ನಾಟಕದಲ್ಲಿ ಸಿದ್ದರಾಮಯ್ಯಗೆ ಅವಹೇಳನ: ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ವಜಾಕ್ಕೆ ಒತ್ತಾಯ

ಕಾಂಗ್ರೆಸ್ ಸೇರಿ ವಿವಿಧ ಸಂಘಟನೆಗಳಿಂದ ಮೈಸೂರಿನಲ್ಲಿ ಪ್ರತಿಭಟನೆ

Update: 2023-01-10 08:29 GMT

ಮೈಸೂರು: ಬಿಜೆಪಿ, ಆರೆಸ್ಸೆಸ್ ಮತ್ತು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ವಜಾಗೊಳಿಸುವಣತೆ ಒತ್ತಾಯಿಸಿ ಮಂಗಳವಾರ ಸ್ವಾಭಿಮಾನಿ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಸ್ವಾಭಿಮಾನಿ ಹೋರಾಟ ಸಮಿತಿ, ಕಾಂಗ್ರೆಸ್ ಪಕ್ಷ, ಪ್ರಗತಿಪರ ಹೋರಾಟಗಾರರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು, ನಗರದ ಕ್ರಾಫಡ್೯ ಹಾಲ್ ಎದುರಿಗಿರುವ ಓವೆಲ್ ಮೈದಾನದಲ್ಲಿ ಮಂಗಳವಾರ ಬೆಳಿಗ್ಗೆ ಜಮಾವಣೆಗೊಂಡು. ಸಿದ್ಧರಾಮಯ್ಯ ಬಗ್ಗೆ ಅವಹೇಳನಕಾರಿಯಾಗಿ ನಾಟಕ ಪ್ರದರ್ಶನ ಮಾಡಿರುವ 'ಸಾಂಬಶಿವ' ಪ್ರಹಸನದ ನಿರ್ದೇಶಕ ಕಾರ್ತಿಕ್ ಉಪಮನ್ಯು, ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಮತ್ತು ಬಿಜೆಪಿ, ಆರೆಸ್ಸೆಸ್ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ರಂಗಾಯಣದಲ್ಲಿ ಇತ್ತೀಚೆಗೆ ನಡೆದಿದ್ದ ಸಾಂಬಶಿವ ಪ್ರಹಸನ ನಾಟಕದಲ್ಲಿ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕುರಿತು ಅವಹೇಳನಕಾರಿ ಪ್ರದರ್ಶನ  ಖಂಡಿಸಿ, ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರನ್ನು ರಂಗಾಯಣದಿಂದ ವಜಾಗೊಳಿಸುವಂತೆ ಆಗ್ರಹಿಸಿ  ಸ್ವಾಭಿಮಾನಿ ಹೋರಾಟ ಸಮಿತಿ ವತಿಯಿಂದ  ರಂಗಾಯಣಕ್ಕೆ ಮುತ್ತಿಗೆ ಹಾಕಲು ತೆರಳುತ್ತಿದ್ದಂತೆ ಪೊಲೀಸರು ಅರ್ಧದಲ್ಲಿಯೇ ಪ್ರತಿಭಟನಾಕಾರರನ್ನು ತಡೆದರು. ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾದ ಘಟನೆ ನಡೆಯಿತು.

ಇದಕ್ಕೂ ಮೊದಲು  ಮಾತನಾಡಿದ ಪ್ರಗತಿಪರ ಚಿಂತಕ ಹಾಗೂ ಹಿರಿಯ ಪತ್ರಕರ್ತ ಟಿ.ಗುರುರಾಜ್, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಹಿರಿಯ ರಂಗಕರ್ಮಿ ಕೃಷ್ಣಪ್ರಸಾದ್ ಸೇರಿದಂತೆ ಅನೇಕರು ಕೂಡಲೇ ಅಡ್ಡಂಡ ಸಿ.ಕಾರ್ಯಪ್ಪನನ್ನು ವಜಾಗೊಳಿಸಬೇಕು ಎಂದು ಒಕ್ಕೊರಲಿನ ನಿರ್ಣಯ ಕೈಗೊಂಡರು.

ಬಳಿಕ ಪ್ರತಿಭಟನಾಕಾರರು ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫಡ್೯ ಹಾಲ್ ಮುಂಭಾಗದ ರಸ್ತೆಯಿಂದ ಹುಣಸೂರು ರಸ್ತೆಯಲ್ಲಿರುವ ಕಲಾಮಂದಿರಕ್ಕೆ ಮುತ್ತಿಗೆ ಹಾಕಲು ಪಾದಯಾತ್ರೆ ಮೂಲಕ ಬಿಜೆಪಿ, ಆರೆಸ್ಸೆಸ್ ಮತ್ತು ರಂಗಾಯಣ ನಿರ್ದೇಶಕರ ವಿರುದ್ಧ ರಸ್ತೆಯುದ್ದಕ್ಕೂ ಧಿಕ್ಕಾರ ಕೂಗಿ ತಮಟೆಗಳನ್ನು ಬಡಿದುಕೊಂಡು  ತೆರಳಿದರು. ಆದರೆ ಇವರನ್ನು ಜಿಲ್ಲಾಧಿಕಾರಿಗಳ ಕಚೇರಿ ಸಮೀಪ ಇರುವ ಕಮಾನು ಗೇಟ್ ಬಳಿಯೇ ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿ ತಡೆದರು. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು, ಬ್ಯಾರಿಕೇಡ್ ತಳ್ಳಿ ಮುಂದಕ್ಕೆ ಯತ್ನಿಸಲು ಪ್ರಯತ್ನಪಟ್ಟರು. ಆಗ ಸ್ಥಳಕ್ಕೆ ಆಗಮಿಸಿದ  ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿ ಸ್ಥಳದಲ್ಲೇ ಕೆಲ ಸಮಯ ಪ್ರತಿಭಟನೆ ನಡೆಸಿದರು. 

ಇದಕ್ಕೂ ಮೊದಲು ಪ್ರತಿಭಟನಾಕಾರರು,  ಓವೆಲ್ ಮೈದಾನದ ಮುಂಭಾಗ  ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರ ಅಣಕು ಶವಯಾತ್ರೆ ನಡೆಸಲು ಮುಂದಾರು. ಆದರೆ ಪೊಲೀಸರು ಅವಕಾಶ ಕೊಡಲಿಲ್ಲ.

ನಗರದಲ್ಲಿ ಸ್ವಾಭಿಮಾನಿ ಹೋರಾಟ ಸಮಿತಿ ಬೃಹತ್ ಮಟ್ಟದ ಪ್ರತಿಭಟನೆಗೆ ಕರೆ ನೀಡಿ ರಂಗಾಯಣಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆಯನ್ನು ನೀಡಿತ್ತು. ಆದರೆ ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಬಾನೋತ್ ಮಂಗಳವಾರ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ರಂಗಾಯಣದ ಸುತ್ತಲ 200 ಮೀಟರ್ ವ್ಯಾಪ್ತಿಯಲ್ಲಿ 144 ನೇ ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿಮಾಡಿ ಸೋಮವಾರ ರಾತ್ರಿಯೇ ಆದೇಶ ಹೊರಡಿಸಿದ್ದರು.

ಇದರಿಂದ ರಂಗಾಯಣದ ಎರಡು ರಸ್ತೆಗಳಲ್ಲಿ ಪೊಲೀಸ್ ಸರ್ಪಗಾವಲನ್ನು ಹಾಕಿ  ಎರಡೂ ರಸ್ತೆಗಳಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿ ರಂಗಾಯಣಕ್ಕೆ ಮುತ್ತಿಗೆ ಹಾಕಲು ಅವಕಾಶ ನಿರಾಕರಿಸಲಾಗಿತ್ತು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ವಿಧಾನಪತಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಹಿರಿಯ ಪತ್ರಕರ್ತ ಟಿ.ಗುರುರಾಜ್, ಹಿರಿಯ ರಂಗಕರ್ಮಿಗಳಾದ ಜನಾರ್ಧನ್ (ಜನ್ನಿ), ಕೃಷ್ಣಪ್ರಸಾದ್, ಮಾಜಿ ಶಾಸಕರುಗಳಾದ ಕಳಲೆ ಕೇಶವಮೂರ್ತಿ, ಎಂ.ಕೆ.ಸೋಮಶೇಖರ್, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಕೆಪಿಸಿಸಿ ಮಹಿಳಾ ಘಟಕದ ರಾಜ್ಯಧ್ಯೆಕ್ಷೆ ಡಾ.ಪುಷ್ಪಾ ಅಮರ್ ನಾಥ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕುರುಬರ ಸಂಘದ ರಾಜ್ಯಾಧ್ಯಕ್ಷ ಸುಬ್ರಮಣ್ಯ, ಮುಖಂಡರುಗಳಾದ ಸುನೀಲ್ ಬೋಸ್,  ಶಿವಣ್ಣ, ಮೈಸೂರು ಬಸವಣ್ಣ, ಶಿವು, ಮಹೇಶ್, ಅಯೂಬ್ ಖಾನ್, ನಗರಪಾಲಿಕೆ ಸದಸ್ಯ ಗೋಪಿ, ನಂಜನಗೂಡು ನಗರಸಭಾ ಸದಸ್ಯರುಗಳಾದ ಎಸ್.ಪಿ.ಮಹೇಶ್, ಸ್ವಾಮಿ, ಸಿದ್ದಿಕ್,  ಗುರುಪಾದಸ್ವಾಮಿ, ನಂದಕುಮಾರ್, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಧ್ಯಕ್ಷ ಕೆ.ಎಸ್.ಶಿವರಾಮ್, ನಾಗೇಶ್, ಎಚ್.ಎ.ವೆಂಕಟೇಶ್, ನೆಲೆಹಿನ್ನಲೆ ಗೋಪಾಲಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Similar News