ಗಾಲಿ ಜನಾರ್ದನ ರೆಡ್ಡಿ ಆಸ್ತಿ ಜಪ್ತಿ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಅನುಮತಿ

Update: 2023-01-12 12:22 GMT

ಬೆಂಗಳೂರು, ಜ.12: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತವರ ಕುಟುಂಬಸ್ಥರಿಗೆ ಸೇರಿದ ಹೆಚ್ಚುವರಿ ಆಸ್ತಿ ಜಪ್ತಿ ಪ್ರಕ್ರಿಯೆಗೆ ಸರಕಾರ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ.

ಜನಾರ್ದನ ರೆಡ್ಡಿ ಮತ್ತವರ ಕುಟುಂಬಸ್ಥರಿಗೆ ಸೇರಿದ ಹೆಚ್ಚುವರಿ ಆಸ್ತಿಗಳನ್ನು ಜಪ್ತಿ ಮಾಡಲು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಅನುಮತಿ ಕೋರಿ ಸಲ್ಲಿಸಿರುವ ಮನವಿಯನ್ನು ಪರಿಗಣಿಸಲು ಸರಕಾರಕ್ಕೆ ನಿರ್ದೇಶನ ನೀಡುವಂತೆ ಸಿಬಿಐ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.

ಅರ್ಜಿಯು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಈ ವೇಳೆ ಸರಕಾರದ ಪರ ವಕೀಲರು, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸಿಬಿಐ ವಿಶೇಷ ನ್ಯಾಯಲಯಕ್ಕೆ ಅರ್ಜಿ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿ ಗೃಹ ಇಲಾಖೆ ಹೊರಡಿಸಿರುವ ಆದೇಶದ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

ಸರಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಸಿಬಿಐ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿತು. ಆಗಸ್ಟ್‍ನಲ್ಲೇ ಸಿಬಿಐ ಅರ್ಜಿ ಸಲ್ಲಿಸಿತ್ತು. ತೆಲಂಗಾಣ, ಆಂಧ್ರ ಪ್ರದೇಶದಲ್ಲಿನ ಆಸ್ತಿ ಜಪ್ತಿಗೆ ಅನುಮತಿ ಕೇಳಿತ್ತು. ಸರಕಾರದ ವಿಳಂಬ ಹಿನ್ನೆಲೆಯಲ್ಲಿ ಸಿಬಿಐ ಹೈಕೋರ್ಟ್‍ಗೆ ಮೊರೆ ಹೋಗಿತ್ತು. ಸಿಬಿಐ ಪರ ವಿಶೇಷ ಸರಕಾರಿ ಅಭಿಯೋಜಕ ಪಿ.ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು. 

ಇದನ್ನೂ ಓದಿ: ಜೈಲಿನಲ್ಲಿ ನಾಲ್ಕೈದು ಅಡಿ ಜಾಗದಲ್ಲಿದ್ದವನು ನಾನು, ಆಸ್ತಿ ಜಪ್ತಿಗೆ ಹೆದರುವ ಪ್ರಶ್ನೆಯೇ ಇಲ್ಲ: ಜನಾರ್ದನ ರೆಡ್ಡಿ

Similar News