ಧರ್ಮ, ಜಾತಿ ಹೆಸರಿನಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ: ಮಲ್ಲಿಕಾರ್ಜುನ ಖರ್ಗೆ

ಚಿತ್ರದುರ್ಗದಲ್ಲಿ ಎಸ್‌ಸಿ, ಎಸ್‌ಟಿ ಐಕ್ಯತಾ ಸಮಾವೇಶ

Update: 2023-01-09 04:31 GMT

ಚಿತ್ರದುರ್ಗ, ಜ.8: ಬಿಜೆಪಿ ಸರಕಾರ ಜಾತಿ,ಧರ್ಮಗಳ ಮಧ್ಯೆ ಕಚ್ಚಾಟವಿಟ್ಟು ಅಧಿಕಾರ ನಡೆಸುತ್ತಿದ್ದು, ಹಣಕ್ಕೆ ಪ್ರಾಮುಖ್ಯತೆ ನೀಡಿ ಇಡೀ ರಾಜ್ಯವನ್ನು ದಿವಾಳಿ ಮಾಡಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ಎಸ್‌ಸಿ, ಎಸ್‌ಟಿ ಐಕ್ಯತಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಪ್ರಗತಿಪರ ರಾಜ್ಯ. ಇಲ್ಲಿ ಜಾತಿ,ಧರ್ಮದ ಹೆಸರಿನಲ್ಲಿ ಬೇಳೆ ಬೇಯಿಸಲು ಸಾಧ್ಯವಿಲ್ಲ ಎಂದರು.

ಈಗಿನ ಮುಖ್ಯಮಂತ್ರಿಯಂತಹವರನ್ನು ನಾನು ನನ್ನ ರಾಜಕೀಯ ಜೀವನದಲ್ಲಿ ನೋಡಿಲ್ಲ. ಸಂವಿಧಾನ ಧಿಕ್ಕರಿಸಿ ಕೇಂದ್ರ ಸರಕಾರ ಆಡಳಿತ ಮಾಡುವಾಗ ನಿಮಗೇನು ಸಿಗುತ್ತದೆ. ಹೀಗಾಗಿ ನೀವೆಲ್ಲರೂ ಒಗ್ಗಟ್ಟಿನಿಂದ ಇರಬೇಕು. ನೀವೆಲ್ಲರೂ ಸೇರಿ, ದೇಶ, ಸಂವಿಧಾನ ರಕ್ಷಣೆ ಮಾಡಬೇಕು. ರಾಹುಲ್ ಗಾಂಧಿ ಜೊತೆ ಭಾರತ್ ಜೋಡೊ ಪಾದಯಾತ್ರೆಯಲ್ಲಿ ಹೋಗಿದ್ದೆ. ಲಕ್ಷಾಂತರ ಜನರು ಅವರ ಜೊತೆಗೆ ಹೆಜ್ಜೆ ಹಾಕುತ್ತಿದ್ದಾರೆ. ಪಕ್ಷದ ಕಾರ್ಯಕ್ರಮ ಅನುಷ್ಠಾನಕ್ಕೆ ತರಲು ನಾನು ಸೇರಿದ್ದೇನೆ. ನಿರುದ್ಯೋಗ, ಬೆಲೆ ಏರಿಕೆ, ನೌಕರಿ ಕುರಿತು ನಾವು ಹೋರಾಡುತ್ತಿದ್ದೇವೆ ಎಂದರು.

ದೇಶದಲ್ಲಿ 30 ಲಕ್ಷ ಹುದ್ದೆ ಸರಕಾರದಲ್ಲಿ ಖಾಲಿ ಇದೆ. ಪ್ರಧಾನಿ ಮೋದಿ ಅವರು ಅದನ್ನು ಭರ್ತಿ ಮಾಡುತ್ತಿಲ್ಲ. 15 ಲಕ್ಷ ಹುದ್ದೆಗಳು ಎಸ್‌ಸಿ, ಎಸ್‌ಟಿ ಜನರಿಗೆ ಸಿಗುತ್ತವೆ. ಬಡವನ ಕೈಯಲ್ಲಿ ಹಣ ಬಂದರೆ ನಮ್ಮ ಆಟ ನಡೆಯಲ್ಲ ಎಂದು ಕೇಂದ್ರ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ ಎಂದು ದೂರಿದರು.

 15 ಲಕ್ಷ ರೂ. ಅಕೌಂಟ್‌ಗೆ ಹಾಕುತ್ತೇನೆ ಎಂದು ಸುಳ್ಳು ಹೇಳಿದ್ದರು. ಎಸ್‌ಸಿ, ಎಸ್‌ಟಿ, ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಮೋದಿ ಬಂದ್ ಮಾಡಿದ್ದಾರೆ. ಸ್ಕಾಲರ್ ಶಿಪ್ ಕೂಡಾ ಬಿಡುಗಡೆ ಆಗುತ್ತಿಲ್ಲ. ಇದಕ್ಕೆ ನಮ್ಮ ಸಮಾಜಗಳು ಯಾಕೆ ಹೋರಾಟ ಮಾಡುತ್ತಿಲ್ಲ. ಹೀಗಾಗಿ ಒಗ್ಗಟ್ಟಿನಿಂದ ಪ್ರಶ್ನೆ ಮಾಡಬೇಕಿದೆ. ಡಾ. ಅಂಬೇಡ್ಕರ್ ಹೋರಾಟ ಮಾಡಿ ಗಾಂಧಿ ಜೊತೆ ಚರ್ಚಿಸಿ ಮೀಸಲಾತಿ ನೀಡಿದ್ದರು. ಅವರು ಕೊಟ್ಟ ಮೀಸಲಾತಿ ಉಳಿಸಿಕೊಳ್ಳಬೇಕು. ಸ್ವಾತಂತ್ರ್ಯ ಬಳಿಕ ನೆಹರೂ ಕ್ಯಾಬಿನೆಟ್‌ನಲ್ಲಿ ಕಾನೂನು ಸಚಿವರಾಗಿ ಸಂವಿಧಾನ ನೀಡಿದ್ದಾರೆ. ಸಂವಿಧಾನ ಉಳಿಸಿ ಎಂದು ಕರೆ ನೀಡಿದ ಮಲ್ಲಿಕಾರ್ಜುನ ಖರ್ಗೆ, ಇದನ್ನೆಲ್ಲ ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ. ಪ್ರಗತಿಪರ ಚಿಂತಕರು ಸರಕಾರದ ವಿರುದ್ಧ ಬರೆದರೆ ಜೈಲಿಗೆ ಕಳಿಸುತ್ತಾರೆ ಎಂದು ಟೀಕಿಸಿದರು.

ಎಸ್‌ಸಿ,ಎಸ್‌ಟಿ ಸಮಾವೇಶದಲ್ಲಿ ಇಷ್ಟು ಸಂಖ್ಯೆಯಲ್ಲಿ ಸೇರಿದ್ದು ಖುಷಿಯಾಗಿದೆ. ಪ್ರಸಕ್ತ ದಿನಗಳಲ್ಲಿ ಈ ಸಂಘಟನೆ ಬಹಳ ಮುಖ್ಯ. ನಮ್ಮ ಸಮಾಜಗಳು ಛಿದ್ರ ಛಿದ್ರ ಆದರೆ ನಿಮ್ಮನ್ನು ಕೇಳುವವರಿರಲ್ಲ.ಒಗ್ಗಟ್ಟು ಇಲ್ಲ ಅಂದರೆ ತುಂಡು ತುಂಡು ಮಾಡಿ, ಡಿವೈಡ್ ಆ್ಯಂಡ್ ರೂಲ್ ಮಾಡುತ್ತಿದ್ದರು. ಇದನ್ನು ನೀವು ತಲೆಯಲ್ಲಿ ಇಟ್ಟು ಕೊಳ್ಳಬೇಕು. ದೇಶದ ಪ್ರಜಾತಂತ್ರ ಉಳಿಸಬೇಕು ಎಂಬುದು ನಿಮ್ಮ ಗುರಿ ಆಗಬೇಕು ಎಂದು ಸಲಹೆ ನೀಡಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ ‘ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಗೌರವ, ಬದ್ಧತೆ ಇಲ್ಲ. ಇದಕ್ಕೆ ಅವರ ನಡವಳಿಕೆಗಳು ಸಾಕ್ಷಿ. ನರೇಂದ್ರ ಮೋದಿ ಅವರ ಸರಕಾರದಲ್ಲಿ ಸಚಿವರಾಗಿದ್ದ ಅನಂತ ಕುಮಾರ್ ಹೆಗಡೆ ಅವರು ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನವನ್ನು ಬದಲಾವಣೆ ಮಾಡಲು ಎಂದು ಹೇಳಿದ್ದರು. ಬಿಜೆಪಿಯ ಅಂದಿನ ಅಧ್ಯಕ್ಷರಾಗಿದ್ದ ಅಮಿತ್ ಶಾ ಅವರಾಗಲಿ, ಪ್ರಧಾನಿ ಮೋದಿ ಅವರಾಗಲಿ ಅನಂತಕುಮಾರ್ ಹೆಗಡೆ ಅವರ ಮೇಲೆ ಯಾವ ಕ್ರಮ ಕೈಗೊಂಡಿಲ್ಲ. ಬಿಜೆಪಿ ಅವರು ದಲಿತರು, ಶೋಷಿತರು, ಬಡವರು, ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಾರೆ’ ಎಂದು ಟೀಕಿಸಿದ್ದಾರೆ. ‘ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮಾತ್ರ ಮೀಸಲಾತಿ ನೀಡಬೇಕು ಎಂದು 14, 15 ಮತ್ತು 16ನೇ ಆರ್ಟಿಕಲ್‌ಗಳು ಹೇಳಿವೆ. ಕೇಂದ್ರ ಸರಕಾರ ಮೇಲ್ಜಾತಿಯ ಬಡವರಿಗೆ ಶೇ.10 ಮೀಸಲಾತಿಯನ್ನು ನೀಡಿ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಒಂದೇ ದಿನ ತರಾತುರಿಯಲ್ಲಿ ಬಿಲ್ ಪಾಸ್ ಮಾಡಿತು ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಖರ್ಗೆ ಅವರ ನಾಯಕತ್ವದಲ್ಲಿ ದೇಶ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ರಚನೆ ಮಾಡುವ ಪ್ರತಿಜ್ಞೆ ಮಾಡಬೇಕು. ದಲಿತರ ಶಕ್ತಿ ಈ ದೇಶದ ಶಕ್ತಿ. ನಾವೆಲ್ಲ ಒಗ್ಗೂಡಿ ಕೆಲಸ ಮಾಡಬೇಕು.ರಾಜ್ಯದಲ್ಲಿ 136 ಸ್ಥಾನ ಗಳಿಸಿ ಅಧಿಕಾರಕ್ಕೆ ಬರುವ ಭರವಸೆ ಇದೆ. ಬೂತ್ ಮಟ್ಟದಿಂದ ನಮ್ಮ ಪಕ್ಷ ದೊಡ್ಡ ಶಕ್ತಿಯಾಗಿ ಉಳಿದಿದೆ. ಸಂವಿಧಾನ ಉಳಿಸಿ, ದೇಶ ಒಗ್ಗೂಡಿಸಬೇಕಿದೆ. ಬಿಜೆಪಿ ನಾಯಕರು ಭಾವನೆಗಳ ಮೇಲೆ ದೇಶ ಕಟ್ಟಲು ಹೊರಟಿದೆ.ಕಾಂಗ್ರೆಸ್ ಪಕ್ಷ ಜನರ ಬದುಕಿನ ಮೇಲೆ ದೇಶ ಕಟ್ಟಲು ಹೊರಟಿದೆ. ಸುಳ್ಳಿನ ಕಂತೆಗಳಿಗೆ ಯಾರೂ ಬಲಿಯಾಗಬೇಡಿ. ಕೊಟ್ಟ ಮಾತು, ಭರವಸೆ ಉಳಿಸಿಕೊಳ್ಳಲು ಬಿಜೆಪಿಯಿಂದ ಆಗಿಲ್ಲ. ಇದು ಜನಾದೇಶದ ಸರಕಾರ ಅಲ್ಲ, ಆಪರೇಷನ್ ಕಮಲದ ಸರಕಾರ ಎಂದು ಟೀಕಿಸಿದರು.

ಒಂದು ವರ್ಷದ ಹಿಂದೆ ಮೇಕೆದಾಟು ಕಾರ್ಯಕ್ರಮ ಮಾಡಿದ್ದೆವು. ಎಲ್ಲ ಸಭೆಗಳನ್ನು ನೋಡಿದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಇದರಲ್ಲಿ ಅನುಮಾನ ಬೇಡ. ಪರಿಶಿಷ್ಟ ಸಮುದಾಯಗಳಿಗೆ ಕಾಂಗ್ರೆಸ್ ಆಧಾರ ಸ್ತಂಭವಾಗಿದೆ. ಐತಿಹಾಸಿಕ ಐಕ್ಯತಾ ಸಮಾವೇಶ ಜವಾಬ್ದಾರಿ ವಹಿಸಿದ ಎಲ್ಲ ನಾಯಕರಿಗೆ ಧನ್ಯವಾದ ತಿಳಿಸಿದರು.

ವೇದಿಕೆಯಲ್ಲಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಮಾಜಿ ಸಚಿವರಾದ ಎಚ್.ಆಂಜನೇಯ, ಎಚ್.ಸಿ.ಮಹಾದೇವಪ್ಪ, ಸತೀಶ್ ಜಾರಕಿಹೊಳಿ, ಪರಮೇಶ್ವರ ನಾಯಕ್, ಕೆ.ಎಚ್.ಮುನಿಯಪ್ಪ ಸೇರಿದಂತೆ ಕಾರ್ಯಕರ್ತರು ಮತ್ತು ಮುಖಂಡರು ಇದ್ದರು.

Similar News