ಡಾ. ರೊನಾಲ್ಡ್ ಕೊಲಾಸೊ - ಯಶಸ್ವೀ ಉದ್ಯಮಿ, ಅನನ್ಯ ಸಮಾಜ ಸೇವಕ, ಅಪರೂಪದ ವ್ಯಕ್ತಿತ್ವ

Update: 2023-01-06 13:33 GMT

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯವರಾದ ಡಾ. ರೊನಾಲ್ಡ್ ಕೊಲಾಸೊ  1975 ರಲ್ಲಿ ಒಮನ್ ದೇಶದಲ್ಲಿ ಅಕೌಂಟೆಂಟ್ ಆಗಿ ವೃತ್ತಿ ಜೀವನ ಪ್ರಾರಂಭಿಸಿದರು. ತಮ್ಮ ದಕ್ಷತೆ ಹಾಗು ನಿಷ್ಠಾವಂತ ದುಡಿಮೆಯಿಂದಾಗಿ ಗಲ್ಫ್ ನ ಎಂಟು ಹಾಗು ಯುರೋಪ್ ನ ಹಲವು ದೇಶಗಳಲ್ಲಿ ಅಕೌಂಟ್ಸ್ ಮುಖ್ಯಸ್ಥರಾಗಿ, ಆಡಳಿತ ವ್ಯವಸ್ಥಾಪಕರಾಗಿ , ಫೈನಾನ್ಷಿಯಲ್ ಕಂಟ್ರೋಲರ್ ಆಗಿ ಭಡ್ತಿ ಪಡೆಯುತ್ತಾ ಹೋದರು. ಗ್ರೀಸ್ ನ ಅಥೆನ್ಸ್ ನಲ್ಲಿರುವ ಸಿಸಿಐಸಿಎಲ್, ಜರ್ಮನಿಯ ಮನ್ನೆಸ್ ಮನ್ ಹಾಗು ಮಿಲಾನೊದ ಸೈಪೇಮ್ ಎಂಬ ಮೂರು ಬೃಹತ್ ಬಹುರಾಷ್ಟ್ರೀಯ ಕಂಪೆನಿಗಳ ಒಕ್ಕೂಟದ ಕಮರ್ಷಿಯಲ್ ಸಿಇಒ ಆದರು.

ಆ ಸಂದರ್ಭದಲ್ಲಿ ಡಾ. ಕೊಲಾಸೊ ಅವರ ವೃತ್ತಿಪರತೆಯನ್ನು ಗಮನಿಸಿ  ಪ್ರಮುಖ ಪೆಟ್ರೋಲಿಯಮ್ ಹಾಗು ಗ್ಯಾಸ್ ಯೋಜನೆಗಳು, ಟೌನ್ ಶಿಪ್ಗಳು ಹಾಗು ವಿಮಾನ ನಿಲ್ದಾಣ ನಿರ್ಮಾಣದಂತಹ ಬೃಹತ್ ಯೋಜನೆಗಳ ಉಸ್ತುವಾರಿಯನ್ನು ಅವರಿಗೆ ವಹಿಸಲಾಯಿತು. ತನಗೆ ವಹಿಸಿದ ಪ್ರತಿಯೊಂದು ಹುದ್ದೆಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ ರೊನಾಲ್ಡ್ ಕೊಲಾಸೊ ಉದ್ಯಮ ರಂಗಕ್ಕೆ ಕಾಲಿಟ್ಟರು. ಅಲ್ಲಿಂದ ಮತ್ತೆ ಅವರು ಹಿಂದಿರುಗಿ ನೋಡಲೇ ಇಲ್ಲ. ಅಪಾರ ಬುದ್ಧಿವಂತಿಕೆ, ನಿಷ್ಠೆ, ಕಠಿಣ ಪರಿಶ್ರಮ  ಹಾಗು ಶಿಸ್ತು ಅವರಿಗೆ ಉದ್ಯಮ ಕ್ಷೇತ್ರದಲ್ಲಿ ಭಾರೀ ಯಶಸ್ಸು ತಂದಿತು. ಅವರು ಕೈ ಹಾಕಿದ ಎಲ್ಲ ಉದ್ಯಮಗಳಲ್ಲೂ ಯಶಸ್ಸು ಅವರ ಪಾಲಾಯಿತು. 

(ಕೆನಡಾದಲ್ಲಿ 'ಕೆನರಾ ವರ್ಲ್ಡ್ ವಿಷನರಿ' ಪ್ರಶಸ್ತಿ ಸ್ವೀಕರಿಸುತ್ತಿರುವ ರೊನಾಲ್ಡ್ ಕೊಲಾಸೊ)

ಉದ್ಯೋಗ, ಉದ್ಯಮ ಎರಡರಲ್ಲೂ ಅಸಾಮಾನ್ಯ ಯಶಸ್ಸು ಕಂಡ ರೊನಾಲ್ಡ್ ಕೊಲಾಸೋ ಅವರು ಸಮಾಜ ತನಗೆ ನೀಡಿದ ಹಾಗೆಯೇ ತಾನೂ ಸಮಾಜಕ್ಕೆ ನೀಡಬೇಕು ಎಂದು ಪಣತೊಟ್ಟು ಸೇವಾ ಚಟುವಟಿಕೆಗಳಿಗೆ ಧುಮುಕಿದರು. ಧರ್ಮ, ಜಾತಿ, ಭಾಷೆ, ಲಿಂಗ, ಪ್ರದೇಶಗಳ ಭೇದವಿಲ್ಲದೆ ಎಲ್ಲೆಲ್ಲಿ ಜನರಿಗೆ ಏನೇನು ಅಗತ್ಯವಿದೆಯೋ ಅದನ್ನು ಒದಗಿಸುತ್ತಾ ಹೋದರು. ಆ ಪೈಕಿ ಸಾರ್ವಜನಿಕರಿಗೆ ಪ್ರಯೋಜನವಾಗುವ ಮೂಲಭೂತ ಸೌಲಭ್ಯಗಳನ್ನು ನಿರ್ಮಿಸಿ ಕೊಡುವಲ್ಲಿ ಅವರು ಅಪಾರ ಕಾಳಜಿ ವಹಿಸಿದರು. ಅದೆಷ್ಟೋ ಜನರು, ಸಂಸ್ಥೆಗಳು, ಸಂಘಟನೆಗಳಿಗೆ ಕೊಲಾಸೋ ನೆರವು ನೀಡಿದ್ದಾರೆ.  ಸರಕಾರಕ್ಕೆ ಹಲವಾರು ಕಚೇರಿ, ಕಟ್ಟಡಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ. ಮಂದಿರ, ಮಸೀದಿ, ಚರ್ಚ್ ಗಳನ್ನೂ ಕಟ್ಟಿಸಿಕೊಟ್ಟಿದ್ದಾರೆ. ಕರ್ನಾಟಕ, ಗೋವಾ, ಮಹಾರಾಷ್ಟ್ರಗಳಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಅವರ ಸೇವೆಯ ವ್ಯಾಪ್ತಿ ಹಬ್ಬಿದೆ. ಬೆಂಗಳೂರು ಹೊರವಲಯದ ದೇವನಹಳ್ಳಿಯನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವಲ್ಲಿ ಅವರ ಪಾತ್ರ ಇತಿಹಾಸದಲ್ಲಿ ದಾಖಲಾಗಲಿದೆ. ಕೊಲಾಸೊ ಅವರ ಸೇವಾ ಚಟುವಟಿಗಳ ವ್ಯಾಪ್ತಿ ಅದೆಷ್ಟು ವಿಶಾಲವಾಗಿತ್ತು ಎಂದರೆ ಅದನ್ನು ನೋಡಿ ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಸೇವಾ ಚಟುವಟಿಕೆಗಳನ್ನು ಯೋಜಿಸಿದವು. 

ಜನರಿಗೆ ನೆರವಾಗುವುದು, ಅವರ ಜೊತೆ ನಮ್ಮ ಸಂಪತ್ತನ್ನು ಹಂಚಿಕೊಳ್ಳುವುದರಿಂದ ನನಗೆ ಬಹಳ ತೃಪ್ತಿ, ಸಂತಸ ಹಾಗು ನೆಮ್ಮದಿ ಸಿಕ್ಕಿದೆ. ಇದರಿಂದ ನಮಗೆ ಧರ್ಮ ಕಲಿಸುವ ಮೌಲ್ಯಗಳ ಸಮೀಪ ಇರುವುದು ನನಗೆ ಸಾಧ್ಯವಾಗಿದೆ ಎನ್ನುತ್ತಾರೆ ಕೊಲಾಸೊ. ಅವರ ಪತ್ನಿ ಜೀನ್ ಕೊಲಾಸೊ ಅವರು ಪತಿಯ ಸೇವೆಯ ಹಂಬಲಕ್ಕೆ ಆಸರೆಯಾಗಿ ನಿಂತಿದ್ದಾರೆ. 

ಕೊಲಾಸೊ ಅವರು ಭೇಟಿ ನೀಡದ ದೇಶಗಳಿಲ್ಲ, ಒಡನಾಡದ ಪ್ರಭಾವಿಗಳು, ಗಣ್ಯರಿಲ್ಲ ಎಂಬಷ್ಟು ಅವರು ಜಗತ್ತಿನೆಲ್ಲೆಡೆ -ರಾಜಕೀಯ  ಸಾಮಾಜಿಕ ವಲಯದಲ್ಲಿ  ಚಿರಪರಿಚಿತರು. ಅಮೇರಿಕಾದ, ಆಸ್ಟ್ರೇಲಿಯಾ, ಬ್ರಿಟನ್, ಯುಎಇ ಯಂತಹ  ದೇಶಗಳ ಅಧ್ಯಕ್ಷರು,  ಪ್ರಧಾನಿಗಳ ಕಾರ್ಯಕ್ರಮಗಳಿಗೆ ಕೊಲಾಸೋ ಅವರಿಗೆ ವಿಶೇಷ ಆಹ್ವಾನವಿರುತ್ತದೆ. ಭಾರತದ ಎಲ್ಲ ರಾಜಕೀಯ ಪಕ್ಷಗಳ ವರಿಷ್ಠರು ಅವರ ಜೊತೆ ಒಡನಾಟ ಇಟ್ಟುಕೊಂಡು ಅವರೊಂದಿಗೆ ಸಲಹೆ ಪಡೆಯುತ್ತಾರೆ. ಅವರಿಗೆ ಬಂದಿರುವ ಅಂತರ್ ರಾಷ್ಟ್ರೀಯ ಪ್ರಶಸ್ತಿಗಳು, ಬಿರುದುಗಳು ಹಾಗು ಸನ್ಮಾನಗಳು ಅಸಂಖ್ಯ.

ಸರ್ಕಾರ್ ಕೊಲಾಸೊ...
 
ಡಾ.ರೊನಾಲ್ಡ್ ಕೊಲಾಸೊ ಅವರು ಸರ್ಕಾರ ಅಲ್ಲ. ಆದರೆ, ಇವರನ್ನು ಸರ್ಕಾರ್ ಎಂದು ಕರೆಯಲು ಯಾವುದೇ ಅಡ್ಡಿ ಇಲ್ಲ. ಏಕೆಂದರೆ ಒಂದು ಸರ್ಕಾರ ಒಂದೂವರೆ ಡಜನ್ ಮಂತ್ರಿಗಳನ್ನು ಒಂದೂವರೆ ಲಕ್ಷದಷ್ಟು ಸಿಬ್ಬಂದಿಯನ್ನು ಇಟ್ಟುಕೊಂಡೂ ಮಾಡಲಾಗದಷ್ಟು ಅಥವಾ ಮಾಡಿದಷ್ಟು ಸಾಮಾಜಿಕ ಕೆಲಸಗಳನ್ನು ಇವರೊಬ್ಬರು ಮಾಡಿದ್ದಾರೆ. ವಿಶ್ವದ ನಾನಾ ದೇಶಗಳಲ್ಲಿ ಮಾಡಿದ್ದನ್ನು ಪಕ್ಕಕ್ಕಿಟ್ಟು ಕೇವಲ ಕರ್ನಾಟಕ ಮತ್ತು ಕರಾವಳಿ ಭಾಗದಲ್ಲಿ ಇವರು ಮಾಡಿದ ಕೆಲಸ, ಕೊಡುಗೆಗಳನ್ನು ಪಟ್ಟಿ ಮಾಡುತ್ತಾ ಹೋದರೂ ಅದೇ ಪ್ರತ್ಯೇಕ ಪುಸ್ತಕ ಆಗುವಷ್ಟಿದೆ.

ಶಿಕ್ಷಣ, ಆರೋಗ್ಯ, ಬಡವರಿಗೆ ಮನೆಗಳನ್ನು ಕಟ್ಟಿಸುವುದು, ಕಲೆ-ಸಂಸ್ಕೃತಿ, ಪೊಲೀಸ್-ನ್ಯಾಯಾಂಗ ಇಲಾಖೆಗೆ ಕಟ್ಟಡ ಕಚೇರಿಗಳನ್ನು ನಿರ್ಮಿಸಿಕೊಟ್ಟಿರುವುದು, ಕಂದಾಯ ಇಲಾಖೆ, ಪಂಚಾಯತ್‌ರಾಜ್ ಇಲಾಖೆ, ಲೋಕೋಪಯೋಗಿ, ತೋಟಗಾರಿಕೆ, ಸಮುದಾಯ ಭವನಗಳು, ಕ್ರೀಡಾ ಕ್ಷೇತ್ರದ ಮೂಲಭೂತ ಸೌಕರ್ಯಗಳು, ಗ್ರಾಮೀಣ ಭಾಗಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಪ್ರಕೃತಿ ವಿಕೋಪಗಳ ಸಂದರ್ಭ ನೆರವು , ಸಾಮೂಹಿಕ ವಿವಾಹಗಳು, ವಿಶೇಷ ಚೇತನ ಮಕ್ಕಳಿಗೆ  ಸವಲತ್ತುಗಳು, ಸಾರ್ವಜನಿಕ ಬಳಕೆಯ ಮೂಲಭೂತ ಸೌಕರ್ಯಗಳು, ಗುಡಿ-ಚರ್ಚ್-ಮಸೀದಿಗಳ ನಿರ್ಮಾಣ...ಹೀಗೆ ಒಂದು ಸರ್ಕಾರ ತನ್ನ ವ್ಯಾಪ್ತಿಯಲ್ಲಿ ಏನೇನೆಲ್ಲಾ ಜನರಿಗೆ ಮಾಡಬಹುದೋ ಅದೆಲ್ಲವನ್ನೂ ತಮ್ಮ ಮಿತಿಯಲ್ಲೇ ಅತ್ಯಂತ ವ್ಯವಸ್ಥಿತವಾಗಿ ಬಹಳ  ದೊಡ್ಡ ಸಂಖ್ಯೆಯಲ್ಲಿ  ವ್ಯಾಪಕವಾಗಿ ಒದಗಿಸಿದ್ದಾರೆ. ರಾಜಧಾನಿ ಬೆಂಗಳೂರಿನ ಹಲವು ಪೊಲೀಸ್ ಠಾಣೆಗಳ ಕಟ್ಟಡಗಳಿಂದ ಹಿಡಿದು ಕರಾವಳಿಯ ಕಂಬಳದವರೆಗೂ ಸರ್ಕಾರ್ ಕೊಲಾಸೊ ಹೆಸರು ಛಾಪು ಹೊತ್ತಿರುವುದಕ್ಕೆ ಒಂದು ಧನ್ಯತೆ ಅರ್ಪಿಸುವ ಮಂಟಪವಾಗಿ ಸ್ವಿಸ್‌ಟೌನ್‌ನ ಏಷನ್ ಹಾಲ್ ರೂಪುಗೊಂಡಿತ್ತು.