ಬಿಜೆಪಿಯ ಪಾಪದ ಕೊಡ ತುಂಬಿದೆ: ಸಿದ್ದರಾಮಯ್ಯ
ಬೆಳಗಾವಿ, ಜ. 11: ಬಿಜೆಪಿಯ ಪಾಪದ ಕೊಡ ತುಂಬಿದೆ. ಅವರ ಭ್ರಷ್ಟಾಚಾರಗಳ ಕರ್ಮಕಾಂಡದ ಆರೋಪಪಟ್ಟಿಯನ್ನು ಜನರ ಮುಂದೆ ಇಡುತ್ತಿದ್ದೇವೆ. ಜನ ಇದಕ್ಕೆ ತೀರ್ಮಾನ ನೀಡಬೇಕು. ದಯವಿಟ್ಟು ಬಿಜೆಪಿಯವರ ಹುಸಿ ಹಿಂದುತ್ವ, ಜಾತೀಯತೆಯನ್ನು ನಂಬದೆ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಬುಧವಾರ ಜಿಲ್ಲೆಯ ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಏರ್ಪಡಿಸಿದ್ದ ‘ಪ್ರಜಾಧ್ವನಿ’ ಬಸ್‍ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಇಂದಿನಿಂದ ಜ.28ರ ವರೆಗೆ 20ರಿಂದ 22 ಜಿಲ್ಲಾ ಕೇಂದ್ರಗಳಿಗೆ ‘ಪ್ರಜಾಧ್ವನಿ’ ರಥಯಾತ್ರೆ ಮೂಲಕ ಭೇಟಿ ನೀಡುತ್ತೇವೆ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷ. ನಮ್ಮ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಸಮಾಜದ ಎಲ್ಲ್ಲ ವರ್ಗದ ಜನರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಬಲೀಕರಣಕ್ಕಾಗಿ ಶ್ರಮಿಸಿದೆ ಎಂದು ನುಡಿದರು.
ಬಿಜೆಪಿಯವರು ಕೋಟ್ಯಂತರ ರೂ.ಖರ್ಚು ಮಾಡಿ ಶಾಸಕರನ್ನು ಖರೀದಿಸಿ ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬಂದವರು. ಬೆಳಗಾವಿ ಜಿಲ್ಲೆಯಲ್ಲಿ ಶಾಸಕರೊಬ್ಬರು ಖರೀದಿ ಆದರು. ಕಾಂಗ್ರೆಸ್‍ನ 14 ಜನ ಮತ್ತು ಜೆಡಿಎಸ್‍ನ 3 ಜನ ಶಾಸಕರನ್ನು ಖರೀದಿಸಿ ಸರಕಾರ ಮಾಡಿದ್ದಾರೆ. ಅಧಿಕಾರಕ್ಕೆ ಬಂದ ಮೇಲೆ ಜನ ಹಿತ ಮರೆತು ಲೂಟಿ ಮಾಡುವುದರಲ್ಲಿ ನಿರತರಾದದ್ದರಿಂದ ಭ್ರಷ್ಟಾಚಾರದ ಸಾಗರದಲ್ಲಿ ಮುಳುಗಿಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಭ್ರಷ್ಟಾಚಾರ ಗುಡಿಸಿ ಬಿಸಾಕುತ್ತೇವೆ: ಗಾಂಧೀಜಿ ಅಧ್ಯಕ್ಷತೆಯಲ್ಲಿ 1924ರ ರಲ್ಲಿ ಕಾಂಗ್ರೆಸ್ ಅಧಿವೇಶನ ನಡೆದ ಜಾಗದಿಂದ ನಾವು ಯಾತ್ರೆ ಆರಂಭ ಮಾಡಿದ್ದೇವೆ. ನಾವು ಸೂಚಕವಾಗಿ ‘ಕಸ ಗುಡಿಸಿದ್ದು’ ಯಾಕೆಂದರೆ ನಾವು ಅಧಿಕಾರಕ್ಕೆ ಬಂದರೆ ರಾಜ್ಯದ ಭ್ರಷ್ಟಾಚಾರವನ್ನು ಗುಡಿಸಿ ಬಿಸಾಕುತ್ತೇವೆ. ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್, ಈಶ್ವರಪ್ಪರಿಗೆ ಲಂಚ ನೀಡಲು ಆಗದೆ ಆತ್ಮಹತ್ಯೆಗೆ ಶರಣಾದರು. ಆದರೂ ಅವರನ್ನು 3 ತಿಂಗಳಲ್ಲಿ ಖುಲಾಸೆ ಮಾಡಿದ್ದಾರೆ ಎಂದು ಅವರು ದೂರಿದರು.
‘ಬಸವರಾಜ ಬೊಮ್ಮಾಯಿ ಅವರೆ ನಿಮ್ಮ ಸರಕಾರದಲ್ಲಿ ಶೇ.40ರಷ್ಟು ಕಮಿಷನ್ ನಡೆಯುತ್ತಿದೆ ಎಂದರೆ ಸಾಕ್ಷ್ಯ ಕೊಡಿ ಎನ್ನುತ್ತಾರೆ. ಇವುಗಳಿಗಿಂತ ಬೇರೆ ಸಾಕ್ಷಿ ಬೇಕಾ? ಹಿಂದಿನ ಸರಕಾರದಲ್ಲೂ ಭ್ರಷ್ಟಾಚಾರ ಇತ್ತು ಎನ್ನುತ್ತಾರೆ. ಅದಕ್ಕೆ ಸರಿನಪ್ಪ ನಮ್ಮ ಸರಕಾರದ ಅವಧಿಯನ್ನೂ ಸೇರಿಸಿ ತನಿಖೆ ಮಾಡಿಸಿ ಎಂದು ಹೇಳಿದ್ದೆ. ಹಿಂದೆ ನಮ್ಮ ಸರಕಾರ ಭ್ರಷ್ಟಾಚಾರ ಇದ್ದರೆ ಆಗ ಯಾಕೆ ಸುಮ್ಮನಿದ್ರಿ? ಈಗ ಅಧಿಕಾರಕ್ಕೆ ಬಂದು ಮೂರುವರೆ ವರ್ಷ ಆಗಿದೆ ತನಿಖೆ ಮಾಡಿಸಿದ್ರಾ?’ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಯಾರ ರಕ್ತ ಕೇಳ್ತೀರಿ: ಮಾತೆತ್ತಿದ್ದರೆ ನನ್ನನ್ನು ಹಿಂದೂ ವಿರೋಧಿ ಎನ್ನುತ್ತಾರೆ, ನಾನು ಹಿಂದೂ ಅಲ್ವಾ? ಆಪರೇಷನ್ ಆದಾಗ ಯಾರ ರಕ್ತವಾದರೂ ಕೊಡಿ ಎಂದು ಹೇಳುತ್ತೇವೆ, ಆಗಲೂ ನನ್ನದೇ ಜಾತಿ ಧರ್ಮದವನ ರಕ್ತ ಕೇಳುತ್ತೇವಾ ಇಲ್ಲ ಅಲ್ವಾ? ಹೀಗೆ ಎಲ್ಲರೂ ಮನುಷ್ಯರು ಎಂಬುದು ನಮ್ಮ ಸಿದ್ಧಾಂತ. ಇದನ್ನೇ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನ ಹೇಳುತ್ತದೆ. ಸಂವಿಧಾನದಲ್ಲಿ ನಂಬಿಕೆಯಿಟ್ಟಿರುವ ನಾನು ಹಿಂದೂ ವಿರೋಧಿ ಆಗಲು ಹೇಗೆ ಸಾಧ್ಯ? ನಮ್ಮೂರಿನಲ್ಲಿ ನಾವು ರಾಮಮಂದಿರ ಕಟ್ಟಿಲ್ವಾ?’ ಎಂದು ಅವರು ಸವಾಲು ಹಾಕಿದರು.
ನಾವು ಎಲ್ಲ ಧರ್ಮಗಳನ್ನು ಗೌರವಿಸುವವರು. ಆದರೆ, ಜಾತ್ರೆಗಳಲ್ಲಿ ಮುಸ್ಲಿಮರಿಗೆ ವ್ಯಾಪಾರ ಮಾಡಬೇಡಿ ಎಂದು ಹೇಳುವ, ಹಲಾಲ್, ಹಿಜಾಬ್ ವಿಚಾರದಲ್ಲಿ ರಾಜಕಾರಣ ಮಾಡುವ ಹಿಂದುತ್ವದ ವಿರೋಧಿಗಳು. ನಾವು ಮನುಷ್ಟ ದ್ವೇಷಿಗಳಲ್ಲ. ನಾವು ಮನುಷ್ಯಪ್ರೇಮಿಗಳು. ಇದೇ ಕಾರಣಕ್ಕೆ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡುತ್ತಿರುವುದು. ಎಲ್ಲ ಜನರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಶಕ್ತಿ ಇರುವುದು ಕಾಂಗ್ರೆಸ್‍ಗೆ ಮಾತ್ರ ಎಂದು ಅವರು ತಿಳಿಸಿದರು.
‘ಪ್ರಜಾಧ್ವನಿ ಎಂದರೆ ಜನರ ಧ್ವನಿ ಎಂದರ್ಥ. ಜನರ ನಿರೀಕ್ಷೆಗಳು ಮತ್ತು ಸಲಹೆಗಳೇನು ಎಂಬುದನ್ನು ನಾವು ಈ ಯಾತ್ರೆಯ ಮೂಲಕ ತಿಳಿದುಕೊಂಡು, ಮುಂದೆ ನಾವು ಅಧಿಕಾರಕ್ಕೆ ಬಂದಾಗ ಸಮಾಜದ ಎಲ್ಲ ವರ್ಗದ ಜನರ ಆಡಳಿತ ನೀಡುವ ಪ್ರಯತ್ನ ಮಾಡುತ್ತೇವೆ. ಇದನ್ನು ಹಿಂದೆಯೂ ಮಾಡಿದ್ದೆವು, ಮುಂದೆಯೂ ಮಾಡುತ್ತೇವೆ. ಬಿಜೆಪಿ ಈ ಕೆಲಸವನ್ನು ಯಾವತ್ತೂ ಮಾಡಲ್ಲ ಅಲ್ವಾ? ಇಷ್ಟು ಸತ್ಯ ಗೊತ್ತಿದ್ದರೆ ಮುಂದಿನ ಚುನಾವಣೆಯಲ್ಲಿ ಚಿಕ್ಕೋಡಿಯ 8ಕ್ಕೆ 8 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಿತ್ತೆಸೆದು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಕೆಲಸ ಮಾಡಬೇಕು’
-ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ