ಸ್ಯಾಂಟ್ರೋ ರವಿಯನ್ನು ಬಂಧಿಸಿ ತನಿಖೆ ನಡೆಸಿ: ಮೈಸೂರು ಪೊಲೀಸರಿಗೆ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ

Update: 2023-01-07 08:09 GMT

ಮೈಸೂರು: ಸ್ಯಾಂಟ್ರೋ ರವಿಗೆ ವಿಪಕ್ಷದವರ ಜೊತೆಗೂ ಸಂಪರ್ಕ ಇದೆ. 20 ವರ್ಷಗಳಿಂದ ಎಲ್ಲ ರಾಜಕಾರಣಿಗಳೊಂದಿಗೂ ಸಂಪರ್ಕ ಇರಬೇಕು. ಹಾಗಾಗಿ ಆತನನ್ನು ಕೂಡಲೇ ಬಂಧಿಸಿ ತನಿಖೆ ನಡೆಸುವಂತೆ ಮೈಸೂರು ಪೊಲೀಸರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ನಗರದ ಮಂಡಕಳ್ಳಿ ವಿಮಾನದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಯಾಂಟ್ರೊ ರವಿ ಹೆಣ್ಣುಮಗಳೊಬ್ಬಳಿಗೆ ಕಿರುಕುಳ ನೀಡಿ ಹಿಂಸೆ ನೀಡಿರುವ ಬಗ್ಗೆ ಮೈಸೂರಿನಲ್ಲಿ ಪ್ರಕರಣ ದಾಖಲಾಗಿದೆ. ಹಾಗಾಗಿ ಆತನನ್ನು ಕೂಡಲೇ ಬಂಧಿಸುವಂತೆ ಸೂಚನೆ ನೀಡಿದ್ದೇನೆ. ಆತ ಬಂಧನಕ್ಕೊಳಗಾದರೆ ಎಲ್ಲಾ ಹಿನ್ನೆಲೆಯೂ ಹೊರಬರಲಿದೆ ಎಂದು ಹೇಳಿದರು.

ಯಾರ್ಯಾರದೊ ಫೋಟೊ ಇಟ್ಟುಕೊಂಡು ಹೋದರೆ ಎಲ್ಲರ ಫೋಟೊಗಳು ಇರುತ್ತವೆ. ಫೋಟೊ ಆಧಾರದ ಮೇಲೆ ತೀರ್ಮಾ ಮಾಡಲು ಸಾಧ್ಯವಿಲ್ಲ. ಹಾಗಾಗಿ ಆತನನ್ನು ಬಂಧಿಸಿ ತನಿಖೆಗೆ ಒಳಪಡಿಸಿದರೆ ಸತ್ಯ ಬಹಿರಂಗಗೊಳ್ಳಲಿದೆ ಎಂದು ಹೇಳಿದರು.

20 ವರ್ಷದ ಅವಧಿಯಲ್ಲಿ ಆತನ ಮೇಲೆ ಹಲವಾರು ಪ್ರಕರಣಗಳು ದಾಖಲಾಗಿವೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿಯೇ ಆತನನ್ನು ಬಂಧಿಸುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ವರ್ಗಾವಣೆ ದಂಧೆಯಲ್ಲಿ ಅವನ ಪಾತ್ರ ಇರುವ ಬಗ್ಗೆ ಮತ್ತು ಸಚಿವರೊಂದಿಗೆ ಸಂಪರ್ಕ ಹೊಂದಿರುವ ವೀಡಿಯೋಗಳು ಹತಿದಾಡುತ್ತಿರುವ ಬಗ್ಗೆ ಪ್ರತಿಕ್ರಿಸಿದ ಸಿಎಂ, ಈಗ ಮೊಬೈಲ್ ನಲ್ಲಿ ಏನೇನೊ ಸೃಷ್ಟಿ ಮಾಡಬಹುದು. ಆತ ಸೃಷ್ಟಿ ಮಾಡಿಕೊಂಡು ವೀಡಿಯೋಗಳನ್ನು ಬಿಟ್ಟಿದ್ದಾನೆ. ನನ್ನ ಬಳಿ ಯಾರೊ ಬಂದು ಹೋಗುತ್ತಾರೆ. ನಾವು ಅವರ ಹಿನ್ನೆಲೆಯನ್ನೆಲ್ಲ ನೋಡಲು ಸಾಧ್ಯವೆ? ಅದಕ್ಕಾಗೆ ಆತನನ್ನು ಬಂಧಿಸಿದರೆ ಎಲ್ಲಾ ಸತ್ಯಗಳು ಹೊರಬರಲಿದೆ. ಇಲ್ಲಿ ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ವಿಧಾನಸೌಧವನ್ನು ಬಿಜೆಪಿಯವರು ಶಾಪಿಂಗ್ ಮಾಲ್ ಮಾಡಿದ್ದಾರೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 2019ರಲ್ಲಿ ಪುಟ್ಟರಂಗಶೆಟ್ಟಿ ಸಚಿವರಾಗಿದ್ದಾಗ ಅವರ ಕಚೇರಿಯಲ್ಲಿ  20ಲಕ್ಷ  ರೂ. ಸಿಕ್ಕಿದಾಗ ಏನು ಮಾಡುತ್ತಿದ್ದರು. ಆಗಲೇ ಕಾಂಗ್ರೆಸ್ ವಿಧಾನಸೌಧವನ್ನು ಭ್ರಷ್ಟಾಚಾರದ ಬ್ಯಾಂಕ್ ಮಾಡಿಕೊಂಡಿತ್ತು.  ಸರಿಯಾಗಿ  ತನಿಖೆ ಮಾಡಿಸದೆ ಮುಚ್ಚಿಹಾಕಿದ ಕಾಂಗ್ರೆಸ್ ನವರಿಗೆ ಭ್ರಷ್ಟಾಚಾರದ ಬಗ್ಗ ಮಾತನಾಡುವ ನೈತಿಕತೆ ಇಲ್ಲ ಎಂದು ತಿರುಗೇಟು ನೀಡಿದರು.
 

Similar News