ಒಲಿದ ಸ್ವರಗಳು

Update: 2023-01-05 17:01 GMT

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯವರಾಗಿರುವ ಹಜ್‌ಮತ್ ಬಸ್ತಿಕ್ಕಾರ್ ವಿದ್ಯಾರ್ಥಿ ಕಾಲದಲ್ಲೇ ಪದ್ಯಗಳನ್ನು ಬರೆಯುತ್ತಾ ಬಂದವರು. ಇವರ ಹನಿ ಪದ್ಯಗಳು ಹಲವು ದಿನಪತ್ರಿಕೆಗಳಲ್ಲಿ ಪ್ರಕಟಗೊಂಡು ಓದುಗರನ್ನು ಸೆಳೆದಿವೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ತಮ್ಮ ಹನಿ ಪದ್ಯಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಹಜ್‌ಮತ್ ಬಸ್ತಿಕ್ಕಾರ್

ಹೆಡ್ ಫೋನ್‌ಗಳು
ಈಗೀಗ ಅನಿವಾರ್ಯ
ಏನೆಲ್ಲಾ ಕೇಳಲು...
ಎಷ್ಟೆಲ್ಲಾ ಕೇಳದೆ ಇರಲು..!!

ಭೂಮಿ
ಬೇರೆ ಯಾವುದೋ
ಲೋಕದ
ನರಕ ಇರಬಹುದು

ಮಳೆ...ಮಳೆ..!
ಕೆಲವರು ಬಾಲ್ಯವನ್ನು ನೆನೆದರು...
ಇನ್ನು ಕೆಲವರು
ಬರಿದೇ ನೆನೆದರು

ಹಗಲಿಡೀ
ಮುನಿಸಿಕೊಂಡು
ದೂರಾಗಿ..
ರಾತ್ರಿ
ತಬ್ಬಿ ಮಲಗುವ
ರೆಪ್ಪೆಗಳು..!!

ದಿನಕ್ಕೆ
ಎರಡು ಸಲ
ಬಿಗಿ ಹಿಡಿದು ಮುತ್ತಿಡುವ
ಬ್ರಶ್ಶು ಕೂಡಾ
ಸಮಯ, ಸಂಧಿ ನೋಡಿ
ಗುದ್ದಿ ನೋಯಿಸುವ ಜಗತ್ತಿನಲ್ಲಿ
ನಿಮ್ಮದು
ಇರಿಯುವ
ಮನುಷ್ಯರ ಕುರಿತು
ಅಹವಾಲು..!!

ಅಪ್ಪನದು
ಅಳು ಬಾರದ

ಕಲ್ಲು ಮನಸು ಮಕ್ಕಳು, ಮಡದಿಯ
ಆರೋಪ...

ಹೌದು...

ವಿದೂಷಕನ ಮುಖವಾಡಕ್ಕೆ...
ಅಳುವಿರುವುದಿಲ್ಲ..!!

ಈಗೀಗ...
ನಾಲಿಗೆಗಿಂತಲೂ
ವಾಚಾಳಿಗಳಾಗಿವೆ
ಬೆರಳುಗಳು

ಸುದೈವವಶಾತ್...
ನಾಳೆಯೆನ್ನುವುದೊಂದಿದೆ
ಇಲ್ಲದಿದ್ದರೆ,
ಇಂದೇ ಒಳ್ಳೆಯವನಾಗಬೇಕಾದ
ಅನಿವಾರ್ಯವಿತ್ತು

ಅವಳೊಂದು
ಕರೆ ಮಾಡಿದ್ದಿದ್ದರೆ...
ತೆಗೆಯದೆ ಇದ್ದು...
ಪ್ರತೀಕಾರ ತೀರಿಸಬಹುದಿತ್ತು..!!

‘ಮರಗಳು’
ಕವಿತೆ ಬರೆ ಬರೆದು
ಹರಿದೆಸೆದ
ಚಿಂದಿ ಕಾಗದಗಳು...
ಅದೋ... ತರಗೆಲೆಗಳು..!

ತೆರೆದೇ ಇದ್ದ
ಗೂಡೊಳಗೆ
ಮರಳಿ ಬರುವ ಗಿಳಿಗಳ
ಮಾನಸಿಕ ದಾಸ್ಯತೆಗೆ...
ಜಗತ್ತು
ವಿಧೇಯತೆಯೆಂದು
ಲಾವಣಿ ಹಾಡುತ್ತಲೇ ಇದೆ

ಹಿಂದೆಲ್ಲಾ ನಮ್ಮ ಬಾಲ್ಯದಲ್ಲಿ....
ಒಂದೊಂದು ಪುಸ್ತಕಗಳಲ್ಲೂ
ಅಡಗಿ ಕೂತ
ಕಾಗದದ ದೋಣಿಗಳಿದ್ದವು
ಮರಿ ಇಡಲು
ಕಳ್ಳಬಸಿರಿನ ನವಿಲ ಗರಿಗಳಿದ್ದವು..!!

ಸ್ವಾತಂತ್ರದ ದಿನ
ದೇಶದುದ್ದಕ್ಕೂ
ಧ್ವಜಸ್ತಂಭಕ್ಕೆ
ಕಟ್ಟಿಹಾಕಲ್ಪಟ್ಟ ಸ್ಥಿತಿಯಲ್ಲಿ

ಆಶೆಗಣ್ಣಿನ ಧ್ವಜಗಳು..!!

ನೀನೀಗ
ದೊಡ್ಡವನಾದೆ ಕಣೋ..

ಒಬ್ಬನೇ ಹೋಗಿ ಬಾ ಅಂಗಡಿಗೆ...
....ಹಾಲಿಗೆ

ನೀನೀಗ
ದೊಡ್ಡವಳಾದೆ ಕಣೇ..
ಒಬ್ಬಳೇ
ಹೋಗಬೇಡ ಅಂಗಡಿಗೆ
ಸ್ವಲ್ಪ ಲಗಾಮು ಇರಲಿ
ಕಾಲಿಗೆ..!!