ನರ್ಸಿಂಗ್ ಕಾಲೇಜು ಪರಿಶೀಲನೆಗೆ ಪರಿಷತ್ ಉಪ ಸಮಿತಿ ರಚನೆ: ಯಾವುದೇ ತಪ್ಪಿಲ್ಲ ಎಂದ ಹೈಕೋರ್ಟ್

Update: 2023-01-09 16:41 GMT

ಬೆಂಗಳೂರು, ಜ.9: ಭಾರತೀಯ ನರ್ಸಿಂಗ್ ಕೌನ್ಸಿಲ್ ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ ಕರ್ನಾಟಕದಲ್ಲಿರುವ ನರ್ಸಿಂಗ್ ಕಾಲೇಜುಗಳು ನಡೆಯುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ಅವುಗಳಲ್ಲಿನ ಮೂಲ ಸೌಕರ್ಯಗಳ ಪರಿಶೀಲನೆಗೆ ವಿಧಾನ ಪರಿಷತ್ ಉಪ ಸಮಿತಿ ರಚಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ ಹಾಗೂ ಉಲ್ಲಂಘನೆಯಾಗಿಲ್ಲ ಎಂದು ಹೈಕೋರ್ಟ್ ತಿಳಿಸಿದೆ. 

ವಿಧಾನ ಪರಿಷತ್ ರಚನೆ ಮಾಡಿದ್ದ ಉಪ ಸಮಿತಿಯನ್ನು ಎತ್ತಿ ಹಿಡಿದಿದ್ದ ಕ್ರಮವನ್ನು ಪ್ರಶ್ನಿಸಿ ಕರ್ನಾಟಕ ಸ್ಟೇಟ್ ಅಸೋಸಿಯೇಷನ್ ಆಫ್ ಮ್ಯಾನೇಜ್‍ಮೆಂಟ್ ಆಫ್ ನಸಿರ್ಂಗ್ ಮತ್ತು ಅಲ್ಲೈಡ್ ಹೆಲ್ತ್ ಸೈನ್ಸ್ ಇನ್‍ಸ್ಟಿಟ್ಯೂಷನ್ ಮೇಲ್ಮನವಿ ಸಲ್ಲಿಸಿದ್ದವು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿದೆ.

ಅಲ್ಲದೆ, ವಿಧಾನ ಪರಿಷತ್ ಉಪ ಸಮಿತಿ ರಚನೆ ಮಾಡಿರುವ ಪ್ರಕ್ರಿಯೆಯಲ್ಲಿ ಯಾವುದೇ ಉಲ್ಲಂಘನೆಯಾಗಿಲ್ಲ ಎಂದು ಅಭಿಪ್ರಾಯ ಪಟ್ಟಿದೆ. ವಿಧಾನ ಪರಿಷತ್ ನರ್ಸಿಂಗ್ ಕಾಲೇಜುಗಳ ಮೇಲ್ವಿಚಾರಣೆಗಾಗಿ ಸಮಿತಿಯನ್ನು ರಚನೆ ಮಾಡಿಲ್ಲ. ಅದಕ್ಕೆ ಬದಲಾಗಿ ಕಾಲೇಜುಗಳ ನಿರ್ವಹಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಅಧ್ಯಯನ ಮಾಡುವುದಕ್ಕಾಗಿ ರಚಿಸಲಾಗಿದೆ.

ಈ ಉಪ ಸಮಿತಿಗೆ ಕಾಲೇಜುಗಳಲ್ಲಿನ ಮೂಲಸೌಕರ್ಯ ಸೇರಿದಂತೆ ಇತರ ಸಮಸ್ಯೆಗಳ ಪರಿಶೀಲನೆ ನಡೆಸಿ ವರದಿ ನೀಡುವ ಅಧಿಕಾರ ಮಾತ್ರವಿದೆ. ಆದರೆ, ಆ ವರದಿಯಲ್ಲಿರುವ ಅಂಶಗಳನ್ನು ಪರಿಗಣಿಸಿ ಕ್ರಮಕ್ಕೆ ಮುಂದಾಗುವ ಅಧಿಕಾರ ಇಲ್ಲ ಎಂದು ತಿಳಿಸಿದೆ. ಜೊತೆಗೆ, ಏಕಸದಸ್ಯ ಪೀಠ ಎಲ್ಲ ಆಯಾಮಗಳನ್ನು ಪರಿಶೀಲಿಸಿದ ಬಳಿಕ ಈ ಆದೇಶವನ್ನು ನೀಡಿದೆ. ಈ ಆದೇಶದಲ್ಲಿ ಯಾವುದೇ ನಿಯಮಗಳು ಉಲ್ಲಂಘನೆ ಆಗಿರುವುದು ಕಂಡು ಬಂದಿಲ್ಲ. ಹೀಗಾಗಿ ಪ್ರಕರಣದಲ್ಲಿ ಮಧ್ಯಪ್ರವೇಶಕ್ಕೆ ನಿರಾಕರಿಸುತ್ತಿರುವುದಾಗಿ ತಿಳಿಸಿದೆ.

Similar News