10 ಕೆಜಿ ನೀಡುತ್ತಿದ್ದ ಅಕ್ಕಿಯನ್ನು 6 ಕೆಜಿಗೆ ಇಳಿಸಿದ ಸರಕಾರ ಬಡವರ ಹೊಟ್ಟೆಗೆ ಹೊಡೆದಿದೆ: ಕಾಂಗ್ರೆಸ್ ಆಕ್ರೋಶ

Update: 2023-01-05 18:05 GMT

ಬೆಂಗಳೂರು, ಜ.5: ಬಿಜೆಪಿಯದ್ದು ಕಣ್ಕಟ್ಟು ಯೋಜನೆಗಳು, ಕಾಂಗ್ರೆಸ್‍ನದ್ದು ಶಾಶ್ವತ ಯೋಜನೆಗಳು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕಾಂಗ್ರೆಸ್ ಜಾರಿಗೆ ತಂದ ಆಹಾರ ಭದ್ರತಾ ಕಾಯ್ದೆಯ 5 ಕೆಜಿ ಅಕ್ಕಿಯನ್ನು ಹೊರತುಪಡಿಸಿ ಉಳಿದ 5 ಕೆಜಿ ಅಕ್ಕಿಯನ್ನು ಸ್ಥಗಿತಗೊಳಿಸಿದ ಕೇಂದ್ರ ಸರಕಾರ ಬಡವರ ಹಸಿದ ಹೊಟ್ಟೆಯನ್ನು ಅಣಕಿಸುತ್ತಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ರಾಜ್ಯಗಳ ಪಾಲಿಗೆ ಕೇವಲ 1 ಕೆಜಿ ಅಕ್ಕಿ ನೀಡುವ ಮೂಲಕ ಒಟ್ಟು 10 ಕೆಜಿ ನೀಡುತ್ತಿದ್ದ ಅಕ್ಕಿಯನ್ನು 6 ಕೆಜಿಗೆ ಇಳಿಸಿದ ಸರಕಾರ ಬಡವರ ಹೊಟ್ಟೆಗೆ ಹೊಡೆದಿದೆ. ಶ್ರೀಮಂತ ಉದ್ಯಮಿಗಳ 10 ಲಕ್ಷ ಕೋಟಿಯನ್ನು ಎನ್‍ಪಿಎ ಮಾಡುವ ಸರಕಾರಕ್ಕೆ ಬಡವರಿಗೆ ನೀಡುವ ಅಕ್ಕಿ ಹೊರೆ ಆಯ್ತೇ? ಬಿಜೆಪಿಯದ್ದು ದಾಸೋಹ ತತ್ವವಲ್ಲ ಅಲ್ಲ ‘ಗುಳುಂ ಸ್ವಾಹಾ’ದ ತತ್ವ ಎಂದು ಟೀಕಿಸಿದೆ.

ಪಡಿತರ ಅಂಗಡಿ ಮುಂದೆ ಮೋದಿ ಫೋಟೋ ಹಾಕಿಲ್ಲವೆಂದು ರಂಪ ಮಾಡಿದ್ದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈಗ ಅಕ್ಕಿ ಕಡಿತಗೊಳಿಸಿದ್ದಕ್ಕೆ ಏನು ಹೇಳುವರು? ಅನ್ನಭಾಗ್ಯದ ಅಕ್ಕಿ ಮೋದಿಯದ್ದು ಎಂಬ ಸುಳ್ಳು ಪೋಣಿಸುವ ರಾಜ್ಯ ಬಿಜೆಪಿ ಈಗ ರಾಜ್ಯದ ಪಾಲಿಗೆ ಕೇವಲ 1 ಕೆಜಿ ನೀಡುತ್ತಿರುವುದಕ್ಕೆ ಏನು ಹೇಳುತ್ತದೆ? ಅನ್ನ ಹಾಕುವ ಬದಲು ಕನ್ನ ಹಾಕುತ್ತಿದೆ ಬಿಜೆಪಿ ಎಂದು ಕಾಂಗ್ರೆಸ್ ಕಿಡಿಗಾರಿದೆ.

''ಮುಂದಿನ ತಿಂಗಳಿನಿಂದ ಪಡಿತರದಾರರಿಗೆ 4 ಕೆಜಿ ಅಕ್ಕಿ ಕಡಿತ ಮಾಡಲಾಗುತ್ತದೆ. ಪಡಿತರದಾರರಿಗೆ 10 ಕೆಜಿ ಬದಲು 6 ಕೆಜಿ ಮಾತ್ರ ಅಕ್ಕಿ ವಿತರಣೆ ಮಾಡಲಾಗುತ್ತದೆ'' ಎಂದು ಆಹಾರ, ನಾಗರಿಕ ಸರಬರಾಜು & ಗ್ರಾಹಕರ ವ್ಯವಹಾರ ಇಲಾಖೆಯ ಜಂಟಿ ನಿರ್ದೇಶಕ ವಿಜಯ್ ಕುಮಾರ್ ಹೇಳಿರುವುದಾಗಿ ವರದಿಯಾಗಿದೆ.

Similar News