ನಾಳೆಯಿಂದ ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭ

Update: 2023-01-05 17:03 GMT

ಬೆಂಗಳೂರು, ಜ. 5: ರಾಜ್ಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಸಾಹಿತ್ಯದ ‘ನುಡಿಜಾತ್ರೆ’ ಎಂಬ ಹೆಗ್ಗಳಿಗೆ ಪಾತ್ರವಾಗಿರುವ ‘86ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ ಹಾವೇರಿ ನಗರದ ಕನಕ-ಶರೀಫ ಮತ್ತು ಸರ್ವಜ್ಞ ವೇದಿಕೆಯಲ್ಲಿ ನಾಳೆ(ಜ.6)ಯಿಂದ ಮೂರು ದಿನಗಳ ಕಾಲ ಜರುಗಲಿದೆ.

ನಾಳೆ(ಜ.6) ಬೆಳಗ್ಗೆ 7ಗಂಟೆಯ ಸುಮಾರಿಗೆ ಹಾವೇರಿ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರು ಧ್ವಜಾರೋಹಣ ನೆರವೇರಿಸಲಿದ್ದು, ಕಸಾಪ ಅಧ್ಯಕ್ಷರೂ ಆಗಿರುವ ಸಮ್ಮೇಳನ ಸ್ವಾಗತ ಸಮಿತಿ ಗೌರವಾಧ್ಯಕ್ಷ ಡಾ.ಮಹೇಶ್ ಜೋಶಿ ಪರಿಷತ್ತಿನ ಧ್ವಜಾರೋಹಣದೊಂದಿಗೆ ಸಮ್ಮೇಳನಕ್ಕೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ.

ಬೆಳಗ್ಗೆ 7:30ರಿಂದ 86ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ದೊಡ್ಡರಂಗೇಗೌಡ ಅವರ ಮರವಣಿಗೆ ನಡೆಯಲಿದೆ. ಶ್ರೀಪುಸಿದ್ಧೇಶ್ವರ ದೇವಸ್ಥಾನದಿಂದ ಬಸ್ ನಿಲ್ದಾಣ, ಆರ್‍ಟಿಒ ಕಚೇರಿ ಮಾರ್ಗವಾಗಿ ಸಮ್ಮೇಳನ ವೇದಿಕೆಗೆ ಮೆರವಣಿಗೆ ತಲುಪಲಿದೆ.

ಬೆಳಗ್ಗೆ 10:30ಕ್ಕೆ 86ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಲಿದ್ದು, ಭಾಷಣ ಮಾಡಲಿದ್ದಾರೆ. ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ನೆಹರೂ ಓಲೇಕಾರ್, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಅವರು ಉಪಸ್ಥಿತಿಯಲ್ಲಿ ಸಮ್ಮೇಳನಾಧ್ಯಕ್ಷ ಡಾ.ದೊಡ್ಡರಂಗೇಗೌಡ ಅವರು ಭಾಷಣ ಮಾಡಲಿದ್ದಾರೆ.

‘ಸಾಮರಸ್ಯದ ಭಾವ-ಕನ್ನಡದ ಜೀವ’ ವಿಚಾರ ಗೋಷ್ಠಿ, ಕವಿಗೋಷ್ಠಿ, ಸಾಧಕರಿಗೆ ಸನ್ಮಾನ, ಪುಸ್ತಕ ಮೇಳ ಉದ್ಘಾಟನೆ ಸೇರಿದಂತೆ ಜ.6, 7 ಮತ್ತು 8 ರಂದು ಮೂರು ದಿನಗಳ ಕಾಲ ಹಲವು ಕಾರ್ಯಕ್ರಮಗಳು ನಡೆಯಲಿವೆ. ಸಾಹಿತ್ಯಾಸಕ್ತರಿಗೆ ಸಾಹಿತ್ಯದ ಜೊತೆಗೆ ಉತ್ತರ ಕರ್ನಾಟಕ ಭಾಗದ ಶೇಂಗಾ ಹೋಳಿಗೆ, ಗೋಧಿಹುಗ್ಗಿ ಸೇರಿದಂತೆ ಹತ್ತು ಹಲವು ಭಕ್ಷ್ಯಗಳನ್ನು ಉಣಬಡಿಸಲು ಸಮ್ಮೇಳನ ಸರ್ವ ಸನ್ನದ್ಧವಾಗಿದೆ.

Similar News