"ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಮಂಡಳಿ" ಸ್ಥಾಪಿಸುವುದಾಗಿ ಸಿಎಂ ಘೋಷಣೆ

ಮಂದಿನ ಬಜೆಟ್ ನಲ್ಲಿ ಮಂಡಳಿಗೆ ಸೂಕ್ತ ಅನುದಾನ: ಬೊಮ್ಮಾಯಿ

Update: 2023-01-05 06:21 GMT

ಬೆಂಗಳೂರು: ಈಡಿಗ, ಬಿಲ್ಲವ, ನಾಮದಾರಿಗಳು ಸೇರಿದಂತೆ 26 ಉಪಪಂಗಡಗಳ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಉನ್ನತಿಗಾಗಿ "ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ಮಂಡಳಿ"ಯನ್ನು ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಮಾಡಿದ್ದಾರೆ.

ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಶಾಸಕ ಕೆ.ರಘುಪತಿ ಭಟ್, ಬಿಲ್ಲವ ಸಮಾಜದ ಸ್ವಾಮೀಜಿಗಳು ಹಾಗೂ ಮುಖಂಡರು ನಿಯೋಗವು ಗುಗುವಾರ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಈ ಕುರಿತು ಮನವರಿಕೆ ಮಾಡಿದಾಗ "ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ಮಂಡಳಿ" ಯನ್ನು ಸ್ಥಾಪಿಸುವುದಾಗಿ ಘೋಷಿಸಿದರು.

"ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ಮಂಡಳಿ"ಗೆ ಮುಂದಿನ ಆಯವ್ಯದಲ್ಲಿ ಸೂಕ್ತ ಅನುದಾನವನ್ನು ಘೋಷಣೆ ಮಾಡುವುದಾಗಿ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ.

ಈ ಹಿಂದೆ ಈಡಿಗ, ಬಿಲ್ಲವ, ನಾಮದಾರಿಗಳು ಸೇರಿದಂತೆ 26 ಉಪಪಂಗಡಗಳ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಉನ್ನತಿಗಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಒಂದು ಸಪರೇಟ್ ಕೋಶವನ್ನು ರಚಿಸಿ ಸಪರೇಟ್ ಕಾರ್ಫರ್ಸ್ ಫಂಡ್ ಸ್ಥಾಪಿಸಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲು "ಶ್ರೀ ನಾರಾಯಣ ಗುರು ಅಭಿವೃದ್ಧಿ ಕೋಶ" ಸ್ಥಾಪಿಸಲಾಗಿತ್ತು, ಅದನ್ನು ಪರಿವರ್ತಿಸಿ "ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ಮಂಡಳಿ" ರಚಿಸುವುದಾಗಿ ಘೋಷಿಸಲಾಗಿದೆ.

ಬಿಲ್ಲವ ಹಾಗೂ ಈಡಿಗ ಸಮಾಜದ ಬಹುಮುಖ್ಯ ಬೇಡಿಕೆಯನ್ನು ಈಡೇರಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಶಾಸಕ ರಘುಪತಿ ಭಟ್ ಅಭಿನಂದನೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಆರ್ಯ ಈಡಿಗ ಮಹಾಸಂಸ್ಥಾನ ಸೋಲೂರು ಶ್ರೀ ರೇಣುಕಾಪೀಠದ ಗುರು ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಸೋಲೂರು ಮಠದ ಆರ್ಯಶ್ರೀ ರೇಣುಕಾನಂದ ಸ್ವಾಮೀಜಿ, ಸಾಗರ ಶಾಸಕರು ಎಂ.ಎಸ್.ಐ.ಎಲ್. ನಿಗಮ ಮಂಡಳಿ ಅಧ್ಯಕ್ಷ ಹರತಾಲು ಹಾಲಪ್ಪ, ಕಾಪು ಶಾಸಕರಾದ ಲಾಲಾಜಿ ಆರ್. ಮೆಂಡನ್, ಮೂಡುಬಿದಿರೆ ಶಾಸಕರಾದ ಉಮಾನಾಥ್ ಕೋಟ್ಯಾನ್, ಭಟ್ಕಳ ಶಾಸಕರಾದ ಸುನೀಲ್ ನಾಯ್ಕ್, ಬಿಲ್ಲವ ಸಮಾಜದ ಮುಖಂಡರಾದ ಪ್ರವೀಣ್ ಪೂಜಾರಿ, ಬಿ ಎನ್ ಶಂಕರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Similar News