ಫೈಝ್ ಅಹ್ಮದ್ ಫೈಝ್ ಕವಿತೆಗಳು

Update: 2023-01-05 16:28 GMT

ತುಮಕೂರು ಜಿಲ್ಲೆಯ ಪಾವಗಡದ ಕೃಷಿ ಕುಟುಂಬದ ಲುತ್ಫುಲ್ಲಾ ಕೆ. ಅತೀಕ್ 1991ರಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಐಎಎಸ್‌ಗೆ ಆಯ್ಕೆಯಾದವರು. ಮಂಗಳೂರಿನಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿ ವೃತ್ತಿ ಜೀವನ ಪ್ರಾರಂಭಿಸಿದ ಇವರು ಮಂಗಳೂರಿನ ಅಳಿಯನೂ ಹೌದು. ಕರ್ತವ್ಯ ನಿರ್ವಹಿಸಿದ ಎಲ್ಲೆಡೆ ಜನಪರ ಕಳಕಳಿಯ ದಕ್ಷ ಅಧಿಕಾರಿ ಎಂದು ಮನ್ನಣೆ ಗಳಿಸಿದವರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಧಾನ ಕಾರ್ಯದರ್ಶಿಯಾಗಿ, ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಜಂಟಿ ಕಾರ್ಯದರ್ಶಿಯಾಗಿ, ವಿಶ್ವ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕರ ಹಿರಿಯ ಸಲಹೆಗಾರನಾಗಿ ಹಲವು ಪ್ರತಿಷ್ಠಿತ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿ ನ್ಯಾಯ ಒದಗಿಸಿದವರು. ಸದ್ಯ ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಯಾಗಿದ್ದಾರೆ. ಉತ್ತಮ ಕನ್ನಡ, ಉರ್ದು ಲೇಖಕರೂ ಆಗಿರುವ ಎಲ್. ಕೆ. ಅತೀಕ್ ಅವರು ಖ್ಯಾತ ಕವಿ ಫೈಝ್ ಅಹ್ಮದ್ ಫೈಝ್ ಅವರ ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಎಲ್.ಕೆ. ಅತೀಕ್

ನೋಡಿ ಇಲ್ಲಿಂದ ನಗರ

ನೋಡಿ ಇಲ್ಲಿಂದ ನಗರ

ರಚಿಸಲಾಗಿದೆ ವೃತ್ತ ವೃತ್ತಗಳಲಿ

ಭಿತ್ತಿಗಳು ಸೆರೆಮನೆಯ ಆಕೃತಿಯಲಿ

ಪ್ರತಿಯೊಂದು ದಿಕ್ಕಿನಲಿ

ಕೈದಿಗಳ ಓಡಾಟ ಪ್ರತಿಯೊಂದು ಹಾದಿಯಲಿ

ಮೈಲಿಗಲ್ಲಿಲ್ಲ, ಗುರಿಗಳಿಲ್ಲ,

ಆತ್ಮೀಯತೆಯ ಸಂಪ್ರದಾಯಗಳಿಲ್ಲ

ಬಿರುಸು ನಡೆದರೆ ಯಾರಾದರು

ಕೇಳುತ್ತದೆ ಮನಸು

ಬರಲಿಲ್ಲವೇಕೆ ನಿಲ್ಲು! ಎಂಬ ಕೂಗು

ಕೈಗಳಾಡಿಸಿದರೆ ಯಾರಾದರು

ಪ್ರಶ್ನಿಸುತ್ತಿದೆ ಮನಸು

ಝಳ ಝಳ ಸರಪಳಿಗಳ ಸದ್ದೇಕಿಲ್ಲ?

ನೋಡಿದರೆ ಇಲ್ಲಿಂದ ನಗರ ಸಮಸ್ತ ಜೀವಿಗಳಲಿ

ತೃಪ್ತರಾರು ಪ್ರಜ್ಞಾವಂತರಾರು?

ಪ್ರತಿಯೊಂದು ಯುವಕನ ಕೊರಳಲಿ ನೇಣು ಪ್ರತಿಯೊಂದು ಯುವತಿಯ ಕಿವಿಯಲ್ಲಿ ದಾಸ್ಯದ ಕೊಂಡಿ

ದೂರ ದೀಪದ ಸುತ್ತು ತುಳುಕುವ ನೆರಳುಗಳು

ಅದು ನೋವಿನ ಕೂಟವೋ, ಮದ್ಯಪಾನದ ಗೋಷ್ಠಿಯೋ

ಆ ಪ್ರತಿಯೊಂದು ಗೋಡೆ ಬಾಗಿಲಿಗೆ ಹರಡಿದ ಬಣ್ಣ

ಸ್ಪಷ್ಟವಾಗುತ್ತಿಲ್ಲ ಇಲ್ಲಿಂದ, ಪುಷ್ಪಗಳೊ, ರಕ್ತವೊ

(ಕರಾಚಿ, ಮಾರ್ಚ್ 1965)

ಹೂಗಳು ಬಾಡಿದವು ಎಲ್ಲಾ

ಹೂಗಳು ಬಾಡಿದವು ಎಲ್ಲಾ

ನಿಲ್ಲುತ್ತಿಲ್ಲ ಆಕಾಶದ ಕಣ್ಣೀರು

ಮಬ್ಬಾಗಿವೆ ದೀಪಗಳೆಲ್ಲ

ನುಚ್ಚಾಗಿವೆ ಕನ್ನಡಿಗಳೆಲ್ಲ

ಆಡಿ ಸೋತಿವೆ ವಾದ್ಯಗಳೆಲ್ಲ

ಆರಿ ಮಲಗಿವೆ ಗೆಜ್ಜೆಗಳೆಲ್ಲ

ಆ ಮೋಡಗಳ ಹಿಂದೆ

ದೂರ ಈ ರಾತ್ರಿಯ ಕಂದ

ನೋವಿನ ನಕ್ಷತ್ರ

ಮಿಣುಗುತಿದೆ

ಹೊಳೆಯುತಿದೆ

ಮುಗುಳು ನಗೆ ನಗುತಿದೆ

(ಲಂಡನ್ 1978)

ಒಂಟಿತನ

ಬಂದಿಹರೇ ತಿರುಗಿ ಯಾರಾದರೂ ನೊಂದ ಹೃದಯವೆ?

ಇಲ್ಲಿ ಯಾರೂ ಇಲ್ಲ ದಾರಿಹೋಕನಿರಬೇಕು

ಇನ್ನೆಲ್ಲಾದರು ಹೋಗುವನು

ಉರುಳಿತು ಇರುಳು ಚದರುತ್ತಿದೆ ನಕ್ಷತ್ರಗಳ ದಂಡು

ತುಳುಕಾಡುತ್ತಿವೆ ಭವನದ ನಿದ್ರೆಗ್ರಸ್ತ ದೀಪಗಳು

ಮಲಗಿತು ಪ್ರತಿಯೊಂದು ಹಾದಿ ದಾರಿ ಕಾದು ಕಾದು

ಅಪರಿಚಿತ ಧೂಳು ಅಳಿಸಿದೆ ಹೆಜ್ಜೆಗುರ್ತುಗಳ ಕುರುಹು

ಆರಿಸಿರಿ ದೀಪಗಳ ಹೊರಬರಲಿ ಸೋಮರಸ

ನಿದ್ರೆಯಿಲ್ಲದ ನಿಮ್ಮ ಕದಗಳಿಗೆ ಬೀಗ ಹಾಕಿ

ಈಗ ಇಲ್ಲಿ ಯಾರು ಯಾರೂ ಬರರು

ಮುಂಜಾವು ಅರಳಿದರೆ ಆಕಾಶದಲಿ

ನಿನ್ನ ಕೆನ್ನೆಗಳ ಬಣ್ಣದ ಮಳೆ

ಇರುಳು ಹರಡಿದರೆ ಜಗದಲಿ

ಬೀಳುವುದು ನಿನ್ನ ಕೂದಲ ಜಲಪಾತ

ಕೊಂಚ ಪ್ರೀತಿಸಿದೆ, ಸ್ವಲ್ಪ ಕೆಲಸ ಮಾಡಿದೆ

ಅದೃಷ್ಟವಂತರವರು

ಪ್ರೇಮವನು ಕರ್ತವ್ಯ ಅನುವರು

ಅಥವಾ

ಕರ್ತವ್ಯವನು ಪ್ರೇಮಿಸುವರು

ನಾನು ಜೀವನ ಇಡೀ ಮಗ್ನವಿದ್ದೆ

ಕೊಂಚ ಪ್ರೀತಿಸಿದೆ, ಸ್ವಲ್ಪ ಕೆಲಸ ಮಾಡಿದೆ

ಕೆಲಸ ಪ್ರೀತಿಗೆ ಅಡ್ಡ ಬರುತ್ತಿತ್ತು

ಇಲ್ಲವೇ ಪ್ರೀತಿ ಕರ್ತವ್ಯದಲ್ಲಿ ಹಸ್ತಕ್ಷೇಪಿಸುತ್ತಿತ್ತು

ಕೊನೆಗೆ ಬೇಸರ ಹಿಡಿದು

ಎರಡನ್ನೂ ಅರ್ಧದಲ್ಲಿ ಬಿಟ್ಟೆ

ದುಃಖಿಸದಿರು ದುಃಖಿಸದಿರು

ನೋವು ನಿಲ್ಲುವುದು, ದುಃಖಿಸದಿರು ದುಃಖಿಸದಿರು

ಗೆಳೆಯರು ಮರಳಿ ಬರುವರು, ಹೃದಯ ನಿಲ್ಲುವುದು

ದುಃಖಿಸದಿರು ದುಃಖಿಸದಿರು

ಗಾಯ ಆರುವುದು

ದುಃಖಿಸದಿರು ದುಃಖಿಸದಿರು

ಹಗಲು ಹೊರಬರುವುದು

ದುಃಖಿಸದಿರು ದುಃಖಿಸದಿರು

ಮೋಡ ತೆರೆಯುವುದು, ರಾತ್ರಿ ಉರುಳುವುದು

ದುಃಖಿಸದಿರು ದುಃಖಿಸದಿರು

ಋತು ಬದಲಿಸುವುದು

ದುಃಖಿಸದರು ದುಃಖಿಸದಿರು

(ಜೂನ್ 1965)

ತೇವಗಣ್ಣು ದುಃಖಿತ ಮನಸ್ಸು ಸಾಲದು

ಪ್ರೀತಿಯ ಕಳಂಕ ಬಚ್ಚಿಟ್ಟರೆ ಆಗದು

ಇಂದು ಬೀದಿಯಲ್ಲಿ ಬೇಡಿಯೊಂದಿಗೆ ನಡೆ

ಕೈಗಳನ್ನು ಬೀಸುತ್ತಾ ಸೊಕ್ಕಿನಿಂದ ಕುಣಿಯುತ್ತ ನಡೆ

ಮಣ್ಣು ಮೆತ್ತ ಮಸ್ತಕದೊಂದಿಗೆ ನಡೆ

ರಕ್ತಸಿಕ್ತ ಉಡುಪಿನೊಂದಿಗೆ ನಡೆ

ಪ್ರಿಯತಮೆಯ ನಗರ ದಾರಿ ನಿರೀಕ್ಷಿಸುತ್ತಿದೆ ನಡೆ

ನಗರದ ಒಡೆಯನೂ ಜನ ಸಮೂಹವೂ

ಆರೋಪದ ಬಾಣವೂ ಕಳಂಕದ ಕಲ್ಲುಗಳೂ

ಅಸಂತೋಷದ ಮುಂಜಾವು ಸೋಲಿನ ದಿನವು

ಅವುಗಳ ಗೆಳೆಯರು ನಮ್ಮ ಹೊರತು ಯಾರಿದ್ದಾರೆ?

ಪ್ರಿಯತಮೆಯ ನಗರದಲ್ಲಿ ಸ್ನೇಹಿತರಾರಿದ್ದಾರೆ

ಕೊಲೆಗಾರನ ಕೈಯಲ್ಲಿ ತಪ್ಪಿತಸ್ಥರು ಮತ್ತಾರಿದ್ದಾರೆ.

ಹೃದಯದ ಸರಕುಗಳನ್ನು ಕಟ್ಟಿಕೊಳ್ಳಿ ನೊಂದವರೆ ಸಾಗಿರಿ

ಮತ್ತೆ ನಾವೇ ಕೊಲೆಯಾಗಿ ಬರುವ ಗೆಳೆಯರೆ ನಡೆಯಿರಿ

(ಲಾಹೋರ್ ಸೆರೆಮನೆ 11.02.1959)