ವಿಸ್ಮಯ ಕೀಟ ಪ್ರಪಂಚ

Update: 2023-01-14 10:01 GMT

 ಕೃಷಿ ಕೀಟ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಡಾ. ನೂರ್ ಸಮದ್ ಅಬ್ಬಲಗೆರೆ ವೃತ್ತಿಯಲ್ಲಿ ಕೃಷಿ ಅಧಿಕಾರಿಗಳು . ಪ್ರವೃತ್ತಿಯಲ್ಲಿ ಕವನ, ಕತೆ, ಚುಟುಕು, ರಚನೆ, ನಾಟಕಗಳಲ್ಲಿ ತೊಡಗಿಸಿ ಕೊಂಡವರು. ದೂರದರ್ಶನ ಚಂದನ ವಾಹಿನಿಯಲ್ಲಿ ಉತ್ತಮ ವಾರ್ತಾ ವಾಚಕರಾಗಿಯೂ ಚಿರಪರಿಚಿತರು. ಇವರ ಕನ್ನಡ ಸಾಹಿತ್ಯ ಕೃಷಿಗೆ ವಿಶ್ವಕವಿ ಕುವೆಂಪು ಪ್ರಶಸ್ತಿ, ಕನ್ನಡ ರತ್ನ ಪ್ರಶಸ್ತಿ, ಹುಬ್ಬಳ್ಳಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಂಡ್ಯದ ಕನ್ನಂಬಾಡಿ ಪ್ರಶಸ್ತಿಗಳು ದೊರಕಿವೆ. ರಾಜ್ಯ ಮಟ್ಟದ ಕವಿ, ಕಾವ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದಾರೆ. ‘ಅಂಕುರ’, ‘ಮರಣೋತ್ತರ ಸತ್ಕಾರ’ ಇವರ ಕವನ ಸಂಕಲನಗಳು. ಇವರ ‘ವಿಸ್ಮಯ ಕೀಟ ಪ್ರಪಂಚ’ಕ್ಕೆ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿಗೆ ಪಾತ್ರವಾಗಿದೆ.

ಚಿತ್ರ ಮತ್ತು ಲೇಖನ: ಡಾ. ನೂರ್ ಸಮದ್ ಅಬ್ಬಲಗೆರೆ

ಸಸ್ಯಶಾಸ್ತ್ರವನ್ನು ಹೊರತು ಪಡಿಸಿ, ಪ್ರಾಣಿಶಾಸ್ತ್ರದಲ್ಲಿ ಶೇ. 100ರಲ್ಲಿ 40 ರಷ್ಟು ಪ್ರಾಣಿಗಳು, ಪಕ್ಷಿಗಳು, ಸರೀಸೃಪಗಳು ಮತ್ತು ಎಲ್ಲಾ ರೀತಿಯ ಜೀವಜಂತುಗಳಿದ್ದರೆ, ಉಳಿದ ಶೇ. 60 ರಷ್ಟು ನಾವು ಊಹಿಸಲಾಗದ ವಿಭಿನ್ನ ಕೀಟಗಳೇ ಆವರಿಸಿವೆ. ಇವುಗಳ ಸಂಖ್ಯಾಬಲ, ವೈವಿಧ್ಯತೆ ವರ್ಣಿಸಲಾಗದಂತಹ ಚಟುವಟಿಕೆಗಳು ಮತ್ತು ಸರ್ವವ್ಯಾಪಿ ಅಸ್ತಿತ್ವವಿದ್ದರೂ, ದುರದೃಷ್ಟವಶಾತ್ ಇವುಗಳ ಗಾತ್ರ ಸಾಮಾನ್ಯವಾಗಿ ಚಿಕ್ಕದಿರುವುದರಿಂದ ನಮ್ಮ ಕಣ್ಣಿಗೆ ಕೀಟಗಳು ಆಗಾಗ ಮಾತ್ರ ಗೋಚರಿಸುತ್ತವೆ. ಜೇನು ನೊಣಗಳು, ರೇಷ್ಮೆ ಹುಳ, ಪರಭಕ್ಷಕ ಮತ್ತು ಪರತಂತ್ರ ಕೀಟಗಳು ನಮಗೆ ಉಪಯೋಗಕಾರಿ ಕೀಟಗಳಾಗಿದ್ದರೆ, ಇದಕ್ಕೆ ವ್ಯತಿರಿಕ್ತವಾಗಿ ಹಂಗಾಮುವಾರು ಸೊಳ್ಳೆಗಳು, ನೊಣಗಳು, ಜಿರಲೆ ಇನ್ನಿತರ ಕೀಟಗಳು ಮಲೇರಿಯಾ, ಡೆಂಗಿ, ಹಳದಿಜ್ವರ, ಹಂದಿಜ್ವರ, ಚಿಕುನ್ ಗುನ್ಯಾ ಇನ್ನೂ ಹಲವಾರು ಭಯಾನಕ ರೋಗಗಳನ್ನು ಮನುಷ್ಯರಲ್ಲಿ ಹರಡುತ್ತವೆ. ಅಷ್ಟೇ ಅಲ್ಲ, ಅಸಂಖ್ಯ ಕೀಟಗಳು ಕೃಷಿ ಬೆಳೆಗಳಿಗೆ ಪೀಡೆಗಳಾಗಿ ಪರಿಣಮಿಸಿ ರೈತರ ಆದಾಯವನ್ನೂ ಕುಂಠಿತಗೊಳಿಸುತ್ತವೆ.

 ಕೀಟಗಳು ತಮ್ಮ ಬಗೆಗಿನ ಅತೀ ಹೆಚ್ಚು ಆಸಕ್ತಿ ಕೆರಳಿಸುವ ಇವುಗಳ ವಿನ್ಯಾಸ, ಆಕಾರ, ಸೌಂದರ್ಯ ಇನ್ನಿತರ ಚಟುವಟಿಕೆಗಳ ಮಾಹಿತಿ ಪಡೆಯುತ್ತಾ ಹೋದರೆ ನಿಜವಾಗಿಯೂ ಮನುಷ್ಯ ಆಶ್ಚರ್ಯಚಕಿತನಾಗುವನು. ಕೀಟಗಳ ಉದ್ಭವ, ಜೀವನ ಕ್ರಮ, ಸಂತಾನೋತ್ಪತ್ತಿ, ಬದುಕುವ ರೀತಿ ಶ್ಲಾಘನೀಯ. ಕೆಲವೇ ರಾಸಾಯನಿಕಗಳನ್ನು ದೇಹದಿಂದ ಹೊರಸೂಸುವ ಮತ್ತು ವಿಶಿಷ್ಟ ರೀತಿಯ ಶಬ್ದ, ಸನ್ನೆ-ಸೂಚನೆಗಳ ಮೂಲಕ ನಡೆಸುವ ವಿಶೇಷ ಸಂವಾದ, ಸಂವಹನ ಕ್ರಿಯೆಗಳು, ತಮ್ಮನ್ನು ಶತ್ರುಗಳಿಂದ ತಾವು ರಕ್ಷಿಸಿಕೊಳ್ಳುವ ವೈವಿಧ್ಯಮಯ ಅದ್ಭುತ ನಡೆನುಡಿಗಳು ಬಹುಶಃ ನಾವು ಇತರ ಜೀವಿಗಳಲ್ಲಿ ಕಾಣುವುದು ಅಸಾಧ್ಯ.

ಕೀಟಗಳಲ್ಲಿ ಬಹಳ ಸರಳವಾದ ನರವ್ಯೆಹವಿದ್ದರೂ ಇವುಗಳ ಜ್ಞಾಪಕ ಶಕ್ತಿ ಮತ್ತು ನಡೆಸುವ ಆನುವಂಶೀಯ ವಂಶವಾಹಿ ಪರಂಪರೆ ನಮ್ಮಂತಹ ಅಭಿವೃದ್ಧಿ ಹೊಂದಿರುವ ನರವ್ಯೆಹ ಜ್ಞಾನಿಗಳಿಗೆ ಹಲವು ಬಾರಿ ಮಾದರಿಯಾಗಿ ನಿಲ್ಲುತ್ತವೆ. ಕೆಲವು ಸಾಮಾಜಿಕ ಕೀಟಗಳಾದ ಜೇನು ನೊಣಗಳು, ಇರುವೆಗಳು, ಗೆದ್ದಲು ಹುಳಗಳು ಮತ್ತು ಸಾಮಾಜಿಕ ಸಹ ಜೀವನ ನಡೆಸುವ ಕಣಜಗಳು ತಮ್ಮ ಕುಟುಂಬವನ್ನು ನಡೆಸುವ ರೀತಿ, ವಿವಿಧ ಕಾರ್ಯ ಚಟುವಟಿಕೆಗಳನ್ನು ಹಂಚಿಕೆ ಮಾಡಿಕೊಂಡು ತುಂಬು ಕಾಳಜಿ ಮತ್ತು ಸೌಹಾರ್ದದಿಂದ, ನಿಷ್ಠೆಯಿಂದ ದೈನಂದಿನ ಕಾರ್ಯ ಮುಗಿಸುವ ನೀತಿ ನಿಯಮಗಳು ಮನುಷ್ಯರಾದ ನಾವು ಇದನ್ನು ನೋಡಿ ಕೀಟಗಳಿಂದ ಪಾಠ ಕಲಿಯಲೇಬೇಕು.

ಕೆಲವು ಗಂಡು ಕೀಟಗಳು ಒಂದು ಹೆಣ್ಣನ್ನು ಪಡೆಯ ಬೇಕಾದರೆ ಎರಡು ಗಂಡುಗಳ ಸಮರ ನಡೆಸಬೇಕಾಗುತ್ತದೆ. ಇದಕ್ಕೆ ಆಂಗ್ಲ ಭಾಷೆಯಲ್ಲಿ Male-Male Competitionಎಂದು ಕರೆಯುತ್ತಾರೆ. ಈ ಸಮರವನ್ನು ಪೂರೈಸಿದ ಮೇಲೆ ಹೆಣ್ಣು ಕೀಟವು ತನಗೆ ಸೂಕ್ತವಾದ ಗಂಡು ಯಾವುದೆಂದು ಸಮಾಗಮಕ್ಕೆ ಆರಿಸಿಕೊಳ್ಳುತ್ತದೆ. ಇದಕ್ಕೆ Female Choice ಎಂದು ಕರೆಯಲಾಗುತ್ತದೆ. ಇಂತಹ ಒಟ್ಟಾರೆ ಪ್ರಕ್ರಿಯೆಗಳಿಗೆ Sexual Selection ಎಂದು ನಮೂದಿಸಲಾಗುತ್ತದೆ. ಇಂತಹ ಅನೇಕ ರೋಮಾಂಚಕ ಪ್ರಕ್ರಿಯೆಗಳು ಈ ಪುಟ್ಟ ಪುಟ್ಟ ಕೀಟ ಸಮೂಹಗಳಲ್ಲಿ ಅಡಗಿರುವುದು ಅದ್ಭುತ ಕೌತುಕಗಳು.

1. ಬಾಂಬ್ ತಯಾರಿಸುವ ಜೀರುಂಡೆ...

  

ಬಂಬಾರ್ಡಿಯರ್ ಜೀರುಂಡೆ (Bombardier Beetle)ಯಲ್ಲಿ ಅಪರೂಪದ ಒಂದು ವಿಸ್ಮಯ ಅಡಗಿದೆ. ಈ ಕೀಟ ತನ್ನ ಉದರದಲ್ಲಿ ಬಾಂಬ್ ತಯಾರಿಸಿ ತನ್ನ ಶತ್ರುಗಳತ್ತ ಬಾಂಬ್ ಸಿಡಿಸುತ್ತದೆಂದರೆ ಅಚ್ಚರಿ ಮೂಡಿಸುತ್ತದಲ್ಲವೇ? ಆದರೆ, ಇದೆಲ್ಲ ಹೇಗೆ ಒಂದು ಪುಟ್ಟ ಕೀಟದೊಳಗಾಗುತ್ತದೆಂದು ತಿಳಿಯೋಣ ಬನ್ನಿ. ಈ ಕೀಟಗಳ ಉದರದಲ್ಲಿ ಒಂದು ಯಂತ್ರಕ್ರಿಯೆ ರಚನಾ ವ್ಯವಸ್ಥೆಯಿದೆ. ಇದನ್ನು ಬಹಳ ಸುಂದರವಾಗಿ ಕೀಟವಿಜ್ಞಾನಿಗಳು ಸಂಶೋಧನಾತ್ಮಕವಾಗಿ ನಿರೂಪಿಸಿದ್ದಾರೆ. ಅದೇನೆಂದರೇ, ಈ ಕೀಟಗಳ ಉದರದಲ್ಲಿ ಎರಡು ಗ್ರಂಥಿಗಳಿವೆ. ಒಂದು ಗ್ರಂಥಿಯಲ್ಲಿ ಹೈಡ್ರೋಜನ್ ಪೆರಾಕ್ಸೈಡ್ (Hydrogen peroxide)ಮತ್ತೊಂದು ಗ್ರಂಥಿಯಲ್ಲಿ ಹೈಡ್ರೊಕ್ವಿನೋನ್ಸ್ (Hydroquinones)ರಾಸಾಯನಿಕಗಳು ತಯಾರಾಗುತ್ತವೆ.

ನಾವು ರಸಾಯನಶಾಸ್ತ್ರದಲ್ಲಿ ಓದಿರುವ ಹಾಗೆ ಹೈಡ್ರೋಜನ್ ಪೆರಾಕ್ಸೈಡ್ ಸ್ಫೋಟಕ ವಸ್ತುಗಳಲ್ಲೊಂದು. ಶತ್ರುಕೀಟಗಳು ಎದುರಾದಾಗ ಅಥವಾ ನಾವೇನಾದರೂ ಕಿರುಕುಳ ಕೊಟ್ಟಾಗ, ಈ ಎರಡೂ ರಾಸಾಯನಿಕಗಳು ಏಕಕಾಲಕ್ಕೆ ಈ ಗ್ರಂಥಿಗಳಿಂದ ಸ್ರವಿಸಿ ಮುಂದಿರುವ ಸ್ಫೋಟಕ ಕೋಣೆ (Explosion chamber) ಯಲ್ಲಿ ಮಿಶ್ರಣಗೊಂಡು ಕೆಲವು ಕಿಣ್ವಗಳ ಸಹಾಯದಿಂದ ಉತ್ಕರ್ಷಣ(Oxidation) ಪ್ರಕ್ರಿಯೆಗೆ ಪರಿವರ್ತನೆಗೊಂಡು ಇಲ್ಲಿ ಸ್ಫೋಟಗೊಂಡು ವಿಸರ್ಜಿಸುವ ತೂಬಿನಿಂದ(Firing Jet) ಭುಸ್..ಫಟ್ ಎಂಬ ಶಬ್ದದೊಂದಿಗೆ ನೇರವಾಗಿ ಶತ್ರುಗಳ ಮೈಮೇಲೆಯೇ ಸಿಡಿಸುತ್ತದೆ. ಬಲಿಷ್ಠ ಶತ್ರುಗಳು ತಪ್ಪಿಸಿಕೊಂಡು ಹೆದರಿ ಓಡಿ ಹೋಗುತ್ತವೆ. ಇನ್ನಿತರ ಕೀಟಗಳು ಸ್ಥಳದಲ್ಲೇ ಸಾವನ್ನಪ್ಪುತ್ತವೆ. ಈ ರಾಸಾಯನಿಕ ಪ್ರಕ್ರಿಯೆಯಲ್ಲಿ ಅತೀ ಹೆಚ್ಚು ಶಾಖ ಉತ್ಪನ್ನವಾಗುತ್ತದೆ. ಸ್ಫೋಟಗೊಂಡಾಗ ಹೊರಹೊಮ್ಮುವ ಸ್ಫೋಟಕ ದ್ರವ್ಯವು 100 ಡಿಗ್ರಿ ಉಷ್ಣಾಂಶದಷ್ಟಿರುತ್ತದೆ ಮತ್ತು ಬಹಳ ಕೆಟ್ಟ ವಾಸನೆಯಿಂದಲೂ ಕೂಡಿರುತ್ತದೆ. ಕೋಲಿಯೋಪ್ಟರ (Coleoptera)ವರ್ಗದ ಕ್ಯಾರಾಬಿಡೆ(Carabidae) ಕುಟುಂಬದ ಬಹುತೇಕ ಸದಸ್ಯರಲ್ಲಿ ಇದನ್ನು ನಾವು ಕಾಣಬಹುದಾಗಿದೆ. ಬಾಂಬ್ ಸಿಡಿಸುವ ಈ ಕೀಟಗಳನ್ನು ಬಂಬಾರ್ಡಿಯರ್ ಜೀರುಂಡೆಗಳೆಂದು ಹೆಸರಿಸಿದ್ದಾರೆ. ಇವಕ್ಕೆ ಸಾಮಾನ್ಯವಾಗಿ ಗ್ರೌಂಡ್ ಬೀಟಲ್ (Ground beetle)ಗಳೆಂದೂ ಕರೆಯುತ್ತಾರೆ.

2. ನೀರಿನ ಮೇಲೆ ನಡೆದಾಡುವ ಪ್ರಕೃತಿದತ್ತ ಕೀಟ ಪಾಂಡ್ ಸ್ಕೇಟರ್

ಹೀಗೆ ಒಂದು ದಿನ ಕೀಟ ಬೇಟೆಗೆಂದು ಹೋದಾಗ ನಮ್ಮದೇ ತೋಟದ ತೆರೆದ ಬಾವಿಯಲ್ಲಿ ಅತಿ ವೇಗ ಗತಿಯಲ್ಲಿ ನೀರಿನ ಮೇಲೆ ಕೆಲವು ಕೀಟಗಳು ಈಜುವುದು, ಜಿಗಿಯುವುದು ಕಣ್ಣಿಗೆ ಬಿತ್ತು. ಚಿಕ್ಕ ಮಕ್ಕಳು ಸ್ಕೇಟಿಂಗ್ ಆಡುವ ಹಾಗೆ ಸದ್ದುಗದ್ದಲವಿಲ್ಲದೇ ನಿಶ್ಯಬ್ದವಾಗಿಯೇ ಜುಯ್ಞಿಂ.. ಎಂದು ನೀರಿನ ಮೇಲೆ ಸ್ಕೇಟ್ ಬೋರ್ಡ್ ಹಾಕಿಕೊಂಡು ಸರ್ಫಿಂಗ್ ಮಾಡುವ ರೀತಿ ಆಟವಾಡುತ್ತವೆ ಬಹಳ ಹಗುರ ತೂಕದವು ಇವು. ಇದಕ್ಕಾಗಿಯೇ ಈ ಕೀಟಗಳನ್ನು ಪಾಂಡ್ ಸ್ಕೇಟರ್ಸ್‌ (Pond skaters) ಅಥವಾ ವಾಟರ್ ಸ್ಟ್ರೈಡರ್ಸ್‌ (Water Striders) ಗಳೆಂದು ಸೂಕ್ತ ನಾಮಕರಣ ಮಾಡಿದ್ದಾರೆ.

ಜೆರ್ರಿಡೆ ​(Gerridae)ಕುಟುಂಬದ ಈ ಸುಂದರ ಕೀಟಗಳು ಹೇಗೆ ನೀರಿನ ಮೇಲೆಯೇ ಬಹಳ ಸಲೀಸಾಗಿ ಈಜಿಕೊಂಡು ಜಾರಿಕೊಳ್ಳುತ್ತವೆ? ಮತ್ತು ಸಂಪೂರ್ಣ ಜೀವನ ಅಲ್ಲೇ ಪೂರೈಸುತ್ತವೆ ಎಂಬುದೇ ಅಚ್ಚರಿ ಮೂಡಿಸುತ್ತವೆ. ಈ ಕೀಟಗಳ ಪ್ರತಿಯೊಂದು ಕಾಲಿನಲ್ಲಿಯೂ ಬಹಳ ಸೂಕ್ಷ್ಮವಾದ ಸಾವಿರಾರು ರೋಮಗಳಿದ್ದು ಪ್ರತಿಯೊಂದು ರೋಮದಲ್ಲೂ ಹಲವಾರು ಚಿಕ್ಕ ಚಿಕ್ಕ ರಂಧ್ರಗಳಿವೆ. ಈ ರಂಧ್ರಗಳಲ್ಲಿ ಗಾಳಿ ತುಂಬಿಕೊಂಡಿರುವುದರಿಂದ ಸಂಪೂರ್ಣ ಕೀಟದೇಹವನ್ನು ನೀರಿನಲ್ಲಿ ಮುಳುಗದಂತೆ ಮೇಲೆಯೇ ತೇಲಿಸಿಬಿಡುತ್ತವೆ ಇಂತಹ ಕಾಲುಗಳು. ಇದಕ್ಕೆ ವಿಜ್ಞಾನದಲ್ಲಿ(Buoyancy) ಬಯೋಯನ್ಸಿ ಕನ್ನಡದಲ್ಲಿ ಪ್ಲವನತೆ ಎಂದೆನ್ನಬಹುದು. ಇಲ್ಲಿನ ರೋಮಗಳೂ ಸಹ ನೀರನ್ನು ವಿಕರ್ಷಿಸುತ್ತವೆ ಹಾಗಾಗಿ ಇವು ಜಲದ್ವೇಷಿ (Hydrophobic hairs)ಗಳಾಗಿರುವುದು ಕೀಟವನ್ನು ನೆನೆಯದಂತೆ ಮಾಡಿ ಮತ್ತಷ್ಟು ಪ್ಲವನತೆ ಹೆಚ್ಚಿಸುತ್ತಾ ಕೀಟವನ್ನು ಅತೀ ವೇಗವಾಗಿ ಈಜುವಂತೆ ಮಾಡುತ್ತವೆ. ಎಲ್ಲ ಕೀಟಗಳಿಗೂ ಮೂರು ಜೊತೆ ಕಾಲುಗಳಿರುವುದು ಬಲ್ಲೆವು.

ಮುಂಗಾಲುಗಳು ಕೊಂಚ ಚಿಕ್ಕದಾಗಿದ್ದು ನೀರಿನಲ್ಲಿ ದಕ್ಕುವ ಸೊಳ್ಳೆ ಮರಿಗಳು ಮತ್ತು ಇತರ ಜಲಚರ ಜೀವಿಗಳನ್ನು ಹಿಡಿದು ತಿನ್ನಲು ಮಾರ್ಪಾಟುಗೊಂಡಿವೆ. ಮಧ್ಯದೆರಡು ಕಾಲುಗಳು ದೋಣಿಯ ಹುಟ್ಟಿನಂತೆ ಕಾರ್ಯ ನಿರ್ವಹಿಸುತ್ತಾ ಕೀಟವನ್ನು ಮುಂದಕ್ಕೆ ತಳ್ಳುತ್ತವೆ. ಹಿಂಬದಿಯ ಕಾಲುಗಳು ಉದ್ದವಾಗಿದ್ದು ಕೀಟ ಪಯಣದ ದಿಕ್ಕು ಬದಲಾಯಿಸುವಲ್ಲಿ ಮತ್ತು ವೇಗ ತಡೆ ನಿಯಂತ್ರಣದ ಕಾರ್ಯವನ್ನು ಬಹು ಸುಗಮವಾಗಿ ನಿರ್ವಹಿಸುತ್ತವೆ. ನೀರಿನ ಮೇಲೆ ಇವು ಕಾಲುಗಳಿಟ್ಟ ಜಾಗ ಜಲ ಗುಂಡಿಗಳಂತೆ ನೋಡಲು ಬಲು ಸುಂದರ. ನೆಲದ ಮೇಲೆ ಇವುಗಳ ಆಗಮನ ಎಂದಿಗೂ ಸಾಧ್ಯವೇ ಇಲ್ಲ ಎನ್ನುವುದೊಂದೇ ವಿಪರ್ಯಾಸ.

3. ನೇಕಾರ ಕೆಂಜಗಗಳು... ಮರಿ ಉಗುಳು ನೂಲುದಾರ...

ಇರುವೆಗಳಲ್ಲಿ ಸಾವಿರಾರು ಪ್ರಭೇದಗಳಿವೆ. ಒಂದೊಂದು ಪ್ರಭೇದದಲ್ಲೂ ಅದರದ್ದೇ ಆದ ವಿಭಿನ್ನ ವಿಸ್ಮಯ ಅಡಗಿದೆ. ಇರುವೆಗಳು ಸಾಮಾಜಿಕ ಸಮೂಹ ಜೀವಿಗಳು(Social insects) . ನೇಕಾರ ಇರುವೆಗಳು ಮರದ ಮೇಲೆಯೇ ವಾಸ(Arboreal) ಮಾಡುತ್ತವೆ. ಈ ಇರುವೆಗಳು ಹೊರಗಿನಿಂದ ಎಲೆಯ ಎರಡೂ ಬದಿಯ ಅಂಚನ್ನು ಹತ್ತಿರಕ್ಕೆ ತಳ್ಳುತ್ತವೆ. ಎಲೆಯ ಒಳಗೆ ಈ ಕೆಂಜಗವು ತನ್ನ ಮರಿಯನ್ನು ಬಾಯಿಯ ದವಡೆಗಳಲ್ಲಿ ಸೂಜಿಯಂತೆ ಕಚ್ಚಿ ಹಿಡಿದು ಅದುಮಿದಾಗ ಮರಿಯು ತನ್ನ ಬಾಯಿಯಿಂದ ಎಂಜಲಿನ ರೇಷ್ಮೆ ದಾರವನ್ನು ಹೊರಸೂಸುತ್ತದೆ. ಈ ನೂಲಿನ ಸಹಾಯದಿಂದ ಎಲೆಯ ಎರಡೂ ಅಂಚಿಗೆ ಅಂಟಿಸುತ್ತಾ ಗೂಡು ನಿರ್ಮಾಣ ಮಾಡುತ್ತವೆ. ಗೂಡಿನೊಳಗೆ ಮೊಟ್ಟೆಗಳನ್ನಿಟ್ಟು ಸಂತಾನ ಮುಂದುವರಿಸುತ್ತವೆ.

ಕಾಲುಗಳಿಲ್ಲದ ಮರಿಯನ್ನು ಸೂಜಿದಾರದಂತೆ ಬಳಸಿ ಎಲೆಗಳನ್ನು ನೇಯ್ಗೆ ಮಾಡುವ ಅಚ್ಚರಿಯ ಕಾರ್ಯಕಂಡು ಇದಕ್ಕೆ ನೇಕಾರ ಇರುವೆ (Weaver ant)  ಎಂಬ ಬಿರುದು ನೀಡಲಾಯಿತು. 1700 ವರ್ಷಗಳ ಹಿಂದೆ ಚೀನಿಯರು ಮೊಟ್ಟ ಮೊದಲು ಜೈವಿಕ ನಿಯಂತ್ರಣ(Biologicl Control) ದಲ್ಲಿ ಬಳಸುತ್ತ ಮಾರುಕಟ್ಟೆಯಲ್ಲಿ ಇರುವೆ ಗೂಡುಗಳನ್ನು ಮಾರಾಟ ಮಾಡುತ್ತಿದ್ದಾರೆ. ಹಲವಾರು ಭಾಗಗಳಲ್ಲಿ ವಿಶೇಷವಾಗಿ ಬುಡಕಟ್ಟು ಜನಾಂಗಗಳು ಇಂತಹ ಕೆಂಜಗಗಳ ದೇಹವು ಹೆಚ್ಚು ಪ್ರೊಟೀನ್‌ನಿಂದ ಕೂಡಿರುತ್ತದೆ. ಒಡಿಶಾ, ಭುವನೇಶ್ವರ, ಮಹಾರಾಷ್ಟ್ರ ಹಾಗೂ ಕಾಸರಗೋಡು ಪ್ರದೇಶಗಳಲ್ಲಿ ಈ ಕೆಂಜಗಗಳನ್ನು ಬಳಸಿ ರುಚಿರುಚಿಯಾದ ಚಟ್ನಿ ತಯಾರಿಸಿ ಚಪ್ಪರಿಸುತ್ತಾರೆ. ಮತ್ತೊಂದು ಬಗೆಯ ಅರ್ಜೆಂಟೈನ್ ಇರುವೆ(Argentine Ant) ಗಳು ನೆಲದಡಿಯಲ್ಲಿ 5 ರಿಂದ 6 ಸಾವಿರ ಕೀಲೋಮೀಟರ್ ಗಾತ್ರದ ತಮ್ಮ ಒಂದು ಗೂಡನ್ನು ನಿರ್ಮಾಣ ಮಾಡಿ ಒಂದು ಕುಟುಂಬದ ದೊಡ್ಡ ಸಾಮ್ರಾಜ್ಯವನ್ನೇ ರಚಿಸಿವೆ ಎಂದರೆ ಇದೊಂದು ವಿಸ್ಮಯವಲ್ಲವೇ?

4. ನಗಾರಿ ಕೀಟ, ಸಿಕಾಡ

ಸಿಕಾಡಗಳು ಸಾಮಾನ್ಯವಾಗಿ ಮಧ್ಯ ಬೇಸಿಗೆಯ ಕಾಲದಲ್ಲಿ ಮರದ ರೆಂಬೆ, ಕೊಂಬೆ ಮತ್ತು ಕಾಂಡಗಳ ಮೇಲೆ ತನ್ನ ದೇಹದ ಬಣ್ಣ ಹೊಂದಿಸಿಕೊಂಡು ಕಣ್ಣಿಗೆ ಕಾಣದ (Camaouflage) ರೀತಿಯಲ್ಲಿ ಕೂರುತ್ತವೆ. ಹೀಗೆ ಕೂತು ಒಂದೇ ಸಮನೆ ನಿರಂತರವಾಗಿ ಕರ್ಕಶ ಶಬ್ದ(Buzzing) ವನ್ನುಂಟು ಮಾಡುತ್ತವೆ. ಈ ಶಬ್ದವು ಬಹು ದೂರದೂರಿಗೂ ಕೇಳಿಸುವುದುಂಟು. ಈ ಶಬ್ದವು ತನ್ನ ತಳಭಾಗದ ಉದರದಲ್ಲಿ ಡಂಗುರಗಳಂತೆ ಎರಡು ಗುಂಡಿಗಳಲ್ಲಿರುವ ಸ್ನಾಯುಗಳ ಮತ್ತು ಅಲ್ಲಿ ಆವರಿಸಿರುವ ತಟ್ಟೆಗಳ(Tymphanum) ಕಂಪನಗಳಿಂದ ಉತ್ಪತ್ತಿಯಾಗುತ್ತದೆ. ಸಿಕಾಡದ ಮರಿಗಳು13 ವರ್ಷ ಮತ್ತು 17 ವರ್ಷಗಳ ಕಾಲ ಭೂಮಿಯಲ್ಲೆ ವಾಸಿಸುವುದು ಇದರ ವಿಶೇಷತೆ. (Periodical cicada, Magicicada septendecim)ಎಂಬ ಪ್ರಭೇದಗಳಲ್ಲಿ ಇದನ್ನು ಕಾಣಬಹುದು. ಸಿಕಾಡಿಡೆ ಇದರ ಕುಟುಂಬ, ಹೋಮೋಪ್ಟೆರ ವರ್ಗಕ್ಕೆ ಈ ಕೀಟ ಸೇರಿದೆ. ಪಾಶ್ಚಾತ್ಯರು ಸಿಕಾಡಗಳನ್ನು ವಿಶೇಷ ವೈವಿಧ್ಯಮಯ ರುಚಿಕರ ತಿನಿಸು-ಖಾದ್ಯಗಳಲ್ಲಿ ಬಳಸುತ್ತಾರೆ.

5.ಮನೆ ಮಿಡತೆಯ ಶಬ್ದ ... ಸಂಗೀತ ಕಚೇರಿ

ಮನೆ ಮಿಡತೆ ಕೀಟದ್ದು ಒಂದು ವಿಶಿಷ್ಟವಾದ ಶಬ್ದ. ಈ ಮನೆ ಮಿಡತೆಗೆ ಆಂಗ್ಲ ಭಾಷೆಯಲ್ಲಿ ಕ್ರಿಕೆಟ್ ಎಂದೂ(House Cricket) , ಕನ್ನಡದಲ್ಲಿ ಚಿಮ್ಮುಂಡೆಗಳೆಂದೂ ಕರೆಯುತ್ತಾರೆ. ಇವು ದಿನಪೂರ್ತಿ ನೆಲದಲ್ಲಿ ಚಿಕ್ಕ ಚಿಕ್ಕ ಓರೆಯಾಕರದ ತೂಬುಗಳನ್ನು ಕೊರೆದು ಅದರೊಳಗೆ ತಲೆ ಕೆಳಗೆ ದೇಹತುದಿ ಮೇಲೆ ಮಾಡಿ ಕೂತು ಶಬ್ದ ಮಾಡುತ್ತವೆ. ಈ ತೂಬಿನಿಂದ ಹೊರಹೊಮ್ಮುವ ಶಬ್ದ ಸುಮಾರು ಒಂದು ಫರ್ಲಾಂಗಿನವರೆಗೂ ಒಂದು ಬಗೆಯ ವಾದ್ಯದಿಂದ ನುಡಿಸಿದಂತೆ ಧ್ವನಿಸುವುದುಂಟು. ಈ ಮನೆಮಿಡತೆಗಳು ಅಪ್ಪಿತಪ್ಪಿ ಸಂಜೆ ನಮ್ಮ ಮನೆಯೊಳಗೆ ಹೊಕ್ಕಿ ಮೂಲೆ ಸೇರಿದರೆ ಮುಗಿಯಿತು, ಆ ರಾತ್ರಿ ನಿದ್ದೆಗೆಟ್ಟು ದೇವರನಾಮ ಹಾಡುವುದೇ ಸೂಕ್ತ. ಆ ರೀತಿಯ ಕರ್ಕಶ ಶಬ್ದವನ್ನುಂಟುಮಾಡುತ್ತವೆ. ಇಷ್ಟಾದರೂ ಈ ಶಬ್ದ ಹೇಗೆ ಮತ್ತು ಎಲ್ಲಿಂದ ಉತ್ಪತ್ತಿಯಾಗುವುದೆಂದು ತಿಳಿದು ಕೊಳ್ಳಲು ನಮಗೆ ಕುತೂಹಲ ಮೂಡಿಸುತ್ತದೆ. ಮೊನ್ನೆ ನಮ್ಮ ಮನೆಗೆ ಬಂದ ಈ ಮನೆ ಮಿಡತೆ ಹಿಡಿದು ನಾನು 20 ವರ್ಷಗಳ ಹಿಂದೆ ಅಭ್ಯಸಿಸಿದ್ದದ್ದನ್ನು ಕಣ್ಣಿಂದ ನೋಡಿ ಮತ್ತೊಮ್ಮೆ ಖಾತರಿ ಪಡಿಸಿಕೊಂಡೆ. ಇವು ಸಾಮಾನ್ಯವಾಗಿ ನಿಶಾಚರಿಗಳು. ಈ ಮಿಡತೆಗಳ ಮೊದಲ ಜೊತೆಯ ಪ್ಲಾಸ್ಟಿಕ್ ನಂತಹ ರೆಕ್ಕೆಗಳ(Tegmen) ಅಂಚಿನಲ್ಲಿ ಅತೀ ಚಿಕ್ಕ ಹರಿತವಾದ ಹಲ್ಲುಗಳ ಸಾಲು (File)  ಮತ್ತು ಮತ್ತೊಂದು ಬದಿಯಲ್ಲಿ ಚೂಪಾದ ಅಂಚು(Scraper) ಇದೆ. ಇವೆರಡೂ ರೆಕ್ಕೆಗಳ ಕಂಪನದಿಂದ ಪರಸ್ಪರ ಉಜ್ಜಾಡಿದಾಗ ಹೊರಹೊಮ್ಮುವ ಕರ್ಕಶ ಶಬ್ದವೇ ಸಮಾಗಮ ಆಹ್ವಾನ ಸಂಗೀತ. ಹಾಗಾದರೆ, ಇದನ್ನು ಕೇಳಿಸಿಕೊಳ್ಳುವ ಶ್ರವಣಾಂಗವು ಈ ಮಿಡತೆಗಳ ಮುಂಗಾಲುಗಳ ನಾಲ್ಕನೇ ಭಾಗವಾದ ಟಿಬಿಯಾ (Tibia) ದಲ್ಲಿ ಒಂದು ಟೊಳ್ಳಾದ ರಂಧ್ರ ಮತ್ತು ಪರದೆ ಇದೆ. ಇದಕ್ಕೆ ಟಿಂಫಾನಂ (Tymphanum)ಎಂದು ಕರೆಯುತ್ತಾರೆ.

6. ಆಹಾ! ಲೇಡಿ ಬಗ್ ಗುಲಗಂಜಿ ಹುಳ

ಲೇಡಿ ಬಗ್ ಅಥವಾ ಲೇಡಿ ಬರ್ಡ್ ಎಂದು ಈ ಗುಲಗಂಜಿ ಹುಳಗಳನ್ನು ನೋಡಿದಾಕ್ಷಣ ಮಕ್ಕಳು ಒಂದೇ ಸಮನೆ ಕೂಗತೊಡಗುತ್ತವೆ. ಇವು ದಕ್ಕುವ ಕೆಂಪು, ಕಪ್ಪು, ಕಿತ್ತಳೆ, ಹಳದಿ ಇನ್ನಿತರ ವರ್ಣ ವಿನ್ಯಾಸದ ಕೀಟಗಳು ಮೈ ರೋಂಮಾಂಚನಗೊಳಿಸುತ್ತವೆ. ಇವಕ್ಕೆ ಕೀಟಶಾಸ್ತ್ರದಲ್ಲಿ ಲೇಡಿ ಬರ್ಡ್ ಬೀಟಲ್  (Lady bird beetle)ಎಂದು ಕರೆಯುತ್ತಾರೆ. ಕೋಲಿಯಾಪ್ಟೆರ (Coleoptera)ಗುಂಪಿನ ಕಾಕ್ಸಿನೆಲ್ಲಿಡೆ (Coccinellidae) ಕುಟುಂಬದಲ್ಲಿ ನೂರಾರು ಗುಲಗಂಜಿ ಹುಳಗಳನ್ನು ವರ್ಗೀಕರಿಸಿದ್ದಾರೆ. ಇವು ರೈತಸ್ನೇಹಿ ಕೀಟಗಳಾಗಿದ್ದು ಬೆಳೆಗಳನ್ನು ಹಾನಿಗೊಳಿಸುವ ಸಸ್ಯಹೇನು (Aphids) ಗಳು, ಉಣ್ಣೆತಿಗಣೆ(Mealy bugs) ಗಳು ಮತ್ತು ಶಲ್ಕಕೀಟ (Scales)ಗಳನ್ನು ಭಕ್ಷಿಸಿ ರೈತರ ಬೆಳೆಗಳನ್ನು ಹಾನಿಯಿಂದ ತಪ್ಪಿಸುತ್ತವೆ. ಆಹಾರದ ಅಲಭ್ಯತೆಯ ಸಮಯದಲ್ಲಿ ಅಂದರೆ, ಇತರ ಕೀಟಗಳು ಸಿಗದಿದ್ದಾಗ ತನ್ನ ಸಂತತಿಯ ಮರಿಗಳನ್ನೇ ಕರುಣಾರಹಿತವಾಗಿ ತಿಂದು ಬದುಕುವುದು ವಿಪರ್ಯಾಸ. ಪ್ರೌಢ ಗುಲಗಂಜಿ ಹುಳಗಳು ಎಷ್ಟು ಸುಂದರವೋ, ಅದರ ಮರಿಹುಳಗಳು ಅಷ್ಟೇ ಕುರೂಪಿ ಮತ್ತು ದೇಹತುಂಬ ಮುಳ್ಳುಗಳಿದ್ದು ಮೊಸಳೆಯ ವಿನ್ಯಾಸದಂತಿದ್ದು ಚಾರ್ಲ್ಸ್ ಡಾರ್ವಿನ್(Survival Of The Fittest ) ಆತ್ಮ ರಕ್ಷಣೆಗಾಗಿ ಈ ಅವತಾರ ತಾಳುತ್ತವೆ. ಪ್ರೌಢಕೀಟಗಳು ತನ್ನ ವಿಷಕಾರಕ ಮತ್ತು ಕೆಟ್ಟವಾಸನೆಯ ನೆತ್ತರನ್ನು (Hemolymph) ಕಾಲಿನ ಸಂಧಿಗಳಿಂದ ಹೊರಸೂಸಿದರೆ, ಇದರ ಮರಿಹುಳಗಳು ತನ್ನ ದೇಹದಿಂದ ವಿಕರ್ಷಕ ರಾಸಾಯನಿಕಗಳನ್ನು ವಿಸರ್ಜಿಸಿ ಆಕ್ರಮಿತ ಭಕ್ಷಕ ಶತ್ರುಗಳನ್ನು ದೂರ ಅಟ್ಟುತ್ತವೆ.