ಸಾಹಿತಿ ನಾಡೋಜ ಸಾರಾ ಅಬೂಬಕರ್ ನಿಧನಕ್ಕೆ ಶೋಭಾ ಕರಂದ್ಲಾಜೆ, ಸುಮಲತಾ ಅಂಬರೀಶ್ ಗಣ್ಯರ ಸಂತಾಪ
ಬೆಂಗಳೂರು, ಜ.10: ಖ್ಯಾತ ಸಾಹಿತಿ ನಾಡೋಜ ಸಾರಾ ಅಬೂಬಕರ್ ಅವರ ನಿಧನಕ್ಕೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದೆ ಸುಮಲತಾ ಅಂಬರೀಶ್ ಸೇರಿದಂಥೆ ನಾಡಿನ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ತಾನು ನಂಬಿದ ಮೌಲ್ಯಗಳಿಗೆ ಬದ್ಧರಾಗಿ, ಎದುರಾದ ವಿರೋಧಗಳನ್ನು ದಿಟ್ಟತನದಿಂದ ಎದುರಿಸಿ, ಮುಸ್ಲಿಮ್ ಲೋಕದ ತವಕ-ತಲ್ಲಣಗಳಿಗೆ ದನಿಯಾಗಿದ್ದ ಹಿರಿಯ ಸಾಹಿತಿ ಸಾರಾ ಅಬೂಬಕರ್ ನಿಧನ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ಅವರ ಬಂಧುಗಳು ಮತ್ತು ಓದುಗ ಬಳಗದ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕರಾವಳಿ ಸೌಹಾರ್ದತೆಯ ಗಟ್ಟಿ ಧ್ವನಿ, ಕೋಮುವಾದದ ವಿರುದ್ಧದ ದಿಟ್ಟ ದನಿ ಅಸ್ತಂಗತವಾಗಿದೆ. ಲೇಖಕಿ ಸಾರಾ ಅಬೂಬಕ್ಕರ್ ನಿಧನ ಸಾಹಿತ್ಯ ಲೋಕಕ್ಕೆ ತುಂಬಿ ಬಾರದ ನಷ್ಟ. ದುರಿತ ಕಾಲದಲ್ಲಿ ಸಾರಾ ಅವರ ಅಗಲಿಕೆ ಕುಟುಂಬದ ಸದಸ್ಯರನ್ನೇ ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತಾ, ಕುಟುಂಬಸ್ಥರು ಹಾಗೂ ಅವರ ಒಡನಾಡಿಗಳ ನೋವಲ್ಲಿ ನಾನು ಭಾಗಿ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸಂತಾಪ ಸೂಚಿಸಿದ್ದಾರೆ.
ಮಹಿಳಾಪರ ಚಿಂತಕಿಯೂ ಆಗಿದ್ದ ಸಾರಾ ಅಬೂಬಕ್ಕರ್, ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಿನಿಮಾ ರಂಗಕ್ಕೂ ಅವರು ಮಹತ್ವದ ಕೃತಿಗಳನ್ನು ನೀಡಿದ್ದಾರೆ ಎಂದು ಸಂಸದೆ ಸುಮಲತಾ ಅಂಬರೀಶ್ ಸ್ಮರಿಸಿದ್ದಾರೆ.
ಸಾರಾ ಅಬೂಬಕರ್ ಇನ್ನು ಮುಂದೆ ನಮ್ಮೊಂದಿಗಿರುವುದಿಲ್ಲ. ಚಂದ್ರಗಿರಿಯ ತೀರದಲ್ಲಿ ಶಾಲೆಗೆ ಹೋಗುವ ಹುಡುಗಿಯ ಕಾಣದೆ ಚಂದ್ರ ಬಡವಾದ ಎಂದು ಲೇಖಕ ಪುರುಷೋತ್ತಮ ಬಿಳಿಮಲೆ ಕಂಬನಿ ಮಿಡಿದಿದ್ದಾರೆ.
ಸಮಾಜದಲ್ಲಿ ಮಹಿಳಾ ಅಸಮಾನತೆ, ಶೋಷಣೆ, ಮೌಢ್ಯ ಸಂಪ್ರದಾಯಗಳ ವಿರುದ್ಧ ನಿರಂತರವಾಗಿ ಧ್ವನಿ ಎತ್ತುವ ಮೂಲಕ ಮಹಿಳಾ ಸಮಾನತೆ ಮತ್ತು ಸಬಲೀಕರಣಕ್ಕೆ ಶ್ರಮಿಸುತ್ತಿದ್ದ ಪ್ರಗತಿಶೀಲ ಚಿಂತನೆಯ ಬರಹಗಾರ್ತಿ ಸಾರಾ ಅಬೂಬಕ್ಕರ್ ಅವರನ್ನು ಕಳೆದು ಕೊಂಡಿರುವುದು ಅತೀವ ದುಃಖವನ್ನು ಉಂಟುಮಾಡಿದೆ ಎಂದು ಸಿಪಿಐ ಕಾರ್ಯದರ್ಶಿ ಸಾತಿ ಸುಂದರೇಶ್, ರಾಜ್ಯ ನಾಯಕರಾದ ಎಚ್.ವಿ.ಅನಂತ ಸುಬ್ಬರಾವ್, ಡಾ.ಸಿದ್ದನಗೌಡ ಪಾಟೀಲ್, ರಾಜ್ಯ ಸಹ ಕಾರ್ಯದರ್ಶಿ ಬಿ.ಅಮ್ಜದ್, ರಾಜ್ಯ ಖಜಾಂಚಿಗಳಾದ ಡಿ.ಎ.ವಿಜಯ ಭಾಸ್ಕರ್, ಶಿವರಾಜ್ರಾ ಬಿರಾದಾರ ಸಂತಾಪ ಸೂಚಿಸಿದ್ದಾರೆ.
ಇದಲ್ಲದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯಸಭಾ ಸದಸ್ಯ ಡಾ.ಸಯ್ಯದ್ ನಾಸೀರ್ ಹುಸೇನ್, ಲೇಖಕ ರಹಮತ್ ತರೀಕೆರೆ, ಪತ್ರಕರ್ತ ದಿನೇಶ್ ಅಮೀನ್‍ಮಟ್ಟು ಸೇರಿದಂತೆ ರಾಜ್ಯದ ಹಲವು ಗಣ್ಯರು, ಸಾಹಿತಿಗಳು ಸಾರಾ ಅಬೂಬಕ್ಕರ್ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.
ಕರಾವಳಿ ಸೌಹಾರ್ದತೆಯ ಗಟ್ಟಿ ಧ್ವನಿ,ಕೋಮುವಾದದ ವಿರುದ್ಧದ ದಿಟ್ಟ ದನಿ ಅಸ್ತಂಗತವಾಗಿದೆ.
— Hariprasad.B.K. (@HariprasadBK2) January 10, 2023
ಲೇಖಕಿ ಸಾರಾ ಅಬೂಬಕ್ಕರ್ ನಿಧನ ಸಾಹಿತ್ಯ ಲೋಕಕ್ಕೆ ತುಂಬಿ ಬಾರದ ನಷ್ಟ.ದುರಿತ ಕಾಲದಲ್ಲಿ ಸಾರಾ ಅವರ ಅಗಲಿಕೆ ಕುಟುಂಬದ ಸದಸ್ಯರನ್ನೇ ಕಳೆದುಕೊಂಡಂತಾಗಿದೆ.
ಅವರ ಆತ್ಮಕ್ಕೆ ಶಾಂತಿ ಕೋರುತ್ತಾ, ಕುಟುಂಬಸ್ಥರು ಹಾಗೂ ಅವರ ಒಡನಾಡಿಗಳ ನೋವಲ್ಲಿ ನಾನು ಭಾಗಿ. pic.twitter.com/zgZOFCsKQJ