ಬಿಜೆಪಿ ಸರಕಾರ ಜಾತಿ, ಧರ್ಮ ಮೀರಿ ಸರ್ವ ಜನಾಂಗದವರ ಅಭಿವೃದ್ಧಿಗೆ ಶ್ರಮಿಸುತ್ತಿದೆ: ಶೋಭಾ ಕರಂದ್ಲಾಜೆ
ಅಜ್ಜಂಪುರ, ಜ.11: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅಭಿವೃದ್ಧಿ ಕೆಲಸಗಳಿಗೆ ಮೊದಲ ಆದ್ಯತೆ ನೀಡುತ್ತಿದ್ದು, ಯಾವುದೇ ಜಾತಿ, ಧರ್ಮ ನೋಡದೇ ಎಲ್ಲಾ ವರ್ಗದವರ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಬುಧವಾರ ಅಜ್ಜಂಪುರದ ಕೈಲಾಸಂ ಕಲಾಕ್ಷೇತ್ರ ಆವರಣದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ವತಿಯಿಂದ ತರೀಕೆರೆ ತಾಲೂಕಿನ ಬೇಲೇನಹಳ್ಳಿ ಹಾಗೂ ಇತರ 20 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರು ಯೋಜನೆಯಿಂದ ಅಜ್ಜಂಪುರ ಪಟ್ಟಣಕ್ಕೆ ನೀರು ಸರಬರಾಜು ಯೋಜನೆ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಸಲ್ಲದು. ಜಾತಿ, ಧರ್ಮ ಮುಂದಿಟ್ಟುಕೊಂಡು ಯಾವುದೇ ಪಕ್ಷ ಅಭಿವೃದ್ದಿಯನ್ನು ತಡೆಯಬಾರದು ಎಂದರು.
2009ರಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಬಿಜೆಪಿ ಸರಕಾರ ಅನುಮೋದನೆ ನೀಡಿತ್ತು. ಕಾಮಗಾರಿಗೆ ಚಾಲನೆ ಸಿಗುವಷ್ಠರಲ್ಲಿ ಅಸ್ತಿತ್ವಕ್ಕೆ ಬಂದ ಹೊಸ ಸರಕಾರ ಯೋಜನೆ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ತಾಳಿತ್ತು. ಯೋಜನೆ ಲೋಕಾರ್ಪಣೆಗೊಳ್ಳಲು ಮತ್ತೆ ಬಿಜೆಪಿ ಸರಕಾರವೇ ಅಧಿಕಾರಕ್ಕೆ ಬರಬೇಕಾಯಿತು ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ಸರಕಾರ ಜನರಿಗೆ ಉಚಿತ ಔಷಧ, ಶುದ್ಧ ಕುಡಿಯುವ ನೀರು, ರಸ್ತೆ, ವಸತಿ, ಕಿಸಾನ್ ಸಮ್ಮಾನ್‍ಯೋಜನೆ, ಆಯುಷ್ಮಾನ್‍ಯೋಜನೆಯಂತಹ ಮಹತ್ವದ ಯೋಜನೆಗಳನ್ನು ನೀಡುವಲ್ಲಿ ಜಾತಿ, ಧರ್ಮವನ್ನು ನೋಡದೇ ಕೆಲಸ ಮಾಡುತ್ತಿದೆ ಎಂದರು.
ಈರುಳ್ಳಿ ಈ ಭಾಗದಲ್ಲಿ ಪ್ರಮುಖ ಬೆಳೆಯಾಗಿದೆ. ಈರುಳ್ಳಿ ಬೆಳೆಯುವವರ ಸಂಖ್ಯೆ ಹೆಚ್ಚಿದ್ದು, ಪ್ರತಿಕೂಲ ಪರಿಸ್ಥಿತಿಯಲ್ಲಿ ಈರುಳ್ಳಿ ಸಂಗ್ರಹಿಸಿಡಲು ಅಗತ್ಯವಾದ ಶಿಥಲೀಕರಣ ಘಟಕಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಸಿಗುವಂತಾಗಲು ರೈತರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಕೃಷಿಯಲ್ಲಿ ಲಾಭಗಳಿಸಬೇಕು ಎಂಬ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರಕಾರ ಹಲವಾರು ಯೋಜನೆಗಳನ್ನು ಜಾರಿ ಮಾಡುತ್ತಿದೆ ಎಂದ ಅವರು, ಅಜ್ಜಂಪುರ ಭಾಗದ ಬಹುದಿನಗಳ ಬೇಡಿಕೆಯಾದ ರೈಲ್ವೆ ನಿಲ್ದಾಣ ಅಭಿವೃದ್ದಿ, ರೈಲ್ವೆ ಮೇಲ್ಸೇತುವೆ ನಿರ್ಮಾಣ, ಹೆಚ್ಚುವರಿ ರೈಲು ನಿಲುಗಡೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.