×
Ad

86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ

Update: 2023-01-08 23:52 IST

ಹಾವೇರಿ, ಜ. 8: ಏಲಕ್ಕಿ ನಾಡು, ಸಂತರ ಬೀಡು ಹಾವೇರಿಯಲ್ಲಿ ಮೂರು ದಿನಗಳಿಂದ ಅದ್ಧೂರಿಯಾಗಿ ಜರುಗಿದ 86ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ರವಿವಾರ ತೆರೆಕಂಡಿದ್ದು, ಲಕ್ಷಾಂತರ ಕನ್ನಡಾಭಿಮಾನಿಗಳು ಅಕ್ಷರ ಜಾತ್ರೆಗೆ ಸಾಕ್ಷಿಯಾದರು.

ಹಾವೇರಿ ಇತಿಹಾಸದಲ್ಲಿಯೇ ಇಷ್ಟೊಂದು ಜನಸಾಗರ ಸೇರರಿಲಿಲ್ಲ. ಮೂರು ದಿನಗಳ ಈ ಅಕ್ಷರ ಜಾತ್ರೆಗೆ ಜನವೋ ಜನ ಸೇರಿದ್ದು, ಈ ಸಮ್ಮೇಳನ ದಾಖಲೆ ಬರೆದಿದೆ. ಮತ್ತೊಂದೆಡೆ ಮೂರು ದಿನವೂ ಹಾವೇರಿಯಲ್ಲಿ ಜನ ದಟ್ಟಣೆ, ವಾಹನ ದಟ್ಟಣೆಯಿಂದ ಭರ್ತಿಯಾಗಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಸಮ್ಮೇಳನದ ಮೊದಲ ದಿನ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಹಾಗೂ ಉದ್ಘಾಟನೆ ಸಮಾರಂಭದಲ್ಲಿ ಸುಮಾರು 1 ಲಕ್ಷ ಮಂದಿ ಕಂಡರೆ, ಎರಡನೆ ದಿನ ಜನಸ್ತೋಮ 5 ಲಕ್ಷಕ್ಕೂ ಮಿಗಿಲು. ಮೊದಲ ದಿನ ಬಂದಿದ್ದ ಬಹುತೇಕರು ಹಿಂದಿರುಗಿದ್ದು, ಶನಿವಾರ ಹಾಗೂ ರವಿವಾರ ಹೊಸಬರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಹಾವೇರಿ ನಗರದಲ್ಲಿ ಹೊರವಲಯದ ಸಾಹಿತ್ಯ ಸಮ್ಮೇಳನದ ವೇದಿಕೆಯ ವರೆಗೂ ಇರುವೆ ಸಾಲಿನಂತೆ ಜನಸ್ತೋಮ ಕಂಡು ಬಂತು. ಊಟೋಪಚಾರದ ಸಂದರ್ಭ ಸಮ್ಮೇಳನ ಮೈದಾನದಲ್ಲಿ 3 ಲಕ್ಷಕ್ಕೂ ಅಧಿಕ ಮಂದಿ ಇದ್ದರು. ಒಟ್ಟಾರೆ, ಈ ಮೂರು ದಿನಗಳಲ್ಲಿ ಹತ್ತು ಲಕ್ಷಕ್ಕೂ ಅಧಿಕ ಕನ್ನಡಾಭಿಮಾನಿಗಳು ಸಮ್ಮೇಳನಕ್ಕೆ ಸಾಕ್ಷಿಯಾದರು.

ಅಂತೆಯೇ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಭಾಗವಾಗಿರುವ ಪುಸ್ತಕ ಪ್ರದರ್ಶನಕ್ಕೆ ಜನ ಸಾಗರವೇ ಹರಿದುಬಂದಿತ್ತು. ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳ ಪುಸ್ತಕ ಪ್ರಕಾಶಕರು ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗೆ ಜಾಗ ಕಾಯ್ದಿರಿಸಿ ಸಮ್ಮೇಳನ ಹಿನ್ನೆಲೆಯಲ್ಲಿ ಶೇ.50, ಶೆ.30, ಶೆ.20, ಶೆ.10ರ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಮಾಡಿದರು.

ಪ್ರಸಾರಾಂಗ ವಿವಿ ಹಂಪಿ, ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಕಟಣೆಗಳಿಗೆ ಶೇ.50ರ ರಿಯಾಯಿತಿ ದರ ನಿಗದಿಪಡಿಸಿದ್ದರಿಂದ ಪುಸ್ತಕಗಳು ಹೆಚ್ಚು ಮಾರಾಟವಾದವು. ಕನ್ನಡ ಸಾಹಿತ್ಯ ಪರಿಷತ್, ಸಪ್ನ, ಅಂಕಿತ ಪುಸ್ತಕ, ಜೀರುಂಡೆ ಪುಸ್ತಕ ಹಾಗು ಇತರ ಕೆಲ ಪ್ರಕಾಶಕರು ಎರಡಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಳಿಗೆ ಹಾಕಿ ಪುಸ್ತಕ ಮಾರಾಟ ಮಾಡಿದರು. ಹೊಸತು, ಅಭಿನವ, ಆಕೃತಿ, ಛಂದ, ಸಾವಣ್ಣ, ಲಡಾಯಿ, ಲಂಕೇಶ, ಕ್ರಿಯಾ ಮಾಧ್ಯಮ, ನ್ಯಾಷನಲ್ ಬುಕ್ ಟ್ರಸ್ಟ್, ಅಕ್ಷರ ಸಂಗಾತ, ಚಿಂತನ, ಚಿತ್ತಾರ, ಸಿವಿಜಿ ಪಬ್ಲಿಕೇಶನ್, ಧಾತ್ರಿ, ವೈಷ್ಣವಿ, ಚೈತ್ರ, ಆಕಾರ ಸೇರಿದಂತೆ ಹಲವು ಪ್ರಕಾಶನಗಳ ಪುಸ್ತಕ ಮಳಿಗೆಗಳು ಪ್ರದರ್ಶನದಲ್ಲಿ ಗಮನ ಸೆಳೆದವು.

ಎಐಡಿಎಸ್‍ಓ ರಾಜ್ಯ ಸಮಿತಿ ಪ್ರಕಟಿಸಿದ ಹಲವಾರು ಪುಸ್ತಕಗಳನ್ನು ಸಮ್ಮೇಳನ ಹಿನ್ನೆಲೆಯಲ್ಲಿ 200 ರೂ.ಗೆ ಎಂಟು ಪುಸ್ತಕಗಳು ಎಂದು ಕಡಿಮೆ ದರದಲ್ಲಿ ಮಾರಾಟ ಮಾಡಿ ಪುಸ್ತಕ ಓದುವ ಅಭಿರುಚಿ ಹೆಚ್ಚಿಸುವ ಪರಿ ಮೆಚ್ಚುಗೆ ಗಳಿಸಿತು. ವಚನ ಸಾಹಿತ್ಯ ಕುರಿತಂತೆ ಬಸವ ಸಮಿತಿಯ ಪ್ರಕಟಣೆಗಳು ವಿಶೇಷ ರಿಯಾಯಿತಿಗೆ ಮಾರಾಟವಾದವು. ಸರ್ಕಾರಿ ನೌಕರರ ಪುಸ್ತಕ ಪ್ರಕಾಶನದ ಪುಸ್ತಕಗಳು ಮಾರಾಟಕ್ಕಿದ್ದವು. 

ಗದಗ ಜಿಲ್ಲೆಯ ಕಲ್ಲೂರ ಗ್ರಾಮದ ನಿವೃತ್ತ ಸರಕಾರಿ ಪ್ರೌಢಶಾಲಾ ಶಿಕ್ಷಕ ಸಾಹಿತಿ ಎ.ಎಸ್.ನದಾಫ್ ಅವರು ಮಳಿಗೆಯಲ್ಲಿ ಕುಳಿತು ಪುಸ್ತಕ ಮಾರಾಟ ಮಾಡಿದರು. ಇನ್ನೂ, ಸಮಾಜ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ಕೈಮಗ್ಗ ಜವಳಿ ಇಲಾಖೆ, ಖಾದಿ ಮತ್ತು ಗ್ರಾಮೋದ್ಯೋಗ, ಜಿಲ್ಲಾ ಆಯುಕ್ತ ಇಲಾಖೆಗಳ ಮಳಿಗೆಗಳಿಗೆ ಮತ್ತು ನರೇಗಾ ಮಾಹಿತಿ ಕೇಂದ್ರಕ್ಕೆ ಜನರು ಭೇಟಿ ನೀಡಿ ಮಾಹಿತಿ ಪಡೆದರು. ಒಟ್ಟಿನಲ್ಲಿ

ಪೊಲೀಸರೇ ಊಟ ನೀಡಿದರು..!:

ಜಿಲ್ಲೆಯಲ್ಲಿ 86ನೆ ಕನ್ನಡ ಸಾಹಿತ್ಯ ಸಮ್ಮೇಳನ ಜ.6 ಆರಂಭವಾಗಿದ್ದು, ನಿರೀಕ್ಷೆಗೂ ಮೀರಿ ಜನರು ಆಗಮಿಸುತ್ತಿದ್ದಾರೆ. ಇಂದು ಮಧ್ಯಾಹ್ನ 70 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಒಂದೂವರೆ ಲಕ್ಷಕ್ಕೂ ಅಧಿಕ ಜನರು ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ್ದಾರೆ. ಇದರಿಂದ ಬಾಣಸಿಗರು ಮತ್ತೆ ಊಟದ ತಯಾರಿ ಮಾಡಿದರು. ನಿರೀಕ್ಷೆಗೂ ಮಿರಿ ಜನಸಾಗರ ಬಂದಿರುವ ಹಿನ್ನೆಲೆ ಬಾಣಸಿಗರಿಂದ ಊಟ ನೀಡಲು ಸಾಧ್ಯವಾಗಿಲ್ಲ. ಹಾಗಾಗಿ ಈ ವೇಳೆ ಸ್ವತಃ ಪೊಲೀಸರೇ ಊಟ ನೀಡುತ್ತಿದ್ದ ದೃಶ್ಯ ಕಂಡಿತು.

ಸಮ್ಮೇಳನದ ವಿಶೇಷತೆ..!:

ಕನಕ-ಶರೀಫ-ಸರ್ವಜ್ಞ ಪ್ರಧಾನ ವೇದಿಕೆ ಎದುರಿಗೆ ತಾಯಿ ಭುವನೇಶ್ವರಿಯ ರಥ, ಪುನೀತ್ ರಾಜ್‍ಕುಮಾರ್ ಅವರ ಸ್ಥಬ್ಧ ಚಿತ್ರ, ಹೋರಿ ಹಬ್ಬದಲ್ಲಿ ತನ್ನದೇ ಆದ ಹೆಸರು ಮಾಡಿದ ಚಾಮುಂಡಿ ಎಕ್ಸ್‍ಪ್ರೆಸ್ ಎನ್ನುವ ಹೋರಿಯ ಸ್ಥಬ್ಧ ಚಿತ್ರ ಹಾಗೂ ಪುಟ್ಟರಾಜ ಗವಾಯಿಗಳ ಸ್ತಬ್ಧಚಿತ್ರಗಳು ನೋಡುಗರ ಗಮನ ಸೆಳೆದವು.

Similar News