ನಾನು ಸಿ.ಟಿ.ರವಿ, ಸ್ಯಾಂಟ್ರೊ ರವಿ ಯಾರೆಂದು ನನಗೆ ಗೊತ್ತಿಲ್ಲ: ಶಾಸಕ ಸಿ.ಟಿ. ರವಿ
ಮೈಸೂರು: ನಾನು ಸಿ.ಟಿ. ರವಿ, ಸ್ಯಾಂಟ್ರೊ ರವಿ ಯಾರೆಂದು ಗೊತ್ತಿಲ್ಲ ಸಾರ್ವಜನಿಕ ಜೀವನದಲ್ಲಿ ಇರುವವರ ಜೊತೆ ಯಾರ್ಯಾರೊ ಬಂದು ಸೆಲ್ಫಿ ತೆಗೆಸಿಕೊಳ್ಳುತ್ತಾರೆ. ಅವರೊಂದಿಗೆಲ್ಲ ಸಂಬಂಧ ಕಲ್ಪಿಸಲು ಸಾಧ್ಯವೆ ಎಂದು ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದರು.
ನಗರದಲ್ಲಿ ಇಂದಿನಿಂದ ಎರಡು ದಿನಗಳ ವರೆಗೆ ನಗರದ ಲಲಿತ್ ಮಹಲ್ ನಲ್ಲಿ ನಡೆಯುತ್ತಿರುವ ಬಿಜೆಪಿ ಎಸ್ಸಿ ಮೋರ್ಚಾ ರಾಷ್ಟ್ರೀಯ ಶನಿವಾರ ಭಾಗವಸಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಸಾರ್ವಜನಿಕರ ಜೀವನದಲ್ಲಿ ಇರುವವರ ಜೊತೆ ಯಾರ್ಯಾರೊ ಬಂದು ಸೆಲ್ಫಿ ತೆಗೆಸಿಕೊಳ್ಳುತ್ತಾರೆ. ಐಎಂಎ ಪ್ರಕರಣದ ಆರೋಪಿ ಕೂಡ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಹಾಗಾಗಿ ಎಚ್.ಡಿ.ಕುಮಾರಸ್ವಾಮಿ ಕಿಂಗ್ ಪಿನ್ ನಂ.2 ಎನ್ನಲು ಸಾಧ್ಯವೆ? ಹೆಸರು ದುರುಪಯೋಗ ಮಾಡಿಕೊಳ್ಳುವವರು ಇದ್ದೇ ಇರುತ್ತಾರೆ ಎಂದು ಹೇಳಿದರು.
ಉತ್ತಮ ವ್ಯವಹಾರಕ್ಕಾಗಿ ಅಮುಲ್- ಒಂದಾಗಬೇಕು ಎಂದು ಅಮಿತ್ ಶಾ ಹೇಳಿದ್ದಾರೆ. ಆದರೆ, ವಿರೋಧ ಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಜಂಟಿ ಸಮರಾಭ್ಯಾಸ ನಡೆಸಿದ ಮಾತ್ರಕ್ಕೆ ಭಾರತ- ಅಮೆರಿಕ, ಭಾರತ- ರಶ್ಯ ಒಂದೇ ದೇಶ ಎಂದು ಹೇಳಲಾಗುತ್ತದೆಯೆ? ಅಮುಲ್-ನಂದಿನಿ ಸಂಸ್ಥೆಗಳು ಪರಸ್ಪರ ಸಹಕಾರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಾಬಲ್ಯ ಸಾಧಿಸಲಿವೆ ಎಂದು ತಿಳಿಸಿದರು.
ಹಳೆ ಮೈಸೂರು ಪ್ರಾಂತ್ಯದಲ್ಲಿ 59 ಕ್ಷೇತ್ರಗಳಲ್ಲಿಯೂ ಬಿಜೆಪಿ ಸ್ಪರ್ಧೆ ಮಾಡಲಿದ್ದು, ಪಕ್ಷವನ್ನು ಬೆಳೆಸಲು ನಿರಂತರ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.