5 ಲಕ್ಷ ಜನರಿಗೆ ಸ್ವಯಂ ಉದ್ಯೋಗಕ್ಕೆ ಯೋಜನೆ: ಮುಖ್ಯಮಂತ್ರಿ ಬೊಮ್ಮಾಯಿ

Update: 2023-01-12 15:44 GMT

ಹುಬ್ಬಳ್ಳಿ, ಜ.12: ಸುಮಾರು 5 ಲಕ್ಷ ಜನರಿಗೆ ಸ್ವಯಂ ಉದ್ಯೋಗ ನೀಡುವ ಸ್ವಾಮಿ ವಿವೇಕಾನಂದ ಯೋಜನೆಯನ್ನು ಕರ್ನಾಟಕದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ದೇಶದಲ್ಲಿಯೆ ಮೊಟ್ಟ ಮೊದಲು ಹೊಸ ಶಿಕ್ಷಣ ನೀತಿ ಜಾರಿಗೊಳಿಸಿದ ಕೀರ್ತಿ ನಮ್ಮ ರಾಜ್ಯದ್ದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಗುರುವಾರ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಮಂತ್ರಾಲಯ ಹಾಗೂ ರಾಜ್ಯ ಸರಕಾರದ ಸಹಯೋಗದಲ್ಲಿ ಆಯೋಜಿಸಿರುವ 26 ನೇ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮುಂಬರುವ ಒಲಿಂಪಿಕ್ ಕ್ರೀಡಾಕೂಟಕ್ಕಾಗಿ ರಾಜ್ಯವು 75 ಜನ ಕ್ರೀಡಾಪಟುಗಳನ್ಬು ಅಣಿಗೊಳಿಸಲು ಪ್ರತಿಭಾವಂತರನ್ನು ದತ್ತು ಪಡೆದು ತರಬೇತಿ ನೀಡುವ ಕಾರ್ಯಕೈಗೊಂಡಿದೆ. ಯುವಜನರನ್ನು ಸ್ವಯಂ ಉದ್ಯೋಗಿಗಳನ್ನಾಗಿಸಲು ರಾಜ್ಯ ಸರಕಾರವು ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಯೋಜನೆ ಜಾರಿಗೊಳಿಸಲಿದೆ ಎಂದು ಅವರು ತಿಳಿಸಿದರು.

ಸ್ವಾಮಿ ವಿವೇಕಾನಂದರು ಯುವಕರಿಗೆ ಪ್ರೇರಣೆಕೊಟ್ಟ ಧೀಮಂತ ಯೋಗಿಯಾಗಿದ್ದಾರೆ. ಧ್ಯಾನ ಮತ್ತು ಜ್ಞಾನವನ್ನು ಯುವಜನರಿಗೆ ಬೋಧಿಸಿದ ಮಹಾನ್ ಚೇತನ ಅವರಾಗಿದ್ದಾರೆ. ಜನಸಂಖ್ಯೆ ಎಂದರೆ ಹೊರೆಯಲ್ಲ, ಅದು ಮಾನವಸಂಪತ್ತು ಅದರ ಸದ್ವಿನಿಯೋಗಪಡಿಸಿಕೊಂಡು, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ಫೂರ್ತಿಯಾಗಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಸಮಾರಂಭದಲ್ಲಿ ಕೇಂದ್ರ ಯುವ ವ್ಯವಹಾರಗಳು ಹಾಗೂ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್, ಕೇಂದ್ರ ಸಂಸದೀಯ ವ್ಯವಹಾರಹಗಳ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿದರು. ಕೈಮಗ್ಗ ಮತ್ತು ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಪಾಲ ಥಾವರ್‍ಚಂದ್ ಗೆಹ್ಲೊಟ್, ಕೇಂದ್ರ ಕ್ರೀಡಾ ಇಲಾಖೆ ರಾಜ್ಯ ಸಚಿವ ನಿಸಿತ್ ಪ್ರಮಾಣಿಕ್, ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣಗೌಡ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆಚಾರ್ ಹಾಲಪ್ಪ, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Similar News