ಹಾವೇರಿ | ಕನ್ನಡ ಸಾಹಿತ್ಯ ಸಮ್ಮೇಳನ ಸಾಹಿತ್ಯ ಲೋಕಕ್ಕೆ ಉತ್ಕೃಷ್ಟ ಮುನ್ನುಡಿ ಬರೆಯಲಿದೆ: ಸಿಎಂ ಬೊಮ್ಮಾಯಿ

''ನನ್ನ ತವರು ಜಿಲ್ಲೆಯಲ್ಲಿ ಸಮ್ಮೇಳನ ನಡೆಯುತ್ತಿರುವುದು ಬಹಳ ಸಂತೋಷ ತಂದಿದೆ''

Update: 2023-01-06 09:36 GMT

ಹಾವೇರಿ, ಜನವರಿ 06: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಹಿತ್ಯ ಲೋಕಕ್ಕೆ ಉತ್ಕೃಷ್ಟ ಮುನ್ನುಡಿಯನ್ನು ಬರೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಅವರು ಇಂದು 86 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ  ಪಾಲ್ಗೊಳ್ಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು. 

ನನ್ನ ತವರು ಜಿಲ್ಲೆಯಲ್ಲಿ ಸಮ್ಮೇಳನ  ನಡೆಯುತ್ತಿರುವುದು ಬಹಳ ಸಂತೋಷ ತಂದಿದೆ. ಹಾವೇರಿ ಜ್ಞಾನದ ನಾಡು, ಸಾಹಿತ್ಯದ ಬೀಡು. ಇಂಥ ನಾಡಿನಲ್ಲಿ ಸಾಹಿತ್ಯ ಸಮ್ಮೇಳನ ಮಾಡುವ ಮೂಲಕ ಕನ್ನಡ , ಕನ್ನಡ ಅಸ್ಮಿತೆಯನ್ನು ಎತ್ತಿಹಿಡಿದಂತಾಗುತ್ತದೆ.  ಪ್ರಚಲಿತ ವಿಷಯಗಳ ಬಗ್ಗೆ ಚರ್ಚೆ  ಮಾಡುವುದು, ಪರಿಹಾರ ನೀಡುವುದು, ಭವಿಷ್ಯದಲ್ಲಿ ಕನ್ನಡ ಹಾಗೂ ಕನ್ನಡ ಸಾಹಿತ್ಯ ಯಾವ ಮಟ್ಟಕ್ಕೆ ಹೋಗಬೇಕು ಎನ್ನುವ ಉತ್ಕೃಷ್ಟ ಸಾಹಿತ್ಯ ರಚನೆಗೆ ಮುನ್ನಡಿಯಾಗಲಿದೆ ಎಂದರು. 

ಕನ್ನಡ ಅಭಿವೃದ್ಧಿಗೆ ಮಸೂದೆ: ಸಮಗ್ರ ಕನ್ನಡ ಅಭಿವೃದ್ಧಿಗೆ ಮಸೂದೆ    ಬಗ್ಗೆ ಪ್ರತಿಕ್ರಿಯೆ ನೀಡಿ ಕನ್ನಡದ ಮಸೂದೆ ಚರ್ಚೆಯಾಗಬೇಕು. ಮುಖ್ಯವಾಗಿ ವಿಧಾನಸಭೆ ಒಳಗೆ ಹೊರಗೆ ವ್ಯಾಪಕವಾಗಿ ಚರ್ಚೆಯಾಗಬೇಕು. ಈಗಾಗಲೇ ಕಳೆದ ಬಾರಿ ಮಂಡನೆ ಯಾದ ನಂತರ ಹತ್ತು ಹಲವು ಸಲಹೆಗಳು ಬಂದಿವೆ. ಇನ್ನಷ್ಟು ಸಲಹೆಗಳನ್ನು ನೀಡುವುದಾಗಿ ಹೇಳಿದ್ದಾರೆ. ಇದು ಸಾಹಿತ್ಯ ಹಾಗೂ ಸಾರ್ವಜನಿಕ ಲೋಕದಲ್ಲಿ ಚರ್ಚೆಯಾಗಬೇಕು. ಚರ್ಚೆ ಮಾಡಿ ಮಸೂದೆ ಯಾದರೆ ಅದು ಸುದೀರ್ಘ ಅನುಷ್ಠಾನ ಯೋಜನೆಯಾಗುತ್ತದೆ. ಇದು ಅವಸರದಲ್ಲಿ ಮಾಡುವ ಕೆಲಸ ಅಲ್ಲ. ಕಾನೂನು ಆಯೋಗ  ಸಂಪೂರ್ಣವಾಗಿ  ಸ್ಪಷ್ಟಪಡಿಸಿ ಅಭಿಪ್ರಾಯ ನೀಡಿದ್ದಾರೆ. ಕಾನೂನು ಅಂಶಗಳಿವೆ. ಸಾಹಿತ್ಯಾತ್ಮಕ ಅಂಶಗಳಿಲ್ಲ. ಕನ್ನಡ ಸಾಹಿತ್ಯ ಪರಿಷತ್ತು ಕೆಲವು ಬದಲಾವಣೆಗಳನ್ನು ಕೇಳಿದೆ ಅದೂ ಮಾಡಿಕೊಟ್ಟಿದೆ. ಆಡಳಿತಾತ್ಮಕ  ಅಂಶಗಳು ಬಂದಾಗ ಮಾತ್ರ ಅದು ಪರಿಪೂರ್ಣವಾಗುತ್ತದೆ.  ಬರುವ ವಿಧಾನಸಭೆಯಲ್ಲಿ ಅದನ್ನು ಅನುಮೋದಿಸಲಾಗುವುದು ಎಂದರು. 

ಕ್ರೀಡಾಮನೋಭಾವ: ಪರ್ಯಾಯ ಸಾಹಿತ್ಯ ಸಮ್ಮೇಳನ ಪ್ರತಿ ಸಾಹಿತ್ಯ ಸಮ್ಮೇಳನವಾದಾಗಲೂ ಇರುತ್ತದೆ. ಅದನ್ನು ನಾವು ಕ್ರೀಡಾಮನೋಭಾವದಿಂದ ತೆಗೆದುಕೊಂಡು, ಅಲ್ಲಿ ಚರ್ಚೆಯಾಗುವ ವಿಷಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದರು.

ಕಾದು ನೋಡಿ: ಸರ್ಕಾರ ಈಗಾಗಲೇ ಗಡಿನಾಡು ಕನ್ನಡಿಗರ ಅಭಿವೃದ್ಧಿಗೆ ಪ್ಯಾಕೇಜ್ ಘೋಷಣೆ ಮಾಡಿದೆ. ಚರ್ಚೆಗಳ ಆಧಾರದ ಮೇಲೆ ಸಮಾರೋಪ ಸಮಾರಂಭದಲ್ಲಿ ತೀರ್ಮಾನಿಸಿ ಭರವಸೆ ನೀಡಲಾಗುವುದು ಎಂದರು. 

ವಿಲ್ಲಿನ ಚೌಕಟ್ಟಿನಲ್ಲಿ ಕ್ರಮ: ಸಿದ್ದೇಶ್ವರ ಸ್ವಾಮೀಜಿಗಳ ಕುರಿತು ಪಠ್ಯಕ್ರಮದಲ್ಲಿ ಸೇರ್ಪಡೆ ಮಾಡುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರ ನೀಡಿ, ಸ್ವಾಮೀಜಿಗಳ ವಿಲ್ಲಿನ ಚೌಕಟ್ಟಿನಲ್ಲಿ ಎಲ್ಲವನ್ನೂ  ಮಾಡಬೇಕು. ಅದನ್ನು ಮೀರಿ ಏನೂ ಮಾಡಲು ಸಾಧ್ಯವಿಲ್ಲ. ಕಣ್ಣೇರಿ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಟ್ರಸ್ಟಿನ ಸದಸ್ಯರೆಲ್ಲರೂ ತೀರ್ಮಾನಿಸಿದಂತೆ ಕ್ರಮ ವಹಿಸಲಾಗುವುದು ಎಂದರು. 

ಮೀಸಲಾತಿ: ಪಂಚಮಸಾಲಿ  2 ಎ ಮೀಸಲಾತಿ ನೀಡುವ ಬಗ್ಗೆ   ಪ್ರತಿಕ್ರಿಯೆ ನೀಡಿ, ಈಗಾಗಲೇ ಸರ್ಕಾರ ಸರಿಯಾದ ಹೆಜ್ಜೆಯಿಟ್ಟಿದ್ದು, ಕಾನೂನು ಹಾಗೂ ಸಂವಿಧಾನಾತ್ಮಕವಾಗಿ ಕ್ರಮ ವಹಿಸಬೇಕು. ಅಂತಿಮ ವರದಿ  ಬಂದ ಕೂಡಲೇ ಸ್ಪಷ್ಟವಾಗುತ್ತದೆ ಎಂದರು.

Similar News