ಸ್ಯಾಂಟ್ರೊ ರವಿ ಪ್ರಕರಣ: ಒಡನಾಡಿ ಸಂಸ್ಥೆ, ಸಂತ್ರಸ್ತ ಮಹಿಳೆಯರಿಂದ ಮಾಹಿತಿ ಪಡೆದ ಎಡಿಜಿಪಿ ಅಲೋಕ್ ಕುಮಾರ್

Update: 2023-01-10 17:56 GMT

ಮೈಸೂರು, ಜ.10: ಮಹಿಳೆ ಮೇಲೆ ಅತ್ಯಾಚಾರ ಹಿಂಸೆ ಪ್ರಕರಣದ ಆರೋಪಿ ಸ್ಯಾಂಟ್ರೋ ರವಿ ವಿರುದ್ಧ ತನಿಖೆ ಚುರುಕುಗೊಳಿಸಿರುವ ಪೊಲೀಸರು ಮಂಗಳವಾರ ಮೈಸೂರಿಗೆ ಕಾನೂನು ಸುವ್ಯವಸ್ಥೆ ಹೆಚ್ಚುವರಿ ಮಹಾನಿರ್ದೇಶಕ ಅಲೋಕ್ ಕುಮಾರ್ ಭೇಟಿ ನೀಡಿ ಸಂತ್ರಸ್ತೆ ಮಹಿಳೆಯರು, ಕುಟುಂಬದವರು ಮತ್ತು ಒಡನಾಡಿ ಸಂಸ್ಥೆ ಮುಖ್ಯಸ್ಥರಿಂದ ದಾಖಲೆ ಸಹಿತ ಮಾಹಿತಿ ಪಡೆದುಕೊಂಡರು.

ಮೈಸೂರಿಗೆ ಮಂಗಳವಾರ ಭೇಟಿ ನೀಡಿದ ಎಡಿಜಿಪಿ ಅಲೋಕ್ ಕುಮಾರ್ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಧ್ಯಾಹ್ನ ಮೂರು ಗಂಟೆಗಳ ಕಾಲ ಒಡನಾಡಿ ಸಂಸ್ಥೆಯ ಮುಖ್ಯಸ್ಥರು, ಸಂತ್ರಸ್ತೆ ಮಹಿಳೆಯರು ಹಾಗೂ ಕುಟುಂಬದವರಿಂದ ಸ್ಯಾಂಟ್ರೊ ರವಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿದರು.

ಸ್ಯಾಂಟ್ರೊ ರವಿ ಮೇಲೆ 1986ರಿಂದ 2023ರ ಜ.2ರವರೆಗೆ ಆತನ ವಿರುದ್ಧ ದಾಖಲಾದ ಪ್ರಕರಣಗಳ ಮಾಹಿತಿ, ಆತನ ಹಣಕಾಸು ಸಂಸ್ಥೆಗಳ ಮಾಹಿತಿ, ಆಸ್ತಿ ದಾಖಲೆ, ಪ್ರಭಾವಿಗಳೊಂದಿಗೆ ಆತ ತೆಗೆಸಿಕೊಂಡಿರುವ ಭಾವಚಿತ್ರಗಳು, ಪೆÇಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಆತನ ಪಾತ್ರದ ಕುರಿತಂತೆ 140 ಪುಟಗಳ ಸಮಗ್ರ ದಾಖಲೆಗಳನ್ನು ಸ್ಟ್ಯಾನ್ಲಿ, ಪರಶುರಾಮ್ ಅವರು ಎಡಿಜಿಪಿಗೆ ಸಲ್ಲಿಸಿದರು.

ಸಮಾಜದ ಸ್ವಾಸ್ಥ್ಯವನ್ನು ಆರೋಪಿ ಹಾಳುಗೆಡವುತ್ತಿದ್ದು, ಆತನ ಒಡನಾಟದಿಂದ ಪೊಲೀಸ್ ಇಲಾಖೆಯ ಹಿರಿಯ ಕಿರಿಯ ಅಧಿಕಾರಿಗಳು ಕಳಂಕಿತರಾಗಿದ್ದಾರೆ. ಅವರನ್ನೂ ಕೂಡ ತನಿಖೆಗೆ ಒಳಪಡಿಸಬೇಕು ಎಂದು ಒಡನಾಡಿ ಸಂಸ್ಥೆಯ ಪರವಾಗಿ ಹಕ್ಕೊತ್ತಾಯ ಮಂಡಿಸಲಾಯಿತು.

ಆರೋಪಿಯನ್ನು ಇದುವರೆಗೂ ಏಕೆ ಬಂಧಿಸಿಲ್ಲ ಇದರಿಂದ ನನಗೆ ಅನ್ಯಾಯವಾಗಿದೆ ಎಂದು ಸಂತ್ರಸ್ತೆ ಅಳಲು ತೋಡಿಕೊಂಡರು. ಇದಕ್ಕೆ ಉತ್ತರಿಸಿದ ಎಡಿಜಿಪಿ ಅಲೋಕ್ ಕುಮಾರ್, ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಈಗಾಗಲೇ ವಿಶೇಷ ತಂಡ ರಚಿಸಿ, ಆತನ ಚಲನವಲನದ ಮೇಲೆ ನಿಗಾವಹಿಸಲಾಗಿದೆ. ಆದಷ್ಟು ಶೀಘ್ರ ಬಂಧಿಸಲಾಗುವುದು ಎಂದು ಸಂತ್ರಸ್ತೆಗೆ ಭರವಸೆ ನೀಡಿದರು.

ಸ್ಯಾಂಟ್ರೊ ರವಿ ಸಂಚಿನಲ್ಲಿ ಭಾಗಿಯಾಗಿದ್ದ ಪೊಲೀಸ್ ಇನ್ಸ್‍ಪೆಕ್ಟರ್ ಪ್ರವೀಣ್, ಸುಳ್ಳುಪಾತ್ರ ಹಾಗೂ ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿ ಸಂತ್ರಸ್ತೆ, ಆಕೆಯ ಸಹೋದರಿಯನ್ನು ಬಂಧಿಸಿದ್ದಕ್ಕೆ ಪ್ರತಿಯಾಗಿ ಪೊಲೀಸ್ ಅಧಿಕಾರಿಗಳಿಗೆ ಗೂಗಲ್ ಪೇ ಮೂಲಕ ಹಣ ಪಾವತಿಸಿದ ದಾಖಲೆಗಳನ್ನು ಸಂತ್ರಸ್ತೆ ಸಲ್ಲಿಸಿದರು.

ಇದೇ ವೇಳೆ ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಅವರಿಗೆ  ಸೂಚಿಸಿದ ಎಡಿಜಿಪಿ ಅಲೋಕ್ ಕುಮಾರ್ ಸ್ಯಾಂಟ್ರೊ ರವಿ ಪ್ರಕರಣದ ಇಂಚಿಂಚೂ ತನಿಖೆಯಾಗಬೇಕು. ಆತನ ವಿರುದ್ಧ ದಾಖಲಾಗಿರುವ ಪ್ರಕರಣ, ಹಣಕಾಸು ವ್ಯವಹಾರಗಳು, ಅತ್ಯಾಚಾರ ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸಬೇಕುಎಂದು ಹೇಳಿದರು.

ಇದೇ ವೇಳೆ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಡಿಸಿಪಿ ಗೀತಾ, ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಟ್ಕರ್, ವಿಜಯನಗರ ಎಸಿಪಿ ಶಿವಶಂಕರ್, ವಿಜಯನಗರ ಪೊಲೀಸ್ ಇನ್ಸ್‍ಪೆಕ್ಟರ್ ರವಿಶಂಕರ್ ಹಾಜರಿದ್ದರು.

Similar News