ಕಲ್ಲು ಮುಳ್ಳಿನ ಹಾದಿಯಲ್ಲಿ ಅರಳಿದ ಹೂ ಕೊಲಾಸೊ: ಬೋಜೇಗೌಡ

Update: 2023-01-06 12:22 GMT

ಮೂರೂವರೆ ದಶಕಗಳ ಕಠಿಣ ಪರಿಶ್ರಮ, ರಾಜಿರಹಿತ ಮಾನವೀಯತೆ ಮತ್ತು ಸಾಮಾಜಿಕ ಬದ್ದತೆಯ ಪ್ರತಿಫಲದ ಹೆಸರು ರೊನಾಲ್ಡ್ ಕೊಲಾಸೊ ಎಂದು ವಿಧಾನ ಪರಿಷತ್ ಸದಸ್ಯ ಬೋಜೇಗೌಡ ಅಭಿಪ್ರಾಯಪಟ್ಟರು.

ಕೊಲಾಸೊ ಅವರ ಬದುಕು ಹೂವಿನ ಹಾಸಿಗೆ ಆಗಿರಲಿಲ್ಲ. ಇವರದ್ದು ಕಲ್ಲು ಮುಳ್ಳಿನ ಹಾದಿಯಾಗಿತ್ತು. ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ ಕೊಲಾಸೊ ಅವರು ಪ್ರತಿ ದಿನದ, ಪ್ರತಿ ಗಳಿಗೆಯ ಪರಿಶ್ರಮದಿಂದ ದೊಡ್ಡ ಉದ್ಯಮಿಯಾದರು. ಕುವೆಂಪು ಅವರ ವಿಶ್ವ ಮಾನವ ಸಂದೇಶವನ್ನು ತಮ್ಮ ಬದುಕಿನುದ್ದಕ್ಕೂ ಪಾಲಿಸಿದ್ದಾರೆ. ಬಲಗೈಲಿ  ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದು ಎನ್ನುವ ಜನಪದ ಮೌಲ್ಯದಂತೆ ಬದುಕಿದ್ದಾರೆ. ಇವೆಲ್ಲದರ ಪರಿಣಾಮವಾಗಿ ಕೊಲಾಸೊ ಹೆಸರು ವಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗುವಂತಾಗಿದೆ.

ಕುವೆಂಪು ಅವರ ನಾಡಗೀತೆಯನ್ನು ನಾವು ಹಾಡುತ್ತೇವೆ. ಸಂಭ್ರಮಿಸುತ್ತೇವೆ. ಆದರೆ ನಾಡಗೀತೆಯ ಆಶಯದಂತೆ ಸರ್ವಜನಾಂಗದ ಶಾಂತಿಯ ತೋಟವಾಗಿ ಈ ನಾಡನ್ನು ರೂಪಿಸುವ ಹೊಣೆಗಾರಿಕೆಯನ್ನು ಎಷ್ಟು ಜನ ನಿಭಾಯಿಸುತ್ತಿದ್ದೇವೆ ಎನ್ನುವುದನ್ನು ನಾವು ಗಮನಿಸಬೇಕು. ಆದರೆ, ಈ ಕನ್ನಡ ನಾಡು ನಿಜವಾದ ಶಾಂತಿಯ ಬೀಡಾಗಿ, ಸರ್ವಜನಾಂಗದ ಶಾಂತಿಯ ತೋಟವಾಗಿ ರೂಪಿಸಬೇಕು ಎನ್ನುವುದನ್ನು ಸದ್ದಿಲ್ಲದೆ, ಪ್ರಚಾರವಿಲ್ಲದೆ, ಅಹಂ ಇಲ್ಲದೆ ಕೊಲಾಸೊ ಮಾಡುತ್ತಿದ್ದಾರೆ. ಕೊಲಾಸೊ ಅವರ ಜತೆಗೆ ಅವರ ಇಡಿ ಕುಟುಂಬ ಜತೆಗಿದೆ. "ಹೆಂಡತಿಯೊಲುಮೆಯ ಭಾಗ್ಯವರಿಯದ" ಗಂಡು ಯಶಸ್ವಿ ಆಗಲು ಸಾಧ್ಯವಿಲ್ಲ. ಆದರೆ ಕೊಲಾಸೊ ಅವರ ಸೇವಾ ಕೈಂಕರ್ಯದಲ್ಲಿ  ಅವರ ಪತ್ನಿ ಬಹಳ ಬದ್ದತೆಯಿಂದ ಸಹಕಾರ ನೀಡುತ್ತಿದ್ದಾರೆ ಎನ್ನುವುದನ್ನು ಪ್ರಸ್ತಾಪಿಸಿ ಇಡಿ ಕುಟುಂಬಕ್ಕೆ ಧನ್ಯತೆ ಅರ್ಪಿಸಿದರು.

ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿತ್ಯ ನಿರಂತರ ಸೇವೆಯಿಂದ ಸಪ್ತ ಸಾಗರವನ್ನು ದಾಟಿ ಲಂಡನ್‌ನ ಹೌಸ್ ಆಫ್ ಕಾಮನ್ಸ್ ನಲ್ಲಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಗೆ ಸೇರುವ ಘನತೆ ಮತ್ತು ಮೆಚ್ಚುಗೆಗೆ ಕೊಲಾಸೊ ಪಾತ್ರವಾಗಿದ್ದಾರೆ. ಇದು ಕನ್ನಡಿಗರಿಗೆ, ಭಾರತೀಯರಿಗೆ ಧಕ್ಕಿದ ಹೆಮ್ಮೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.