ಸಿದ್ದರಾಮಯ್ಯ ದಿಕ್ಕಿಲ್ಲದ ರಾಜಕಾರಣಿ: ಸಚಿವ ಆರ್.ಅಶೋಕ್

Update: 2023-01-12 14:48 GMT

ಬೆಂಗಳೂರು, ಜ.12: ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಿಕ್ಕು ಕಾಣದಿರುವ ರಾಜಕಾರಣಿ. ಬಾದಾಮಿ ಕ್ಷೇತ್ರದ ರೀತಿಯಲ್ಲೇ ಇದೀಗ ಸ್ಪರ್ಧಿಸಲು ಉದ್ದೇಶಿಸಿರುವ ಕೋಲಾರ ಕ್ಷೇತ್ರದಿಂದಲೂ ಜನ ಅವರನ್ನು ಓಡಿಸಲಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಟೀಕಿಸಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿ ಮಾಡದ ಹಿನ್ನೆಲೆಯಲ್ಲಿ ಸೋಲು ಅನುಭವಿಸಿದ್ದರು. ಬಾದಾಮಿಯಲ್ಲಿ ಅಭಿವೃದ್ಧಿ ಮಾಡಿದಿದ್ದರೆ ಅವರನ್ನು ಜನರು ಅಲ್ಲಿಂದ ಓಡಿಸುತ್ತಿರಲಿಲ್ಲ. ಇದೀಗ ಅಲ್ಲಿಂದಲೂ ಓಡಿಸಿದ್ದು, ಕೋಲಾರಕ್ಕೆ ಬಂದಿದ್ದಾರೆ ಎಂದು ಲೇವಡಿ ಮಾಡಿದರು.

ಬಾದಾಮಿ ಕ್ಷೇತ್ರದಲ್ಲಿ ಈ ಹಿಂದೆ ಶಾಸಕರಾಗಿದ್ದ ಚಿಮ್ಮನಕಟ್ಟಿ ಅವರು, ವೇದಿಕೆ ಮೇಲೆಯೇ ನನಗೆ ಮೋಸ ಮಾಡಿದರು ಎಂದು ಹೇಳಿದ್ದರು. ಸಿದ್ದರಾಮಯ್ಯ ಕ್ಷೇತ್ರಕ್ಕೆ ಅನುಕೂಲ ಆಗುವಂತಹ ಕೆಲಸ ಮಾಡಿದ್ದರೆ ಅಲ್ಲಿನ ಜನತೆ ಅವರನ್ನು ಬಿಟ್ಟುಕೊಡಲು ಸಾಧ್ಯವೇ ಇರಲಿಲ್ಲ. ಕೊರಟಗೆರೆ ಕ್ಷೇತ್ರದಲ್ಲಿ ಡಾ.ಪರಮೇಶ್ವರ್ ಹಾಗೂ ಸಂಸದ ಕೆ.ಎಚ್.ಮುನಿಯಪ್ಪರನ್ನು ಸೋಲಿಸಿದ್ದು, ಆ ಇಬ್ಬರು ಸಿದ್ದರಾಮಯ್ಯರನ್ನು ಸೋಲಿಸಲು ಕಾಯುತ್ತಿದ್ದಾರೆ ಎಂದು ಅಶೋಕ್ ಹೇಳಿದರು.

ಒಂದು ಕ್ಷೇತ್ರದಲ್ಲಿ ನಿಂತು ರಾಜಕಾರಣ ಮಾಡಬೇಕು. ಕ್ಷೇತ್ರದ ಜನತೆ ಮೇಲೆ ವಿಶ್ವಾಸ ಇರಿಸಬೇಕು. ಅದು ಬಿಟ್ಟು ಕೆಲಸ ಮಾಡದೆ ಕ್ಷೇತ್ರದಿಂದ ಕ್ಷೇತ್ರಕ್ಕೆ ಅಲೆಯುತ್ತಿದ್ದೀರಿ. ನೆಲೆ ಇಲ್ಲದ ಸಿದ್ದರಾಮಯ್ಯ, ಬಾದಾಮಿ, ಚಾಮುಂಡೇಶ್ವರಿ ಕ್ಷೇತ್ರಕ್ಕಿಂತಲ್ಲೂ ಕೋಲಾರದಲ್ಲಿ ಪರದಾಟ ಮಾಡುತ್ತಿದ್ದು, ಕೋಲಾರದಲ್ಲಿಯೂ ಹಾಲಿ ಶಾಸಕ ಶ್ರೀನಿವಾಸಗೌಡ ಅವರಿಗೆ ಹಣದ ಆಮಿಷವೊಡ್ಡಿರುವುದು ಬಹಿರಂಗ ಆಗಿದೆ ಎಂದು ಟೀಕಿಸಿದರು.

Similar News