×
Ad

ನಿರುದ್ಯೋಗ, ಕೋಮುಗಲಭೆಗಳಿಗೆ ಬಲಿಯಾಗುತ್ತಿರುವ ರಾಜ್ಯದ ಯುವ ಸಮುದಾಯ: ಸಿದ್ದರಾಮಯ್ಯ

Update: 2023-01-11 22:34 IST

ಬೆಂಗಳೂರು, ಜ.11: ನಿರುದ್ಯೋಗ, ಸರಕಾರಿ ನೇಮಕಾತಿಗಳಲ್ಲಿ ಭ್ರಷ್ಟಾಚಾರ, ಶಿಕ್ಷಣ ಕ್ಷೇತ್ರದ ನಿರ್ಲಕ್ಷ್ಯ ಮತ್ತು ಕೋಮುಗಲಭೆಗಳಿಗೆ ಬಲಿಯಾಗುತ್ತಿರುವ ರಾಜ್ಯದ ಯುವ ಸಮುದಾಯವನ್ನು ಅಣಕಿಸುವಂತೆ ರಾಷ್ಟ್ರೀಯ ಯುವಜನೋತ್ಸವವನ್ನು ಉದ್ಘಾಟಿಸಲು ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ಮೋದಿಗೆ ಸ್ವಾಗತ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಬುಧವಾರ ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕರ್ನಾಟಕದಲ್ಲಿ ಪ್ರಸ್ತುತ 25 ಲಕ್ಷಕ್ಕೂ ಮಿಕ್ಕಿ ನಿರುದ್ಯೋಗಿಗಳಿದ್ದಾರೆ, ಸರಕಾರಿ ಕಚೇರಿಗಳಲ್ಲಿ 2.52 ಲಕ್ಷ ಉದ್ಯೋಗಗಳು ಖಾಲಿ ಬಿದ್ದಿವೆ. ಸರಕಾರಿ ಶಾಲೆಗಳು ಮತ್ತು ಪಿಯು ಕಾಲೇಜುಗಳಲ್ಲಿ 53,700 ಹುದ್ದೆಗಳು ಭರ್ತಿಯಾಗಿಲ್ಲ. ಸಣ್ಣ ಕೈಗಾರಿಗಳು ಮುಚ್ಚಿಹೋದ ಕಾರಣ 83,190 ಪುರುಷರು ಮತ್ತು ಮಹಿಳೆಯರು ನಿರುದ್ಯೋಗಿಗಳಾಗಿದ್ದಾರೆ ಎಂದು ಹೇಳಿದ್ದಾರೆ.

ಈ ಸ್ಥಿತಿಯಲ್ಲಿ ಮೋದಿ ಯಾವ ಮುಖಹೊತ್ತು ಯುವಜನೋತ್ಸವ ಉದ್ಘಾಟಿಸಲು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ? ಅವರು ಉದ್ಘಾಟಿಸುತ್ತಿರುವುದು ಯುವಜನೋತ್ಸವವೇ? ಯುವಜನವಿನಾಶೋತ್ಸವವೇ? ಪಿಎಸ್ಸೈ ನೇಮಕಾತಿ ಹಗರಣಕ್ಕೆ 1.29 ಲಕ್ಷ ಯುವಜನರು ಬಲಿಯಾಗಿದ್ದಾರೆ. ಎಇ ಮತ್ತು ಜೆಇ ಪರೀಕ್ಷೆಗಳ ಪ್ರತಿಯೊಬ್ಬ ಅಭ್ಯರ್ಥಿಗಳಿಂದಲೂ 50-80 ಲಕ್ಷ ರೂ.ಗಳನ್ನು ಸುಲಿಗೆ ಮಾಡಲಾಗಿದೆ ಎಂದು ಅವರು ಟೀಕಿಸಿದ್ದಾರೆ.

ರೈಲ್ವೆಯ ಭ್ರಷ್ಟ ಅಧಿಕಾರಿಗಳು ನೇಮಕಾತಿಯ ಸುಳ್ಳು ಭರವಸೆ ನೀಡಿ 22ಕೋಟಿ ರೂ.ಲೂಟಿ ಮಾಡಿದ್ದಾರೆ. ನಿರುದ್ಯೋಗದಿಂದ ಬೇಸತ್ತು ರಾಜ್ಯದಲ್ಲಿ 1,129 ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಾದೇಶಿಕ ಭಾಷೆಯಲ್ಲಿ ಕೇಂದ್ರ ನೇಮಕಾತಿ ಪರೀಕ್ಷೆಯನ್ನು ನಡೆಸಲು ನಿರಾಕರಿಸಲಾಗಿದೆ. ಗ್ರಾಮೀಣ ಬ್ಯಾಂಕಿಂಗ್ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಬರೆಯಬೇಕಾಗಿರುವ ಕಾರಣ ಈ ಬ್ಯಾಂಕ್ ಗಳಲ್ಲಿ ಕೇವಲ ಶೇ.6ರಷ್ಟು ಮಾತ್ರ ಕನ್ನಡಿಗ ಉದ್ಯೋಗಿಗಳಿದ್ದಾರೆ ಎಂದು ಅವರು ಹೇಳಿದ್ದಾರೆ. 

ಐಬಿಪಿಎಸ್ ಪರೀಕ್ಷೆಗಳೂ ಸೇರಿದಂತೆ ಕೇಂದ್ರ ಸ್ವಾಮ್ಯದ ಯಾವ ಸಂಸ್ಥೆಗಳಲ್ಲಿಯೂ ಕನ್ನಡದಲ್ಲಿ ಪರೀಕ್ಷೆ ಬರೆಯುವಂತಿಲ್ಲ. ಇದರಿಂದಾಗಿ ಸಾವಿರಾರು ಕನ್ನಡಿಗರು ಕನ್ನಡದ ನೆಲದಲ್ಲಿಯೇ ಉದ್ಯೋಗ ವಂಚಿತರಾಗುತ್ತಿದ್ದಾರೆ. ಕಾವೇರಿ ಮತ್ತು ಗಂಗೆಯಲ್ಲಿ ನೂರು ಬಾರಿ ಮುಳುಗಿ ಎದ್ದರೂ  ನೊಂದ ಯುವ ಕನ್ನಡಿಗರ ಶಾಪದಿಂದ ಬಿಜೆಪಿ ನಾಯಕರಿಗೆ ಮುಕ್ತಿ ಸಿಗಲಾರದು ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಸರಕಾರ ಶಿಕ್ಷಣ ಕ್ಷೇತ್ರವನ್ನು ಪಠ್ಯಪುಸ್ತಕ ಮತ್ತು ಪಠ್ಯೇತರ ಚಟುವಟಿಕೆಗಳ ಕೇಸರೀಕರಣಗೊಳಿಸಲು ಆದ್ಯತೆ ನೀಡುತ್ತಿದೆಯೇ ಹೊರತು ಶೈಕ್ಷಣಿಕ ಮೂಲಸೌಕರ್ಯಗಳ ಅಭಿವೃದ್ದಿಗೆ ಗಮನ ನೀಡುತ್ತಿಲ್ಲ. ಮೂರು ಬಜೆಟ್‍ಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಲಾಗುವ ಅನುದಾನ ಶೇ.1.97ಕ್ಕಿಂತ ಮೇಲೆ ಏರಿಲ್ಲ. ಸಿಎಜಿ ವರದಿ ಪ್ರಕಾರ 2022ರಲ್ಲಿ 1.62ಲಕ್ಷ ವಿದ್ಯಾರ್ಥಿಗಳು ಶಾಲೆ ತ್ಯಜಿಸಿದ್ದಾರೆ. 2020-21 ಮತ್ತು 2021-22ರ ಅವಧಿಯಲ್ಲಿ 1965 ಸರಕಾರಿ ಶಾಲೆಗಳನ್ನು ಮುಚ್ಚಲಾಗಿದೆ ಎಂದು ಅವರು ಹೇಳಿದ್ದಾರೆ.

ಯುವಜನರನ್ನು ಶಿಕ್ಷಣದಿಂದ ವಂಚಿತರನ್ನಾಗಿಸಿ ರಾಜಕೀಯ ಲಾಭಕ್ಕಾಗಿ ಕೋಮುವಾದಿ ಚಟುವಟಿಕೆಗಳಿಗೆ ಕಾಲಾಳುಗಳಾಗಿ ಬಳಸಿಕೊಳ್ಳಲು ಹೊರಟಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ 163 ಯುವಕರು ಕೋಮು ಗಲಭೆಗಳಲ್ಲಿ ಮೃತರಾಗಿದ್ದಾರೆ. ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನ ರದ್ದುಗೊಳಿಸಲಾಗಿದೆ.ಈ ವರ್ಗದ ಯುವಜನರಿಗೆ ವಿಶೇಷ ನೇಮಕಾತಿ ಯೋಜನೆ ಮೂಲಕ ಉದ್ಯೋಗ ನೀಡಲಾಗುವುದು ಎಂಬ ಬಿಜೆಪಿಯ ಭರವಸೆ ಹುಸಿಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಪ್ರಿಮೆಟ್ರಿಕ್ ವಿದ್ಯಾರ್ಥಿ ವೇತನ, ಸೈಕಲ್ ನೀಡುವ ಯೋಜನೆ ನಿಲ್ಲಿಸಲಾಗಿದೆ. ಇದರಿಂದಾಗಿ, ಗ್ರಾಮೀಣ ಪ್ರದೇಶದಲ್ಲಿ ಐದು ಲಕ್ಷ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಕುಸಿತ ಕಂಡಿದೆ. ಪ್ರತಿವರ್ಷ ಎರಡು ಕೋಟಿ ಉದ್ಯೋಗ ನೀಡುವ ಭರವಸೆ ನೀಡಿದ್ದ ಮೋದಿ, ಎಂಟು ವರ್ಷಗಳಲ್ಲಿ 12.50 ಕೋಟಿ ಉದ್ಯೋಗಗಳನ್ನು ಕಿತ್ತುಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಕೇವಲ ನೋಟು ಅಮಾನ್ಯೀಕರಣದ ಮೂರ್ಖ ತೀರ್ಮಾನದಿಂದ 50 ಲಕ್ಷ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳಲ್ಲಿ 62 ಲಕ್ಷ ಹುದ್ದೆಗಳು ಖಾಲಿ ಇವೆ. ನಿರುದ್ಯೋಗ ಮತ್ತು ಶಿಕ್ಷಣ ಕ್ಷೇತ್ರದ ನಿರ್ಲಕ್ಷ್ಯದ ಮೂಲಕ ಯುವಜನರನ್ನು ವಿನಾಶದ ಅಂಚಿಗೆ ತಳ್ಳಿರುವ ಪ್ರಧಾನಿಗೆ ರಾಷ್ಟ್ರೀಯ ಯುವಜನೋತ್ಸವವನ್ನು ಉದ್ಘಾಟಿಸಲು ಯಾವ ನೈತಿಕತೆ ಇದೆ. ಎನ್ನುವುದನ್ನು ಅವರೇ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Similar News