ಕೊಲಾಸೊ ಅವರ ಹೃದಯವೇ ಪ್ರಾರ್ಥನಾ ಮಂದಿರ: ಸಿ.ಟಿ. ರವಿ

ಭಾರತೀಯರ ಹೃದಯದಲ್ಲಿ, ವಿಶ್ವ ಸಮುದಾಯದಲ್ಲಿ ಕೊಲಾಸೊ ಹೆಸರು

Update: 2023-01-06 12:43 GMT

ಶುದ್ದವಾದ ಹೃದಯವೇ ನಿಜವಾದ ಮಂದಿರ ಎನ್ನುವ ಮಾತಿಗೆ ಉಪಮೆಯಾಗಿ ಬದುಕಿರುವವರು ರೊನಾಲ್ಡ್ ಕೊಲಾಸೊ ಎಂದು ಮಾಜಿ ಸಚಿವ ಹಾಗೂ ಡಾ. ರೊನಾಲ್ಡ್ ಕೊಲಾಸೊ ಅಭಿನಂದನಾ ಸಮಿತಿ ಅಧ್ಯಕ್ಷರಾದ ಸಿ.ಟಿ.ರವಿ ನುಡಿದರು.

ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇಳಿದವರಿಗೆ ಇಲ್ಲ ಎಂದು ವಾಪಾಸ್ ಕಳುಹಿಸಿದ ಉದಾಹರಣೆಯೇ ಇಲ್ಲದಂತೆ ಕೊಲಾಸೊ ದಾನ ಮಾಡಿದ್ದಾರೆ. ಪ್ರಜಾಪ್ರಭುತ್ವ ಪ್ರತಿಯೊಬ್ಬರಿಗೂ ಅವಕಾಶಗಳನ್ನು ಕೊಡುತ್ತದೆ. ಬಸ್ ಕಂಡಕ್ಟರ್ ಆಗಿದ್ದ ವೀರೇಂದ್ರ ಶರ್ಮ ಅವರು ಲಂಡನ್‌ನಲ್ಲಿ  ಐದು ಬಾರಿ ಸಂಸದರಾಗಿದ್ದಾರೆ ಎಂದರೆ ಅದಕ್ಕೆ ಪ್ರಜಾಪ್ರಭುತ್ವದ ಕೊಡುಗೆ ಅಪಾರ ಇದೆ. ರಾಜ್ಯ ಸರ್ಕಾರ ಕೊಲಾಸೊ ಅವರ ಸೇವೆಯನ್ನು ಗಮನಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ.

ಕೊಲಾಸೊ ಅವರಿಗೆ ಕೇಂದ್ರ ಸರ್ಕಾರದ ಪುರಸ್ಕಾರ ಸಲ್ಲಬೇಕು. ಆದರೆ ಕೊಲಾಸೊ ಹೆಸರನ್ನು ಕೇಂದ್ರ ಪ್ರಶಸ್ತಿಗೆ ಶಿಫಾರಸ್ಸು ಮಾಡುವ ಧೈರ್ಯ ನನಗಿಲ್ಲ. ಏಕೆಂದರೆ ಪ್ರಧಾನಿ ಮೋದಿ ಅವರು ಯಾವುದೇ ಶಿಫಾರಸ್ಸುಗಳನ್ನು ಕೇಳುವುದಿಲ್ಲ. ಸಾಲು ಮರದ ತಿಮ್ಮಕ್ಕ ಅವರ ಹೆಸರನ್ನು ಯಾರೂ ಶಿಫಾರಸ್ಸು ಮಾಡಿರಲಿಲ್ಲ. ಆದರೂ ಅವರಿಗೆ ಪದ್ಮ ಪ್ರಶಸ್ತಿ ಬಂತು. ಹೀಗಾಗಿ ಕೇಂದ್ರ ಸರ್ಕಾರ ಈಗ ಶಿಫಾರಸ್ಸುಗಳ ಮೇಲೆ ಪ್ರಶಸ್ತಿಗಳನ್ನು ಕೊಡದೆ ತನ್ನದೇ ಮಾನದಂಡವನ್ನು ಅನುಸರಿಸುತ್ತದೆ. ಶಿಫಾರಸ್ಸಿನ ಮೇಲೆ ಪ್ರಶಸ್ತಿಗಳನ್ನು ಕೊಡುವ ಕಾಲ ಹಿಂದಿತ್ತು. ಈಗ ಇಲ್ಲ. ಆದರೆ, ಕೊಲಾಸೊ ಅವರ ಹೆಸರು ಭಾರತೀಯರ ಹೃದಯದಲ್ಲಿ, ವಿಶ್ವ ಸಮುದಾಯದಲ್ಲಿ ದಾಖಲಾಗಿದೆ. ಜನರ ಹೃದಯದಲ್ಲಿ ಸ್ಥಾನ ಪಡೆಯುವುದು ಎಲ್ಲಕ್ಕಿಂತ ದೊಡ್ಡ ಪ್ರಶಸ್ತಿ. ಅದು ಕೊಲಾಸೊ ಅವರಿಗೆ ಪ್ರಾಪ್ತಿಯಾಗಿದೆ ಎಂದರು.

ಕೊಲಾಸೊ ಅವರನ್ನು ಲಂಡನ್‌ನ ಹೌಸ್ ಆಫ್ ಕಾಮನ್ಸ್ ಸನ್ಮಾನಿಸಿತು. ಆ ಬಳಿಕ ರಾಜ್ಯದಲ್ಲೂ ಇವರನ್ನು ಅಭಿನಂದಿಸಬೇಕು ಎನ್ನುವ ಆಶಯ ನಮ್ಮಲ್ಲಿ ಬಂತು. ನಾನು ಮತ್ತು ಕೆ.ಇ.ರಾಧಾಕೃಷ್ಣ ಅವರು ಕೊಲಾಸೊ ಅವರನ್ನು ಈ ಬಗ್ಗೆ ಸಂಪರ್ಕಿಸಿದೆವು. ಆದರೆ ಮೊದಲಿಗೆ ಕೊಲಾಸೊ ಒಪ್ಪಲಿಲ್ಲ. ಯಾವಾಗಲೂ ದಾನಿಗಳಿಗೆ ತಾವು ಮಾಡಿದ ದಾನ ಹೊರಜಗತ್ತಿಗೆ ಗೊತ್ತಾಗಬಾರದು ಎನ್ನುವುದು ಇರುತ್ತದೆ. ಆದರೆ, ದಾನಿಗಳನ್ನು ಗುರುತಿಸಿ ಅಭಿನಂದಿಸುವ ಮೂಲಕ ದಾನಕಾರ್ಯಕ್ಕೆ ಇನ್ನಷ್ಟು ಮಂದಿ ಮುಂದಾಗಲಿ, ಇನ್ನಷ್ಟು ಉದ್ಯಮಿಗಳಿಗೆ ಪ್ರೇರಣೆಯಾಗಲಿ ಎನ್ನುವುದು ನಮ್ಮ ಆಶಯವಾಗಿತ್ತು. ಹೀಗಾಗಿ ಕೊಲಾಸೊ ಅವರು ವಿಶ್ವ ಪ್ರಜ್ಞೆಗೆ ಪ್ರೇರಣೆಯಾಗಿದ್ದಾರೆ. ಇದು ಇನ್ನಷ್ಟು ಮಂದಿಯನ್ನು ಪ್ರೇರೇಪಿಸಲಿ ಎನ್ನುವ ಉದ್ದೇಶದಿಂದ ನಾವು ಈ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡೆವು ಎಂದು ವಿವರಿಸಿದರು.