×
Ad

ಕಂತೆ ಕಂತೆ ನೋಟು, ಸಾಲು ಸಾಲು BJP ಸಚಿವರೊಂದಿಗೆ ಸ್ಯಾಂಟ್ರೋ ರವಿ: ಮತ್ತಷ್ಟು ಫೋಟೋ ಹಂಚಿಕೊಂಡ ಕಾಂಗ್ರೆಸ್

Update: 2023-01-06 17:42 IST

ಬೆಂಗಳೂರು, ಜ.6: ಮೈಸೂರಿನಲ್ಲಿ ದಲಿತ ಯುವತಿಯ ಅತ್ಯಾಚಾರ, ವಂಚನೆ, ಕ್ರಿಮಿನಲ್ ಪಿತೂರಿ ದೌರ್ಜನ್ಯ ನಡೆಸಿರುವ  ಆರೋಪ ಎದುರಿಸುತ್ತಿರುವ ಸ್ಯಾಂಟ್ರೋ ರವಿ ಅಲಿಯಾಸ್ ಮಂಜುನಾಥ್ ಎಂಬಾತ ''ಬಿಜೆಪಿಯ ಹಲವು ಸಚಿವರ ಜೊತೆ ಸಂಪರ್ಕ ಹೊಂದಿದ್ದಾನೆ'' ಎಂಬ ಮಾಜಿ ಮುಖ್ಯ ಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಮತ್ತೊಂದು ಕಡೆ ಕಾಂಗ್ರೆಸ್ ಸ್ಯಾಂಟ್ರೋ ರವಿ, ಕಂತೆ ಕಂತೆ ನೋಟು ಮತ್ತು ಹಲವು ಸಚಿವರ ಜೊತೆಗಿದ್ದ ಫೋಟೋಗಳನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದೆ.

''ಕೋಟ್ಯಂತರ ರೂಪಾಯಿಯ ಕಂತೆ ಕಂತೆ ನೋಟುಗಳೊಂದಿಗೆ ಪೋಸ್ ಕೊಡುತ್ತಿರುವ ಸ್ಯಾಂಟ್ರೋ ರವಿಯ ಮಾಹಿತಿ ಇನ್ನೂ ಐಟಿ, ಈಡಿ ಕಚೇರಿಗಳಿಗೆ ತಲುಪಿಲ್ಲವೇ? ಈ ಅಕ್ರಮ ಹಣದ ಮೂಲ ಹುಡುಕುವುದು ಈಡಿಗೆ ಇಷ್ಟವಿಲ್ಲವೇ ಅಥವಾ ಬಿಜೆಪಿ
ಸರ್ಕಾರದ ಬುಡಕ್ಕೆ ಬರುವ ಸಂಗತಿಯನ್ನು ಮುಟ್ಟದಂತೆ ಯಜಮಾನರ ಆಜ್ಞೆಯಾಗಿದೆಯೇ? ಈಡಿ ದಾಳಿ ಯಾವಾಗ?'' ಎಂದು ಪ್ರಶ್ನಿಸಿ ಕಂತೆ ಕಂತೆ ನೋಟುಗಳೊಂದಿಗೆ ಇದ್ದ ಸ್ಯಾಂಟ್ರೋ ರವಿ ಫೋಟೊ ಒಂದನ್ನು ಕಾಂಗ್ರೆಸ್ ಹಂಚಿಕೊಂಡಿದೆ.

ಇನ್ನು ಸಚಿವ ಬಿ.ಸಿ ನಾಗೇಶ್ ಅವರ ಜೊತೆಗಿದ್ದ ಸ್ಯಾಂಟ್ರೋ ರವಿಯ ಫೋಟೊ ಬಿಡುಗಡೆ ಮಾಡಿರುವ ಕಾಂಗ್ರೆಸ್, ''ಬಿಜೆಪಿಯ ಎಲ್ಲಾ ಸಚಿವರೂ ವೇಶ್ಯಾವಾಟಿಕೆ ದಂಧೆ, ವರ್ಗಾವಣೆ ದಂಧೆಯ ಸ್ಯಾಂಟ್ರೋ ರವಿಯೊಂದಿಗೆ ಅತ್ಯಾಪ್ತ ಸಂಬಂಧ ಹೊಂದಿದ್ದಾರೆ. ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರೂ ಆತನ ದಂಧೆಯ ಫಲಾನುಭವಿಯೇ?'' ಎಂದು ಪ್ರಶ್ನೆ ಮಾಡಿದೆ.

ಮತ್ತೊಂದು ಟ್ವೀಟ್ ನಲ್ಲಿ ಸಚಿವ ಸುಧಾಕರ್  ಜೊತೆಗಿದ್ದ ಫೋಟೊ ಹಂಚಿಕೊಂಡಿರುವ ಕಾಂಗ್ರೆಸ್,  ''ಬಿಜೆಪಿ ಸರ್ಕಾರವನ್ನು ಪಿಂಪ್‌ಗಳು ನಿಯಂತ್ರಿಸುತ್ತಿದ್ದಾರೆಯೇ? ಕಮಿಷನ್ ಸರ್ಕಾರಕ್ಕೆ ಇನ್ನೆಷ್ಟು ಬ್ರೋಕರ್‌ಗಳಿದ್ದಾರೆ? ವೇಶ್ಯಾವಾಟಿಕೆ ದಂಧೆಯ ಸ್ಯಾಂಟ್ರೋ ರವಿ ಜೊತೆಗೆ ಸಾಲು ಸಾಲು ಬಿಜೆಪಿ ಸಚಿವರು ಆಪ್ತರಾಗಿರುವುದು ಹೇಗೆ? ಸಚಿವರು ಸಿಡಿಗೆ ತಡೆಯಾಜ್ಞೆ ತಂದಿರುವುದಕ್ಕೂ, ಈತನಿಗೆ ಸಚಿವರೊಂದಿಗಿರುವ ಆಪ್ತತೆಗೂ, ಈತನ ದಂಧೆಗೂ ಸಂಬಂಧವಿದೆಯೇ ಬಿಜೆಪಿ ? ಸುಧಾಕರ್  ಅವರೇ, ತಮ್ಮ ಸಿಡಿ ತಡೆಯಾಜ್ಞೆಯ ಹಿಂದಿನ ರಹಸ್ಯ ಸ್ಯಾಂಟ್ರೋ ರವಿ ಬಳಿ ಇದೆಯೇ?'' ಎಂದು ಪ್ರಶ್ನೆ ಮಾಡಿದೆ. 

Similar News