ಶಿವಮೊಗ್ಗ-ಕರಾವಳಿ ಭಾಗದಲ್ಲಿ ಎಷ್ಟು ಬಂಡವಾಳ ಹೂಡಿಕೆಯಾಗಿದೆ?: ಡಿ.ಕೆ.ಶಿವಕುಮಾರ್

Update: 2023-01-09 14:12 GMT

ಬೆಂಗಳೂರು, ಜ.9: ಶಿವಮೊಗ್ಗ, ಕರಾವಳಿ ಭಾಗದಲ್ಲಿ ಎಷ್ಟು ಬಂಡವಾಳ ಹೂಡಿಕೆ ಆಗಿದೆ.ರಾಜ್ಯದಲ್ಲಿ 10 ಲಕ್ಷ ಕೋಟಿ ಬಂಡವಾಳ ಹೂಡಿಕೆ ಬಂದಿದೆ ಎನ್ನುತ್ತಾರೆ. ಶಿವಮೊಗ್ಗದಲ್ಲಿ ಯಾರಾದರೂ 500 ಕೋಟಿ ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿದ್ದಾರಾ? ದಕ್ಷಿಣ ಕನ್ನಡದಲ್ಲಿ ಕನಿಷ್ಠ ಒಂದು ಲಕ್ಷ ಕೋಟಿಯಾದರೂ ಬಂಡವವಾಳ ಹೂಡಿಕೆಯಾಗಬೇಕಲ್ಲವೇ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.

ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರು ‘ಸಿದ್ದರಾಮಯ್ಯ ಅವರ ನಿಜ ಕನಸುಗಳು’ ಪುಸ್ತಕ ಬಿಡುಗಡೆ ಮಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಈ ಮೇಲಿನಂತೆ ಪ್ರತಿಕ್ರಿಯಿಸಿದರು. 

ಬಿಜೆಪಿಯವರು ತಮ್ಮ ವೈಫಲ್ಯಗಳನ್ನು ಮುಚ್ಚಿಹಾಕಲು ನಮ್ಮ ನಾಯಕರ ಮೇಲೆ ಕಳಂಕ ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿಯವರ ಈ ಪ್ರಯತ್ನಗಳು ಕೆಲಸಕ್ಕೆ ಬರುವುದಿಲ್ಲ. ಶೃಂಗೇರಿ, ನಂಜನಗೂಡಿನಲ್ಲಿ ಸಲಾಂ ಆರತಿ ನಾವು ಹೆಸರಿಟ್ಟಿದ್ದೆವಾ? ಟಿಪ್ಪು ಇತಿಹಾಸ ನಾವು ಬರೆದಿದ್ದೇವಾ? ಸ್ವಾತಂತ್ರ್ಯ ಬರುವ ಮುನ್ನವೇ ಟಿಪ್ಪು ಅವರ ಇತಿಹಾಸ ಬರೆಯಲಾಗಿತ್ತು ಎಂದು ಅವರು ಹೇಳಿದರು.

ರಾಷ್ಟ್ರಪತಿಗಳಾಗಿದ್ದ ರಾಮನಾಥ್ ಕೋವಿಂದ್ ಅವರು ಟಿಪ್ಪು ಅವರ ತ್ಯಾಗದ ಬಗ್ಗೆ ನಮ್ಮ ಸದನದಲ್ಲಿ ಭಾಷಣ ಮಾಡಿ ಹೋಗಿದ್ದಾರೆ. ಬಿಜೆಪಿಯವರು ಪುಸ್ತಕ ಬರೆದು ಸಂತೋಷ ಪಡಲಿ. ಕಳೆದ ಚುನಾವಣೆ ಸಂದರ್ಭದಲ್ಲಿ ಜನತೆಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಈಡೇರಿಸಿರುವುದರ ಬಗ್ಗೆ ಮಾತನಾಡಲು ಅವರಿಂದ ಆಗುತ್ತಿಲ್ಲ. ಹೀಗಾಗಿ ಅವರು ಭಾವನೆ ಮೇಲೆ ದೇಶ ಹಾಗೂ ಸಮಾಜವನ್ನು ಇಬ್ಭಾಗ ಮಾಡಲು ಹೋಗುತ್ತಿದ್ದಾರೆ ಎಂದು ಶಿವಕುಮಾರ್ ಕಿಡಿಗಾರಿದರು.

ನನ್ನ ಕ್ಷೇತ್ರದಲ್ಲಿ 300ಕ್ಕೂ ಹೆಚ್ಚು ದೇವಾಲಯ ಕಟ್ಟಲು ನಾನು ನೆರವು ನೀಡಿದ್ದೇನೆ. ಆ ಬಗ್ಗೆ ಯಾರೂ ಮಾತನಾಡಲ್ಲ. ಆದರೆ ನಮ್ಮ ಕ್ಷೇತ್ರದ ಒಂದು ಗ್ರಾಮದಲ್ಲಿ ಕ್ರಿಸ್ತರ ಶಿಲುಬೆ ನಿರ್ಮಿಸಲು ಮುಂದಾದಾಗ ನನ್ನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು ಬಿಜೆಪಿಯವರು ಜನರಿಗೆ ಬದುಕು ಕಟ್ಟಿಕೊಟ್ಟಿರುವ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ಅವರಿಗೆ ಕೇವಲ ಭಾವನಾತ್ಮಕ ವಿಚಾರಗಳು ಮಾತ್ರ ಬೇಕು ಎಂದು ಅವರು ಟೀಕಿಸಿದರು.

ಸ್ಯಾಂಟ್ರೋ ರವಿ ಹಾಗೂ ದಲಿತ ಮಹಿಳೆಯರ ಮೇಲೆ ಬೋಗಸ್ ಪ್ರಕರಣ ದಾಖಲಿಸಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನನಗೆ ಈ ಸ್ಯಾಂಟ್ರೋ, ಜಾಗ್ವಾರ್, ಮರ್ಸಿಡೀಸ್, ಬಿಎಂಡಬ್ಲ್ಯೂ ಬಗ್ಗೆ ಗೊತ್ತಿರಲಿಲ್ಲ. ನಿನ್ನೆ ಮಾಧ್ಯಮ ಸ್ನೇಹಿತರನ್ನು ಕೇಳಿ ತಿಳಿದುಕೊಂಡೆ. ಇದು ಅವರಿಗೂ ಹಾಗೂ ಬಿಜೆಪಿಗೂ ಇರುವ ಸಂಬಂಧ. ಅದರ ಬಗ್ಗೆ ನಾನು ಯಾಕೆ ಮಾತನಾಡಲಿ ಎಂದರು.

ಮಾಧ್ಯಮಗಳು ಹಾಗೂ ಕುಮಾರಸ್ವಾಮಿ ಎಲ್ಲವನ್ನು ಬಿಚ್ಚಿಡುತ್ತಿದ್ದಾರೆ. ಬೋಗಸ್ ಪ್ರಕರಣದ ಬಗ್ಗೆ ಮುಖ್ಯಮಂತ್ರಿ, ಗೃಹ ಸಚಿವರು ಪಾರದರ್ಶಕ ತನಿಖೆ ಮಾಡಿಸಬೇಕಾಗಿದೆ. ರಾಜಕೀಯದಲ್ಲಿ ಯಾರೋ ಬಂದು ನಮ್ಮ ಜತೆ ಫೋಟೋ ತೆಗೆಸಿಕೊಳ್ಳುತ್ತಾರೆ. ಅದು ಬೇರೆ ವಿಚಾರ. ಆದರೆ ದೂರವಾಣಿ ಸಂಭಾಷಣೆ, ಚಾಟ್, ಮಾತುಕತೆಗಳು ಏನಾದರೂ ವ್ಯವಹಾರ ಇದ್ದರೆ ಮಾತ್ರ ಇದು ನಡೆಯುತ್ತದೆ ಎಂದು ಶಿವಕುಮಾರ್ ತಿಳಿಸಿದರು.

Similar News