ನಾಳೆಯಿಂದ ರಾಜ್ಯದಲ್ಲಿ ಕಾಂಗ್ರೆಸ್ ‘ಪ್ರಜಾಧ್ವನಿ ಯಾತ್ರೆ’ ಆರಂಭ; 'ಕೈ' ನಾಯಕರ ಯಾತ್ರೆಗೆ ಸಜ್ಜುಗೊಂಡಿರುವ ಬಸ್

ಭ್ರಷ್ಟ ಬಿಜೆಪಿ ಸರಕಾರ ತೊಲಗಿಸಲು ಯಾತ್ರೆ: ಡಿ.ಕೆ.ಶಿವಕುಮಾರ್

Update: 2023-01-10 12:41 GMT

ಬೆಂಗಳೂರು, ಜ.10: ರಾಜ್ಯ ಬಿಜೆಪಿ ಸರಕಾರದ ವೈಫಲ್ಯಗಳು ಹಾಗೂ ಜನರ ಬದುಕಿಗಾಗಿ ಕಾಂಗ್ರೆಸ್ ಪಕ್ಷದ ಸಂಕಲ್ಪವನ್ನು ತಿಳಿಸಲು ‘ಪ್ರಜಾಧ್ವನಿ’ ಯಾತ್ರೆಗೆ ಚಾಲನೆ ನೀಡಲಾಗುತ್ತಿದೆ. ಈ ಪ್ರಜಾಧ್ವನಿ ಯಾತ್ರೆ ಪ್ರಜೆಗಳ ಧ್ವನಿ, ಪ್ರಜೆಗಳ ಭಾವನೆ ಆಗಿದೆ. ನಾವು ಋಣಾತ್ಮಕತೆ ಬಗ್ಗೆ ಚಿಂತನೆ ಮಾಡುತ್ತಿಲ್ಲ. ಸಕಾರಾತ್ಮಕತೆ ಬಗ್ಗೆ ಮಾತ್ರ ಯೋಚಿಸುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಜನ ತಮ್ಮ ಕೈಯನ್ನು ನಮ್ಮ ಕೈ ಜತೆ ಜೋಡಿಸಿ, ಒಗ್ಗಟ್ಟಿನಿಂದ ಬದಲಾವಣೆ ಮಾಡೋಣ. ಆ ಮೂಲಕ ಕೈ ಜೋಡಿಸಿ ಕರುನಾಡಿಗಾಗಿ, ನಿಮ್ಮ ಹಕ್ಕು ನಮ್ಮ ಹೋರಾಟ. ಈ ಬಗ್ಗೆ ವೆಬ್ ಸೈಟ್ ಆರಂಭಿಸಿದ್ದು, prajadhwani.com ಗೆ  ಹಾಗೂ ದೂರವಾಣಿ ಸಂಖ್ಯೆ 9537 224 224ಕ್ಕೆ ಕರೆ ಮಾಡಿ ನಿಮ್ಮ ಅಭಿಪ್ರಾಯವನ್ನು ಕಳುಹಿಸಿಕೊಡಿ ಎಂದರು.

ಮಹಾತ್ಮಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಐತಿಹಾಸಿಕ ಸ್ಥಳ ಬೆಳಗಾವಿಯ ಗಾಂಧಿ ಬಾವಿಯಿಂದ ಜ.11ರಂದು ಈ ಯಾತ್ರೆ ಆರಂಭವಾಗುತ್ತಿದೆ. ಬ್ರಿಟೀಷರನ್ನು ತೊಲಗಿಸಲು ಗಾಂಧೀಜಿ ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಿಕೊಂಡರು. ಈಗ ಅದೇ ಪುಣ್ಯಭೂಮಿಯಿಂದ ಭ್ರಷ್ಟ ಬಿಜೆಪಿ ಸರಕಾರ ತೊಲಗಿಸಲು ಯಾತ್ರೆ ಆರಂಭಿಸುತ್ತಿದ್ದೇವೆ ಎಂದು ಶಿವಕುಮಾರ್ ತಿಳಿಸಿದರು.

ಕರ್ನಾಟಕ ಅಭಿವೃದ್ಧಿಶೀಲ ರಾಜ್ಯ. ಇಡೀ ಭಾರತಕ್ಕೆ ನಮ್ಮ ಆಡಳಿತ ಮಾದರಿಯಾಗಿತ್ತು. ಇಡೀ ವಿಶ್ವದ ಉದ್ಯಮಿಗಳು ರಾಜ್ಯ ಹಾಗೂ ಬೆಂಗಳೂರಿನಲ್ಲಿ ಬಂಡವಾಳ ಹೂಡಿಕೆ ಮಾಡಲು ಉತ್ಸುಕರಾಗಿದ್ದರು. ಆದರೆ ಇಂದು ರಾಜ್ಯಕ್ಕೆ ಭ್ರಷ್ಟಾಚಾರದ ಕಳಂಕ ಬಂದಿದೆ. ಈ ಕಳಂಕವನ್ನು ನಾವು ದೂರ ಮಾಡಬೇಕು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಯಾವುದೇ ವರ್ಗದವರ ಬದುಕು ಹಸನಾಗಿಲ್ಲ. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದ ಬಿಜೆಪಿ ರೈತರ ಬದುಕು ಹಸನು ಮಾಡಲಿಲ್ಲ. ಯುವಕರಿಗೆ ಉದ್ಯೋಗ ನೀಡಲಿಲ್ಲ. ಹೆಣದ ಮೇಲೆ ಹಣ ಮಾಡಿದ್ದಾರೆ. ಪ್ರತಿ ಇಲಾಖೆಯಲ್ಲಿ ಎಲ್ಲ ಸಂದರ್ಭದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಅವರು ಟೀಕಿಸಿದರು.

ಬಿಜೆಪಿ 104 ಸ್ಥಾನ ಗಳಿಸಿ, ಜನಾದೇಶ ಇಲ್ಲದಿದ್ದರೂ ಆಪರೇಶನ್ ಕಮಲದ ಮೂಲಕ ಅಧಿಕಾರಕ್ಕೆ ಬಂತು. ಈ ಮೂರುವರೆ ವರ್ಷಗಳ ಅಧಿಕಾರದಲ್ಲಿ ಬಿಜೆಪಿ ತಾನು ಕೊಟ್ಟ 600 ಭರವಸೆಗಳ ಪೈಕಿ 550 ಭರವಸೆಗಳನ್ನು ಈಡೇರಿಸಲಿಲ್ಲ. ಪ್ರತಿನಿತ್ಯ ನಾವು ಕೇಳುವ ಪ್ರಶ್ನೆಗೆ ಬಿಜೆಪಿಗೆ ಉತ್ತರ ನೀಡಲು ಆಗುತ್ತಿಲ್ಲ. 2 ಲಕ್ಷ ಗುತ್ತಿಗೆದಾರರು 40 ಪರ್ಸೆಂಟ್ ಕಮಿಷನ್ ಕಿರುಕುಳ ತಾಳಲಾಗುತ್ತಿಲ್ಲ ಎಂದು ಧ್ವನಿ ಎತ್ತಿದ್ದಾರೆ. ಅದಕ್ಕೂ ಈ ಸರಕಾರ ಪರಿಹಾರ ನೀಡಲಿಲ್ಲ ಎಂದು ಅವರು ಹೇಳಿದರು.

ರಾಜ್ಯದಲ್ಲಿ 83,190 ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. 1258 ಕಂಪನಿಗಳು ಬಾಗಿಲು ಹಾಕುವ ಪರಿಸ್ಥಿತಿ ಬಂದಿದೆ. ಬಂಡವಾಳ ಹೂಡಿಕೆದಾರರು ನೆರೆ ರಾಜ್ಯಕ್ಕೆ ವಲಸೆ ಹೋಗುತ್ತಿದ್ದಾರೆ. ಪಿಎಸ್ಸೈ, ಜೆಇಇ, ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಹಗರಣ ಮಾಡಿ ಅನ್ಯಾಯ ಎಸಗಲಾಗಿದೆ. ಐಪಿಎಸ್, ಐಎಎಸ್ ಅಧಿಕಾರಿಗಳು ಜೈಲು ಸೇರುವ ಇತಿಹಾಸವನ್ನು ಬಿಜೆಪಿ ಸೃಷ್ಟಿಸಿದೆ ಎಂದು ಶಿವಕುಮಾರ್ ವಾಗ್ದಾಳಿ ನಡೆಸಿದರು.

ಕೇಂದ್ರ ಸರಕಾರ ಕರಾಳ ಕೃಷಿ ಕಾಯ್ದೆ ರದ್ದು ಮಾಡಿದರೂ ರಾಜ್ಯದಲ್ಲಿ ಮಾಡಲಿಲ್ಲ. ಇದರ ಬಗ್ಗೆ ಪ್ರಶ್ನೆ ಮಾಡಿ ಪ್ರತಿಭಟನೆ ಮಾಡಿದರೆ ನಮ್ಮ ಮೇಲೆ ಕೇಸ್ ಹಾಕುತ್ತಾರೆ. ನಾವು ಈ ಕೇಸ್ ಗಳಿಗೆ ಹೆದರುವುದಿಲ್ಲ. ಬಿಜೆಪಿಯ ಪಾಪದ ಪುರಾಣವನ್ನು ಜನರ ಮುಂದೆ ಇಡಬೇಕು, ಮುಂದೆ ನಾವು ಮಾಡುವ ಬದಲಾವಣೆ ಜನರಿಗೆ ತಿಳಿಸಲು ಯಾತ್ರೆ ಮಾಡುತ್ತೇವೆ. ನಾವು ನುಡಿದಂತೆ ನಡೆಯುತ್ತೇವೆ ಎಂದು ಅವರು ತಿಳಿಸಿದರು.

ಪಕ್ಷದ ಮೊದಲ ಟಿಕೆಟ್ ಪಟ್ಟಿ ಯಾವಾಗ ಬಿಡುಗಡೆ ಮಾಡುತ್ತೀರಿ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಟಿಕೆಟ್ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ಸಂಕ್ರಾಂತಿ ಹಬ್ಬದ ದಿನವೂ ಸಭೆ ಸೇರುತ್ತಿದ್ದೇವೆ. ಚರ್ಚೆ ಮಾಡಿದ ನಂತರ ಟಿಕೆಟ್ ಪಟ್ಟಿ ಬಿಡುಗಡೆ ಮಾಡುತ್ತೇವೆ’ ಎಂದರು.

ಇದೇ ಸಂದರ್ಭದಲ್ಲಿ ಬಿಜೆಪಿ ಪಾಪದ ಪುರಾಣ ಕೈಪಿಡಿ ಬಿಡುಗಡೆ ಮಾಡಲಾಯಿತು. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ಸಂವಹನ ಮತ್ತು ಜಾಲತಾಣ ವಿಭಾಗದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಮತ್ತಿತರರು ಉಪಸ್ಥಿತರಿದ್ದರು.

ಯಾತ್ರೆಗೆ ಬಸ್: ಪ್ರಜಾಧ್ವನಿ ಹೆಸರಿನಲ್ಲಿ ನಾಳೆಯಿಂದ ಆರಂಭವಾಗಲಿರುವ ಯಾತ್ರೆಗೆ ಬಸ್ ಸಿದ್ಧವಾಗಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜಂಟಿ ಪ್ರವಾಸ ಮಾಡಲಿದ್ದಾರೆ.

ವೇಳಾ ಪಟ್ಟಿ:  ಜ.11-ಬೆಳಗಾವಿ ಹಾಗೂ ಚಿಕ್ಕೋಡಿ, ಜ.16-ಹೊಸಪೇಟೆ, ಜ.17-ಕೊಪ್ಪಳ, ಜ.18-ಬಾಗಲಕೋಟೆ ಹಾಗೂ ಗದಗ, ಜ.19-ಹಾವೇರಿ ಹಾಗೂ ದಾವಣಗೆರೆ, ಜ.21-ಹಾಸನ ಹಾಗೂ ಚಿಕ್ಕಮಗಳೂರು, ಜ.22-ಮಂಗಳೂರು ಹಾಗೂ ಉಡುಪಿ, ಜ.23-ಕೋಲಾರ ಹಾಗೂ ಚಿಕ್ಕಬಳ್ಳಾಪುರ, ಜ.24-ತುಮಕೂರು ಹಾಗೂ ದೊಡ್ಡಬಳ್ಳಾಪುರ, ಜ.26-ಚಾಮರಾಜನಗರ ಹಾಗೂ ಮೈಸೂರು, ಜ.27-ಮಂಡ್ಯ ಹಾಗೂ ರಾಮನಗರ, ಜ.28ರಂದು ಯಾದಗಿ ಹಾಗೂ ಬೀದರ್‍ನಲ್ಲಿ ಕಾಂಗ್ರೆಸ್ ಕಾರ್ಯಕ್ರಮಗಳು ನಡೆಯಲಿವೆ.

Similar News