ಒಬಾಮಾರಂತೆ ವಿಶ್ವಶಾಂತಿಯ ತುಡಿತವಿರುವ ಸಾಧಕ ಡಾ.ಕೊಲಾಸೊ: ವೀರೇಂದ್ರ ಶರ್ಮ

Update: 2023-01-06 11:55 GMT

ಇಡೀ ಅಭಿನಂದನಾ ಸಮಾರಂಭದ ಕೇಂದ್ರ ಬಿಂದು  ಕೊಲಾಸೊ ಆಗಿದ್ದರೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಲಂಡನ್‌ನ ಲೇಬರ್ ಪಾರ್ಟಿಯ ಐದು ಬಾರಿಯ ಸಂಸದ ವೀರೇಂದ್ರ ಶರ್ಮ. ಲಂಡನ್‌ನ ಏಲಿಂಗ್ ಸೌತ್‌ಹಾಲ್‌ ನ ದೀರ್ಘಾವಧಿಯ ಸಂಸದರೂ, ಇಂಡೋ-ಬ್ರಿಟಿಷ್ ಪಾರ್ಲಿಮೆಂಟರಿ ಗ್ರೂಪ್‌ನ ಮುಖ್ಯಸ್ಥರೂ ಆಗಿರುವ ಶರ್ಮ ಅವರೇ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಪತ್ರಕ್ಕೆ ಸಹಿ ಹಾಕಿದವರು.

ಇವರು ಕೊಲಾಸೊ ಅವರಿಗೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನ ಪ್ರತಿಷ್ಠಿತ ಪ್ರಶಸ್ತಿ ಪತ್ರ ವಿತರಿಸಿ ತಮ್ಮ ಅಭಿನಂದನಾ ಮಾತುಗಳಲ್ಲಿ ಕೊಲಾಸೊ ಅವರನ್ನು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಸಾಲಿನಲ್ಲಿ ಪ್ರಸ್ತಾಪಿಸಿ ಮೆಚ್ಚುಗೆ ಸೂಚಿಸಿದ್ದು ವಿಶೇಷವಾಗಿತ್ತು.

ಇಡಿ ವಿಶ್ವ ಪ್ರೀತಿ-ಸೌರ್ಹಾರ್ಧತೆ-ಶಾಂತಿ-ನೆಮ್ಮದಿಯಿಂದ ಜೀವಿಸಬೇಕು ಎಂದು ತುಡಿಯುತ್ತಿದೆ. ಇದೇ ತುಡಿತವನ್ನು ವಿಶ್ವ ನಾಯಕರಾದ ಬರಾಕ್ ಒಬಾಮಾ ಮತ್ತಿತರ ನಾಯಕರೂ ಹೊಂದಿದ್ದರು. ಇವರ ಸಾಲಿನಲ್ಲಿ ನಿಲ್ಲುವವರು ಡಾ. ರೊನಾಲ್ಡ್ ಕೊಲಾಸೊ. ಸರ್ವಧರ್ಮದವರನ್ನೂ ತಮ್ಮ ನೆರೆ ಹೊರೆಯವರಂತೆ ಪ್ರೀತಿಸುವ, ಇದನ್ನೇ ಜೀವನದುದ್ದಕ್ಕೂ ಪಾಲಿಸುವ ಕೊಲಾಸೊ ಥರದವರು ಹೆಚ್ಚಾದಾಗ ವಿಶ್ವ ಶಾಂತಿ-ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ.

ತಮ್ಮ ಯಶಸ್ಸು ಮತ್ತು ಸಾಧನೆಗಳ ಪ್ರತಿಫಲವನ್ನು ತಮ್ಮ ಕುಟುಂಬಕ್ಕೆ ಮತ್ತು ಸಂಬಂಧಿಕರ ನಡುವೆ ಮಾತ್ರ ಹಂಚದೆ, ತಾವು ಹುಟ್ಟಿ ಬೆಳೆದ ನಾಡು-ರಾಷ್ಟ್ರಕ್ಕೆ ಹಂಚಿದ್ದಾರೆ. ಇವರ ಮಾನವೀಯ ಸೇವೆ ಇಡಿ ವಿಶ್ವಕ್ಕೆ ಮಾದರಿ. ಇವರ ಈ ಮಟ್ಟದ ಯಶಸ್ಸಿಗೆ ಕುಟುಂಬದ ಸಹಕಾರ ಮತ್ತು ಬೆಂಬಲವೂ ಪ್ರಮುಖ ಕಾರಣ. ಕೊಲಾಸೊ ಅವರ ಕುಟುಂಬದ ಸಂಸ್ಕಾರ ಇಡಿ ವಿಶ್ವಕ್ಕೆ ಮಾದರಿ ಆಗಬೇಕು ಎಂದು ಶ್ಲಾಘಿಸಿ ಪ್ರತಿಷ್ಠಿತ ಪ್ರಶಸ್ತಿ ಪತ್ರಕ್ಕೆ ಸಹಿ ಹಾಕುವ ಅದೃಷ್ಟ ತಮಗೆ ಒದಗಿ ಬಂದಿದ್ದಕ್ಕಾಗಿ ಕೊಲಾಸೊ ಅವರಿಗೆ ಧನ್ಯತೆ ಅರ್ಪಿಸಿದರು.