×
Ad

ಹುಬ್ಬಳ್ಳಿಯ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಕನಿಷ್ಠ 100 ವಿದ್ಯಾರ್ಥಿಗಳನ್ನು ಕರೆತರಲು ಶಿಕ್ಷಣ ಇಲಾಖೆಯಿಂದ ಸುತ್ತೋಲೆ

Update: 2023-01-11 19:22 IST

ಬೆಂಗಳೂರು, ಜ.11: ಯುವಜನೋತ್ಸವ ಕಾರ್ಯಕ್ರಮಕ್ಕೆ ಹುಬ್ಬಳ್ಳಿ ನಗರ ವ್ಯಾಪ್ತಿಯ ಎಲ್ಲ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರು ತಮ್ಮ ಕಾಲೇಜಿನಿಂದ ಕನಿಷ್ಠ 100 ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಹುಬ್ಬಳ್ಳಿ ರೈಲ್ವೆ ಮೈದಾನದಲ್ಲಿ ಜ.12ರ ಮಧ್ಯಾಹ್ನ 2ಗಂಟೆಗೆ ಆಯೋಜಿಸಲಾದ ಯುವಜನೋತ್ಸವ ಕಾರ್ಯಕ್ರಮವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟನೆ ಮಾಡುತ್ತಿದ್ದಾರೆ. ಹಾಗಾಗಿ ಹುಬ್ಬಳ್ಳಿ ವ್ಯಾಪ್ತಿಯ ಎಲ್ಲ ಸರಕಾರಿ, ಅನುದಾನಿತ, ಅನುದಾನರಹಿತ ಪದವಿ ಕಾಲೇಜುಗಳಿಂದ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಬೇಕು. ಎಲ್ಲ ವಿದ್ಯಾರ್ಥಿಗಳಿಗೆ ಫಾತಿಮಾ ಪದವಿ ಪೂರ್ವ ಕಾಲೇಜಿನಲ್ಲಿ ಊಟದ ವ್ಯವಸ್ಥೆ ಮಾಡಲಾಗಿದ್ದು, ರೈಲ್ವೆ ಮೈದಾನಕ್ಕೆ ಹಾಜರಾಗುವ ಮುನ್ನ ಊಟ ಮಾಡಿಸಿಕೊಂಡು ಬರಬೇಕು ಎಂದು ತಿಳಿಸಲಾಗಿದೆ.

ಭದ್ರತಾ ದೃಷ್ಟಿಯಿಂದ ಎಲ್ಲ ಪ್ರಾಚಾರ್ಯರು, ಉಪನ್ಯಾಸಕರು ಇಲಾಖೆಯಿಂದ ಒದಗಿಸಿರುವ ಗುರುತಿನ ಚೀಟಿಯನ್ನು ಹಾಗೂ ವಿದ್ಯಾರ್ಥಿಗಳು ಕಾಲೇಜಿನಿಂದ ನೀಡಿರುವ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಿರಬೇಕು ಎಂದು ಆದೇಶಿಸಿದೆ.

Similar News