ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ: ಮಾಜಿ ಸಚಿವ ಈಶ್ವರಪ್ಪಗೆ ಮತ್ತೆ ಸಂಕಷ್ಟ

Update: 2023-01-06 15:02 GMT

ಬೆಂಗಳೂರು, ಜ. 6: ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಸಲ್ಲಿಸಿರುವ 'ಬಿ' ರಿಪೋರ್ಟ್‍ನ ಸಂಪೂರ್ಣ ಸಾಕ್ಷ್ಯಗಳನ್ನು ನ್ಯಾಯಾಲಯದ ಸುಪರ್ದಿಗೆ ನೀಡುವಂತೆ 42ನೇ ವಿಶೇಷ ಕೋರ್ಟ್ ಆದೇಶಿಸಿದೆ. ಇದರಿಂದ, ಮಾಜಿ ಸಚಿವ ಈಶ್ವರಪ್ಪಗೆ ಮತ್ತೆ ಸಂಕಷ್ಟ ಎದುರಾಗಿದೆ.  

ಈ ಹಿಂದೆ ಕುಟುಂಬಸ್ಥರು ಬಿ ರಿಪೆಪೋರ್ಟ್ ಪ್ರಶ್ನಿಸಿ, ಕೋರ್ಟ್‍ಗೆ ಹೋಗಿದ್ದರು. ಆ ಸಂದರ್ಭದಲ್ಲಿ ದಾಖಲಾತಿ ನೀಡಿದ್ದ ಉಡುಪಿ ಪೊಲೀಸರು ಸಂಪೂರ್ಣ ದಾಖಲಾತಿ ಸಲ್ಲಿಕೆಗೆ ಹಿಂದೇಟು ಹಾಕಿದ್ದರು. ಇದನ್ನು ಪ್ರಶ್ನಿಸಿ ಮತ್ತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಬಳಿಕ, ನ್ಯಾಯಾಲಯವು ಜ.31ರೊಳಗೆ ಎಲ್ಲ ಸಾಕ್ಷ್ಯಗಳನ್ನು ಕೋರ್ಟ್‍ಗೆ ಸಲ್ಲಿಸಿ ಎಂದು ಈ ಹೊಸ ಆದೇಶ ಮಾಡಿದೆ. 

ಕೆಲವೊಂದು ಸಾಕ್ಷ್ಯಗಳಲ್ಲಿ ಸಂತೋಷ್ ಪಾಟೀಲ್, ಮಾಜಿ ಸಚಿವ ಈಶ್ವರಪ್ಪ ಪಿಎಗೆ ಹಣ ನೀಡಿರುವುದು ವಾಟ್ಸ್ ಆಪ್ ಚಾಟ್‍ನಲ್ಲಿ ಬಹಿರಂಗವಾಗಿದೆ. ಅಲ್ಲದೆ, ವಾಟ್ಸ್ ಆಪ್ ಚಾಟ್ ಪ್ರತಿ ಕೂಡ ಲಭ್ಯವಾಗಿದ್ದು, ಈ ಮೂಲಕ ಈಶ್ವರಪ್ಪಗೆ ಸಂತೋಷ್ ಆತ್ಮಹತ್ಯೆ ಪ್ರಕರಣ ಇನ್ನೂ ಸಂಕಷ್ಟ ತಂದಿಟ್ಟಿದೆ. 

ಸಂತೋಷ್ ಮೃತದೇಹ ಸಿಕ್ಕ ಹೋಟೆಲ್ ಸಿಸಿಟಿವಿ ನೀಡಬೇಕು, ಮಾತ್ರವಲ್ಲದೆ ಪೊಲೀಸರು ಮಾಡಿದ ವಿಡಿಯೋವನ್ನು ಜ.31ರಂದು ತನಿಖಾಧಿಕಾರಿಯೇ ಖುದ್ದು ಕೋರ್ಟ್ ಮುಂದೆ ಹಾಜರಾಗಿ ನೀಡಬೇಕು ಎಂದು ಕೋರ್ಟ್ ಆದೇಶಿಸಿದೆ.

ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ಪ್ರಶ್ನಿಸಿದ್ದ ಸಂತೋಷ್ ಪಾಟೀಲ್ ಸಹೋದರ, ಅಸಲಿ ಸಾಕ್ಷ್ಯಗಳನ್ನು ಮರೆಮಾಚಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದರು. ಪೊಲೀಸರೇ ಉಲ್ಲೇಖಿಸಿರುವ ಸಾಕ್ಷ್ಯಗಳನ್ನು ಕೋರ್ಟ್‍ಗೆ ಹಾಜರುಪಡಿಸಿಲ್ಲ. ಹೀಗಾಗಿ, ಪೊಲೀಸರ ಬಳಿ ಇರುವ ಸಾಕ್ಷಿ ಹಾಜರುಪಡಿಸಿದರೆ ಸತ್ಯ ಬಯಲಿಗೆ ಬರುವ ಸಾಧ್ಯತೆ ಇದೆ. 

Similar News