×
Ad

ಟಿಪ್ಪು ಸುಲ್ತಾನನ ಪ್ರಕೃತಿ ಪ್ರೇಮದ ಪ್ರತೀಕವೇ ಮಂಜರಾಬಾದ್ ಕೋಟೆ: ಸಾಹಿತಿ ಸುಬ್ಬು ಹೊಲೆಯಾರ್

'ಮಂಜ್ರಬಾದ್ ಕೋಟೆ' ಕೃತಿ ಲೋಕಾರ್ಪಣೆ

Update: 2023-01-09 16:08 IST

ಸಕಲೇಶಪುರ: ಜ. 9: ಟಿಪ್ಪು ಸುಲ್ತಾನನಿಗೆ ನಾಡ ಪ್ರೇಮದ ಜೊತೆಗೆ ಪ್ರಕೃತಿ ಪ್ರೇಮ ಇತ್ತು ಎಂಬುದಕ್ಕೆ ಸಾಕ್ಷಿಯಾಗಿ ಮಲೆನಾಡಿನಲ್ಲಿನ ಮಂಜರಾಬಾದ್ ಕೋಟೆ ಕಣ್ಣ ಮುಂದೆ ಇದೆ ಎಂದು ಸಾಹಿತಿ ಸುಬ್ಬು ಹೊಲೆಯಾರ್ ಹೇಳಿದ್ದಾರೆ

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸಾಹಿತಿ ಚಂದ್ರಶೇಖರ್ ದೂಲೇಕರ ಸ್ಮರಣಾರ್ಥ ಪಟ್ಟಣದ ಪುರಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಲ್ನಾಡ್ ಮೆಹಬೂಬ್ ಸಂಪಾದಕತ್ವದ ಮಂಜರಾಬಾದ್ ಕೋಟೆ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ಸಮ ಸಮಾಜದ ಬದ್ಧತೆಯ ಜೊತೆಗೆ ನಿಸರ್ಗ ಪ್ರೇಮ ಹೊಂದಿದ್ದ ಟಿಪ್ಪು, ಹಲವು ವೈಶಿಷ್ಯಗಳನ್ನು ಈ  ಕೋಟೆಯ ಕಟ್ಟಿಸಿದ್ದಾರೆ. ಈ ಭಾಗದ ಆಕರ್ಷಣಿಯ ಕೇಂದ್ರಗಳಲ್ಲಿ ಇದು ಒಂದಾಗಿದೆ, ಈ ಭಾಗಕ್ಕೆ ಭೇಟಿನೀಡುವ ಪ್ರತಿಯೊಬ್ಬರೂ ಕೋಟೆ ನೊಡಬೇಕೆಂದು ಹಂಬಲಿಸುತ್ತಾರೆ ಎಂದರು.

ಆಹ್ಲಾದಕರ ವಾತಾವರಣವಿರುವ ಕೋಟೆಯನ್ನು ಹೊಕ್ಕರೆ ಮನಸ್ಸಿಗೆ ಉಲ್ಲಾಸವೆನಿಸುತ್ತದೆ. ಇದೇ ಕಾರಣಕ್ಕೆ ನಕ್ಷತ್ರಾಕಾರಾದ ಮಂಜರಾಬಾದ್ ಕೋಟೆಯು ಟಿಪ್ಪು ಸುಲ್ತಾನನ ಪ್ರಕೃತಿ ಪ್ರೇಮದ ಪ್ರತೀಕವೆನಿಸಿದೆ ಎಂದು ಸುಬ್ಬು ಹೊಲೆಯಾರ್ ಬಣ್ಣಿಸಿದರು.

ಲೇಖಕ, ರಂಗಕರ್ಮಿ ರಕ್ಷಿದಿ ಪ್ರಸಾದ್ ಮಾತನಾಡಿ,  ಟಿಪ್ಪು ಸುಲ್ತಾನ್ ರವರ ತಂದೆ ಹೈದರಲಿ ಕಾಲದಲ್ಲಿ  ಪ್ರಾಯಶಃ ಕ್ರಿ.ಶ.1785ರ ಹಿಂದಿನ ಸಮಯದಲ್ಲಿ  ಕೋಟೆಯ ನಿರ್ಮಾಣವನ್ನು ಪ್ರಾರಂಭಿಸಿರಬಹುದು ಎಂದರು.

ಸುದೀರ್ಘವಾದ ಸಮಯದಲ್ಲಿ ನಿರ್ಮಾಣವಾಗಿ  ಕ್ರಿ.ಶ.1792ರಲ್ಲಿ ಪೂರ್ಣ ನಿರ್ಮಾಣ ಮಾಡಿದರೆಂದು ದಾಖಲೆಗಳು ತಿಳಿಸುತ್ತವೆ.  ಟಿಪ್ಪು ಸುಲ್ತಾನ್ ಸಂಪೂರ್ಣವಾಗಿ ಕಲಾತ್ಮಕವಾಗಿ ಕಟ್ಟಲ್ಪಟ್ಟ ಈ ಕೋಟೆಯ ನಿಜಕ್ಕೂ ಅದ್ಭುತ ಎಂದರು. 

ಶಾಸಕ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, ಇತಿಹಾಸವನ್ನು ಬರೆಯುವರು ಅಧ್ಯಯನದಲ್ಲಿ ಪರಿಣಿತಿ ಹೊಂದಿರಬೇಕು.  ಮನಸೋ ಇಚ್ಚೆ ಬರೆಯುವುದು ಇತಿಹಾಸ ಎನಿಸುವುದಿಲ್ಲ. ಪಠ್ಯ ಪುಸ್ತಕಗಳ ವಿಚಾರದಲ್ಲಿ  ವಿಭಿನ್ನ ಪರಿಸ್ಥಿತಿ ಎದುರಿಸಬೇಕಾಯಿತು. ಮಕ್ಕಳಿಗೆ ಇತಿಹಾಸ ಹೇಳುವ ವಿಚಾರದಲ್ಲಿಯೂ ಕೆಲವರು ತಾರತಮ್ಯ ಮಾಡುವ ಮನಸ್ಥಿತಿ ಹೊಂದಿರುವುದು ಅಲ್ಪತನದ ಪರಮಾವಧಿ ಎಂದರು.

'ರಾಜಕಾರಣಿಗಳು ಮನಸ್ಸು ಬಿಚ್ಚಿ ಮಾತನಾಡಲಾಗದ ಸ್ಥಿತಿಗೆ ಬಂದು ತಲುಪಿರುವ ಸತ್ಯವನ್ನು ಹೇಳಬೇಕೆಂದರೆ ನೋವೆನಿಸುತ್ತದೆ' ಎಂದರು.

'ನಮ್ಮ ಇತಿಹಾಸ, ಪರಂಪರೆ ಬಗ್ಗೆ ಯುವಜನರು ಓದಿ ತಿಳಿದುಕೊಳ್ಳಬೇಕು. 1780ರ ದಶಕದಲ್ಲಿಯೇ ಆರಂಭವಾದ ಮಂಜ್ರಾಬಾದ್‌ ಕೋಟೆ ನಿರ್ಮಾಣ ಹಲವು ತಂತ್ರಜ್ಞಾನಗಳನ್ನು ಒಳಗೊಂಡಿರುವುದು ವಿಶೇಷ. ಕೋಟೆ ಕಟ್ಟುವುದು ಸುಲಭದ ಮಾತಲ್ಲ. ಆದರೆ ಆಗಿನ ಕಾಲದಲ್ಲಿಯೇ ವೈಜ್ಞಾನಿಕ ಆಲೋಚನೆಯಿಂದ ಸುಧೀಘ ಕಾಲ ಉಳಿಯುವ ಸ್ಮಾರಕ ನಿರ್ಮಿಸಿದ ಟಿಪ್ಪು ಸುಲ್ತಾನನ ಸಾಹಸ ಮೆಚ್ಚಲೇಬೇಕು' ಎಂದರು. 

ಪುಸ್ತಕದ ಸಂಪಾದಕ ಮಲ್ನಾಡ್ ಮೆಹಬೂಬ್ ಮಾತನಾಡಿ, ಈ ಪುಸ್ತಕದ ಪ್ರಮುಖ ಅಂಶಗಳನ್ನು  ಸಾಹಿತಿ ಇತಿಹಾಸ ತಜ್ಞ  ದಿವಂಗತ  ಚಂದ್ರಶೇಖರ ದೋಳೆಕರ್, ಮಾಸ್ಟರ್ ಸಕಲೇಶ, ಸೇರಿದಂತೆ ಅನೇಕರ ಕೃತಿಗಳು ಲೇಖನಗಳನ್ನು ಆದಾರವಾಗಿಸಲಾಗಿದೆ. ಇದರ ಜೊತೆಯಲ್ಲಿ ಮಂಜ್ರಾಬಾದ್ ಕೋಟೆಯ ಮೇಲೆ ಬೀಳುವ ಮಳೆ ನೀರು ಎರಡು ಮಹಾ ಸಾಗರ ಸೇರುವ ಶ, ಕೊಟೆಯಿಂದ ಸಮುದ್ರ ನೋಡುವ ಅಂಶ,ರುದ್ರ ರಮಣೀಯ ಸೂರ್ಯೋದಯ ಮತ್ತು ಸೂರ್ಯಸ್ತಮದ ಬಗ್ಗೆ, ಮಂಜರಾಬಾದ್ ದರ್ಗಾದ ಬಗ್ಗೆ ಮಾಹಿತಿ ಇದೆ ಎಂದರು.

ಸಮಾಜಿಕ ಚಿಂತಕ ಇಬ್ರಾಹಿಂ ಮುಸ್ಲಿಯಾರ್ ಮಾತನಾಡಿ, ಮಂಜರಾಬಾದ್ ಕೊಟೆ  ಪ್ರಕೃತಿ ಸೌಂದರ್ಯಕ್ಕೆ, ವಿಷೇಶ ಆಕರ್ಷಣೆಗೆ, ವಿನ್ಯಾಸಕ್ಕೆ ಮಾತ್ರವಲ್ಲ. ಸೌಹಾರ್ದತೆಯ ಸಂಕೇತವಾಗಿದೆ ಎಂದರು.

ನಮ್ಮ ಎಲ್ಲಾ ನಡತೆ ನಾವು ಆಡುವ ನುಡಿಯಲ್ಲಿ ಅಡಗಿದೆ. ಅತ್ಯುತ್ತಮ ಮಾತುಗಳಿಂದ ಸಂಬಂಧಗಳನ್ನು  ಬೆಳಸಬೇಕು. ಪ್ರೀತಿಯಿಂದ ಸಮಾಜವನ್ನು ನಡೆಸಬೇಕು ಎಂದರು.

ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎಂ.ಮಂಜುನಾಥ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ದಯಾನಂದ್‌,  ಮಂಜ್ರಾಬಾದ್ ಕೋಟೆ ಕೃತಿ ಸಂಪಾದಕ ಮಲ್ನಾಡ್ ಮೆಹಬೂಬ್, ಪತ್ರಕರ್ತ ಹೆತ್ತೂರು ನಾಗರಾಜ್, ತೌಫಿಕ್ ಅಹಮದ್, ಪುರಸಭೆ ಅಧ್ಯಕ್ಷ ಕಾಡಪ್ಪ, ಯಡೇಹಳ್ಳಿ ಮಂಜುನಾಥ್,  ಇತರರು ಇದ್ದರು.

Similar News