ಸುನೀಲ್ ನನಗೆ ಕಿರುಕುಳ ನೀಡುತ್ತಿದ್ದ, ಕೊಲೆ ಮಾಡುವ ಮನಸ್ಥಿತಿ ನನ್ನ ಅಣ್ಣನಿಗೆ ಇಲ್ಲ: ಆರೋಪಿ ಸಹೋದರಿ ಸಭಾ ಶೇಖ್

ಶಿವಮೊಗ್ಗ ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ ಯತ್ನ ಪ್ರಕರಣ

Update: 2023-01-10 10:26 GMT

ಶಿವಮೊಗ್ಗ, ಜ.10: ಸಾಗರ ಪಟ್ಟಣದ ಬಜರಂಗದಳದ ಸಹ ಸಂಚಾಲಕ ಸುನೀಲ್ ಮೇಲೆ ಹಲ್ಲೆಗೆ ಯತ್ನಿಸಿರುವ ಆರೋಪಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಆರೊಪಿ ಸಮೀರ್ ಎಂಬಾತನ ಸಹೋದರಿಗೆ ಕಿರುಕುಳ ನೀಡಿದ್ದೇ ಘಟನೆಗೆ ಕಾರಣ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ತಿಳಿಸಿದ್ದಾರೆ.

ಇದೇ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಂಧಿತ ಆರೋಪಿಗಳಲ್ಲಿ ಓರ್ವನಾದ ಸಮೀರ್ ಸಹೋದರಿ ಸಭಾ ಶೇಖ್, 'ಸುನೀಲ್ ಎಂಬಾತ ನನಗೆ ಕಳೆದ ವರ್ಷ ಹಿಜಾಬ್ ವಿಚಾರದಲ್ಲಿ ನಡೆದ ಗಲಾಟೆ ಬಳಿಕ  ಕಿರುಕುಳ ನೀಡುತ್ತಿದ್ದ. ಹಿಜಾಬ್ ತೆಗೆಯುವಂತೆ ಒತ್ತಾಯಿಸುತ್ತಿದ್ದ. ಇದೇ ಕಾರಣಕ್ಕೆ ನನ್ನ ಅಣ್ಣ ಸಮೀರ್ ಸುನೀಲ್ ಗೆ ಹೆದರಿಸಲು ಹೋಗಿರಬೇಕು. ಆತ ಯಾರನ್ನೂ ಹೊಡೆಯುವುದು, ಬಡಿಯುವುದು ಮಾಡಿದವನಲ್ಲ' ಎಂದು ಸ್ಪಷ್ಟನೆ ನೀಡಿದರು. 

'ಸಮೀರ್ ವಿರುದ್ಧ ಯಾವುದೇ ಪ್ರಕರಣ ಈವರೆಗೆ ಇರಲಿಲ್ಲ. ಯಾವ ಸಂಘಟನೆಗೂ ಸೇರಿದವನಲ್ಲ, ಕೊಲೆ ಮಾಡುವ ಮನಸ್ಥಿತಿ ನನ್ನ ಅಣ್ಣನಿಗೆ ಇಲ್ಲ' ಎಂದು ತಿಳಿಸಿದರು. 

''ತಂಗಿಯನ್ನು ಚುಡಾಯಿಸುತ್ತಿರುವ ಬಗ್ಗೆ ಸುನೀಲ್ ಗೆ ಈ ಹಿಂದೆ ಸಮೀರ್ ಎಚ್ಚರಿಕೆ ನೀಡಿದ್ದ. ಆದರೆ ಸುನೀಲ್ ನಿನ್ನ ತಂಗಿಯ ನಂಬರ್  ಕೊಡು ಅಂತ ಸಮೀರ್ ನನ್ನೇ ಕೇಳಿದ್ದ. ಇದಲ್ಲದೆ ಹಲವು ಬಾರಿ ಎಚ್ಚರಿಕೆ‌ ನೀಡಿದರೂ ಚುಡಾಯಿಸುವುದನ್ನು ಮುಂದುವರಿಸಿದ್ದ. ಸೋಮವಾರ ಬೈಕ್ ನಲ್ಲಿ ಬರುತ್ತಿದ್ದ ಸಮೀರ್ ನನ್ನು ಸುನೀಲ್ ರೇಗಿಸಿದ್ದ. ಇದರಿಂದ ಕೋಪಗೊಂಡ ಸಮೀರ್ ತನ್ನ ಬೈಕಿನಲ್ಲಿದ್ದ ಮಚ್ಚು ತೆಗೆದುಕೊಂಡು ಹಲ್ಲೆಗೆ ಯತ್ನಿಸಿರುವುದಾಗಿ ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ''

- ಮಿಥುನ್ ಕುಮಾರ್-  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ. 

ಇದನ್ನೂ ಓದಿ: ಸಾಗರ | ಬಜರಂಗದಳದ ಸಹ ಸಂಚಾಲಕನ ಮೇಲೆ ಹಲ್ಲೆ ಯತ್ನ ಪ್ರಕರಣ: ಮೂವರು ಆರೋಪಿಗಳು ವಶಕ್ಕೆ

Similar News