‘ಹಿಜಾಬ್’ ನಿಷೇಧದ ಪರಿಣಾಮ ಸರಿಪಡಿಸಲು ರಾಜ್ಯ ಸರಕಾರಕ್ಕೆ PUCL ಒತ್ತಾಯ

Update: 2023-01-09 15:57 GMT

ಬೆಂಗಳೂರು, ಜ.8: ಮುಸ್ಲಿಮ್ ವಿದ್ಯಾರ್ಥಿನಿಯರ ಶಿಕ್ಷಣ, ಘನತೆ ಮತ್ತು ಖಾಸಗಿತನದ ಹಕ್ಕುಗಳ ಮೇಲೆ ಶಿಕ್ಷಣ ಸಂಸ್ಥೆಗಳಲ್ಲಿ ‘ಹಿಜಾಬ್’ನ ವಾಸ್ತವಿಕ ನಿಷೇಧದ ಪರಿಣಾಮವನ್ನು ಸರಿಪಡಿಸಲು ಎಂದು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್(People's Union for Civil Liberties) ಕರ್ನಾಟಕ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.

ಸೋಮವಾರ ಸಾವಿತ್ರಿಬಾಯಿ ಫುಲೆಯವರ ಜೊತೆಗಿದ್ದ ಶಿಕ್ಷಣ ತಜ್ಞೆ ಫಾತಿಮಾ ಶೇಖ್ ಅವರ ಜನ್ಮದಿನದ ಸಂದರ್ಭದಲ್ಲಿ ಪಿಯುಸಿಎಲ್ ಕರ್ನಾಟಕವು ‘ಕ್ಲೋಸಿಂಗ್ ದಿ ಗೇಟ್ಸ್ ಟು ಎಜುಕೇಷನ್: ವಯೊಲೇಶನ್ಸ್ ಆಫ್ ರೈಟ್ಸ್ ಆಫ್ ಮುಸ್ಲಿಂ ವುಮೆನ್ ಸ್ಟೂಡೆಂಟ್ಸ್’ ಎಂಬ ವರದಿಯನ್ನು ಬಿಡುಗಡೆ ಮಾಡಿದೆ. ಅಲ್ಪಸಂಖ್ಯಾತ ಸಮುದಾಯದ ಸಾಂವಿಧಾನಿಕ ಹಕ್ಕುಗಳಿಂದ ವಂಚಿತರಾಗಿರುವ ಮುಸ್ಲಿಮ್ ವಿದ್ಯಾರ್ಥಿನಿಯರು ಅನುಭವಿಸಿದ ನಷ್ಟವನ್ನು ರಾಜ್ಯ ಸರಕಾರವು ಭರಿಸಬೇಕು’ ಎಂದು ಆಗ್ರಹಿಸಿದೆ.

ರಾಜ್ಯ ಸರಕಾರವು ತನ್ನ ಅಸಂವಿಧಾನಿಕ ಮತ್ತು ಅನಿಯಂತ್ರಿತ ಕ್ರಮದಿಂದಾಗಿ ಮುಸ್ಲಿಮ್ ವಿದ್ಯಾರ್ಥಿನಿಯರ ಶಿಕ್ಷಣವನ್ನು ಮೊಟಕುಗೊಳಿಸಿದೆ. ಈ ನಿಟ್ಟಿನಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಸಂಬಂಧಪಟ್ಟಂತೆ ತಾರತಮ್ಯ, ಖಾಸಗಿತನ, ಸ್ವಾಯತ್ತತೆ ಮತ್ತು ಘನತೆಯ ಸಾಂವಿಧಾನಿಕ ಮೌಲ್ಯಗಳನ್ನು ಸರಕಾರ ಎತ್ತಿಹಿಡಿಯಬೇಕು ಎಂದು ಪಿಯುಸಿಎಲ್ ಒತ್ತಾಯಿಸಿದೆ.

2022ರ ಫೆಬ್ರವರಿಯಿಂದ ಎಪ್ರಿಲ್ ಅವಧಿಯಲ್ಲಿ ಶಾಂತಿಯುತ ಪ್ರತಿಭಟನೆಗಳನ್ನು ನಡೆಸಿದ ಮುಸ್ಲಿಮ್ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ವ್ಯಕ್ತಿಗಳ ವಿರುದ್ಧ ರಾಜ್ಯ ಸರಕಾರವು ಕೈಗೊಂಡಿರುವ ಕಾನೂನು ಕ್ರಮವನ್ನು ತಕ್ಷಣವೇ ಹಿಂಪಡೆಯಬೇಕು. ಹಿಜಾಬ್ ಪ್ರಕರಣದಲ್ಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‍ಗೆ ಹಾಜರಾಗಿದ್ದ ಎಲ್ಲ ಅರ್ಜಿದಾರರು ಮತ್ತು ಅವರ ಕುಟುಂಬಗಳಿಗೆ ರಕ್ಷಣೆಯನ್ನು ವಿಸ್ತರಿಸಿ ಅವರ ಸುರಕ್ಷತೆಯನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದೆ.

ಮುಸ್ಲಿಮ್ ಮಹಿಳಾ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುವಂತ ಈಗಾಗಲೇ ವರದಿಯಾಗಿರುವ  ವೀಡಿಯೊಗಳು ಮತ್ತು ಚಿತ್ರಗಳಲ್ಲಿ ಗೋಚರಿಸುವ ಹಿಂದುತ್ವ ಕಿಡಿಗೇಡಿ ಗುಂಪು ಸದಸ್ಯರ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ತ್ವರಿತ ಕ್ರಮ ಕೈಗೊಳ್ಳಬೇಕು. ಮುಸ್ಲಿಂ ಮಹಿಳಾ ವಿದ್ಯಾರ್ಥಿಗಳು ಸಲ್ಲಿಸಿದ ದೂರುಗಳ ಮೇಲೆ ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳಬೇಕು ಎಂದು ಪಿಯುಸಿಎಲ್ ಒತ್ತಾಯಿಸಿದೆ. 

ಮುಸ್ಲಿಮ್ ವಿದ್ಯಾರ್ಥಿಗಳ ಮೂಲಭೂತ ಹಕ್ಕುಗಳ ಉಲ್ಲಂಘನೆ ಮಾಡಿದವರ ಮೇಲೆ ಸರಕಾರ ವಿಚಾರಣೆ ನಡೆಸಬೇಕು. ತಮ್ಮ ನಿಷ್ಕ್ರಿಯತೆ ಮತ್ತು ಅನಧಿಕೃತ ಕ್ರಮದಿಂದಾಗಿ ಮುಸ್ಲಿಮ್ ವಿದ್ಯಾರ್ಥಿಗಳ ಮೂಲಭೂತ ಹಕ್ಕುಗಳ ಉಲ್ಲಂಘನೆಗೆ ಕಾರಣವಾದ ತನ್ನ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮವನ್ನು ಕೈಗೊಳ್ಳಬೇಕು.

ರಾಜ್ಯ ಮಾನವ ಹಕ್ಕುಗಳ ಆಯೋಗ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮತ್ತು ಕರ್ನಾಟಕ ರಾಜ್ಯ ಮಹಿಳಾ ಆಯೋಗಗಳು ಮಕ್ಕಳ ಶಿಕ್ಷಣ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕು. ಮುಸ್ಲಿಮ್ ಮಹಿಳೆಯರು ಮತ್ತು ಅಪ್ರಾಪ್ತ ವಯಸ್ಕರು, ಮತ್ತು ಮುಸ್ಲಿಮ್ ವಿದ್ಯಾರ್ಥಿಗಳ ವಿರುದ್ಧ ಕಿರುಕುಳ, ತಾರತಮ್ಯ ಮತ್ತು ದ್ವೇಷ ಭಾಷಣದ ಪ್ರಕರಣಗಳಲ್ಲಿ ಮಧ್ಯಪ್ರವೇಶಿಸಬೇಕು ಎಂದು ಪಿಯುಸಿಎಲ್ ಮನವಿ ಮಾಡಿದೆ.

Similar News