ಗ್ರೀನ್ ಹೈಡ್ರೋಜನ್ ಹಬ್ ಆಗಲಿದೆಯೆ ಭಾರತ?

Update: 2023-01-10 04:45 GMT

ಮೊನ್ನೆಯಷ್ಟೆ ರಾಷ್ಟ್ರೀಯ ಗ್ರೀನ್ ಹೈಡ್ರೋಜನ್ ಮಿಷನ್‌ಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಭಾರತವು ಗ್ರೀನ್ ಹೈಡ್ರೋಜನ್ ಉತ್ಪಾದನೆಯ ಜಾಗತಿಕ ಕೇಂದ್ರವಾಗುವ ಗುರಿ ಸಾಧನೆ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ.
ಮಿಷನ್‌ನ ಒಟ್ಟು ವೆಚ್ಚವು 19,744 ಕೋಟಿ ರೂ.ಗಳಾಗಿದ್ದು, ಅದರಲ್ಲಿ ಗ್ರೀನ್ ಹೈಡ್ರೋಜನ್ ಪರಿವರ್ತನೆ ಪ್ರಕ್ರಿಯೆಯಲ್ಲಿ ಅವಶ್ಯವಿರುವ ಪೂರ್ವಭಾವಿ ಕ್ರಮಗಳಿಗಾಗಿ 17,490 ಕೋಟಿ, ಮುಂಬರುವ ಪ್ರಾಯೋಗಿಕ ಯೋಜನೆಗಳಿಗೆ 1,466 ಕೋಟಿ, ಸಂಶೋಧನೆ ಮತ್ತು ಅಭಿವೃದ್ಧಿಗಾಗಿ 400 ಕೋಟಿ ಮತ್ತು ಯೋಜನೆಯ ಇತರ ಘಟಕಗಳಿಗೆ 388 ಕೋಟಿ ಹಂಚಿಕೆ ಮಾಡಲಾಗಿದೆ.

ಅಮೆರಿಕ ಹಾಗೂ ಯುರೋಪಿಯನ್ ಯೂನಿಯನ್ ಈಗಾಗಲೇ ಈ ಗ್ರೀನ್ ಹೈಡ್ರೋಜನ್ ಯೋಜನೆಗಳಿಗೆ ಬಿಲಿಯನ್ ಗಟ್ಟಲೆ ಡಾಲರ್ ಪ್ರೋತ್ಸಾಹ ಧನ ಘೋಷಿಸಿವೆ. ಹಾಗೆ ನೋಡಿದರೆ, ಗ್ರೀನ್ ಹೈಡ್ರೋಜನ್ ಯೋಜನೆಗೆ ಚಾಲನೆ ಸಿಕ್ಕಿದ್ದು 2021ರ ಆಗಸ್ಟ್ 15ರಂದು ಪ್ರಧಾನಿ ಮೋದಿ ಘೋಷಣೆ ಮಾಡಿದಾಗ. 2030ರ ವೇಳೆಗೆ ಪಳೆಯುಳಿಕೆ ರಹಿತ ಶಕ್ತಿಯ ಸಾಮರ್ಥ್ಯವನ್ನು 500 ಗಿಗಾವ್ಯಾಟ್‌ಗಳಿಗೆ ಹೆಚ್ಚಿಸುವ ಉದ್ದೇಶದಿಂದ ಭಾರತವು ಹಸಿರು ಹೈಡ್ರೋಜನ್ ಉತ್ಪಾದನೆ ಪ್ರಾರಂಭಿಸಿದೆ. ಮೇ 2022ರಲ್ಲಿ ಸ್ವಿಟ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಘೋಷಿಸಿದಂತೆ, ವಿಶ್ವದಲ್ಲೇ ಭಾರತವನ್ನು ಗ್ರೀನ್ ಹೈಡ್ರೋಜನ್ ಉತ್ಪಾದನೆಯ ಮುಂಚೂಣಿ ದೇಶವಾಗಿಸುವುದು ಗುರಿ. ಆಯಿಲ್ ಇಂಡಿಯಾ ಲಿಮಿಟೆಡ್ (ಐಔ) ಪೂರ್ವ ಅಸ್ಸಾಮಿನ ಜೋರ್ಹತ್‌ನಲ್ಲಿ ಭಾರತದ ಮೊದಲ ಶೇ.99.99 ಶುದ್ಧ ಗ್ರೀನ್ ಹೈಡ್ರೋಜನ್ ಸ್ಥಾವರವನ್ನು ಸ್ಥಾಪಿಸಿದ ಸುಮಾರು ಒಂದು ತಿಂಗಳ ನಂತರ ಅವರು ಈಮಾತು ಹೇಳಿದ್ದರು.

ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡುವ ಮತ್ತು ನವೀಕರಿಸಬಹುದಾದ ಶಕ್ತಿಯ ಮೂಲಗಳ ಬಳಕೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಇಟ್ಟಿರುವ ಹೆಜ್ಜೆ ಇದು. 2030ರ ವೇಳೆಗೆ ದೇಶದಲ್ಲಿ ಸುಮಾರು 125 ಗಿಗಾವ್ಯಾಟ್‌ನಷ್ಟು ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಸೇರಿಕೆಯಾಗಲಿದೆ ಮತ್ತು ಆ ಮೂಲಕ ವಾರ್ಷಿಕ ಕನಿಷ್ಠ 5 ಮಿಲಿಯನ್ ಮೆಟ್ರಿಕ್ ಟನ್ ಗ್ರೀನ್ ಹೈಡ್ರೋಜನ್ ಉತ್ಪಾದನಾ ಸಾಮರ್ಥ್ಯದ ಅಭಿವೃದ್ಧಿಯನ್ನು ಸಾಧಿಸುವ ಪ್ರಯತ್ನ ಈ ಯೋಜನೆ ಮೂಲಕ ಆಗಲಿದೆ ಎನ್ನುತ್ತಿದೆ ಸರಕಾರ.

ಈ ಯೋಜನೆಯಿಂದ 8 ರೂ. ಲಕ್ಷ ಕೋಟಿಗೂ ಹೆಚ್ಚು ಹೂಡಿಕೆ ಮತ್ತು 2030ರ ವೇಳೆಗೆ 6 ಲಕ್ಷ ಉದ್ಯೋಗಗಳ ಸೃಷ್ಟಿಯಾಗಲಿದೆ. 1 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಪಳೆಯುಳಿಕೆ ಇಂಧನ ಆಮದು ಕಡಿತ ಮತ್ತು 2030ರ ವೇಳೆಗೆ ವಾರ್ಷಿಕ ಹಸಿರುಮನೆ ಅನಿಲ ಹೊರಸೂಸುವಿಕೆ ಸುಮಾರು 50 ಮಿಲಿಯನ್ ಮೆಟ್ರಿಕ್ ಟನ್ ಕಡಿಮೆಯಾಗಲಿದೆ. ಗ್ರೀನ್ ಹೈಡ್ರೋಜನ್ ಮತ್ತು ಅದರ ಉತ್ಪನ್ನಗಳಿಗೆ ರಫ್ತು ಅವಕಾಶಗಳ ಸೃಷ್ಟಿ; ಕೈಗಾರಿಕೆ ಮತ್ತು ಇಂಧನ ಕ್ಷೇತ್ರಗಳಲ್ಲಿ ಡಿಕಾರ್ಬೊನೈಸೇಶನ್, ಆಮದು ಪಳೆಯುಳಿಕೆ ಇಂಧನದ ಮೇಲಿನ ಅವಲಂಬನೆಯನ್ನು ತಗ್ಗಿಸುವುದು ಮತ್ತು ಸ್ಥಳೀಯ ಉತ್ಪಾದನಾ ಸಾಮರ್ಥ್ಯಗಳ ಅಭಿವೃದ್ಧಿ, ಉದ್ಯೋಗಾವಕಾಶಗಳ ಸೃಷ್ಟಿ, ಅತ್ಯಾಧುನಿಕ ತಂತ್ರಜ್ಞಾನಗಳ ಅಭಿವೃದ್ಧಿ ಇವೆಲ್ಲವೂ ಈ ಯೋಜನೆಯ ಪ್ರಯೋಜನಗಳಾಗಲಿವೆ ಎಂದಿದೆ ಸರಕಾರ.

ಗ್ರೀನ್ ಹೈಡ್ರೋಜನ್ ಭವಿಷ್ಯದ ಇಂಧನವಾಗಲಿದೆ ಎಂಬುದು ಈಗಿನ ನಿರೀಕ್ಷೆ. ಬೇಡಿಕೆ ಸೃಷ್ಟಿ, ಉತ್ಪಾದನೆ, ಬಳಕೆ ಮತ್ತು ಹಸಿರು ಹೈಡ್ರೋಜನ್ ರಫ್ತಿಗೆ ಈ ಮಿಷನ್ ಅನುಕೂಲವಾಗಲಿದೆ. ದೊಡ್ಡ ಪ್ರಮಾಣದ ಉತ್ಪಾದನೆ ಅಥವಾ ಹೈಡ್ರೋಜನ್ ಬಳಕೆಯನ್ನು ಬೆಂಬಲಿಸುವ ಸಾಮರ್ಥ್ಯವಿರುವ ಪ್ರದೇಶಗಳನ್ನು ಗ್ರೀನ್ ಹೈಡ್ರೋಜನ್ ಹಬ್‌ಗಳಾಗಿ ಗುರುತಿಸಲಾಗುತ್ತದೆ ಮತ್ತು ಅಭಿವೃದ್ಧಿಪಡಿಸಲಾಗುತ್ತದೆ. ಗ್ರೀನ್ ಹೈಡ್ರೋಜನ್ ಪರಿಸರ ವ್ಯವಸ್ಥೆಯನ್ನು ಬೆಂಬಲಿಸಲು ಸಕ್ರಿಯಗೊಳಿಸುವ ನೀತಿ ಚೌಕಟ್ಟನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೂಡ ಕೆಲಸ ನಡೆದಿದೆ. ಸಮಯ ಮಿತಿಯ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಸೂಕ್ತವಾಗುವಂತೆ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳು ಇರಲಿವೆ. ಸಂಘಟಿತ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನೂ ಕೈಗೊಳ್ಳಲಾಗುವುದು ಎಂದು ಸರಕಾರ ಹೇಳಿದೆ.

ಗ್ರೀನ್ ಹೈಡ್ರೋಜನ್ ಯೋಜನೆಯ ಉದ್ದೇಶಗಳ ಯಶಸ್ವಿ ಸಾಧನೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರಕಾರಗಳ ಎಲ್ಲಾ ಸಂಬಂಧಪಟ್ಟ ಸಚಿವಾಲಯಗಳು, ಇಲಾಖೆಗಳು, ಏಜೆನ್ಸಿಗಳು ಮತ್ತು ಸಂಸ್ಥೆಗಳು ಕೇಂದ್ರೀಕೃತ ಮತ್ತು ಸಂಘಟಿತ ಕ್ರಮಗಳನ್ನು ಕೈಗೊಳ್ಳಲಿವೆ. ಒಟ್ಟಾರೆ ಸಮನ್ವಯ ಮತ್ತು ಅನುಷ್ಠಾನಕ್ಕೆ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಜವಾಬ್ದಾರವಾಗಿರುತ್ತದೆ.

ಗ್ರೀನ್ ಹೈಡ್ರೋಜನ್‌ಗೆ ಏಕಿಷ್ಟು ಮಹತ್ವ? 
ಇದು ಸಾಮಾನ್ಯವಾಗಿ ಏಳುವ ಪ್ರಶ್ನೆಯಾಗಿದೆ. ಇದಕ್ಕೆ ಮುಖ್ಯ ಹಿನ್ನೆಲೆ 2015ರ ಪ್ಯಾರಿಸ್ ಒಪ್ಪಂದ. ಜಾಗತಿಕ ತಾಪಮಾನವನ್ನು ತೀವ್ರವಾಗಿ ತಗ್ಗಿಸಬೇಕಾದ ಗುರಿಯೊಂದಿಗೆ ಹವಾಮಾನ ಬದಲಾವಣೆಯ ಮೇಲೆ ಕಾನೂನುನಿರ್ಬಂಧ ವಿಧಿಸುವ ಅಂತರ್‌ರಾಷ್ಟ್ರೀಯ ಒಪ್ಪಂದ ಇದಾಗಿದೆ. ಇದರ ಅಡಿಯಲ್ಲಿ, ಭಾರತವು ತನ್ನ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಶೇ.33ರಿಂದ 35ರಷ್ಟು ಕಡಿಮೆ ಮಾಡಲು ಬದ್ಧವಾಗಿದೆ. 2021ರ ಗ್ಲಾಸ್ಗೋ ಶೃಂಗಸಭೆಯಲ್ಲಿ ಭಾರತವು 2070ರ ವೇಳೆಗೆ ಪಳೆಯುಳಿಕೆ ಇಂಧನ ಮತ್ತು ಆಮದು ಅವಲಂಬಿತ ಆರ್ಥಿಕತೆಯಿಂದ ನಿವ್ವಳ ಶೂನ್ಯ ಆರ್ಥಿಕತೆಗೆ ಚಲಿಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸಿತು. ಭಾರತದ ಸರಾಸರಿ ವಾರ್ಷಿಕ ಇಂಧನ ಆಮದು ಮೊತ್ತ 8,22,786 ಕೋಟಿಗಿಂತ ಹೆಚ್ಚು ಮತ್ತು ಪಳೆಯುಳಿಕೆ ಇಂಧನದ ಬಳಕೆ ಹೆಚ್ಚಿರುವುದು ಹೆಚ್ಚಿನ ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆಗೆ ಕಾರಣವಾಗಿದೆ. ಇದು ಜಾಗತಿಕ ಕಾರ್ಬನ್ ಡೈಆಕ್ಸೈಡ್ ಹೊರೆಯ ಸುಮಾರು ಶೇ.7ರಷ್ಟಿದೆ. 2047ರ ವೇಳೆಗೆ ಇಂಧನ ಸ್ವಾವಲಂಬಿಯಾಗಲು ಗ್ರೀನ್ ಹೈಡ್ರೋಜನ್ ಅನ್ನು ಪರ್ಯಾಯ ಇಂಧನವಾಗಿ ಪರಿಚಯಿಸುವ ಅಗತ್ಯವನ್ನು ಸರಕಾರವು ಮನಗಂಡಿದೆ.

ಸದ್ಯ ಎಷ್ಟು ಪ್ರಮಾಣದ ಉತ್ಪಾದನೆ?
ಪೂರ್ವ ಅಸ್ಸಾಮಿನ ದುಲಿಯಾಜಾನ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸಾರ್ವಜನಿಕ ವಲಯದ ಆಯಿಲ್ ಇಂಡಿಯಾ ಲಿಮಿಟೆಡ್ ಸಂಸ್ಥೆ, ದೇಶವನ್ನು ಮುಂಚೂಣಿ ಸಾಮರ್ಥ್ಯದ ಉತ್ಪಾದನೆಗೆ ಸಿದ್ಧಪಡಿಸುವ ಗುರಿಗೆ ಅನುಗುಣವಾಗಿ ದೇಶದ ಮೊದಲ ಶೇ.99.99 ಶುದ್ಧ ಗ್ರೀನ್ ಹೈಡ್ರೋಜನ್ ಸ್ಥಾವರವನ್ನು 2022ರ ಎಪ್ರಿಲ್20ರಂದು ಸ್ಥಾಪಿಸಿತು. ಹೈಡ್ರೋಜನ್ ಉತ್ಪಾದನೆ, ಸಂಗ್ರಹಣೆ ಮತ್ತು ಸಾಗಣೆಯ ವೆಚ್ಚದಲ್ಲಿ ಕಡಿತಕ್ಕಾಗಿ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯತ್ನಗಳು ನಡೆಯುತ್ತಿವೆ. ಪೂರ್ವ ಅಸ್ಸಾಮಿನಲ್ಲಿರುವ ಪೆಟ್ರೋಲಿಯಂ ಪರಿಶೋಧನೆಯ ಪ್ರಮುಖ ಜೋರ್ಹತ್ ಪಂಪ್ ಸ್ಟೇಷನ್‌ನಲ್ಲಿ ಈ ಸ್ಥಾವರವನ್ನು ಸ್ಥಾಪಿಸಲಾಗಿದೆ.
500 ಕಿಲೋವ್ಯಾಟ್ ಸೌರ ಸ್ಥಾವರದಿಂದ ಚಾಲಿತವಾಗಿರುವ ಗ್ರೀನ್ ಹೈಡ್ರೋಜನ್ ಘಟಕವು ದಿನಕ್ಕೆ 10 ಕೆಜಿ ಹೈಡ್ರೋಜನ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಅದನ್ನು ದಿನಕ್ಕೆ 30 ಕೆಜಿವರೆಗೂ ಹೆಚ್ಚಿಸಬಹುದಾಗಿದೆ. ಘಟಕದಿಂದ ಉತ್ಪತ್ತಿಯಾಗುವ ಹಸಿರು ಹೈಡ್ರೋಜನ್ ಅನ್ನು ಅಸ್ಸಾಂ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ ಒದಗಿಸುವ ನೈಸರ್ಗಿಕ ಅನಿಲದೊಂದಿಗೆ ಮಿಶ್ರಣ ಮಾಡಲು ಮತ್ತು ಜೋರ್ಹತ್ ಪ್ರದೇಶಕ್ಕೆ ದೇಶೀಯ ಮತ್ತು ಕೈಗಾರಿಕಾ ಬಳಕೆಗಾಗಿ ಮಿಶ್ರಿತ ಅನಿಲವನ್ನು ಪೂರೈಸಲು ವಿಶೇಷವಾದ ಬ್ಲೆಂಡರ್ ಅನ್ನು ಸಹ ಸ್ಥಾಪಿಸಲಾಗಿದೆ. ಅಸ್ತಿತ್ವದಲ್ಲಿರುವ ಸೌಲಭ್ಯದ ಮೇಲೆ ಮಿಶ್ರಿತ ಅನಿಲದ ಪರಿಣಾಮವನ್ನು ನಿರ್ಣಯಿಸಲು ಈ ಕಂಪೆನಿಯು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ಗುವಾಹಟಿಯ ತಜ್ಞರನ್ನು ತೊಡಗಿಸಿಕೊಂಡಿದೆ.

ಗ್ರೀನ್ ಹೈಡ್ರೋಜನ್ ಅನುಕೂಲಗಳು ಏನು?
ಗ್ರೀನ್ ಹೈಡ್ರೋಜನ್ ಅನ್ನು ದೀರ್ಘಕಾಲದವರೆಗೆ ಸಂಗ್ರಹಿಸಬಹುದು. ಸಂಗ್ರಹಿಸಿದ ಹೈಡ್ರೋಜನ್ ಅನ್ನು ಇಂಧನ ಕೋಶಗಳನ್ನು ಬಳಸಿ ವಿದ್ಯುತ್ ಉತ್ಪಾದಿಸಲು ಬಳಸಬಹುದು. ಇಂಧನ ಕೋಶದಲ್ಲಿ, ರಾಸಾಯನಿಕದ ಶಕ್ತಿಯನ್ನು ವಿದ್ಯುತ್ ಆಗಿ ಪರಿವರ್ತಿಸುವ ಸಾಧನ, ಹೈಡ್ರೋಜನ್ ಅನಿಲವು ಆಮ್ಲಜನಕದೊಂದಿಗೆ ಪ್ರತಿಕ್ರಿಯಿಸಿ ವಿದ್ಯುತ್ ಮತ್ತು ನೀರಿನ ಆವಿಯನ್ನು ಉತ್ಪಾದಿಸುತ್ತದೆ. ಹೈಡ್ರೋಜನ್, ಹೀಗಾಗಿ, ಶಕ್ತಿಯ ಶೇಖರಣಾ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಗ್ರಿಡ್ ಸ್ಥಿರತೆಗೆ ಕೊಡುಗೆ ನೀಡುತ್ತದೆ. ಗ್ರೀನ್ ಹೈಡ್ರೋಜನ್ ತಯಾರಿಕೆ ವೇಳೆ ಉಪ-ಉತ್ಪನ್ನವಾಗಿ ಉತ್ಪತ್ತಿಯಾಗುವ ಆಮ್ಲಜನಕವನ್ನು ಕೈಗಾರಿಕಾ ಮತ್ತು ವೈದ್ಯಕೀಯ ಅನ್ವಯಿಕೆಗಳಿಗೆ ಅಥವಾ ಪರಿಸರವನ್ನು ಸಮೃದ್ಧಗೊಳಿಸಲು ಬಳಸುವ ಮೂಲಕ ಹಣಗಳಿಸಬಹುದು ಎಂದು ತಜ್ಞರು ಹೇಳುತ್ತಾರೆ. 1 ಕೆಜಿ ಹೈಡ್ರೋಜನ್‌ಗೆ 8 ಕೆಜಿ ಆಮ್ಲಜನಕವನ್ನು ಉತ್ಪಾದಿಸಲಾಗುತ್ತದೆ.
ಭಾರತದಲ್ಲಿ ಕೈಗಾರಿಕಾ ವಲಯದಲ್ಲಿ ಇಂಧನ ವಿನಿಯೋಗವು ಬಹುಪಾಲು ಹೊಂದಿದ್ದು ಶೇ. 56ರಷ್ಟು ಇಂಧನ ಈ ವಲಯವೊಂದರಲ್ಲೇ ಖರ್ಚಾಗುತ್ತಿದೆ. ನಂತರದ ಸ್ಥಾನಗಳಲ್ಲಿ ವಸತಿ, ಕೃಷಿ, ವಾಣಿಜ್ಯ ಮತ್ತು ಸಾರ್ವಜನಿಕ ವಲಯಗಳು ಬರುತ್ತಿದ್ದು, ಆ ಕ್ಷೇತ್ರಗಳಲ್ಲಿ ಬಳಕೆಯಾಗುವ ಇಂಧನ ಶೇ. 31ರಷ್ಟು. ಸಾರಿಗೆ ವಲಯದಲ್ಲಿ ಶೇ.10ರಷ್ಟು ಇಂಧನ ವ್ಯಯವಾಗುತ್ತದೆ. ಕೈಗಾರಿಕಾ ವಲಯದಲ್ಲಿ ಕಬ್ಬಿಣ ಹಾಗೂ ಉಕ್ಕು ಶೇ.17ರಷ್ಟನ್ನು ಬಳಕೆ ಮಾಡಿದರೆ ರಾಸಾಯನಿಕಗಳ ತಯಾರಿಕೆಯಲ್ಲಿ ಶೇ.4 ಮತ್ತು ನಿರ್ಮಾಣದಲ್ಲಿ ಶೇ. 2ರಷ್ಟು ಇಂಧನ ವಿನಿಯೋಗವಾಗುತ್ತಿವೆ.

ಪರಿಸರ ರಕ್ಷೆ ಹೇಗೆ?
ಕೈಗಾರಿಕಾ ವಲಯವು ಇಂಧನ ಬಳಕೆಯನ್ನು ವ್ಯಾಪಕವಾಗಿ ಮಾಡುವುದ ರಿಂದ, ಇಂಗಾಲವನ್ನು ಹೊರಸೂಸುವ ಸಂಪನ್ಮೂಲಗಳ ಬಳಕೆಗೆ ಬದಲಿಯಾದದ್ದೊಂದರ ಅಗತ್ಯವಿದೆ. ಗ್ರೀನ್ ಹೈಡ್ರೋಜನ್ ಆ ಅಗತ್ಯವನ್ನು ಪೂರೈಸಲಿದೆ. ಕೃಷಿಗೆ ಬಳಸುವ ರಸಗೊಬ್ಬರ ತಯಾರಿಕೆಯಲ್ಲಿ ಕೂಡ ಗ್ರೀನ್ ಹೈಡ್ರೋಜನ್ ಪಾಲು ಮಹತ್ತರವಾಗಿದ್ದು, ಗ್ರೀನ್ ಹೈಡ್ರೋಜನ್‌ನಿಂದ ಉತ್ಪತ್ತಿಯಾಗುವ ಅಮೋನಿಯವು ನೈಸರ್ಗಿಕ ಅನಿಲ ಆಧಾರಿತ ಅಮೋನಿಯ ವಾಗಿ ಮಾರ್ಪಡುವುದು ಮಾತ್ರವಲ್ಲ, ಹೈಡ್ರೋಜನ್ ಸಂಗ್ರಹದಂತೆಯೇ ಕಾರ್ಯನಿರ್ವಹಿಸುತ್ತದೆ. ಪ್ಲಾಸ್ಟಿಕ್, ಬಣ್ಣಗಳು, ಆಟೋ ಬಿಡಿಭಾಗಗಳು ಹಾಗೂ ನಿರ್ಮಾಣ ಸಾಮಗ್ರಿಗಳನ್ನು ಗ್ರೀನ್ ಹೈಡ್ರೋಜನ್‌ನಿಂದ ತಯಾರಿಸಬಹುದಾಗಿದೆ.
ಸದ್ಯಕ್ಕೆ ಗ್ರೀನ್ ಹೈಡ್ರೋಜನ್ ತಯಾರಿಕಾ ವೆಚ್ಚ ಬಹಳ ಹೆಚ್ಚಿದೆ. ಈಗ ಪ್ರತೀ ಕೆಜಿ ಗ್ರೀನ್ ಹೈಡ್ರೋಜನ್ ತಯಾರಿಸಲು 350ರಿಂದ 400 ರೂ. ಬೇಕು. ಇದು 100 ರೂಪಾಯಿಗಿಂತ ಕಡಿಮೆಯಾಗಬೇಕು. ಸರಕಾರದ ಗುರಿ ಇದೇ. ಆ ನಿಟ್ಟಿನ ಶೋಧನೆಗಳು ನಡೆದಿವೆ, ನೀರಿನ ವಿದ್ಯುತ್ ವಿಭಜನೆಯ ತಂತ್ರಜ್ಞಾನದ ಸಾಮರ್ಥ್ಯಗಳನ್ನು ಹೆಚ್ಚಿಸುವ ಅಂಶದತ್ತ ಗಮನ ಹರಿಸಬೇಕಾಗಿದೆ. ಸ್ಥಳೀಯ ಮಟ್ಟದಲ್ಲಿ ಹೈಡ್ರೋಜನ್ ಸಂಗ್ರಹಣೆಯತ್ತ ಗಮನ ಹರಿಸುವುದು ಸಬ್ಸಿಡಿಗಳು ಹಾಗೂ ತೆರಿಗೆ ಪ್ರೋತ್ಸಾಹಕಗಳನ್ನು ಒದಗಿಸುವುದು ಹೀಗೆ ಗ್ರೀನ್ ಹೈಡ್ರೋಜನ್ ಅನ್ನು ಕೈಗೆಟಕುವ ವೆಚ್ಚದಲ್ಲಿ ಉತ್ಪಾದಿಸುವ ಸಾಧ್ಯತೆಗಳಂತೂ ಇವೆ. ರಿಲಯನ್ಸ್, ಅದಾನಿ ಮತ್ತಿತರ ಕಾರ್ಪೊರೇಟ್ ಕಂಪೆನಿಗಳೂ ಇದರಲ್ಲಿ ಆಸಕ್ತಿ ತೋರಿಸಿವೆ.


ಗ್ರೀನ್ ಹೈಡ್ರೋಜನ್ ಎಂದರೇನು?

ಹವಾಮಾನ ವೈಪರೀತ್ಯ ಹಾಗೂ ಜಾಗತಿಕ ತಾಪಮಾನ ಏರಿಕೆ ಈಗ ಇಡೀ ಜಗತ್ತಿನ ಎದುರು ದೊಡ್ಡ ಸವಾಲಾಗಿ ನಿಂತಿದೆ. ಅವು ನಿರಂತರವಾಗಿ ಆರ್ಥಿಕತೆ ಹಾಗೂ ಶಕ್ತಿಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರು ತ್ತಿದ್ದು, ಆರ್ಥಿಕ ಬೆಳವಣಿಗೆ ಹಾಗೂ ಪರಿಸರ ಸಂರಕ್ಷಣೆ ಇವೆರಡನ್ನೂ ಸರಿದೂಗಿಸಿಕೊಂಡು ಹೋಗುವುದು ಈಗಿನ ತುರ್ತು ಅಗತ್ಯವಾಗಿದೆ. ಆರ್ಥಿಕ ಬೆಳವಣಿಗೆ ನಿಲ್ಲಬಾರದು, ಜೊತೆಗೆ ಪರಿಸರ ಸಂರಕ್ಷಣೆಯೂ ಆಗಬೇಕು - ಇದಕ್ಕಾಗಿ ಜಾರಿಗೆ ತರಲಾಗಿರುವ ಕೆಲ ಯೋಜನೆಗಳಲ್ಲಿ ಗ್ರೀನ್ ಹೈಡ್ರೋಜನ್ ಯೋಜನೆ ಕೂಡ ಒಂದು.

ಹೈಡ್ರೋಜನ್ ಭೂಮಿಯ ಮೇಲೆ ಹೆಚ್ಚು ಹೇರಳವಾಗಿರುವ ರಾಸಾಯನಿಕ ಅಂಶವಾಗಿದೆ, ಆದರೆ ಇದರ ಒಂದು ಸಮಸ್ಯೆಯೆಂದರೆ, ಇದು ಪರಿಸರದಲ್ಲಿ ಮುಕ್ತವಾಗಿ ಲಭ್ಯವಿಲ್ಲ. ಇದು ಯಾವಾಗಲೂ ಇತರ ಅಂಶಗಳೊಂದಿಗೆ ಸಂಯೋಜಿತವಾಗಿರುತ್ತದೆ. ಇಂಧನಕ್ಕಾಗಿ ಬಳಸಲು ಅದನ್ನು ಅದು ಸಂಯೋಜನೆ ಗೊಂಡಿರುವ ಇತರ ಅಂಶಗಳಿಂದ ಮೊದಲು ಬಿಡುಗಡೆ ಮಾಡಬೇಕು. ಈ ಪ್ರತ್ಯೇಕಗೊಳಿಸುವ ಪ್ರಕ್ರಿಯೆಯನ್ನು ಆಧರಿಸಿ ಹೈಡ್ರೋಜನ್ ಮೂರು ಬಣ್ಣಗಳಲ್ಲಿ ಗುರುತಿಸಲಾಗುತ್ತದೆ. ಪಳೆಯುಳಿಕೆ ಇಂಧನದಿಂದ ಉತ್ಪಾದಿಸುವ ಹೈಡ್ರೋಜನ್ ಗ್ರೇ ಹೈಡ್ರೋಜನ್ ಅಂದರೆ ಬೂದು ಬಣ್ಣದ ಜಲಜನಕ. ಈಗ ಅತಿಹೆಚ್ಚು ಹೈಡ್ರೋಜನ್ ಉತ್ಪಾದನೆ ಆಗುತ್ತಿರುವುದು ಇದರಿಂದಲೇ. ಇದೇ ಪಳೆಯುಳಿಕೆ ಇಂಧನದಿಂದ ಉತ್ಪಾದಿಸಿ ಆಗ ಹೊರಬರುವ ಇಂಗಾಲವನ್ನು ಅಲ್ಲೇ ತಡೆದು, ಶೇಖರಿಸಿಡುವ ಕಾರ್ಬನ್ ಕ್ಯಾಪ್ಚರ್ ತಂತ್ರಜ್ಞಾನ ಬಳಸಿದರೆ ಆಗ ಸಿಗುವ ಹೈಡ್ರೋಜನ್ ಬ್ಲೂ ಹೈಡ್ರೋಜನ್. ಆದರೆ ನವೀಕರಿಸಬಹುದಾದ ಇಂಧನ ಮೂಲಗಳಿಂದ ಎಲೆಕ್ಟ್ರೋಲೈಸರ್ ಬಳಸಿ ಉತ್ಪಾದಿಸುವ ಹೈಡ್ರೋಜನ್ ಗ್ರೀನ್ ಹೈಡ್ರೋಜನ್. ಈಗ ಎಲ್ಲರೂ ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಬೇಕು ಎಂದು ಹೇಳುತ್ತಿರುವುದು ಈ ಪರಿಸರ ಸ್ನೇಹಿ ಗ್ರೀನ್ ಹೈಡ್ರೋಜನ್. ಗ್ರೀನ್ ಹೈಡ್ರೋಜನ್ ಅನ್ನು ಸೌರ ಅಥವಾ ಗಾಳಿಯಂತಹ ನವೀಕರಿಸಬಹುದಾದ ಶಕ್ತಿ ಬಳಸಿ ಉತ್ಪಾದಿಸಲಾಗುತ್ತದೆ. ನೀರಿನ ಪ್ರಮುಖ ಅಂಶಗಳಾದ ಹೈಡ್ರೋಜನ್ ಹಾಗೂ ಆಮ್ಲಜನಕವನ್ನು ವಿಭಜಿಸಿ ವಾತಾವರಣಕ್ಕೆ ಆಮ್ಲಜನಕವನ್ನು ಉಪ ಉತ್ಪನ್ನವಾಗಿ ಬಿಡುಗಡೆ ಮಾಡುತ್ತದೆ. ಹೈಡ್ರೋಜನ್ ಶಕ್ತಿಯನ್ನು ಗ್ಯಾಸ್ ರೂಪದಲ್ಲಿ ಇಲ್ಲವೇ ನೈಸರ್ಗಿಕ ಅನಿಲ ಪೈಪ್‌ಗಳ ಮೂಲಕವೂ ತಲುಪಿಸಬಹುದಾಗಿದೆ.