ಕೆಸಿ ವ್ಯಾಲಿಯ ವಿಷನೀರು ಹರಿಸಿ, ಈಗ ಕಾವೇರಿ ಎಂದು ಸುಳ್ಳು ಹೇಳುವುದು ಎಷ್ಟು ಸರಿ?: ಕೃಷ್ಣಭೈರೇಗೌಡಗೆ HDK ಪ್ರಶ್ನೆ

''ಕೋಲಾರ ಜಿಲ್ಲೆ ಜನರನ್ನು ಸಾವಿನಕೂಪಕ್ಕೆ ತಳ್ಳಿದವರು''

Update: 2023-01-10 12:35 GMT

ಬೆಂಗಳೂರು, ಜ.10: ನೀರೆ ಬರದಿರುವ ಎತ್ತಿನಹೊಳೆ ಹೆಸರಿನಲ್ಲಿ ಎತ್ತಿದ ಎತ್ತುವಳಿ ಸಾಲದೆಂದು ಕೆಸಿ ವ್ಯಾಲಿಯಲ್ಲಿ ಪಸರ್ಂಟೇಜ್ ಜೇಬಿಗಿಳಿಸಿದ್ದು ಯಾರು? ಹಣದ ದುರಾಸೆಗೆ ವಿಷನೀರು ಹರಿಸಿ ಕೋಲಾರ ಜಿಲ್ಲೆ ಜನರನ್ನು ಸಾವಿನಕೂಪಕ್ಕೆ ತಳ್ಳಿದವರು ಯಾರು? ಆ ಗುತ್ತಿಗೆದಾರನ ಹಿಂದೆ ಅನುದಿನ ಗಿರಕಿ ಹೊಡೆದ ಗಿರಾಕಿ ಯಾರು ಎಂದು ನಿಮಗೆ ಗೊತ್ತಿಲ್ಲವೆ ಶಾಸಕ ಕೃಷ್ಣಭೈರೇಗೌಡರೇ? ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಈ ಸಂಬಂಧ ಟ್ವೀಟ್‍ಗಳನ್ನು ಮಾಡಿರುವ ಅವರು, ನೈಟ್ರೇಟ್, ಪಾಸ್ಪರಸ್, ಸೀಸ ಸೇರಿ ಬೆಂಗಳೂರು ಜನರ ಮಲಮೂತ್ರಗಳೆ ತುಂಬಿರುವ ಕೊಳಚೆ ನೀರನ್ನು 3ನೆ ಹಂತದಲ್ಲಿ ಸಂಸ್ಕರಿಸದೆ ಕೋಲಾರಕ್ಕೆ ಹರಿಸಿದ್ದೇ ಮಹಾಪಾಪ. ಇಷ್ಟು ದಿನ ಅದನ್ನೆ ಪುಣ್ಯತೀರ್ಥ ಎಂದು ಡಂಗುರ ಹೊಡೆದವರು ನಿನ್ನೆ ಕೋಲಾರದಲ್ಲಿ 3ನೆ ಹಂತದ ಸಂಸ್ಕರಣೆ ಬಗ್ಗೆ ಹೇಳಿ ಕಾವೇರಿ ಬಗ್ಗೆ ಬೊಗಳೆ ಬಿಡುತ್ತೀರಲ್ಲ, ಸ್ವಲ್ಪವಾದರೂ ಸಂಕೋಚ ಬೇಡವೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಐದು ವರ್ಷ ಸರಕಾರ ಮಾಡಿ ಎತ್ತಿನಹೊಳೆ ಹೆಸರಿನಲ್ಲಿ ಕೊಳ್ಳೆ ಹೊಡೆದ ಗಿರಾಕಿಗಳು, ಆ ನಂತರ ಕೆಸಿ ವ್ಯಾಲಿಯ ವಿಷನೀರು ಹರಿಸಿ, ಈಗ ಚುನಾವಣೆ ಹೊತ್ತಿನಲ್ಲಿ ಕಾವೇರಿ ಎಂದು ಸುಳ್ಳು ಹೇಳುವುದು ಎಷ್ಟು ಸರಿ? ಒಮ್ಮೆ ಯೋಚನೆ ಮಾಡಿ ಕೃಷ್ಣಭೈರೇಗೌಡರೇ? ಮತ ಬೇಕಾದಾಗ ಮನಃಸಾಕ್ಷಿಯನ್ನು ಮಾರಿಕೊಳ್ಳುವುದು ನಿಮಗೆ ಶೋಭೆಯಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕೃಷ್ಣಭೈರೇಗೌಡ ಅವರು ಬಹಳ ತಿಳುವಳಿಕೆ ಉಳ್ಳವರು ಎಂದು ಭಾವಿಸಿದ್ದೆ. ನನ್ನಂತೆ ಅವರು ಹಳ್ಳಿಯಲ್ಲಿ ಕಲಿಯದೆ ವಿದೇಶದಲ್ಲಿ ಕಲಿತವರು. ಅವರ ಜ್ಞಾನದ ಪರಿಧಿ ದೊಡ್ಡದು ಎಂದು ತಿಳಿದಿದ್ದೆ. ಕೋಲಾರದಲ್ಲಿ ನಿನ್ನೆ ಅವರು ಕೊಟ್ಟ ಹೇಳಿಕೆ ಗಮನಿಸಿದ ಮೇಲೆ ಅವರ ಕುರಿತ ನನ್ನ ಅಭಿಪ್ರಾಯ ತಪ್ಪೆಂದು ಎನಿಸಿತು ಎಂದು ಅವರು ಟೀಕಿಸಿದ್ದಾರೆ.

ಕೃಷ್ಣಭೈರೇಗೌಡರೇ, ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ನಿಮ್ಮ ಅಜ್ಞಾನಕ್ಕೆ ಏನೆಂದು ಹೇಳಬೇಕೋ ಗೊತ್ತಾಗುತ್ತಿಲ್ಲ. ಕಾವೇರಿ ನ್ಯಾಯಾಧಿಕರಣ ರಚನೆ ಆಗಿದ್ದು ಯಾವಾಗ? ರಾಜ್ಯಕ್ಕೆ ಕಾವೇರಿ ನೀರಿನ ಹಕ್ಕು ಸಾಧಿಸಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪಾತ್ರ ಏನು? ಎಂಬುದರ ಬಗ್ಗೆ ದಯಮಾಡಿ ಮಾಹಿತಿ ಪಡೆದುಕೊಳ್ಳಿ ಎಂದು ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

ನಿಮ್ಮ ತಂದೆ ಸಿ.ಭೈರೇಗೌಡರ ಬಗ್ಗೆ ನನಗೂ ಅಪಾರ ಗೌರವ ಇದೆ. ದೇವೇಗೌಡರ ಸಂಪುಟದಲ್ಲಿ ಪ್ರಭಾವಿ ಮಂತ್ರಿಗಳಾಗಿದ್ದ ನಿಮ್ಮ ತಂದೆಯವರು ಅಂದೇ ಕೋಲಾರಕ್ಕೆ ಕಾವೇರಿ ನೀರು ಹರಿಸುವ ಬಗ್ಗೆ ದನಿ ಎತ್ತಬಹುದಿತ್ತು. ಕೊನೆಗೆ ನೀವಾದರೂ ಹೋರಾಟ ನಡೆಸಬೇಕಿತ್ತು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Similar News