ಶಿವಮೊಗ್ಗ | ಬಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆಗೆ ಯತ್ನ ಆರೋಪ: ದೂರು ದಾಖಲು

ಆರೋಪಿಯ ಬಂಧನಕ್ಕೆ ಮೂರು ತಂಡ ರಚನೆ: ಎಸ್ಪಿ

Update: 2023-01-09 10:15 GMT

ಶಿವಮೊಗ್ಗ: ಬಜರಂಗದಳದ ಕಾರ್ಯಕರ್ತನೊಬ್ಬನ ಮೇಲೆ ಯುವಕನೊಬ್ಬ ಮಾರಕಾಸ್ತ್ರದಿಂದ ಹಲ್ಲೆ ನಡೆಸಲು ಯತ್ನಿಸಿರುವ  ಘಟನೆ ಇಂದು ಸಾಗರ ಪಟ್ಟಣ ಬಿ.ಎಚ್ ರಸ್ತೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಆರೋಪಿಯ ಬಂಧನಕ್ಕೆ ಮೂರು ತಂಡ ರಚನೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಗರದ ನೆಹರೂ ನಗರ ನಿವಾಸಿ ಸುನೀಲ್  ಬೈಕ್​ನಲ್ಲಿ ಬರುತ್ತಿದ್ದ ಸುನೀಲ್​ ಎಂಬಾತನ ಮೇಲೆ ಮಚ್ಚಿನಿಂದ ಹಲ್ಲೆಗೆ ಯತ್ನಿಸಿರುವುದಾಗಿ ತಿಳಿದುಬಂದಿದೆ. ಜಿಯೋ ಫೈಬರ್ ಕಚೇರಿಯ ಬಳಿ ಬೈಕ್ ನಲ್ಲಿ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಅಲ್ಲಿಯೇ ಇದ್ದ ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ. 

ಘಟನೆಗೆ ಕಾರಣ: ಸುನೀಲ್ ಮತ್ತು ಸಮೀರ್ ಸಾಗರದ ನೆಹರೂ ನಗರದ ನಿವಾಸಿಗಳು, ಹಳೇ  ವೈಷಮ್ಯದ ಹಿನ್ನಲೆಯಲ್ಲಿ ಈ  ಹಲ್ಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಘಟನೆ ಸಂಬಂಧ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಎಸ್ಪಿ ಮಾಹಿತಿ: ಸಾಗರದ ಆಭರಣ ಜ್ಯುವೆಲ್ಲರಿ ಸಮೀಪ ಬರುತ್ತಿದ್ದ ಸುನೀಲ್​ ಎಂಬಾತನ ಮೇಲೆ ಸಮೀರ್​ ಎಂಬಾತ ಹಲ್ಲೆ ನಡೆಸಲು ಯತ್ನಿಸಿದ್ದಾನೆ. ತನ್ನ ಬೈಕ್​ನಿಂದ ಆಯುಧವನ್ನು ತೆಗೆದುಕೊಂಡು ಹಲ್ಲೆ ಮುಂದಾಗಿದ್ದಾನೆ. ಈ ಸಂಬಂಧ ಮೂರು ತಂಡಗಳನ್ನು ರಚಿಸಲಾಗಿದ್ದು, ಘಟನೆಗೆ ಕಾರಣ ತಿಳಿಯಲಾಗುತ್ತಿದೆ. ಇನ್ನೂ ಈ ಸಂಬಂಧ ಪ್ರಕರಣ​ ದಾಖಲಾಗಿದೆ ಎಂದು ಎಸ್ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.

ಸ್ವಯಂ ಘೋಷಿತ ಬಂದ್ ಗೆ ಕರೆ: ಬಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆಗೆ ಯತ್ನಿಸಿರುವ ಹಿನ್ನಲೆಯಲ್ಲಿ ಸಂಘಪರಿವಾರದ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಸಾಗರ ಟೌನ್ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿ, ಮಂಗಳವಾರ ಸ್ವಯಂ ಘೋಷಿತ ಬಂದ್ ಗೆ ಕರೆ ನೀಡಿದ್ದಾರೆ. ಹಲ್ಲೆಗೆ ಯತ್ನಿಸಿರುವ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

Similar News