ಒಲಿದ ಸ್ವರಗಳು

Update: 2023-01-06 11:27 GMT

ಕನ್ನಡದ ಬಹು ಮುಖ್ಯ ಕವಿಯಾಗಿರುವ ಡಾ. ಕೆ. ವಿ. ನೇತ್ರಾವತಿ ಅವರು ಕೋಲಾರ ಜಿಲ್ಲೆಯ ಕುಂಬಾರ ಹಳ್ಳಿಯವರು. ಜಾನಪದ ಮತ್ತು ಕನ್ನಡ ಭಾಷೆಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಹಂಪಿ ಕನ್ನಡ ವಿಶ್ವ ವಿದ್ಯಾಲಯದಿಂದ ದಲಿತ ಸಂಕಥನ ಎಂಬ ವಿಷಯಕ್ಕೆ ಡಾಕ್ಟರೇಟ್ ಪಡೆದಿದ್ದಾರೆ. ನಾಲ್ಕು ವರ್ಷಗಳ ಕಾಲ ಹಂಪಿಯಲ್ಲಿ ಸಖಿ ಪತ್ರಿಕೆಯ ಸಂಪಾದಕರಾಗಿ ಕೆಲಸ ನಿರ್ವಹಿಸಿದ್ದಾರೆ.

ನಮ್ಮವರು

ಕೂತಿಲ್ಲ ಕೊರಗಿ ಕೊರಗಿ ಸುಮ್ಮನೆ ನಮ್ಮವರು

ಹಾಡಾಗಿಸಿ ಆಕ್ರಂದನವ

ಹೊಸನಾದ ಹುಟ್ಟಿಸಿ ಹಲಗೆಗೆ ಭೂಮಿ ಹಿಗ್ಗಿಸಿ ತುಂಬಿದವರು

ಜೀವ ಬಡಿತ ದನಿಗೆ ನೆನಪಿನ ಬುತ್ತಿಗೊತ್ತು

ಕಾಲವ ಹೊಲೆದು

ನಾಭಿಯಿಂದ ಹೊರಗೆ ಜಿಗಿದು

ಒಟ್ಟಾದವರು

ಕತ್ತಲಲ್ಲ ನಮ್ಮವರು

ತಿಪ್ಪೆ ಮೇಲೆ ಜ್ಯೋತಿಯಾಗಿ ಉರಿದು ಬೆಳಕಾದವರು

ವಿಭೂತಿಯ ಎರಡು ಹೋಳಿಗೆ

ಆಕಾಶ ಭೂಮಿಯ ಮಾಡಿ

ಕಾಲದ ಕನಸ ಅನಾದಿ ಹೊತ್ತವರು

ಸುಡು ನೆತ್ತಿಗೆ ಸಿಂಬೆಯಾಗುವ ಕನವರಿಕೆಯಲಿ

ಶ್ರಮ ನೆಚ್ಚಿದ ನನ್ನವರು

ಮಾತಂಗರಾಗಿ ಬಿಂದುವಿನಿಂದ ನಾದ ಮಾಡಿ ನಾದದಿಂದ ಮಾತು ಹೆಣೆದು

ಮಾತಿನಿಂದ ಅಕ್ಷರ ಅರೆದು ಅಕ್ಷರದಿಂದ ದೀಪ ಬೆಳಗಿ

ದೇಶೀಯನೇ ಹೊತ್ತವರು

ನಾಟಿ ಇಟ್ಟವರು

ಮೈತ್ರಿ ಮಲ್ಲಿಗೆ ಪರಿಮಳ ಅರಳಿಸಿ

ಗಂಗೆಯಾಗಿ ಹರಿದವರು

ತನ್ನನ್ನೇ ಸೀಳಿಕೊಂಡ ಜಾಂಬವಂತರಾಗಿ

ಜಂಬೂದ್ವೀಪ ಕಟ್ಟಿ

ಜಗದೆದೆಯಲ್ಲಿ ಹೂದೋಟ ಬೆಳೆದು

ಜಂಬೂನೇರಳೆ ಕೆಳಗೆ ಜಗವ ನಿಲ್ಲಿಸಿ

ಮಿಂಚು ಹುಳವಾಗಿ ಮಿರುಗಿದವರು

ಗಲ್ಲೇಬಾನಿಯಲಿ ಗುನುಗುನುಗಿ

ಹಟ್ಟಿತುಂಬಾ ಕಾವ್ಯ ಹರಡಿ

ಉತ್ತು ಬಿತ್ತಿ ಕಳೆತೆಗೆದವರು

ಕೂತಿಲ್ಲ ಕೊರಗಿ ಕೊರಗಿ ಸುಮ್ಮನೆ ನಮ್ಮವರು

ಗಣಿ ನಿಂತ ಮೇಲೆ

ಗಣಿ ನಿಂತ ಮೇಲೆ

ಕಾಲನ

ಧೂಳೊರೆಸುತ್ತಾ

ನನ್ನ ಎದೆಯ

ಅಟ್ಟಿಯಲ್ಲಿ ಬಿದ್ದಿವೆ

ಮಕ್ಕರಿ ಗುದ್ದಲಿ ಚನಿಕೆ

ದುಃಖ ದುಮ್ಮಾನಗಳ

ಒಡಲಲ್ಲಿ ಅಡಗಿಸಿ

ಭೂತಗಳ ಗುರುತು ಸಿಗದೆ

ಅಲೆಯುತ್ತಿದ್ದೇನೆ

ಬರಿ ಬರಿದೇ ದಾರಿಯಲಿ

ಚಿತ್ತವನರಸಿ

ಕೆಂಪು ಬಣ್ಣದಲಿ

ನನ್ನ ನಿನ್ನ ಅವರ ಕತ್ತರಿಸಿದ

ಕೈ ಗುರುತುಗಳು ಹಾಗೆ ಇವೆ

ಬಿರುಗಾಳಿಗೂ ಕದಲದೆ

ಗಣಿ ಬೆಟ್ಟಗಳಲ್ಲಿ

ರೋಗಗಳ ಜೊತೆ ಕೂಡಿ

ಸಿಕ್ಕಿತ್ತು

ನನಗೆ ಒಂದಿಷ್ಟು ಅನ್ನ

ನಿಟ್ಟುಸಿರು ಬಿಡದೆ

ನೆತ್ತಿಯ ಮೇಲಿನ ಸೆರಗು

 ನೆರಳಾಗಲು ಹವಣಿಸುತ್ತಿತ್ತು

ಕುಣಿ ಕುಣಿದು ಅಹೋರಾತ್ರಿಯಲಿ

ಹೊಡೆದು ಬಂತು

ಹಾರಿ ಬಂತು

ನೆಲದ ನೌಕೆ

ಸಾರಿತು

ತನ್ನ ಹಸಿರ ಭ್ರಷ್ಟನೆರಳನ್ನು

ಕಂಪನ ನಿಂತು ಹೋದ

ಗಣಿಬೆಟ್ಟ

ಇಂಗಿಸಿತು

ಬಿರುಕಿಸಿತು

ಆರಿಸಿತು

ನನ್ನೆದೆಯ ನೆನಪನ್ನು.

ಮತ್ತೆ,

ತೋರಿಸಿತು..

ಬಾಂಬೆ, ಪುಣೆ..

ಹೆದ್ದಾರಿಗಳನ್ನು.

ಹೀಲ್ಡ್ ಚಪ್ಪಲಿ

ಸೈಡು ಸೆರಗು

ತುಟಿಯ ರಂಗು

ಜಡೆಯುದ್ದದ ಮಲ್ಲಿಗೆ

ಕಣ್ಣಂಚಿನ ಕಾಡಿಗೆ

ಮತ್ತೆ ತೆರೆದಿಟ್ಟಿದೆ ನನ್ನ

ವೌನವನ್ನು..

ನನ್ನ

ಕನಸನ್ನು..

ನನ್ನ

ಹಸಿವನ್ನು..

ಅಡುಗೆ ಮನೆ

ಅಡುಗೆ ಮನೆ ಇದು ಬರಿ ಅಡುಗೆ ಮನೆಯಲ್ಲ

ಇಲ್ಲಿ ಒಂದು ಕಿಟಕಿಯೂ ಇಲ್ಲ

ಗತಕಾಲದ ಪುಣ್ಯವೆಂಬಂತೆ

ಇದಕ್ಕೊಂದು ಗವಾಕ್ಷಿ ಇದೆ

ಗವಾಕ್ಷಿಯ ಹಿಡಿ ಬೆಳಕಿನಲ್ಲಿ

ಬೇಯಿಸುತ್ತೇನೆ, ಹುರಿಯುತ್ತೇನೆ

ಕುಟ್ಟುತ್ತೇನೆ, ಅರೆಯುತ್ತೇನೆ

ಕಡೆಯುತ್ತೇನೆ

ಜಗದ ಜೋಂಪನ್ನು

ಪುರ್ ಪುರ್ ಎಂದು ಒಲೆ ಊದುತ್ತಾ

ಜಗವ ಎಚ್ಚರವಾಗಿಸುತ್ತೇನೆ

ಎಲ್ಲಿನದೋ ಉದ್ದಿನ ಬೇಳೆ

ಇನ್ನೆಲ್ಲಿನದೋ ಅಕ್ಕಿ

ಮತ್ತೆಲ್ಲಿನದೋ ಉಪ್ಪನ್ನು ಬೆರಸಿ

ಕನಸಿನ ಚಿತ್ತಾರವ ದೋಸೆಯಾಗಿಸುತ್ತೇನೆ!

ದೋಸೆಗೆ ಹೆಂಚು

ಶಾವಿಗೆಗೆ ಮಣೆ

ಸಾರಿಗೆ ಸೌಟು

ಮುದ್ದೆಗೆ ಕೋಲು

ಜೊತೆ ಮಾಡಿ ಇಲ್ಲಿ

ಹಾತೊರೆವ ಹಪಾಹಪಿಗಳ ಸಿಂಚನವಾಗಿಸುತ್ತೇನೆ.

ತರಾವರಿ ಕಾಯಿ

ಬೀಜ, ಹಣ್ಣು

ಸೊಪ್ಪು, ಗಡ್ಡೆ

ಬೇರು ಬೇಳೆಗಳನ್ನು

ಒರಳ ಕಲ್ಲಲಿ ಕುಟ್ಟಿ

ನಾನಾ ರೂಪಗಳ ಕೊಟ್ಟು

ಬೇಯಿಸಿ ಗಮಗಮನೆ

ಒಲೆಯ ಉರಿಯಲಿ ಪ್ರಯೋಗಿಸಿ ಹದವಾಗಿಸುತ್ತೇನೆ.

ಈರುಳ್ಳಿ ಮೆಣಸಿನಕಾಯಿಗಳನ್ನು

ಕಟಕ್ ರೊಟ್ಟಿಯೊಂದಿಗೆ

ಬಸ್ಸಾರನ್ನು ಮುದ್ದೆಯೊಂದಿಗೆ

ಮೀನುಸಾರನ್ನು ಕಡುಬಿನೊಂದಿಗೆ

ಜೊಲ್ಲು ಸುರಿಸಲು ಬಿಟ್ಟು

ಜಗದ ಚರಾ ಚರಗಳನ್ನು ಬಯಲಾಗಿಸಿ

ಗುಟ್ಟು ರಟ್ಟಾಗಿಸುತ್ತೇನೆ

ಇಲ್ಲೇ, ಈ ಅಡುಗೆ ಮನೆಯಲ್ಲೇ.

ಹೀಗೆ ಎಷ್ಟೋ, ಮತ್ತೆಷ್ಟನ್ನೋ

ಕತ್ತಲೆ ಬೆಳಕಿನ ನಡುವೆ

ವಾಸನೆ, ಕಣ್ಣು, ಕೈಯಳತೆಗಳಲ್ಲೇ ಅಳೆದು

ಸೃಷ್ಟಿಯನು ಬೆತ್ತಲುಗೊಳಿಸುತ್ತೇನೆ

ಕತ್ತಲ ಅಡುಗೆ ಮನೆಯಲ್ಲಿ

ಅವುಗಳನ್ನು ಬಾಂಡಲಿ, ಅಂಡೆ, ಚೆಂಬು, ಕಡಾಯಿ

ಬಿಂದಿಗೆಗಳಲ್ಲಿ ಸುರಿಯುತ್ತೇನೆ

ಜಗದಗಲಕ್ಕೂ ಹಂಚುತ್ತೇನೆ

ಹುಡುಕುತ್ತೇನೆ

ನಡೆಯುತ್ತೇನೆ

ನಡೆದಷ್ಟೂ...... ದಾರಿಗಳಲಿ

ಇಲ್ಲಿನದೋ ಅಲ್ಲಿನದೋ ಮತ್ತೆಲ್ಲಿನದೋ

ಅಡುಗೆ ಮನೆಗಳಿಗೆ ಸಾವಿರಾರು ಕಿಟಕಿಗಳ ಮಾಡುತ್ತೇನೆ

ಜಗವನ್ನೇ ಅಡುಗೆ ಮನೆಯಾಗಿಸುತ್ತೇನೆ

ನೋಡುತ್ತೇನೆ ಜೀವ ಸಂಗಾತದಿಂದ

ಕಣ್ಣು ಹಾಯಿಸಿ ಜತನದಿಂದ

ಹಾಯಿಸಿದಷ್ಟೂ ದೂರ....ಬಲು ದೂರ....

ಅಡುಗೆ ಮನೆ

ಚೆಲುವಾಗಿ, ಒಲವಾಗಿ, ನಲಿವಾಗಿ, ಬೆಳಕಾಗಿ

‘ಜೀವನಾವೆ’ಯಾಗಿ ತೇಲುವ ಪರಿಯನ್ನು

ಅಡುಗೆ ಮನೆ

ಇದು ಬರಿಯ ಅಡುಗೆ ಮನೆಯಲ್ಲ

ಇಲ್ಲೀಗ ಒಂದಲ್ಲ

ಸಾವಿರಾರು ಕಿಟಕಿಗಳಿವೆ!

ಸಾರು ಮಡಕೆ

ಕತ್ತಲು ಗವುಗುಡುತ್ತಿತ್ತು

ಕಾಲಿಗೆ ಗೆಜ್ಜೆ ಕಟ್ಟಿರಲಿಲ್ಲ

ಚಿಂತೆಯ ಸರಿಕಿಗೆ ಬಿಡುಹೊತ್ತು

ಸಾರು ಮಡಕೆ ನೆಮ್ಮದಿಯ ನಿಟ್ಟುಸಿರು ಬಿಟ್ಟು

ಆರಾಮಾಗಿ

ಒಲೆಗಡ್ಡೆಯ ಮೂಲೆಗೆ ಹೊರಗಿತ್ತು..

ಸಾರು ಮಡಕೆಗೆ

ವಾರಕೆ ಒಂದೂ ಎರಡೂ ದಿನ ಕೆಲಸ..

ಕುದಿದು..ಬೆಂದು..ಬಸವಳಿದರೂ

ಬೇಸರಿಸಿಕೊಳ್ಳದೆ

ನಾಳೆಗೆ ಕನವರಿಸುತ್ತಿತ್ತು..

ಮನೆಮಂದಿಯ ಸಾರು ಕನಸನ್ನು ಕಣ್ಣಮುಂದೆ ಎಳೆದುಕೊಂಡು..

ಮಡಕೆ

ಅಟ್ಟದೆಡೆ ಕಣ್ಣಾಯಿಸಿದಾಗ

ಒಣಬಾಡಿನ ತುಂಡೊಂದು ನುಸಿತಿಂದು ನೇತಾಡುತ್ತಿತ್ತು

ಛೇ..ಈ ಶನಿ ನುಸಿ !

ಸಣ್ಣಗೆ ಧೂಳು ಉದುರಿಸುತ್ತಿತ್ತು

ಮಡಕೆಯ ಕಣ್ಣಲ್ಲಿ,

ಮನೆಮಂದಿಯ ಹೊಟ್ಟೆಗಳಲ್ಲಿ ಇಲಿಗಳು ಓಡಾಡುವ ಸದ್ದು ಕೇಳುತ್ತಿತ್ತು

ದುಡು ದುಡು? ದಡ ದಡ?

ದುಡುದುಡು?ದಡದಡ?.

ಮಡಕೆ ಕಣ್ಣೊರೆಸಿಕೊಂಡು

ನೀರಿನಲ್ಲಿ ನುಣ್ಣಗಾಗಿ

ಕಣ್ ತೆರೆದು ನೋಡಿದಾಗ

ಜಗತ್ತು ತಣ್ಣಗೆ ನಿದ್ದೆಮಾಡುತ್ತಿತ್ತು.