ಅಗಮೆಮ್ನಾನ್‌ನ ಕ್ರೌರ್ಯವೂ, ಇಫಿಜೀನಿಯಾಳ ಅಸಹಾಯಕತೆಯೂ...

Update: 2023-01-10 04:32 GMT

ಗ್ರೀಕ್ ನಾಟಕಕಾರ ಯುರಿಪಿಡಿಸ್‌ನ ‘ಔಲೀಸ್‌ನಲ್ಲಿ ಇಫಿಜೀನಿಯಾ’ ನಾಟಕ ಅಗಮೆಮ್ನಾನ್ ರಾಜನ ಸಂದಿಗ್ಧತೆ, ಮೂರ್ಖತನ ಮತ್ತು ಯುದ್ಧದ ಕಾರಣಕ್ಕೆ ತನ್ನ ಮಗಳನ್ನೇ ಬಲಿಕೊಡುವ ಕ್ರೌರ್ಯವನ್ನು ಮುನ್ನೆಲೆಗೆ ತರುತ್ತಲೇ ಆತನ ಮಗಳಾದ ಇಫಿಜೀನಿಯಾಳಿಗಿರುವ ಸಾಮಾಜಿಕ ಬದ್ಧ್ದತೆ ಮತ್ತು ಆಕೆಯ ತಾಯಿಯ ತಾಯ್ತನದ ಆಳ ಅಗಲಗಳನ್ನು ಚಿತ್ರಿಸುತ್ತದೆ. ಗ್ರೀಕ್‌ನ ಇನ್ನಿತರ ರುದ್ರ ಮಹಾನಾಟಕಗಳ ಹಾಗೆಯೇ ಇದು ಗ್ರೀಕ್ ಪುರಾಣವನ್ನು ಆಧರಿಸಿದ ಒಂದು ದುರಂತ ನಾಟಕ. ಸುಮಾರು ೨,೫೦೦ಕ್ಕೂ ಹೆಚ್ಚು ವರ್ಷಗಳ ಹಿಂದೆ ನಡೆದಿರಬಹುದಾದ ಈ ನಾಟಕದ ಕಥೆ ಇವತ್ತಿನ ಕಥೆಯೂ ಆಗಬಹುದಾದುದು ಕಾಲದ ಸೋಜಿಗ.

ಪ್ರಾಚೀನ ಗ್ರೀಕ್‌ನ ಮೂರು ಮಹಾನಾಟಕಕಾರರಲ್ಲಿ ಯುರಿಪಿಡಿಸ್ ಒಬ್ಬ. ಎಸ್ಕಲಸ್ ಹಾಗೂ ಸೊಫೊಕ್ಲಿಸ್ ಇನ್ನಿಬ್ಬರು. ಯುರಿಪಿಡಿಸ್ ರಚಿಸಿದ ತೊಂಭತ್ತಕ್ಕೂ ಹೆಚ್ಚು ನಾಟಕಗಳಲ್ಲಿ ಲಭ್ಯವಿರುವ ಒಂದು ಪ್ರಮುಖ ನಾಟಕ ‘ಔಲೀಸ್‌ನಲ್ಲಿ ಇಫಿಜೀನಿಯಾ’. ಇದು ಕಾವ್ಯ-ಕಥನಗಳಲ್ಲಿ ಕಟ್ಟಿದ ನಾಟಕ. ಇದರ ಮೊದಲ ಪ್ರದರ್ಶನ ಯುರಿಪಿಡಿಸ್‌ನ ಮರಣದ ನಂತರ ಏರ್ಪಾಡಾಯಿತೆಂದು ದಾಖಲಾಗಿದೆ.

ಅಧಿಕಾರ ಮತ್ತು ಆಡಳಿತದ ಮೋಹಕ್ಕೆ ಒಳಗಾದ ನಾಯಕನೊಬ್ಬ ಅದನ್ನು ಉಳಿಸಿಕೊಳ್ಳಲು ಯಾವ ಮೃಗೀಯ ಕ್ರೌರ್ಯಕ್ಕೂ ಹೇಸದಿರುವುದು ಒಂದು ಚಾರಿತ್ರಿಕ ಸತ್ಯಸಂಗತಿ ಮತ್ತು ಇವತ್ತಿಗೂ ಪ್ರಸಕ್ತ. ಯುದ್ಧದ ಹಪಹಪಿಯಲ್ಲಿ ತನ್ನ ಮಗಳನ್ನೇ ಬಲಿಕೊಡುವ ಅತೀ ಘೋರ ಮನಃಸ್ಥಿತಿ ಕೇವಲ ಈ ದುರಂತ ನಾಟಕದ ಪ್ರತಿಮಾಸೃಷ್ಟಿ ಮಾತ್ರ ಅಲ್ಲ, ಬದಲಿಗೆ ಆಧುನಿಕ ಜಗತ್ತಿನ ನೈಜ ವಾಸ್ತವವೂ ಹೌದು. ಯುದ್ಧಕ್ಕಾಗಿ ನಡೆಯುವ ಅನ್ಯಾಯ, ಕ್ರೌರ್ಯ, ಅವಿವೇಕತನ ಮತ್ತು ಕಟ್ಟಕಡೆಗೆ ಒದಗುವ ಸರ್ವನಾಶ ಈ ಯಾವುವು ನಮಗೆ ಯಾವ ಕಾಲಕ್ಕೂ ಹಿಂಸೆಯಾಗಿ ತೋರದೆ ರಾಜಧರ್ಮದಲ್ಲಿ ಬರಬಹುದಾದ ಸಹಜ ಅಂಶಗಳಂತೆ ಕಾಣಿಸುತ್ತವೆ. ಪ್ರಾಚೀನಕಾಲದಿಂದಲೂ ನಡೆದುಬಂದಿರುವ ರೀತಿಯಿದು.

ನಾಟಕದ ಕಥೆ ಹೀಗಿದೆ. ಹೆಲೆನ್ ಎಂಬ ಸುಂದರಿಯ ಕಾರಣದಿಂದ ಟ್ರಾಯ್ ನಗರದ ವಿರುದ್ಧ ಟ್ರೋಜನ್ ಯುದ್ಧಕ್ಕೆ ಸನ್ನದ್ಧವಾಗಿ ಔಲೀಸ್ ನಗರದ ಬಂದರಿನಲ್ಲಿ ಗ್ರೀಕ್ ಸೈನ್ಯ ಬೀಡುಬಿಟ್ಟಿದೆ. ಇದೊಂದು ಕಾಮ-ಪ್ರಚೋದಿತ ಯುದ್ಧ! ಇನ್ನೇನು ಟ್ರಾಯ್‌ಗೆ ಸೈನ್ಯ ಸಾಗಬೇಕು ಅಷ್ಟರಲ್ಲಿ ಸೈನ್ಯದ ಹಡಗುಗಳ ಸುಗಮ ಪ್ರಯಾಣಕ್ಕೆ ಉತ್ತಮ ಹವಾಗುಣ ಸಿಗಬೇಕೆಂದರೆ ಸೇನೆಯ ಮುಖ್ಯಸ್ಥನೂ ಹಾಗೂ ಗ್ರೀಸ್ ನಾಡಿನ ದೊರೆಯೂ ಆದ ಅಗಮೆಮ್ನಾನ್ ತನ್ನ ಹಿರಿಯ ಮಗಳು ಇಫಿಜೀನಿಯಾಳನ್ನು ಬಲಿಕೊಡಬೇಕೆಂದು ದೇವವಾಣಿ ನುಡಿಯುತ್ತದೆ. ಈ ಆಜ್ಞೆಯಿಂದ ಅಗಮೆಮ್ನಾನ್ ಸ್ವಲ್ಪವಿಚಲಿತನಾದರೂ ಕಡೆಗೆ ತನ್ನ ಅಧಿಕಾರ ಮತ್ತು ಗ್ರೀಕ್‌ನ ಹಿತಕ್ಕಾಗಿ ಬಲಿಗೆ ಒಪ್ಪಿತನ್ನ ಮಗಳನ್ನು ಸೇನೆಯ ಬಿಡಾರಕ್ಕೆ ಕರೆತರಲು ಅಗಮೆಮ್ನಾನ್ ಮೋಸದ ಉಪಾಯ ಮಾಡುತ್ತಾನೆ. ಈ ತಂತ್ರದ ಭಾಗವಾಗಿಯೇ ಇಫಿಜೀನಿಯಾಳನ್ನು ತನ್ನ ಆಪ್ತ ಅಖಿಲಿಸ್‌ಗೆ ಕೊಟ್ಟು ಮದುವೆ ಮಾಡುವುದಾಗಿ ಹುಸಿ ಆಶ್ವಾಸನೆಯಿತ್ತು ತನ್ನ ಮಡದಿ ಕ್ಲೈಟೆನ್ಮೆಸ್ಟ್ರಾಳಿಗೆ ಇಫಿಜೀನಿಯಾಳನ್ನು ಈ ಕೂಡಲೇ ಕರೆತರಲು ಸಂದೇಶ ರವಾನಿಸುತ್ತಾನೆ. 

ನಂತರದ ಸಂದಿಗ್ಧದಲ್ಲಿ ತನ್ನ ಮಡದಿಗೆ ಬರಬಾರದೆಂದು ಇನ್ನೊಂದು ಸಂದೇಶ ಕಳುಹಿಸುತ್ತಾನಾದರೂ ಮೆನೆಲೆಸ್‌ನ ಕುಟಿಲ ತಂತ್ರದಿಂದ ಆ ಸಂದೇಶ ಆತನ ಮಡದಿಗೆ ತಲುಪುವುದಿಲ್ಲ. ಮೆನೆಲೆಸ್ ಅಗಮೆಮ್ನಾನ್‌ನ ಸಹೋದರ ಮತ್ತು ಟ್ರಾಯ್‌ನ ಸುಂದರಿ ಹೆಲನ್‌ಳ ಗಂಡ. ಹೆಲನ್‌ಳನ್ನು ಅಪಹರಿಸಲಾಗಿದೆ ಮತ್ತು ಆಕೆಯನ್ನು ಬಿಡಿಸಿ ವಾಪಸು ತರಬೇಕೆಂದೇ ಮೆನೆಲೆಸ್ ಯುದ್ಧಕ್ಕೆ ಸಜ್ಜಾಗಿದ್ದಾನೆ. ಇಫಿಜೀನಿಯಾ ಔಲಿಸ್‌ಗೆ ಬಂದ ಮರುಗಳಿಗೆಯಲ್ಲಿ ಆಕೆಗೆ ಈ ಕುಟಿಲ ತಂತ್ರಗಳೆಲ್ಲಾ ತಿಳಿಯುತ್ತದೆ ಮತ್ತು ಮೊದಲಿಗೆ ಪ್ರತಿಭಟಿಸುತ್ತಾಳಾದರೂ ನಂತರ ನಿಧಾನಕ್ಕೆ ಗ್ರೀಸ್ ನಾಡಿನ ಹಿತದೃಷ್ಟಿ, ತನ್ನ ವ್ಯಕ್ತಿತ್ವದ ಘನತೆ ಮತ್ತು ಅಖಿಲಿಸ್‌ನ ಪ್ರಾಣ ಉಳಿಸಲು ತನ್ನ ಮನಸ್ಸನ್ನು ಬದಲಿಸುತ್ತಾಳೆ. ಹಾಗೆನೋಡಿದರೆ ಇಫಿಜೀನಿಯಾಳಿಗೆ ಬದುಕುಳಿಯುವ ಬೇರೆ ಸಾಧ್ಯತೆಗಳಾಗಲೀ ಅಥವಾ ಆಯ್ಕೆಗಳಾಗಲೀ ಇರುವುದಿಲ್ಲ. ಇತ್ತ ಕ್ಲೈಟೆನ್ಮೆಸ್ಟ್ರಾ ಮತ್ತು ಅಖಿಲಿಸ್ ಇಬ್ಬರೂ ಈ ನರಬಲಿಯನ್ನು ತಡೆಯಲು ಸಾಕಷ್ಟು ಪ್ರಯತ್ನಿಸುತ್ತಾರಾದರೂ ಇಡೀ ಗ್ರೀಕ್ ಸೈನ್ಯ ಅವರ ವಿರುದ್ಧ ತಿರುಗಿನಿಂತು ಅವರ ಪ್ರಾಣಕ್ಕೇ ಅಪಾಯವೆದುರಾಗುತ್ತದೆ. 

ನಾಟಕದ ಕೊನೆಯಲ್ಲಿ ಇಫಿಜೀನಿಯಾಳ ಬಲಿಯ ದೃಶ್ಯ ಪವಾಡಸದೃಶ ಸನ್ನಿವೇಶಗಳಲ್ಲಿ ಕೊನೆಗೊಳ್ಳುತ್ತದೆ. ಆಕೆ ರಕ್ತಚೆಲ್ಲಿ ಸಾಯುವುದಿಲ್ಲವೆಂದು ನಾಟಕ ಸೂಚಿಸುತ್ತದೆಯಾದರೂ ಇದನ್ನು ಹಲವು ರಂಗಮೀಮಾಂಸಕರು ಒಪ್ಪುವುದಿಲ್ಲ. ಏಸ್ಕಲಸ್‌ನ ಅಗಮೆಮ್ನಾನ್ ನಾಟಕಗಳಲ್ಲಿ ಕ್ಲೈಟೆನ್ಮೆಸ್ಟ್ರಾ ಅಗಮೆಮ್ನಾನ್ ವಿರುದ್ಧ ಸೇಡುತೀರಿಸಿಕೊಳ್ಳುವ ಮತ್ತು ಆತನನ್ನು ಕೊಲ್ಲುವ ಕಥಾನಕವಿರುವುದರಿಂದ ಇಲ್ಲಿ ಇಫಿಜೀನಿಯ ಸಾವು ಮಹತ್ವವನ್ನು ಪಡೆದುಕೊಳ್ಳುತ್ತದೆ ಮತ್ತು ಇದೇ ಕಾರಣಕ್ಕೆ ನಾಟಕದ ಕೊನೆಯ ಭಾಗವನ್ನು ಯುರಿಪೀಡಿಸ್ ಬರೆಯಲಿಲ್ಲ ಬದಲಿಗೆ ಆತನ ಮರಣಾನಂತರ ಯಾರೋ ಬರೆದು ನಾಟಕಕ್ಕೆ ಸೇರಿಸಿದರೆಂದು ವಿದ್ವಾಂಸರು ವಾದಿಸುತ್ತಾರೆ.

‘ಔಲೀಸ್‌ನಲ್ಲಿ ಇಫಿಜೀನಿಯಾ’ ನಾಟಕದ ಪಾತ್ರಗಳು ತಮ್ಮ ನೈತಿಕ ಸಂದಿಗ್ಧತೆಯನ್ನು ಎದುರಿಸುವ ಕ್ರಮ ಹಾಗೂ ತಮ್ಮ ಕುಟುಂಬ ಮತ್ತು ಸ್ವದೇಶಗಳ ಆಯ್ಕೆಯ ವಿಷಯದಲ್ಲಿ ತೋರುವ ತಲ್ಲಣಗಳು, ಬಲಿದಾನದ ಅಸಂಬದ್ಧತೆ ಮತ್ತು ಕ್ರೌರ್ಯ, ತಾಯ್ತನದ ಆಳ ಮತ್ತು ಸಂಕಟ, ಅವಿವೇಕ ಮತ್ತು ಸ್ವಾರ್ಥದ ಆಡಳಿತ ಚಿತ್ರಣಗಳಿಂದ ಮಹತ್ವಪಡೆದುಕೊಂಡಿದೆ. ತನ್ನ ಸ್ವಾರ್ಥವನ್ನೇ ದೇಶದ ಹಿತವೆಂದು ತೋರಗೊಡುವ ನಾಯಕ ಮತ್ತು ತಮ್ಮ ರಕ್ತಪಿಪಾಸು ಮನಃಸ್ಥಿತಿಯೇ ತಮ್ಮ ಹೆಮ್ಮೆಯೆಂದು ತಿಳಿದ ಸೈನ್ಯ ಹಾಗೂ ತಮ್ಮ ಲಾಭಕ್ಕೆ ಕುಟುಂಬದವರನ್ನು, ಸ್ನೇಹಿತರನ್ನು, ಅಷ್ಟೇ ಏಕೆ ತಮ್ಮ ಸ್ವಂತ ಮಕ್ಕಳನ್ನು ಕೊಲ್ಲಲೂ ಹೇಸದ ರಾಜನ ರಾಕ್ಷಸೀಯ ಯೋಚನಾಕ್ರಮಗಳ ಸಂಕೀರ್ಣ ವಿವರಣೆ ನಾಟಕದಲ್ಲಿದೆ. ಅಗಮೆಮ್ನಾನ್ ದೊರೆಯ ವಿಷಾದರಹಿತ ಹಿಂಸಾತ್ಮಕ ಸ್ವಭಾವ ದುರಂತ ನಾಟಕಗಳ ಕ್ರೂರ ಪಾತ್ರಗಳಿಗೆ ಒಂದು ಮರು ವ್ಯಾಖ್ಯಾನ ಮಾಡುತ್ತದೆ. ಮೊದಲಿಗೆ ಆತ ತುಸು ಗೊಂದಲಗೊಂಡವನಂತೆ ಕಂಡರೂ ಆತನ ಆಳದಲ್ಲಿ ಭಯಾನಕ ಹಿಂಸೆ ಸದಾ ಉಗ್ರರೂಪದಲ್ಲಿದೆ.

ಇತಿಹಾಸದುದ್ದಕ್ಕೂ ಈ ನಾಟಕ ಹಲವಾರು ನಾಟಕಕಾರರಿಗೆ, ಸಾಂಸ್ಕೃತಿಕ ಚಿಂತಕರಿಗೆ ಹಾಗೂ ಮನೋವಿಶ್ಲೇಷಕರಿಗೆ ಬಗೆಬಗೆಯ ಆಕರಗಳನ್ನು ಒದಗಿಸುತ್ತಾ ಬಂದಿದೆ. ಪ್ರಪಂಚದ ಅನೇಕ ಭಾಷೆಗಳಿಗೆ ಅನುವಾದವಾಗಿರುವ ಈ ನಾಟಕವನ್ನು ಇತೀಚೆಗೆ ಮಾಧವ ಚಿಪ್ಪಳಿ ಅವರು ‘ಇಫಿಜೀನಿಯಾ’ ಎನ್ನುವ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ವರ್ಷದ ‘ನೀನಾಸಮ್ ತಿರುಗಾಟ’ ತಂಡಕ್ಕೆ ವೆಂಕಟರಮಣ ಐತಾಳ ಅವರು ಇಫಿಜೀನಿಯಾವನ್ನು ನಿರ್ದೇಶಿಸಿದ್ದಾರೆ. ಪ್ರಸಕ್ತ ಈ ನಾಟಕ ಕರ್ನಾಟಕದಾದ್ಯಂತ ಪ್ರದರ್ಶನಗೊಳ್ಳುತ್ತಿದೆ.

  ಫೋಟೊ: ರಮೇಶ್ ಪಿ.ಕೆ.