ಮನುಷ್ಯತ್ವದ ಪರ ನಿಂತರೆ ಹೊಸ ಕರ್ನಾಟಕ ನಿರ್ಮಾಣ ಸಾಧ್ಯ: ಸಿದ್ದರಾಮಯ್ಯ

ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದ ಲಿಖಿತ ಭಾಷಣ ಬಿಡುಗಡೆ ಮಾಡಿದ ವಿಪಕ್ಷ ನಾಯಕ

Update: 2023-01-09 14:04 GMT

ಬೆಂಗಳೂರು, ಜ. 9: ‘ಹಿಂದಿ, ಸಂಸ್ಕೃತಗಳ ವಿರುದ್ಧ ಪ್ರತಿಭಟಿಸಿ, ಮನುಷ್ಯತ್ವದ ಪರ ನಿಂತರೆ ಹೊಸ ಕರ್ನಾಟಕಕ್ಕೆ ನಿರ್ಮಾಣ ಸಾಧ್ಯ. ಅಂತಹ ಹೊಸ ಕರ್ನಾಟಕದ ಉದಯಕ್ಕೆ 86ನೆ ಅಖಿಲ ಭಾರತ ಕನ್ನಡ ಸಮ್ಮೇಳನವು ನಾಂದಿಯಾಗಲಿ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಶಯ ವ್ಯಕ್ತಪಡಿಸಿದ್ದಾರೆ.

ರವಿವಾರ ಹಾವೇರಿಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅನಿವಾರ್ಯ ಕಾರಣಗಳಿಂದ ಪಾಲ್ಗೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಲಿಖಿತ ರೂಪದ ಭಾಷಣವನ್ನು ಬಿಡುಗಡೆ ಮಾಡಿರುವ ಅವರು, ‘ಸಮ್ಮೇಳನದಲ್ಲಿ ಸೇರಿರುವ ಪ್ರತಿಯೊಬ್ಬರೂ ಕನ್ನಡದ ಸೇನಾನಿಗಳೆ. ನೀವೆಲ್ಲರೂ ಒಕ್ಕೊರಲಿನಿಂದ ಮನುವಾದಕ್ಕೆ ಧಿಕ್ಕಾರ ಹೇಳಬೇಕು. ಪ್ರೀತಿ, ಸೌಹಾರ್ದತೆ, ಭಾವೈಕ್ಯ ಮತ್ತು ಅಭಿವೃದ್ಧಿ ನಮ್ಮ ಮಂತ್ರವಾಗಬೇಕು ಎಂದು ಹೇಳಿದ್ದಾರೆ.

‘ನಾವಿಂದು ಹಲವು ಸಂಕಷ್ಟಗಳಲ್ಲಿದ್ದೇವೆ. ಗಡಿ ಭಾಗದ ಜನ ಸೌಲಭ್ಯಗಳಿಲ್ಲದೆ ನರಳುತ್ತಿದ್ದಾರೆ. ಯುವ ಜನರಿಗೆ ನಿರುದ್ಯೋಗದ ಸಮಸ್ಯೆ ಕಾಡುತ್ತಿದ್ದು, ಅವರಿಗೆ ಉದ್ಯೋಗ ಒದಗಿಸಿಕೊಡಬೇಕು. ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಪ್ರಾದೇಶಿಕ ಅಸಮಾನತೆ ಹೆಚ್ಚಾಗುತ್ತಿದೆ. ಜನರ ದುಡಿಮೆ ಕಡಿಮೆಯಾಗುತ್ತಿದೆ, ಎಲ್ಲ ವಸ್ತುಗಳ ಬೆಲೆಗಳು ಆಕಾಶ ಮುಟ್ಟುತ್ತಿವೆ. ದೇಶದಲ್ಲಿ ಆಡಳಿತ ನಡೆಸುತ್ತಿರುವವರು ಪುಸ್ತಕ, ಕಾಗದ, ಪೆನ್ನು, ಪೆನ್ಸಿಲ್, ಬಣ್ಣ ಎಲ್ಲದರ ಮೇಲೆಯೂ ತೆರಿಗೆ ವಿಧಿಸುತ್ತಿದ್ದಾರೆಂದು ಸಿದ್ದರಾಮಯ್ಯ ದೂರಿದ್ದಾರೆ.

ಕುವೆಂಪುರವರ ಬರಹಗಳನ್ನು ಮುದ್ರಣ ಮಾಡಿ, ಮಾರಾಟ ಮಾಡುವುದಕ್ಕೆ 720ರೂ.ಗಳಿಗೂ ಹೆಚ್ಚು ತೆರಿಗೆ ಕಟ್ಟಬೇಕಾಗಿದೆ ಎಂದು ಇತ್ತೀಚೆಗೆ ಕೆಲವರು ಹೇಳಿದ್ದನ್ನು ಕೇಳಿದ್ದೇನೆ. ಇದು ದುರಂತ. ಜ್ಞಾನ ಕ್ಷೇತ್ರದ ಮೇಲೆ ಕೇಂದ್ರ ಸರಕಾರವು ನಡೆಸುತ್ತಿರುವ ದಬ್ಬಾಳಿಕೆ ನಿಲ್ಲಬೇಕು. ಈ ಬಾರಿ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಟ್ಯಾಬ್ಲೊವನ್ನು ಕೇಂದ್ರ ಸರಕಾರ ತಿರಸ್ಕರಿಸಿದೆ. ಆ ಮೂಲಕ ಕರ್ನಾಟಕವನ್ನು ಕೇಂದ್ರ ಸರಕಾರ ಅವಮಾನಿಸಿದೆ. ಇಲ್ಲಿ ಸಮ್ಮೇಳನ ನಡೆಯುತ್ತಿದೆ. ಅಲ್ಲಿ ಕರ್ನಾಟಕದ ಸ್ವಾಭಿಮಾನವನ್ನು ದಮಿನಿಸುವ ಕೆಲಸ ನಡೆಯುತ್ತಿದೆ. ಇದರ ವಿರುದ್ಧ ಕರ್ನಾಟಕ ಒಕ್ಕೊರಲಿನಿಂದ ವಿರೋಧಿಸಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ಜ್ಞಾನ ದ್ವೇಷಿ ವಾತಾವರಣ: ನಾಡಿನಲ್ಲಿ ಚಿಂತಕರು, ಸಾಹಿತಿಗಳು, ಬುದ್ಧಿಜೀವಿಗಳ ಮೇಲೆ ಏಕಪಕ್ಷೀಯ ದೌರ್ಜನ್ಯಗಳು ನಡೆಯುತ್ತಿವೆ. ಜ್ಞಾನ ದ್ವೇಷಿಯಾದ ವಾತಾವರಣ ಕರ್ನಾಟಕದಲ್ಲಿ ನಿರ್ಮಾಣವಾಗುತ್ತಿದೆ. ಅದನ್ನು ನಾವೆಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕು. ನಾಡಿನ ಶ್ರೇಷ್ಠ ವಿದ್ವಾಂಸರಾಗಿದ್ದ ಡಾ.ಎಂ.ಎಂ. ಕಲಬುರಗಿಯವರನ್ನು ಕೊಲ್ಲಲಾಯಿತು. ಶ್ರೇಷ್ಠ ಮನುಷ್ಯ ಜೀವಿಯಾಗಿದ್ದ ಗೌರಿ ಲಂಕೇಶರನ್ನು ಕೊಲ್ಲಲಾಯಿತು. ಮುಂದೆ ಯಾವೊಬ್ಬ ವಿದ್ವಾಂಸ, ಸಾಹಿತಿ, ಕಲಾವಿದರ ಕೂದಲೂ ಕೊಂಕದಂತೆ ನೋಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ನಮ್ಮ ಸಾಹಿತಿಗಳು, ಚಿಂತಕರು, ವಿಜ್ಞಾನಿಗಳು, ರೈತರು, ಸಂಗೀತಗಾರರು, ಕಲಾವಿದರು, ನಾಟಕಕಾರರು, ಜನಪದ ತಜ್ಞರು, ಅನುಭಾವಿಗಳು, ಸೂಫಿ ಸಂತರು ಎಲ್ಲರೂ ಈ ನಾಡಿನ ಆಸ್ತಿ. ಈ ಆಸ್ತಿ ಬೆಲೆ ಕಟ್ಟಲಾಗದ್ದು. ಮನುವಾದಿಗಳ ದ್ವೇಷಿ ತತ್ವದಿಂದ ನಮ್ಮ ನಾಡನ್ನು ಇಂದು ಉಳಿಸಿಕೊಳ್ಳಬೇಕಾಗಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಕನ್ನಡ ಭಾಷೆ ಮತ್ತು ಕನ್ನಡಿಗರಿಗೆ ಸಂಬಂಧಿಸಿದಂತೆ ಎರಡು ಮುಖ್ಯ ವಿಷಯಗಳ ಬಗ್ಗೆ ಅಧ್ಯಯನ ಮಾಡಿ ವರದಿ ನೀಡುವಂತೆ ಕನ್ನಡ ಅಭಿವೃದ್ದಿ ಪ್ರಾಧಿಕಾರದ ನೇತೃತ್ವದಲ್ಲಿ ಎರಡು ಸಮಿತಿಗಳನ್ನು ರಚಿಸಿದ್ದೆ. ನಮ್ಮ ಅಧಿಕಾರದ ಕೊನೆಯ ದಿನಗಳಲ್ಲಿ ಆ ಎರಡು ವರದಿಗಳು ಕೈಸೇರಿದರೂ ಅದನ್ನು ಅನುಷ್ಠಾನಗೊಳಿಸುವಷ್ಟು ಕಾಲಾವಕಾಶ ಇರಲಿಲ್ಲ.

ಅದರಲ್ಲಿ ಒಂದು ಶಾಲೆಗಳ ಸಬಲೀಕರಣದ ವರದಿ, ಇನ್ನೊಂದು ಡಾ.ಸರೋಜಿನಿ ಮಹಿಷಿ ವರದಿಯ ಪರಿಷ್ಕøತ ವರದಿ. ಸರಕಾರಿ ಶಾಲೆಗಳ ಸಬಲೀಕರಣದ ವರದಿ  ಅನುಷ್ಠಾನಕ್ಕೆ ತಂದರೆ ಶಾಲೆಗಳ ಉನ್ನತೀಕರಣಗೊಳಗಾಗುತ್ತದೆ. ಶಿಕ್ಷಣದಲ್ಲಿ ಕನ್ನಡ ಭಾಷೆ ಉಳಿಯುತ್ತದೆ. ನಮ್ಮ ಮಕ್ಕಳ ಭವಿಷ್ಯವೂ ಉಜ್ವಲವಾಗುತ್ತದೆ. ಮಹಿಷಿ ವರದಿಯ ಪರಿಷ್ಕೃತ ವರದಿ  ಅನುಷ್ಠಾನಕ್ಕೆ ಬಂದರೆ ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಹೆಚ್ಚು ಉದ್ಯೋಗವಕಾಶಗಳು ಲಭ್ಯವಾಗುತ್ತದೆ. ಬಹಳ ಮುಖ್ಯವಾಗಿ ಕೇಂದ್ರ ಸರಕಾರದ ಕಚೇರಿಗಳಲ್ಲಿ ಕನ್ನಡಿಗರಿಗೆ ಅವರ ಹಕ್ಕಿನ ಭಾಗವಾಗಿ ಉದ್ಯೋಗಗಳು ಸಿಗುತ್ತವೆ ಎಂದು ಅವರು ಪ್ರತಿಪಾದಿಸಿದ್ದಾರೆ.

‘ಕೇಂದ್ರ ಸರಕಾರಿ ಸ್ವಾಮ್ಯದ ಕಚೇರಿಗಳಲ್ಲಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ‘ಸಿ’ ಮತ್ತು ‘ಡಿ’ ಗ್ರೂಪಿಗೆ ನೂರಕ್ಕೆ ನೂರು, ‘ಬಿ’ ಗ್ರೂಪಿಗೆ ಶೇ.80ರಷ್ಟು ಮತ್ತು ‘ಎ’ ಗ್ರೂಪಿಗೆ ಶೇ.65ರಷ್ಟು ಉದ್ಯೋಗಗಳು ಕನ್ನಡಿಗರಿಗೆ ನೀಡಬೇಕು ಎನ್ನುವುದು ಮಹಿಷಿ ವರದಿಯ ಪರಿಷ್ಕೃತ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿಯವರು ಈ ಎರಡು ವರದಿಗಳನ್ನು ಪರಿಶೀಲಿಸಿ ಆದಷ್ಟು ಶೀಘ್ರವಾಗಿ  ಅನುಷ್ಠಾನಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Similar News