ದಾವಣಗೆರೆ | ಕನ್ನಡಪರ ಸಂಘಟನೆ ಮುಖಂಡನ ಹತ್ಯೆ: ಆರೋಪಿಗಳ ಬಂಧನ

Update: 2023-01-09 06:24 GMT

ದಾವಣಗೆರೆ, ಜ.8: ಕನ್ನಡಪರ ಸಂಘಟನೆ ತಾಲೂಕು ಅಧ್ಯಕ್ಷರನ್ನು ಭೀಕರವಾಗಿ ಕೊಚ್ಚಿ ಹತ್ಯೆ ಮಾಡಲಾಗಿದ್ದು, ಈ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಜಿಲ್ಲೆಯ ಜಗಳೂರು ತಾಲೂಕು ಗೌರಿಪುರ ಗ್ರಾಮದ ರಾಮಕೃಷ್ಣ(31 ವರ್ಷ) ಹತ್ಯೆಗೀಡಾದ ಕನ್ನಡಪರ ಸಂಘಟನೆ ಮುಖಂಡ ಎಂದು ತಿಳಿದು ಬಂದಿದೆ.

ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆಯ ಜಗಳೂರು ತಾಲೂಕು ಅಧ್ಯಕ್ಷರಾಗಿದ್ದ ಇವರು ಹೊಸಕೆರೆ ಡಾಬಾದಲ್ಲಿ ಶನಿವಾರ ರಾತ್ರಿ ಊಟ ಮಾಡುತ್ತಿದ್ದ ವೇಳೆ ನಾಲ್ಕೈದು ಜನರ ಗುಂಪು ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದೆ. ಇದರಿಂದ ತೀವ್ರವಾಗಿ ಗಾಯಗೊಂಡ ರಾಮಕೃಷ್ಣ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಕೊಲೆಗೆ ಸಂಬಂಧಿಸಿದಂತೆ ಅರ್ಜುನ್, ಪ್ರಶಾಂತ ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್, ಗ್ರಾಮಾಂತರ ಡಿವೈಎಸ್ಪಿ ಕನ್ನಿಕಾ ಸಿಕ್ರಿವಾಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News