ಬೆಳಗಾವಿ | ಶ್ರೀರಾಮ ಸೇನೆ ಮುಖಂಡರ ಮೇಲೆ ಗುಂಡಿನ ದಾಳಿ ಪ್ರಕರಣ: ಮೂವರು ಆರೋಪಿಗಳ ಬಂಧನ
ಘಟನೆಗೆ ವೈಯಕ್ತಿಕ ದ್ವೇಷವೇ ಕಾರಣ ಎಂದ ನಗರ ಪೊಲೀಸ್ ಆಯುಕ್ತ
ಬೆಳಗಾವಿ, ಜ.8: ಸಮೀಪದ ಹಿಂಡಲಗಾ ಗ್ರಾಮದಲ್ಲಿ ಶನಿವಾರ ರಾತ್ರಿ ಶ್ರೀರಾಮ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಇನ್ನೋರ್ವ ಮುಖಂಡನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರವಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿರುವ ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ. ಬೋರಲಿಂಗಯ್ಯ, ಅಭಿಜಿತ್ ಸೋಮನಾಥ್ ಭಾತಖಾಂಡೆ (41) ರಾಹುಲ್ ನಿಂಗಾಣಿ ಕೊಡಚವಾಡ (32), ಜ್ಯೋತಿಬಾ ಗಂಗಾರಾಮ್ ಮುತಗೇಕರ್ (25) ಬಂಧಿತ ಆರೋಪಿಗಳು ಎಂದು ತಿಳಿಸಿದರು.
'ಘಟನೆಗೆ ಹಣಕಾಸಿನ ವ್ಯವಹಾರ ಹಾಗೂ ವೈಯಕ್ತಿಕ ದ್ವೇಷವೇ ಕಾರಣವಾಗಿತ್ತು. 18 ಗಂಟೆಯೊಳಗೆ ಪೊಲೀಸರು ಪ್ರಕರಣ ಬೇಧಿಸಿದ್ದಾರೆ. ಜನರು ಯಾವುದೇ ರೀತಿಯ ವದಂತಿಗೆ ಕಿವಿಗೊಡಬಾರದು' ಎಂದು ಮನವಿ ಮಾಡಿದರು.
ರವಿ ಹಾಗೂ ಅವರ ಸಹವರ್ತಿ ಮನೋಜ್ ಎಂಬವರು ಶನಿವಾರ ರಾತ್ರಿ 8ರ ಸುಮಾರಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ಹಿಂಡಲಗಾ ಗ್ರಾಮದಲ್ಲಿ ದುಷ್ಕರ್ಮಿಗಳ ತಂಡ ಏಕಾಏಕಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿತ್ತು.
ಇದನ್ನೂ ಓದಿ: ಬೆಳಗಾವಿ: ಶ್ರೀರಾಮ ಸೇನೆ ಮುಖಂಡರ ಮೇಲೆ ಗುಂಡಿನ ದಾಳಿ