ನನ್ನ ಜತೆಗೆ ಜೆಡಿಎಸ್‌ನ ಇನ್ನಷ್ಟು ಶಾಸಕರು ಪಕ್ಷ ಬಿಡಲಿದ್ದಾರೆ: ಶಾಸಕ ಎಸ್.ಆರ್.ಶ್ರೀನಿವಾಸ್

Update: 2023-01-11 11:33 GMT

ತುಮಕೂರು, ಜ.11: ನಾನು ಜೆಡಿಎಸ್‌ಗೆ ಮತ್ತೆ ಹೋಗುವ ಪ್ರಶ್ನೆಯೇ ಇಲ್ಲ, ನನ್ನ ಜತೆಗೆ ಜೆಡಿಎಸ್‌ನ ಇನ್ನಷ್ಟು ಶಾಸಕರು ಪಕ್ಷ ಬಿಡಲಿದ್ದಾರೆ ಎಂದು ಉಚ್ಚಾಟಿತ ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲವರು ಪಕ್ಷ ಬಿಡುವ ಬಗ್ಗೆ ನನ್ನ ಜತೆಗೆ ಮಾತುಕತೆ ನಡೆಸಿದ್ದಾರೆ. ಎಲ್ಲವೂ ಮುಂದಿನ ದಿನಗಳಲ್ಲಿ ನಿರ್ಧಾರವಾಗಲಿದೆ ಎಂದು ಹೇಳಿದರು. 

''ತುಮಕೂರು ಸಂಸದ ಜಿ.ಎಸ್.ಬಸವರಾಜು ದೊಡ್ಡ ಲೂಟಿಕೋರ''

ಹಿರಿಯ ರಾಜಕಾರಣಿ ಜಿ.ಎಸ್.ಬಸವರಾಜು ತುಮಕೂರು ಲೋಕಸಭಾ ಸದಸ್ಯರಾದ ಮೇಲೆ 80ಕ್ಕೂ ಹೆಚ್ಚು ಎಕರೆ ಭೂಮಿಯನ್ನು ಖರೀದಿ ಮಾಡಿದ್ದಾರೆ ಎಂದು ಎಸ್.ಆರ್.ಶ್ರೀನಿವಾಸ್ ಆರೋಪಿಸಿದರು.

ಸಂಸದ ಬಸವರಾಜು ದೊಡ್ಡವೀರನಹಳ್ಳಿ ಸಮೀಪ 80 ಎಕರೆ ಜಮೀನನ್ನು ಖರೀದಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಬೇರೆ ಬೇರೆ ಕಡೆಯು ಭೂಮಿಯನ್ನು ಕಬಳಿಸಿದ್ದಾರೆ ಎಂದು ದೂರಿದರು.

ನಾನು ರೈತ, ನನಗೆ ವರ್ಷಕ್ಕೆ ಅಡಿಕೆ ಮತ್ತು ತೆಂಗಿನಿಂದ ಒಂದು ಕೋಟಿ ಆದಾಯ ಬರುತ್ತದೆ. ಅದರಲ್ಲಿಯೇ ಜೀವನ ನಿರ್ವಹಿಸುತ್ತೇನೆ. ಆದರೆ ಬಸವರಾಜು ಚುನಾವಣೆಯಲ್ಲಿ ಗೆದ್ದು ಬಂದಾಗಲೆಲ್ಲ ಭೂಮಿ ಖರೀದಿ ಮಾಡುತ್ತಾರೆ. ಇಷ್ಟೊಂದು ಭೂಮಿ ಖರೀದಿ ಮಾಡಲು ಎಲ್ಲಿಂದ ಬಂತು. ಇದನ್ನು ನೋಡಿದರೆ ಬಸವರಾಜು ಒಬ್ಬ ಲೂಟಿಕೋರ ಅನ್ನದೆ ಇನ್ನೇನು ಅನ್ನಬೇಕು ಎಂದು ಟೀಕಿಸಿದರು.

ಬಗರ್ ಹುಕುಂ ಸಮಿತಿ ಸದಸ್ಯರು ಸಹಕಾರ ನೀಡುತ್ತಿಲ್ಲ. 30-40 ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿರುವ ರೈತರಿಗೆ ಭೂ ಮಂಜೂರಾತಿ ಮಾಡಲು ಸಹಿ ಹಾಕುವುದಿಲ್ಲ ಎನ್ನುತ್ತಾರೆ. ಹೀಗಾಗಿ ಬಿಜೆಪಿ ಗುಬ್ಬಿಯಲ್ಲಿ ಅಭಿವೃದ್ಧಿ ಮಾಡಲು ಬಿಡುತ್ತಿಲ್ಲ ಎಂದು ಆಪಾದಿಸಿದರು.

ಅಕ್ರಮ ಭೂ ಹಗರಣ ಸಂಬಂಧ ಸಿಐಡಿ ತನಿಖೆ ನಡೆಯುತ್ತಿದೆ. ಅಕ್ರಮ ಮಾಡಿರುವವರು ಜೈಲಿಗೆ ಹೋಗುತ್ತಾರೆ. ನಾನೇ ತಹಶೀಲ್ದಾರ್ ಗೆ ಹೇಳಿ ಪೊಲೀಸ್ ದೂರು ನೀಡುವಂತೆ ಮಾಡಿದ್ದೇನೆ. ಆದರೆ ಗುಬ್ಬಿಯ ಬಿಜೆಪಿ ಮುಖಂಡರು ಅಕ್ರಮಕ್ಕೆ ಶ್ರೀನಿವಾಸ್ ಕಾರಣ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳುತ್ತಾ ನನ್ನ ವಿರುದ್ಧ ಅಪ ಪ್ರಚಾರ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Similar News