×
Ad

ಏನಿದು ಡಬಲ್ ಗೇಮ್?, ಮಹದಾಯಿ ವಿವಾದ ಬಗ್ಗೆ ಸ್ಪಷ್ಟ ನಿಲುವೇನೆಂದು ಹೇಳಿಬಿಡಿ: ಬಿಜೆಪಿಗೆ ಸಿದ್ದರಾಮಯ್ಯ ಸವಾಲು

Update: 2023-01-12 22:25 IST

ಬೆಂಗಳೂರು, ಜ. 12: ಪ್ರಧಾನಿ ಮೋದಿ ಅವರೇ, ಮಹದಾಯಿ ನದಿನೀರಿನ ಯೋಜನೆ ಬಗ್ಗೆ ಕೇಂದ್ರ ಬಿಜೆಪಿ ಸರಕಾರದ ಸ್ಪಷ್ಟ ನಿಲುವನ್ನು ಘೋಷಿಸಿ ಬಿಡಿ. ಎರಡು ವರ್ಷ ಹತ್ತು ತಿಂಗಳ ವರೆಗೆ ಮುಚ್ಚಿಟ್ಟು ಈಗ ಅನುಮತಿ ನೀಡಿರುವುದು ನ್ಯಾಯದ ತೀರ್ಮಾನವೇ? ಅನ್ಯಾಯದ ಆಟವೇ?’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಗೋವಾ ಮುಖ್ಯಮಂತ್ರಿಗಳ ನೇತೃತ್ವದ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ನೀರಾವರಿ ಸಚಿವ ಗಜೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿ ಡಿಪಿಆರ್‍ಗೆ ನೀಡಿರುವ ಅನುಮತಿಯನ್ನು ಹಿಂದೆಗೆದುಕೊಳ್ಳಲು ಮನವಿ ಮಾಡಿದೆ. ಗೃಹ ಸಚಿವ ಅಮಿತ್ ಶಾ ಅವರು ಆಶಾದಾಯಕ ಭರವಸೆ ನೀಡಿದ್ದಾರಂತೆ. ಏನಿದು ಡಬಲ್ ಗೇಮ್?’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ಮಹದಾಯಿ ನದಿ ನೀರಿನ ವಿವಾದ ಇತ್ಯರ್ಥಕ್ಕಾಗಿ ಗೋವಾ ಮುಖ್ಯಮಂತ್ರಿಗಳು ಪ್ರಾಧಿಕಾರ ರಚಿಸಲು ಕೇಳಿಕೊಂಡಿದ್ದಾರಂತೆ. ಇದು ವಿಳಂಬ ನೀತಿಯ ಕಾರ್ಯತಂತ್ರ. ಗೋವಾ ಸರಕಾರದ ಒತ್ತಡಕ್ಕೆ ಮಣಿದು ಡಿಪಿಆರ್‍ಗೆ ನೀಡಿರುವ ಅನುಮತಿಯನ್ನು ವಾಪಸು ಪಡೆಯಬಾರದು ಎಂದು ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡುತ್ತೇನೆ’ ಎಂದು ಅವರು ತಿಳಿಸಿದ್ದಾರೆ.

‘ರಾಜ್ಯದ ಮುಖ್ಯಮಂತ್ರಿ ಈ ಬೆಳವಣಿಗೆಯನ್ನು ಗಮನಿಸಿದ್ದಾರೆಂದು ನಂಬಿದ್ದೇನೆ. ಈ ರಾಜಕೀಯ ಜಿದ್ದಾಜಿದ್ದಿಯಲ್ಲಿ ಬಲಶಾಲಿಯಾಗಿದ್ದವರೇ ಗೆಲ್ಲುವುದು ರಾಜನೀತಿ. ಬಸವರಾಜ ಬೊಮ್ಮಾಯಿ ಅವರು ಮತ್ತು ರಾಜ್ಯದ ಇಪ್ಪತ್ತೈದು ಮಂದಿ ಬಿಜೆಪಿ ಸಂಸದರು ರಾಜ್ಯಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು’ ಎಂದು ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.

Similar News