಲ್ಲಿ ಹತ್ಯೆಗೀಡಾದ 10 ವರ್ಷದ ಬಾಲಕನ ಪ್ರಕರಣವನ್ನೇ ಗಂಭೀರವಾಗಿ ಗಮನಿಸಿದಾಗ, ಈ ಘಟನೆಯ ವಿರುದ್ಧ ಯಾವುದೇ ಸಾಂಘಿಕ ಪ್ರತಿರೋಧ ಕಂಡುಬರಲಿಲ್ಲ, ಅನ್ಯಾಯ ದೌರ್ಜನ್ಯಗಳ ಹುಯಿಲು ಕೇಳಿಬರಲಿಲ್ಲ. ನ್ಯಾಯಕ್ಕಾಗಿ ಹಕ್ಕೊತ್ತಾಯದ ಧ್ವನಿಗಳು ರಾಜ್ಯವ್ಯಾಪಿ ಮೊಳಗಲಿಲ್ಲ.

ಬಹುಶಃ ನತದೃಷ್ಟ ಬಾಲಕ ಸಾಮಾಜಿಕವಾಗಿ ನಾವು ನಿರ್ಮಿಸಿಕೊಂಡಿರುವ ಅಸ್ಮಿತೆಗಳ ಚೌಕಟ್ಟಿನಿಂದ ಹೊರತಾಗಿದ್ದ ಎನಿಸುತ್ತದೆ. ಏನೇ ಆದರೂ ಈ ಘಟನೆ ನಡೆದಿರುವುದು ಶಾಲೆ ತೆರೆದಿದ್ದ ಸಮಯದಲ್ಲಿ. ಪ್ರಪಂಚಕ್ಕೆ ಇನ್ನೂ ಕಣ್ತೆರೆಯದ ಬಾಲಕ ಬಾಲಕಿಯರ ಸಮ್ಮುಖದಲ್ಲಿ. ತೆರೆಮರೆಯಲ್ಲಿ ನಡೆದು ನಂತರ ಬೆಳಕಿಗೆ ಬಂದ ಘಟನೆ ಇದಲ್ಲ. ಎಲ್ಲ ಕಣ್ಣೆದುರಿನಲ್ಲೇ ಆ ಬಾಲಕನನ್ನು ಥಳಿಸಿ ಕೊಲ್ಲಲಾಗಿದೆ. ಆಕೆಯ ತಾಯಿಯ ಮೇಲೆ ಹಲ್ಲೆ ನಡೆಸಲಾಗಿದೆ. ಬಹುಶಃ ಈ ಭೀಕರ ಘಟನೆಯನ್ನು ಕೆಲವು ವಿದ್ಯಾರ್ಥಿಗಳಾದರೂ ನೋಡಿರುವ ಸಾಧ್ಯತೆಗಳಿವೆ. ಈ ಕ್ರೌರ್ಯವನ್ನು ಕಣ್ಣಾರೆ ಕಂಡ ಉಳಿದ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಈ ಘಟನೆ ಯಾವ ರೀತಿಯ ಪ್ರಭಾವ ಬೀರಿರಬಹುದು? ಇದಕ್ಕೆ ಮನಶ್ಶಾಸ್ತ್ರಜ್ಞರೇ ಉತ್ತರ ಹೇಳಬೇಕು. ಆದರೆ ಸಾಮಾನ್ಯ ಜ್ಞಾನ ಇರುವವರಿಗೂ ತಿಳಿಯಬಹುದಾದ ಅಂಶವೆಂದರೆ, ಆ ಉಳಿದ ಮಕ್ಕಳು ಆಘಾತಕ್ಕೊಳಗಾಗಿರುತ್ತಾರೆ. ಅವರ ಸುಪ್ತ ಪ್ರಜ್ಞೆಯಲ್ಲಿ ಈ ಘಟನೆ ಅಚ್ಚಳಿಯದೆ ಉಳಿಯುವ ಸಾಧ್ಯತೆಗಳಿವೆ. ಅಕ್ಷರ ಕಲಿಸುವ ಗುರು ಹಂತಕನೂ ಆಗಬಹುದು ಎಂಬ ವಾಸ್ತವವನ್ನು ನೋಡಿದ ಈ ಮಕ್ಕಳ ಮನಸ್ಸಿನಲ್ಲಿ ಭಯ, ಆತಂಕಗಳೊಂದಿಗೇ ಶಾಶ್ವತವಾದ ವ್ಯಾಕುಲತೆ ಅಥವಾ ತಲ್ಲಣಗಳೂ ದಾಖಲಾಗಬಹುದು.

ಇದು ಆ ಮಕ್ಕಳ ಭವಿಷ್ಯದಲ್ಲಿ ಯಾವ ರೀತಿಯ ಪರಿಣಾಮಗಳನ್ನು ಉಂಟುಮಾಡಬಹುದು ? ಪಾಂಡವಪುರ, ಮಳವಳ್ಳಿ, ಮುರುಘಾಮಠ, ಪ್ರೆಸಿಡೆನ್ಸಿ ಕಾಲೇಜು ಈ ಎಲ್ಲ ಪ್ರಕರಣಗಳಲ್ಲೂ ಆಘಾತಕ್ಕೀಡಾಗಿರುವುದು ಮಕ್ಕಳೇ ಎನ್ನುವುದನ್ನು ಗಮನಿಸಬೇಕಿದೆ. ಈ ಮಕ್ಕಳಿಗೆ ಸಾಂತ್ವನ ನೀಡಲು ಸಮಾಜ ಮುಂದೆ ಬರುವುದು ಸಹಜ. ಧೈರ್ಯ ನೀಡುವ ಪ್ರಯತ್ನಗಳೂ ಕೆಲವು ಸಂಘಟನೆಗಳಿಂದ ನಡೆದಿವೆ. ನ್ಯಾಯಾನ್ಯಾಯಗಳ ನಿಷ್ಕರ್ಷೆಯ ಪ್ರಶ್ನೆಯನ್ನು ಬದಿಗಿಟ್ಟು ನೋಡಿದರೂ, ಕೆಲವು ಜನಪರ ದನಿಗಳಾದರೂ ಆಘಾತಕ್ಕೊಳಗಾದ ಮಕ್ಕಳೊಂದಿಗೆ ನಿಂತು ಆತ್ಮಸ್ಥೈರ್ಯವನ್ನು ತುಂಬುವ ಪ್ರಯತ್ನವನ್ನು ಮಾಡಿವೆ. ಆದರೆ ಇಲ್ಲಿಗೆ ಪ್ರಶ್ನೆ ಬಗೆಹರಿಯವುದಿಲ್ಲ. ಕೆಲವು ಮೂಲಭೂತ ಪ್ರಶ್ನೆಗಳನ್ನು ನಮಗೆ ನಾವೇ ಹಾಕಿಕೊಳ್ಳಬೇಕಿದೆ :

1. ಶಾಲಾ ಕಾಲೇಜುಗಳ ಆವರಣದಲ್ಲಿ, ಪಾಠದ ಕೊಠಡಿಯ ಒಳಗೆ ಮಾರಕಾಸ್ತ್ರಗಳಿಂದ ಹತ್ಯೆ/ಹಲ್ಲೆ ನಡೆಯುವುದು ಹೇಗೆ ಸಾಧ್ಯ?

2. ವಿದ್ಯೆ ಮತ್ತು ಸಂಸ್ಕೃತಿಯನ್ನು ಕಲಿಸುವ ಗುರು ಬಾಲಕಿಯರ ಮೇಲೆ ದೌರ್ಜನ್ಯ ಎಸಗುತ್ತಿರುವುದು ಏಕೆ?

3. ಶಾಲಾ ಕಾಲೇಜು ಆವರಣಗಳಲ್ಲೂ, ಎಲ್ಲರ ಸಮ್ಮುಖ ದಲ್ಲೇ ಹತ್ಯೆ ಮಾಡಲು, ಹಲ್ಲೆ ನಡೆಸಲು ಅವಕಾಶಗಳು ಲಭ್ಯವಾಗಿರುವುದಾದರೂ ಹೇಗೆ?

4. ‘‘ಜೀವ ನೀಡುವ ಶಕ್ತಿ ಇಲ್ಲದವರಿಗೆ ಜೀವ ತೆಗೆಯುವ ಹಕ್ಕು ಇರುವುದಿಲ್ಲ’’ ಎಂಬ ಸಾರ್ವತ್ರಿಕ ಅಭಿಪ್ರಾಯದ ಹೊರತಾಗಿಯೂ, ಹತ್ಯೆ ಮಾಡುವುದು ಒಂದು ಸಹಜ ಪ್ರಕ್ರಿಯೆಯಾಗಿರುವುದಾದರೂ ಹೇಗೆ? 5. ಕಾಲೇಜು ವಿದ್ಯಾರ್ಥಿಗಳು ಮತ್ತು ಬಾಹ್ಯ ಸಮಾಜದ ಯುವಕರ ಬಳಿ ಮಾರಕಾಸ್ತ್ರಗಳು ಸುಲಭವಾಗಿ ಲಭ್ಯವಾಗುತ್ತಿರುವುದಾದರೂ ಹೇಗೆ ?

ಈ ಜಟಿಲ, ಗಹನವಾದ ಪ್ರಶ್ನೆಗಳಿಗೆ ಉತ್ತರಗಳನ್ನು ಶೋಧಿಸುತ್ತಲೇ, ನಾಗರಿಕತೆಯ ವಾರಸುದಾರರಾಗಿ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಿರುವುದು ಢಾಳಾಗಿ ಕಾಣುತ್ತಿರುವ ಸಾರ್ವಜನಿಕ ‘ಬೌದ್ಧಿಕ ನಿಷ್ಕ್ರಿಯತೆಯನ್ನು’.ಅಸ್ಮಿತೆಗಳ ಚೌಕಟ್ಟಿಗೆ ಒಳಪಡದ ಹತ್ಯೆಗಳು/ಅಸಹಜ ಸಾವುಗಳು ಸಹಜ ಸಾವುಗಳಾಗಿಬಿಡುವ ಒಂದು ಅಪಾಯಕಾರಿ ಸನ್ನಿವೇಶವನ್ನು ನಾವು ಕಾಣುತ್ತಿದ್ದೇವೆ.

ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ ಸಂಭವಿಸಿದ 35 ಸಾವುಗಳು, ಸಮೀಪದ ಮಾಡ್ರಳ್ಳಿ ಮತ್ತು ಬಿಸಿವಲವಾಡಿಯ ಕಲ್ಲುಗಣಿ ಅವಘಡದಲ್ಲಿ ಸಂಭವಿಸಿದ ಹಲವು ಸಾವುಗಳು ನಮ್ಮ ನಡುವೆ ಸೂಕ್ಷ್ಮ ಚಿಂತನೆಯನ್ನೂ ಬಡಿದೆಬ್ಬಿಸಿಲ್ಲ ಎಂದಾದರೆ, ನಮ್ಮ ಸಾಮಾಜಿಕ ಪ್ರಜ್ಞೆಗೆ ಏನಾಗಿದೆ ಎಂಬ ಕುತೂಹಲವಾದರೂ ನಮ್ಮಲ್ಲಿ ಮೂಡಬೇಕಲ್ಲವೇ? ಈ ಘಟನೆಗಳ ಹಿಂದೆ ಮೂಲತಃ ಕಾನೂನು ಉಲ್ಲಂಘನೆಯ ಪ್ರಶ್ನೆಯೇ ಇದ್ದರೂ, ಈ ಸಾವುಗಳಿಗೆ ನಾವು ಮತ್ತು ನಮ್ಮನ್ನಾಳುವ ಸರಕಾರ ಹಾಗೂ ವಿಶಾಲ ಸಮಾಜ ಎಲ್ಲರೂ ಬಾಧ್ಯರಲ್ಲವೇ? ಇಷ್ಟಾದರೂ ಇಂತಹ ದುರಂತಗಳು, ಅವಘಡಗಳು ನಡೆಯುತ್ತಲೇ ಇರುತ್ತವೆ ನಾವು ಮರೆಯುತ್ತಲೇ ಹೋಗುತ್ತೇವೆ.

ಕಾನೂನು ಉಲ್ಲಂಘಿಸಿದವರು, ಕಾನೂನನ್ನು ಲೆಕ್ಕಿಸದವರು ನಿರ್ಭಿಡೆಯಿಂದ ತಿರುಗಾಡುತ್ತಲೇ ಇರುತ್ತಾರೆ. ಈ ಔದ್ಯಮಿಕ/ಸಾಂಸ್ಥಿಕ ದುರಂತಗಳ ಹೊರತಾಗಿ ನಾವು ಯೋಚಿಸಬೇಕಿರುವುದು ಸಮಾಜದಲ್ಲಿ, ವಿಶೇಷವಾಗಿ ಯುವ ಸಮುದಾಯದಲ್ಲಿ ಕ್ರೌರ್ಯ ಮತ್ತು ಹಿಂಸೆ ಏಕೆ ನೆಲೆಗಾಣುತ್ತಿದೆ? ‘‘ನಾನು ಯಾರನ್ನಾದರೂ ಕೊಲ್ಲಬಹುದು’’ ಎಂಬ ಹುಂಬತನ ಯುವ ಸಮುದಾಯದಲ್ಲಿ ಮೂಡಬೇಕಾದರೆ, ಈ ಮನೊಭಾವವನ್ನು ಪ್ರಚೋದಿಸುವ ಒಂದು ಸಾಮಾಜಿಕ/ರಾಜಕೀಯ/ಸಾಂಸ್ಕೃತಿಕ ಪ್ರಕ್ರಿಯೆಯೂ ಇರಲೇಬೇಕು.

ಈ ಪ್ರಚೋದನೆಗಳಿಗೆ ಜಾತಿ-ಮತ ಶ್ರೇಷ್ಠತೆ, ಕೋಮು ದ್ವೇಷ ಮತ್ತು ಮತದ್ವೇಷ ಒಂದು ಕಾರಣವಾದರೆ ಮತ್ತೊಂದೆಡೆ ಸ್ತ್ರೀ ದ್ವೇಷ, ಪುರುಷಾಧಿಪತ್ಯದ ಮನೋಭಾವಗಳೂ ಕಾರಣವಾಗುತ್ತವೆ. ಈ ಮನೋಭಾವವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸರಕಾರಗಳಾಗಲೀ, ಸಾರ್ವಜನಿಕ ಸಂಘ-ಸಂಸ್ಥೆಗಳಾಗಲೀ, ಬೌದ್ಧಿಕ ಶಕ್ತಿ ಕೇಂದ್ರಗಳಾಗಲೀ ಯಾವ ಪ್ರಯತ್ನಗಳನ್ನು ಮಾಡುತ್ತಿವೆ? ರಾಜಕೀಯ ಪಕ್ಷಗಳು ಈ ಬಗ್ಗೆ ಆಲೋಚನೆ ಮಾಡುವ ವ್ಯವಧಾನವನ್ನೂ ಕಳೆದುಕೊಂಡಿರುವ ಸಂದರ್ಭದಲ್ಲಿ, ನಾಗರಿಕತೆಯ ವಾರಸುದರಾರರಾಗಿ ಸಮಾಜದ ಸುಶಿಕ್ಷಿತ, ಪ್ರಜ್ಞಾವಂತ ಪ್ರಜೆಗಳಾದರೂ ತಮ್ಮ ಬಾಧ್ಯತೆಗಳನ್ನು ಅರಿತುಕೊಳ್ಳಬೇಕಲ್ಲವೇ? ಕೊಲ್ಲುವವರನ್ನು, ಅತ್ಯಾಚಾರಿಗಳನ್ನು, ಹಲ್ಲೆಕೋರರನ್ನು ಶಿಕ್ಷಿಸಲು ಕಾನೂನು ವ್ಯವಸ್ಥೆ ಮತ್ತು ನ್ಯಾಯಾಂಗ ಸನ್ನದ್ಧವಾಗಿದೆ. ಆದರೆ ಒಂದು ಸಮಾಜವಾಗಿ ನಮ್ಮ ಆದ್ಯತೆಗಳೇನು?

ಕಾರಣಗಳೇನೇ ಇರಲಿ, ಯುವ ಪೀಳಿಗೆಗೆ ನಿಮಗೆ ಕೊಲ್ಲುವ ಹಕ್ಕಿದೆ ಆಯುಧ ಹಿಡಿಯಿರಿ ಎಂಬ ಸಂದೇಶ ನೀಡುವುದು ಸಹಜ ಪ್ರಕ್ರಿಯೆಯಾಗಿರುವ ವಿಷಮ ಸನ್ನಿವೇಶವನ್ನು ನಾವು ಎದುರಿಸುತ್ತಿ ದ್ದೇವೆ. ಆಯುಧಧಾರಿಗಳ ಮನಸ್ಥಿತಿಯನ್ನು ನಿಯಂತ್ರಿಸುವ ಕ್ಷಮತೆಯಾಗಲೀ, ನಿರ್ಬಂಧಿಸುವ ಪ್ರಾಮಾಣಿಕತೆಯಾಗಲೀ, ದಂಡಿಸುವ ಸಮಾಜ-ನಿಷ್ಠೆಯಾಗಲೀ ನಮ್ಮಲ್ಲಿ ಮರೆಯಾಗುತ್ತಿದೆ. ಇಲ್ಲಿಯೂ ನಾವೇ ನಿರ್ಮಿಸಿಕೊಂಡಿರುವ ಅಸ್ಮಿತೆಯ ಚೌಕಟ್ಟುಗಳು ನಮ್ಮ ಆಲೋಚನಾ ಲಹರಿಯನ್ನು ನಿಯಂತ್ರಿಸುತ್ತವೆ.

ನಮ್ಮ ಪ್ರತಿಕ್ರಿಯೆ, ಸ್ಪಂದನೆ-ಪ್ರತಿಸ್ಪಂದನೆ ಎಲ್ಲವೂ ಅಸ್ಮಿತೆಗಳಿಗನುಸಾರವಾಗಿ ವ್ಯಕ್ತವಾಗುತ್ತವೆ. ಈ ಅಸ್ಮಿತೆಗಳಿಗೆ ನಮ್ಮದೇ ಆದ ಮತೀಯ, ಜಾತಿನಿಷ್ಠೆಯ, ಸಾಮುದಾಯಿಕ, ಲಿಂಗಾಧಾರಿತ ಲಕ್ಷಣಗಳನ್ನು ಆರೋಪಿಸುತ್ತಾ, ನೈತಿಕತೆಯ ಪಾತಾಳಕ್ಕೆ ಕುಸಿಯುತ್ತಿರುವ ಸಮಾಜವನ್ನು ನಿರ್ಲಿಪ್ತತೆಯಿಂದ ವೀಕ್ಷಿಸುತ್ತಿರುತ್ತೇವೆ. ಶೈಕ್ಷಣಿಕ, ಆಧ್ಯಾತ್ಮಿಕ, ಧಾರ್ಮಿಕ ಮತ್ತು ಸ್ವಾಸ್ಥ್ಯ ಕೇಂದ್ರಗಳೂ ಮಾನವನ ಅತಿರೇಕದ ವರ್ತನೆಗಳಿಗೆ, ಕ್ರೌರ್ಯ, ಹಿಂಸೆ, ದೌರ್ಜನ್ಯ, ಅತ್ಯಾಚಾರ ಮತ್ತು ಅಸ್ಪೃಶ್ಯತೆಯಂತಹ ಹೀನಾಚರಣೆಗಳಿಗೆ ಭೂಮಿಕೆಯಾಗುತ್ತಿರುವ ಈ ವಿಷಮ ಸನ್ನಿವೇಶದಲ್ಲಿ, ನಮ್ಮ ನಾಗರಿಕ ಲಕ್ಷಣವನ್ನು ಉಳಿಸಿಕೊಳ್ಳಲಾದರೂ ನಾವು ಜಾಗೃತರಾಗಬೇಕಾಗಿದೆ.