ಮತದಾರರ ಅಂತಿಮ ಪಟ್ಟಿ ಪ್ರಕಟ | 221 ಕ್ಷೇತ್ರಗಳಲ್ಲಿ 5.05 ಕೋಟಿ ಮತದಾರರು: ಮನೋಜ್ ಕುಮಾರ್ ಮೀನಾ

- ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅತಿಹೆಚ್ಚು, ಶೃಂಗೇರಿ ಕ್ಷೇತ್ರದಲ್ಲಿ ಅತಿ ಕಡಿಮೆ ಮತದಾರರು ► - 12,31,540 ಹೆಸರುಗಳ ಸೇರ್ಪಡೆ

Update: 2023-01-05 14:26 GMT

ಬೆಂಗಳೂರು, ಜ. 5: 2023ರ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸಿರುವ ಚುನಾವಣಾ ಆಯೋಗ, ರಾಜ್ಯದಲ್ಲಿನ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಿದೆ. ರಾಜ್ಯದ 221 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 5.05 ಕೋಟಿಗೂ ಅಧಿಕ ಮಂದಿ ಮತದಾರರಿದ್ದು, ಈ ಬಾರಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.

ಗುರುವಾರ ನಗರದ ವಾತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿನ ವಾರ್ತಾಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 221 ಕ್ಷೇತ್ರದಲ್ಲಿ ಪ್ರಸ್ತುತ ಒಟ್ಟು 5,05,48,553 ಮತದಾರರಿದ್ದು, ಆ ಪೈಕಿ 2,54,49,725 ಪುರುಷರು, 2,50,94,326 ಮಹಿಳೆಯರು, 4,502 ಮಂದಿ ಇತರ ಮತದಾರರಿದ್ದಾರೆ. ಒಟ್ಟು 47,814 ಮಂದಿ ಸೇವಾ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.

ರಾಜ್ಯದ ಒಟ್ಟು 224 ಕ್ಷೇತ್ರಗಳ ಪೈಕಿ ಶಿವಾಜಿನಗರ, ಚಿಕ್ಕಪೇಟೆ ಮತ್ತು ಮಹದೇವಪುರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯು ಇದೇ ತಿಂಗಳ 15ರಂದು ಪ್ರಕಟವಾಗಲಿದೆ. ಮತದಾರರ ವೈಯಕ್ತಿಕ ವಿವರ ಕಳವು ಆರೋಪದ ಹಿನ್ನೆಲೆಯಲ್ಲಿ ಆಯೋಗದಿಂದ ಪರಿಶೀಲನೆ ನಡೆಸಲಾಗುತ್ತಿದ್ದು, ಬಳಿಕ ಆ ಕ್ಷೇತ್ರಗಳ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಅವರು ಸ್ಪಷ್ಟಣೆ ನೀಡಿದರು. 

ಪ್ರಸ್ತುತ ಪ್ರಕಟವಾಗಿರುವ 221 ಕ್ಷೇತ್ರಗಳ ಪೈಕಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅತಿಹೆಚ್ಚು ಮತದಾರರು-6,50,532 ಮಂದಿ ಮತದಾರರಿದ್ದು, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕ್ಷೇತ್ರದಲ್ಲಿ ಅತಿ ಕಡಿಮೆ ಮತದಾರರು-1,66,521 ಮಂದಿ ಮತದಾರರಿದ್ದಾರೆ. ಮತದಾರರು ಇಂದೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂಬ ಕುರಿತು ಪರಿಶೀಲನೆ ಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಪ್ರಸ್ತುತ ಅಂತಿಮ ಮತದಾರರ ಪಟ್ಟಿ ಬಿಡುಗಡೆ ಮಾಡಿದ್ದು, 7,01,243 ಮಂದಿ ಯುವ ಮತದಾರರು ಹೊಸದಾಗಿ ಸೇರ್ಪಡೆಯಾಗಿದ್ದು, ಮತದಾರರ ಲಿಂಗಾನುಪಾತದಲ್ಲಿ ಮಹಿಳಾ ಪ್ರಾತಿನಿಧ್ಯ ಏರಿಕೆಯಾಗಿದೆ. 1 ಸಾವಿರ ಮಂದಿ ಪುರುಷರಿಗೆ/ 988 ಮಹಿಳೆಯರು. ಕಳೆದ ಬಾರಿ 983 ಅನುಪಾತವಿತ್ತು. ಈ ಬಾರಿ 5 ಪಾಯಿಂಟ್ ಮಹಿಳಾ ಮತದಾರರ ಅನುಪಾತದಲ್ಲಿ ಏರಿಕೆ ಕಂಡಿದೆ ಎಂದು ಅವರು ಮಾಹಿತಿ ನೀಡಿದರು.

ಕರಡು ಮತದಾರರ ಪಟ್ಟಿಯನ್ನು ನವೆಂಬರ್ ತಿಂಗಳಲ್ಲಿ ಪ್ರಕಟಿಸಿದ್ದು, ಆ ಬಳಿಕ 18,32,169 ಮತದಾರರು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದು, ಆ ಬಳಿಕ ಶೇ.5ರಷ್ಟು ನೋಂದಣಿಯಾಗಿದೆ. 7,01,243 ಮತದಾರರು 18-19 ವರ್ಷದ ಯುವಜನಾಂಗದವರಾಗಿದ್ದಾರೆ. 3,88,064 ಪುರುಷರು, 3,13,040 ಮಹಿಳೆಯರು ಮತ್ತು 139 ಇತರೆ ಮತದಾರರಿದ್ದಾರೆ. ಇನ್ನೂ ಲೈಂಗಿಕ ಕಾರ್ಯಕರ್ತರು 1,00,834, ಬುಡಕಟ್ಟು ಜನಾಂಗದವರು 30,517 ಮತ್ತು ತೃತೀಯ ಲಿಂಗಿಗಳು 41,312 ಮಂದಿ ನೋಂದಣಿಯಾಗಿದ್ದಾರೆ ಎಂದು ಮನೋಜ್ ಕುಮಾರ್ ಮೀನಾ ತಿಳಿಸಿದರು.

ಅಂತಿಮ ಪಟ್ಟಿಯ ಪರಿಷ್ಕರಣೆ ವೇಳೆಯಲ್ಲಿ ಒಟ್ಟು 12,31,540 ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದ್ದು, 6,18,965 ಹೆಸರುಗಳನ್ನು ತೆಗೆದು ಹಾಕಲಾಗಿದೆ. 7,88,485 ಮಂದಿಯ ಮಾಹಿತಿ ಮಾರ್ಪಾಡಿಸಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ನೋಂದಣಿಗೆ ನಾಲ್ಕು ಬಾರಿ ಅವಕಾಶ: ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಜ.1ರೊಳಗೆ 18 ವರ್ಷಗಳನ್ನು ಪೂರ್ಣಗೊಳಿಸಿದವರು ಮಾತ್ರ ನೋಂದಾಯಿಸಿಕೊಳ್ಳಬಹುದಿತ್ತು. ಆದರೆ, ಈಗ ನಾಲ್ಕು ಬಾರಿ ನೋಂದಣಿಗೆ ಅವಕಾಶ ನೀಡಲಾಗಿದೆ. ಜನವರಿ 1, ಎಪ್ರಿಲ್ 1, ಜುಲೈ 1 ಮತ್ತು ಅಕ್ಟೋಬರ್ 1ರೊಳಗೆ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಮನೋಜ್ ಕುಮಾರ್ ಮೀನಾ ತಿಳಿಸಿದರು.

ಹೊಸ ಮತದಾರರಾಗಿ ಸೇರ್ಪಡೆಗೆ 17 ವರ್ಷ ಮೇಲ್ಪಟ್ಟವರು ಮೊದಲೇ ಅರ್ಜಿ ಹಾಕಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಈವರೆಗೆ 25,299 ಮಂದಿ ಅರ್ಜಿಯನ್ನು ಸಲ್ಲಿಕೆ ಮಾಡಿದ್ದಾರೆ. 18 ವರ್ಷ ಪೂರ್ಣಗೊಳಿಸುವ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಲು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ನೋಂದಣಾಧಿಕಾರಿ ನೇಮಕ: ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳದ 18 ವರ್ಷದ ಯುವಜನಾಂಗದವರು 2.50 ಲಕ್ಷಕ್ಕೂ ಅಧಿಕ ಮಂದಿ ಇದ್ದು, ಅವರನ್ನು ಹೆಸರು ನೋಂದಣಿಗೆ ಪ್ರತ್ಯೇಕ ಸಹಾಯಕ ನೋಂದಣಾಧಿಕಾರಿಯನ್ನು ನೇಮಕ ಮಾಡಲಾಗಿದೆ ಎಂದು ಮನೋಜ್‍ಕುಮಾರ್ ಮೀನಾ ತಿಳಿಸಿದರು.

2004ರ ಜನ್ಮ ನೋಂದಣಿಯನ್ವಯ 9.80ಲಕ್ಷ ನೋಂದಣಿ ಆಗಿವೆ. 18ವರ್ಷ ಪೂರ್ಣಗೊಂಡಿರುವವರು ಈವರೆಗೆ 7,01,243 ಮಂದಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದು, ಇನ್ನು, 2.50ಲಕ್ಷಕ್ಕೂ ಅಧಿಕ ಮಂದಿ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಿಲ್ಲ. ಅವರ ಹೆಸರನ್ನು ನೋಂದಣಿ ಮಾಡಲು ಪ್ರತ್ಯೇಕ ಸಹಾಯಕ ಮತದಾರರ ನೋಂದಣಾಧಿಕಾರಿಯನ್ನು ನೇಮಕ ಮಾಡಲಾಗಿದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ರಾಜ್ಯ ಚುನಾವಣಾ ಆಯೋಗದ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿಗಳಾದ ವೆಂಕಟೇಶ್ ಕುಮಾರ್, ರಾಜೇಂದ್ರ ಚೋಳನ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ಬುಡಕಟ್ಟು ಜನಾಂಗದ ನೋಂದಣಿಗೆ ಅಭಿಯಾನ: ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಕೊರಗ, ಮೈಸೂರು, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಜೇನು ಕುರುಬ ಸಮುದಾಯವು ಸೇರಿದಂತೆ ಆದಿವಾಸಿ ಮತ್ತು ಬುಡಕಟ್ಟು ಜನಾಂಗದವರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ವಿಶೇಷ ಅಭಿಯಾನ ಆರಂಭಿಸಿದ್ದು, 30,517 ಮಂದಿಯನ್ನು ನೋಂದಣಿ ಮಾಡಲಾಗಿದೆ’

-ಮನೋಜ್‍ಕುಮಾರ್ ಮೀನಾ ಮುಖ್ಯ ಚುನಾವಣಾಧಿಕಾರಿ 
............
ತನಿಖಾ ವರದಿ ಬಳಿಕ ಕ್ರಮ: ‘ಮತದಾರರ ವೈಯಕ್ತಿಕ ಮಾಹಿತಿ ಕಳವು ಪ್ರಕರಣಕ್ಕೆ ಸಂಬಂಧ ‘ಚಿಲುಮೆ ಸಂಸ್ಥೆ’ಯ ವಿರುದ್ಧ ತನಿಖೆ ಪ್ರಗತಿಯಲ್ಲಿದ್ದು, ಜ.15ರೊಳಗೆ ಪ್ರಾದೇಶಿಕ ಆಯುಕ್ತ ಆದಿತ್ಯ ಬಿಸ್ವಾಸ್ ವರದಿ ನೀಡಲಿದ್ದಾರೆ. ಆ ವರದಿ ಬಂದ ಬಳಿಕ ಕಾನೂನಿನ ಅನ್ವಯ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಒಂದು ವರ್ಷದ ಅವಧಿಯಲ್ಲಿ ಮತದಾರರ ಪಟ್ಟಿಯಲ್ಲಿ ತೆಗೆದು ಹಾಕಿರುವ ಹೆಸರುಗಳ ಮಾಹಿತಿಯನ್ನು ಆಯೋಗದ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ’

-ಮನೋಜ್‍ಕುಮಾರ್ ಮೀನಾ ಮುಖ್ಯ ಚುನಾವಣಾಧಿಕಾರಿ 

-----------------------------------------------

ಮತದಾರರ ಪಟ್ಟಿಯನ್ನು ರಾಜ್ಯದ ಮುಖ್ಯ ಚುನಾವಣಾಧಿಕಾರಿಯ ಅಧಿಕೃತ ಜಾಲತಾಣ http://ceo.karnataka.gov.in/ ದಲ್ಲಿ ಪಿಡಿಎಫ್ ಆವೃತಿಯನ್ನು ಹಾಕಲಾಗುತ್ತದೆ. ಸಾರ್ವಜನಿಕರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದ ಬಗ್ಗೆ ಪರಿಶೀಲಿಸಿ, ಖಚಿತಪಡಿಸಿಕೊಳ್ಳಬೇಕು. ಜ.5ರ ನಂತರ ನಿರಂತರ ಪರಿಷ್ಕರಣೆ ಅವಧಿಯಲ್ಲಿ ಅರ್ಜಿಗಳನ್ನು www.nvsp.in ಅಥವಾ voter portal ಅಥವಾ voter helpline mobile App ನ ಮುಖಾಂತರ ಸಲ್ಲಿಸಲು ಅವಕಾಶವಿದೆ.

Similar News