ಹವಾಮಾನ ಬದಲಾವಣೆ, ಅಭಿವೃದ್ಧಿಯಿಂದ ಹಿಮಾಲಯಕ್ಕೆ ಕುತ್ತು

ಜೋಶಿಮಠ ಕುಸಿಯುತ್ತಿದೆ. ಈ ಕುಸಿತದ ಹಿಂದೆ ದಶಮಾನಗಳ ನಿರ್ಲಕ್ಷ, ಉಪೇಕ್ಷೆ ಹಾಗೂ ತಾತ್ಸಾರದ ಸುದೀರ್ಘ ಹಿನ್ನೆಲೆ ಇದೆ.

Update: 2023-01-13 05:58 GMT

ಮನುಷ್ಯರು ಪ್ರಕೃತಿಯನ್ನು ಮಣಿಸಬಹುದು ಎಂದುಕೊಳ್ಳುತ್ತಾರೆ. ಆದರೆ, ಭೂಮಿ ಒಂದು ಹಂತದ ಬಳಿಕ ತನ್ನ ಧಾರಣ ಶಕ್ತಿಯನ್ನು ಕಳೆದುಕೊಂಡು ಉಗ್ರವಾಗಿ ಪ್ರತಿಕ್ರಿಯಿಸುತ್ತದೆ. ಸರಕಾರ ಹಾಗೂ ನ್ಯಾಯಾಂಗ ಹಿಮಾಲಯವನ್ನು ರಕ್ಷಿಸಲು ವಿಫಲವಾಗಿವೆ. ಚರಿತ್ರೆಯಿಂದ ಮನುಷ್ಯ ಪಾಠ ಕಲಿಯುವುದಿಲ್ಲ ಎನ್ನುವುದಕ್ಕೆ ಜೋಶಿಮಠ ದುರಂತ ಒಂದು ಉದಾಹರಣೆಯಷ್ಟೇ.


ಬದರಿನಾಥದ ಪ್ರವೇಶದ್ವಾರ ಎನ್ನಲಾಗುವ ಜೋಶಿಮಠ, ಧೌಲಿಗಂಗಾ ಹಾಗೂ ಅಲಕನಂದಾ ನದಿಗಳು ಸೇರುವ ವಿಷ್ಣುಪ್ರಯಾಗದ ಆಗ್ನೇಯ ಭಾಗದಲ್ಲಿದೆ. ಜೋಶಿಮಠದಲ್ಲಿ ಅಕ್ಟೋಬರ್ 2022ರಲ್ಲೇ ಬಿರುಕುಗಳು ಕಾಣಿಸಿ ಕೊಂಡಿದ್ದವು. ಸ್ಥಳೀಯರು, ಪರಿಸರ ಕಾರ್ಯಕರ್ತರು ತಪೋವನ್-ವಿಷ್ಣುಗಢ ಯೋಜನೆಯ 2.5 ಕಿ.ಮೀ. ಉದ್ದದ ಸುರಂಗ ಹಾಗೂ ಹೆಲಾಂಗ್ ಬೈಪಾಸ್ ಇದಕ್ಕೆ ಕಾರಣ ಎಂದು ದೂರಿದ್ದರು. 900 ಕಿ.ಮೀ. ಉದ್ದ ಹಾಗೂ 2,500 ಕೋಟಿ ರೂ. ವೆಚ್ಚದ ಈ ಹೆದ್ದಾರಿ ಒಕ್ಕೂಟ ಸರಕಾರದ ಪ್ರತಿಷ್ಠೆಯ ಯೋಜನೆ ಎನಿಸಿಕೊಂಡಿದೆ. ವಿರೋಧಿಸಿದವರಿಗೆ ಪ್ರಗತಿವಿರೋಧಿ-ದೇಶವಿರೋಧಿ ಎನ್ನುವ ಹಣೆಪಟ್ಟಿಯೂ ಸಿಕ್ಕಿದೆ. ಆದರೆ, ಉತ್ತರಾಖಂಡದಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಈ ಯೋಜನೆ ಕಾರಣವಲ್ಲ ಎಂದು ಸಚಿವ ನಿತಿನ್ ಗಡ್ಕರಿ ರಾಜ್ಯಸಭೆಯಲ್ಲಿ ಸಮರ್ಥಿಸಿಕೊಂಡಿದ್ದರು. ಸದ್ಯ ಈ ಎರಡೂ ಕಾಮಗಾರಿಗಳು ಸ್ಥಗಿತಗೊಂಡಿವೆ.

ಜಮ್ಮು-ಕಾಶ್ಮೀರದಿಂದ ಆರಂಭಗೊಂಡು 13 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ 2,500 ಕಿ.ಮೀ. ಉದ್ದ ವ್ಯಾಪಿಸಿರುವ ಹಿಮಾಲಯ ದೇಶವನ್ನು ಕಾಯುತ್ತಿರುವ ಸಿಪಾಯಿ. ಅದು ಒಂದು ದಿನದಲ್ಲಿ ಆದದ್ದಲ್ಲ. 40-50 ದಶಲಕ್ಷ ವರ್ಷಗಳ ಹಿಂದೆ ಉತ್ತರಕ್ಕೆ ಚಲಿಸುತ್ತಿದ್ದ ಭಾರತೀಯ ಫಲಕವು ಯುರೇಷಿಯನ್ ಫಲಕಕ್ಕೆ ಢಿಕ್ಕಿ ಹೊಡೆದಾಗ ಸೃಷ್ಟಿಯಾದ ಹಿಮಾಲಯ, ಜಗತ್ತಿನ ಕಿರಿಯ ಹಾಗೂ ಸೂಕ್ಷ್ಮವಾದ ಪರ್ವತ ಶ್ರೇಣಿ. ಇಲ್ಲಿ ಭೂಮಿಯ ಹೊರ ಪದರದ ರಚನೆ ಈಗಲೂ ಸಕ್ರಿಯವಾಗಿದ್ದು, ಭಾರತೀಯ ಫಲಕ ಪ್ರತಿವರ್ಷ 1 ಮಿಲಿಮೀಟರ್‌ನಷ್ಟು ಚಲಿಸುತ್ತದೆ ಮತ್ತು ಇದರಿಂದ ಹಿಮಾಲಯದ ಎತ್ತರ ಒಂದು ಸೆಂಟಿಮೀಟರ್‌ನಷ್ಟು ಹೆಚ್ಚುತ್ತದೆ. ಈ ನಿರಂತರ ಚಲನೆಯಿಂದಾಗಿ ಅಸಂಖ್ಯಾತ ರಚನಾದೋಷಗಳಿವೆ.

ಸರಣಿಯೋಪಾದಿಯಲ್ಲಿ ಅವಘಡಗಳು:
ಫೆಬ್ರವರಿ 7,2021ರಲ್ಲಿ ಉತ್ತರಾಖಂಡದ ಚಮೋಲಿಯಲ್ಲಿ ಸಂಭವಿಸಿದ ಪ್ರವಾಹದಲ್ಲಿ 70 ಮಂದಿ ಮೃತಪಟ್ಟು, ನೂರಕ್ಕೂ ಹೆಚ್ಚು ಮಂದಿ ಕಾಣೆಯಾದರು. ನಿರ್ಮಾಣಗೊಳ್ಳುತ್ತಿದ್ದ 2 ಜಲವಿದ್ಯುತ್ ಸ್ಥಾವರಗಳು ಹಾನಿಗೀಡಾ ದವು. 6,500 ಮೀಟರ್ ಎತ್ತರದಲ್ಲಿದ್ದ ನೀರ್ಗಲ್ಲಿನ ಬೇರ್ಪಟ್ಟ ತುಂಡು 3,200 ಮೀಟರ್ ಕೆಳಗಿನ ನೀರ್ಗಲ್ಲು ಹಾಗೂ ಭಗ್ನಾವಶೇಷಗಳ ಕೊಳಕ್ಕೆ ಉರುಳಿತು. ಪ್ರವಾಹದ ತೀವ್ರತೆಗೆ ಹವಾಮಾನ ಬದಲಾವಣೆ ಹಾಗೂ ಅಭಿವೃದ್ಧಿ ಯೋಜನೆಗಳ ದುಷ್ಪರಿಣಾಮ ಕಾರಣ ಎನ್ನುತ್ತಾರೆ ವಿಜ್ಞಾನಿಗಳು.

ರೌಂತಿ ನೀರ್ಗಲ್ಲು ರಾಶಿ ಛಿದ್ರಗೊಂಡು, ಉತ್ತರಾಖಂಡದ ಋಷಿಗಂಗಾ ನದಿಯಲ್ಲಿ ಫೆಬ್ರವರಿ 7ರಂದು ಪ್ರವಾಹ ಬಂದಿತು. ಇದರಿಂದ 13.2 ಮೆಗಾವ್ಯಾಟ್ ಸಾಮರ್ಥ್ಯದ ಋಷಿಗಂಗಾ ಹಾಗೂ ಅಲಕನಂದಾದ ಉಪನದಿ ಧೌಲಿಗಂಗಾ ನದಿಯ ತಪೋವನ್ ಯೋಜನೆ ಕೊಚ್ಚಿಹೋಯಿತು. 200ಕ್ಕೂ ಅಧಿಕ ಮಂದಿ ಸಾವಿಗೀಡಾದರು. ಫೆಬ್ರವರಿ 2021ರಲ್ಲಿ ತಪೋವನ-ವಿಷ್ಣುಗಢ ಜಲವಿದ್ಯುತ್ ಯೋಜನೆಯ ಅಣೆಕಟ್ಟು ಸಮೀಪ ಸಂಭವಿಸಿದ ಹಿಮ ಕುಸಿತದಲ್ಲಿ 204 ಮಂದಿ ಕಾಣೆಯಾಗಿದ್ದರು. 2021ರಲ್ಲಿ ಧೌಲಿಗಂಗಾ ನದಿಯ ಪ್ರವಾಹದಲ್ಲಿ 70ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು. ಮೇ 2021ರಲ್ಲಿ ರಿಕ್ಟರ್ ಮಾಪಕದಲ್ಲಿ 4.3ರಷ್ಟಿದ್ದ ಭೂಕಂಪನವಾಗಿತ್ತು. ಭೂಕಂಪನದ ಕೇಂದ್ರ ಜೋಶಿಮಠದಲ್ಲೇ ಇತ್ತು. ಇದ್ಯಾವುದೂ ಸರಕಾರಗಳನ್ನು ಎಚ್ಚರಿಸಲಿಲ್ಲ.

ಹವಾಮಾನ ಬದಲಾವಣೆಯ ಆತಂಕ:
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸಾಸ್ಟರ್ ಮ್ಯಾನೇಜ್‌ಮೆಂಟ್‌ನ 2014ರ ವರದಿ, ಹವಾಮಾನ ಬದಲಾವಣೆಯಿಂದ ತತ್‌ಕ್ಷಣ ಪ್ರವಾಹಗಳು ಹೆಚ್ಚಲಿದ್ದು, ಇದಕ್ಕೆ ತೀವ್ರ ಮಳೆ, ನೀರ್ಗಲ್ಲು ಕೊಳಗಳ ಸ್ಫೋಟ ಮತ್ತು ಭೂ ಕುಸಿತ ಕಾರಣ ಎಂದು ಹೇಳಿದೆ. ತಾಪಮಾನ ಹೆಚ್ಚಳದಿಂದ ಕಲ್ಲುಗಳನ್ನು ಹಿಡಿದಿಡುವ, ಸಂದುಗಳಲ್ಲಿ ತುಂಬಿಕೊಂಡಿರುವ ಶಾಶ್ವತವಾಗಿ ಘನೀಕರಣಗೊಂಡ ಮಂಜುಗಡ್ಡೆ(ಪರ್ಮಾಫ್ರಾಸ್ಟ್) ಕರಗುತ್ತಿದೆ. ಗುಡ್ಡಗಳನ್ನು ಕಡಿದು ರಸ್ತೆ ನಿರ್ಮಿಸುವುದರಿಂದ ಹಾಗೂ ಗಣಿಗಾರಿಕೆಯಿಂದ ಇಳಿಜಾರುಗಳು ಅಸ್ತಿರಗೊಳ್ಳುತ್ತಿವೆ. ಜಗತ್ತಿನ ಅತ್ಯಂತ ಎತ್ತರದ ಪರ್ವತ ಶ್ರೇಣಿ ಹಾಗೂ ಟಿಬೆಟನ್ ಪ್ರಸ್ಥಭೂಮಿಯ ಉಷ್ಣತೆ 0.2 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಳಗೊಂಡಿ ದೆ. ಉತ್ತರಾಖಂಡ ಭಾಗದಲ್ಲಿ 90ಕ್ಕೂ ಅಧಿಕ ನೀರ್ಗಲ್ಲು ನದಿಗಳಿವೆ. ಇವು ಕಣ್ಮರೆಯಾಗುತ್ತಿರುವುದರಿಂದ, 2,500 ಮೀಟರ್‌ಗಿಂತ ಎತ್ತರದ ಪ್ರದೇಶಗಳಲ್ಲಿ ಅಪಾರ ಪ್ರಮಾಣದ ಕೆಸರು ಸಂಗ್ರಹವಾಗುತ್ತಿದೆ. ಇವು ವಿನಾಶಕಾರಿ ಪ್ರವಾಹಕ್ಕೆ ಕಾರಣವಾಗುತ್ತವೆ. ಹವಾಮಾನ ಬದಲಾವಣೆಯಿಂದ ಥರ್ಮಲ್ ಪ್ರೊಫೈಲ್ ಎಂದು ಕರೆಯಲ್ಪಡುವ ಉಷ್ಣಾಂಶ ವ್ಯಾಪ್ತಿ(-6ರಿಂದ -20 ಡಿಗ್ರಿ ಸೆಲ್ಸಿಯಸ್) -2 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದ್ದು, ನೀರ್ಗಲ್ಲುಗಳ ಕರಗುವಿಕೆ ಹೆಚ್ಚಳಗೊಂಡಿದೆ. ಈ ಎಲ್ಲ ಕಾರಣಗಳಿಂದಾಗಿ 2,200 ಮೀಟರ್‌ಗಿಂತ ಎತ್ತರದಲ್ಲಿ ಯಾವುದೇ ಜಲವಿದ್ಯುತ್ ಯೋಜನೆ ಕೂಡದು. ಇದರಿಂದ ಜನರು ಜೀವ ಹಾಗೂ ಜೀವನಾಧಾರ ಕಳೆದುಕೊಳ್ಳುತ್ತಾರೆ ಎಂದು ವಿಜ್ಞಾನಿಗಳು ಹೇಳುತ್ತಲೇ ಇದ್ದಾರೆ. ಆದರೆ, ಯಾರೂ ಕಿವಿಗೊಡುತ್ತಿಲ್ಲ. ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ಜೋಶಿಮಠ ಆರಂಭವಷ್ಟೇ. ಕರ್ಣಪ್ರಯಾಗ, ನೈನಿತಾಲ್ ಹಾಗೂ ಉತ್ತರಾಖಂಡದ ಇನ್ನಿತರ ನಗರಗಳು ಸರದಿ ಸಾಲಿನಲ್ಲಿ ನಿಂತಿವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸಮಿತಿ, ಪರಿಣತರ ವಿರೋಧ:
1976ರಲ್ಲಿ ಸರಕಾರ ನೇಮಿಸಿದ್ದ ಎಂ.ಸಿ.ಮಿಶ್ರಾ ಸಮಿತಿ, ನಿರ್ಮಾಣ ಕಾಮಗಾರಿಗಳನ್ನು ಅದರಲ್ಲೂ ವಿಶೇಷವಾಗಿ ಪರ್ವತದ ತಪ್ಪಲಿನಲ್ಲಿ ಮಾಡಲೇಬಾರದು ಎಂದಿತ್ತು. 2013ರ ಕೇದಾರನಾಥ ಪ್ರವಾಹದಲ್ಲಿ ಕನಿಷ್ಠ 5,000 ಮಂದಿ ಜೀವ ಕಳೆದುಕೊಂಡರು. ಆನಂತರ ಸುಪ್ರೀಂ ಕೋರ್ಟ್ ಉತ್ತರಾಖಂಡದಲ್ಲಿ ಜಲ ವಿದ್ಯುತ್ ಯೋಜನೆಗಳಿಗೆ ತಡೆ ನೀಡಿತು. ಪರಿಸರ ಮಂತ್ರಾಲಯ ರವಿ ಚೋಪ್ರಾ ನೇತೃತ್ವದ 17 ಪರಿಣತರ ಸಮಿತಿಯನ್ನು ನೇಮಿಸಿ, ಅಲಕನಂದಾ ಮತ್ತು ಭಾಗೀರಥಿ ನದಿ ಪಾತ್ರದ 24 ಜಲವಿದ್ಯುತ್ ಯೋಜನೆಗಳನ್ನು ಪರಿಶೀಲಿಸಲು ಕೋರಿತು. 23 ಯೋಜನೆಗಳು ಈ ಪ್ರಾಂತದ ಪರಿಸರದ ಮೇಲೆ ಮಾರ್ಪಡಿಸಲು ಆಗದ ದುಷ್ಪರಿಣಾಮ ಬೀರಲಿವೆ ಎಂದು ಸಮಿತಿ ಹೇಳಿತು. ಆನಂತರ 6 ಮಂದಿ ಗುತ್ತಿಗೆದಾರರು ''ಕೇದಾರನಾಥ ದುರಂತಕ್ಕೆ ಮುನ್ನ ನಿರ್ಮಾಣಕ್ಕೆ ಅನುಮತಿ ಸಿಕ್ಕಿರುವುದರಿಂದ, ಯೋಜನೆ ಮುಂದುವರಿಸಲು ಅವಕಾಶ ನೀಡಬೇಕು'' ಎಂದು ನ್ಯಾಯಾಲಯವನ್ನು ಕೋರಿದರು. ಸುಪ್ರೀಂ ಕೋರ್ಟ್ ಮನವಿಯನ್ನು ಪರಿಶೀಲಿಸಲು ಕಾನ್ಪುರ ಐಐಟಿಯ ವಿನೋದ್ ತಾರೆ ನೇತೃತ್ವದ ಸಮಿತಿಯನ್ನು ನೇಮಿಸಿತು. ''ಈ ಯೋಜನೆಗಳು ಪರಿಸರದ ಮೇಲೆ ಗಮನಾರ್ಹ ದುಷ್ಪರಿಣಾಮ ಬೀರುತ್ತವೆ'' ಎಂದು ಸಮಿತಿ ಹೇಳಿತು. ಆದರೆ, ಅನುಕೂಲಕರ ವರದಿ ಪಡೆಯುವುದು ಗುತ್ತಿಗೆದಾರರು-ಅಧಿಕಾರಸ್ಥರಿಗೆ ಸಮಸ್ಯೆಯೇನಲ್ಲ. 2015ರಲ್ಲಿ ನೇಮಕಗೊಂಡ ಬಿ.ಪಿ.ದಾಸ್(ಇವರು ಹಿಂದಿನ ಸಮಿತಿಯ ಸದಸ್ಯರು) ನೇತೃತ್ವದ ಸಮಿತಿ ವ್ಯತಿರಿಕ್ತ ವರದಿ ನೀಡಿತು. ವಿನ್ಯಾಸದಲ್ಲಿ ಕೆಲವು ಮಾರ್ಪಾಡುಗಳೊಂದಿಗೆ 6 ಯೋಜನೆಗಳಿಗೆ ಅನುಮತಿ ನೀಡಿತು! ಪರಿಸರ ಹಾಗೂ ಇಂಧನ ಮಂತ್ರಾಲಯಗಳು ಖುಷಿಯಾದವು.

ರವಿ ಚೋಪ್ರಾ ನೇತೃತ್ವದ ಉತ್ತರಾಖಂಡದ ಜಲ ವಿದ್ಯುತ್ ಯೋಜನೆಗಳ ಸಮಿತಿ ವರದಿ ಪ್ರಕಾರ, ಸರಕಾರ 450 ಜಲಯೋಜನೆಗಳಿಂದ 27,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಮುಂದಾಗಿದೆ. ಇದರಲ್ಲಿ 2,700 ಮೆಗಾವ್ಯಾಟ್ ಸಾಮರ್ಥ್ಯದ 92 ಯೋಜನೆಗಳು ಚಾಲನೆಯಲ್ಲಿದ್ದು, 38 ಯೋಜನೆಗಳ ನಿರ್ಮಾಣ ನಡೆಯುತ್ತಿದೆ. 22 ಯೋಜನೆಗಳು 3,000 ಮೀಟರ್‌ಗಿಂತ ಎತ್ತರ ಪ್ರದೇಶದಲ್ಲಿ(ಹಿಮನದಿಗಳು ಕಣ್ಮರೆಯಾದ ವಲಯ), 44 ಯೋಜನೆಗಳು 2,500-3,000 ಮೀಟರ್ ಎತ್ತರದಲ್ಲಿ(ಹಿಮನದಿಗಳಿರುವ ಪ್ರದೇಶ ಹಾಗೂ ಚಳಿಗಾಲದ ಮಂಜಿನ ರೇಖೆ ನಡುವೆ) ಇವೆ ಹಾಗೂ ಉದ್ದೇಶಿತ 54 ಯೋಜನೆಗಳು 2,000-2,500 ಮೀಟರ್(ಚಳಿಗಾಲದ ಮಂಜಿನ ರೇಖೆ ಸುತ್ತಮುತ್ತ) ಎತ್ತರದಲ್ಲಿ ಇವೆ. ತಜ್ಞರ ಪ್ರಕಾರ ಇವು ಸುರಕ್ಷಿತವಲ್ಲ ಹಾಗೂ ಅಪಾರ ಹಾನಿಗೆ ಕಾರಣವಾಗುತ್ತವೆ. ಹೀಗಿದ್ದರೂ, ಸರಕಾರ ಇಲ್ಲವೇ ನ್ಯಾಯಾಲಯ ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ.
ಮಧ್ಯಮೇಶ್ವರಿ ಕಣಿವೆಯ ಭೆಂತಿಯಲ್ಲಿ ಬೆಟ್ಟವೊಂದರ ಹಠಾತ್ ಕುಸಿತ ಹಾಗೂ ಉತ್ತರಕಾಶಿಯಲ್ಲಿ ವರ್ಣಾವತ್ ಪಲಾವತ್ ನೆಲಸಮಗೊಂಡಿದ್ದಕ್ಕೆ ಏನು ಕಾರಣ ಎನ್ನುವುದು ಇಂದಿಗೂ ನಿಗೂಢವಾಗಿದೆ. ಹಿಮಾಲಯದ ನದಿ ಕಮರಿಗಳಲ್ಲಿ ಅಸಂಖ್ಯಾತ ಭೂಕುಸಿತಗಳು ಸಂಭವಿಸುತ್ತವೆ ಮತ್ತು ಇವು ನದಿಗಳ ಹರಿವಿಗೆ ಅಡ್ಡ ಬರುತ್ತವೆ. ಅಲಕನಂದಾ(1970) ಹಾಗೂ ಭಾಗೀರಥಿ(1978)ರ ಪ್ರವಾಹಕ್ಕೆ ಕಾರಣವಾಗಿದ್ದು ಇಂಥ ಭೂಕುಸಿತಗಳೇ.

ಚಾರ್‌ಧಾಮ ಯೋಜನೆ:
ಯಮುನೋತ್ರಿ, ಗಂಗೋತ್ರಿ, ಬದ್ರಿನಾಥ ಮತ್ತು ಕೇದಾರನಾಥವನ್ನು ಸಂಪರ್ಕಿಸುವ ರಸ್ತೆಯನ್ನು 10 ಮೀಟರ್‌ಗೆ ವಿಸ್ತರಿಸುವ ಯೋಜನೆಯೇ ಚಾರ್‌ಧಾಮ. ಜೋಶಿಮಠ ಮುಖ್ಯ ಕೇಂದ್ರ ಒತ್ತಡ (ಎಂಸಿಟಿ, ಮೇನ್ ಸೆಂಟ್ರಲ್ ತ್ರಸ್ಟ್) ವಲಯದಲ್ಲಿದೆ. ಇಲ್ಲಿ ಭೂಪದರಗಳು ಮೇಲೆ ಬಂದಂತೆ ಶಿಲೆಗಳು ದುರ್ಬಲಗೊಳ್ಳುತ್ತವೆ. ಆದ್ದರಿಂದ, ಇಲ್ಲಿ ಯಾವುದೇ ಜಲಶಕ್ತಿ ಯೋಜನೆ ಕೂಡದು. ತಪೋವನ-ವಿಷ್ಣುಗಡ ಯೋಜನೆ ಕೈ ಬಿಡಬೇಕು ಹಾಗೂ ಧೌಲಿಗಂಗಾ ಮತ್ತು ಋಷಿಗಂಗಾ ಅಣೆಕಟ್ಟು ನಿರ್ಮಿಸಬಾರದು ಎಂದು ರವಿ ಚೋಪ್ರಾ ನೇತೃತ್ವದ ಸಮಿತಿ 2013-14ರಲ್ಲಿ ಸ್ಪಷ್ಟವಾಗಿ ಹೇಳಿತ್ತು. ಹೀಗಿದ್ದರೂ, ಜಲವಿದ್ಯುತ್ ಯೋಜನೆಗೆ ಬೆಟ್ಟದೊಳಗೆ ಸುರಂಗ ಹಾಗೂ ಬೆಟ್ಟದ ಪಕ್ಕದಲ್ಲೇ ಹೆಲಾಂಗ್-ಮಾರ್ವಾಡಿ ಹೆದ್ದಾರಿ ಕಾಮಗಾರಿ ಆರಂಭಿಸಲಾಯಿತು. ಹೆದ್ದಾರಿ ನಗರದ ಹೊರಭಾಗದಲ್ಲಿ ಹೋಗುವುದರಿಂದ ಸ್ಥಳೀಯ ಆರ್ಥಿಕತೆಗೆ ಧಕ್ಕೆಯುಂಟಾಗುತ್ತದೆ ಎಂದಿದ್ದ ಉನ್ನತಾಧಿಕಾರ ಸಮಿತಿ, ಪರ್ಯಾಯ ಮಾರ್ಗವನ್ನೂ ಸೂಚಿಸಿತ್ತು. ಆದರೆ, ಇದನ್ನು ಸರಕಾರ ಪರಿಗಣಿಸಲಿಲ್ಲ. ಬೇಸತ್ತ ರವಿ ಚೋಪ್ರಾ, ಫೆಬ್ರವರಿ 2022ರಲ್ಲಿ ಸಮಿತಿಗೆ ರಾಜೀನಾಮೆ ನೀಡಿದರು.

ಇಸ್ರೋ ಮಾಜಿ ಅಧ್ಯಕ್ಷ ಕೆ.ಕಸ್ತೂರಿರಂಗನ್ ನಿಯೋಜಿಸಿದ್ದ ಸಮಿತಿಯು ಉತ್ತರಾಖಂಡ ಮತ್ತು ಹಿಮಾಚಲಪ್ರದೇಶದಲ್ಲಿರುವ ಹಿಮಾಲಯ ಪರ್ವತ ಶ್ರೇಣಿಯ ಸಮಗ್ರ ನಕ್ಷೆಯನ್ನು ಸರಕಾರಕ್ಕೆ ಸಲ್ಲಿಸಿತ್ತು. ರಾಷ್ಟ್ರೀಯ ದೂರ ಸಂವೇದಿ ಏಜೆನ್ಸಿ ಸೇರಿದಂತೆ 12 ಪ್ರಮುಖ ಸಂಸ್ಥೆಗಳು ಅಧ್ಯಯನದಲ್ಲಿ ಪಾಲ್ಗೊಂಡಿದ್ದವು. ಜೋಶಿಮಠಕ್ಕೆ ಸೇರಿದ 124.5 ಚದರ ಕಿಲೋಮೀಟರ್ ಪ್ರದೇಶ ಭೂಕುಸಿತಕ್ಕೆ ತುತ್ತಾಗುವ ಸಾಧ್ಯತೆ ಇದೆ ಎಂದು ಸಮಿತಿ ಗುರುತಿ ಸಿತ್ತು. ಡೆಹ್ರಾಡೂನ್‌ನಲ್ಲಿ ನಡೆದ ವರದಿ ಕುರಿತ ಸಮಾಲೋಚನೆಯಲ್ಲಿ ಅಗತ್ಯ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಸರಕಾರ ಭರವಸೆ ನೀಡಿತು. ಅಷ್ಟಲ್ಲದೆ, ಭೂಕುಸಿತದ ನಿಖರ ಕಾರಣ ಕಂಡುಹಿಡಿಯಲು ಹಾಗೂ ಅಗತ್ಯ ಪರಿಹಾರ ಸೂಚಿಸಲು ರಾಜ್ಯ ಸರಕಾರದ ವತಿಯಿಂದ ಆಗಸ್ಟ್ 2022ರಲ್ಲಿ ಭೂವೈಜ್ಞಾನಿಕ ಸಮೀಕ್ಷೆ ನಡೆದಿತ್ತು. ಜೋಶಿಮಠ ಪಟ್ಟಣದ ಬುನಾದಿ ಅಸ್ಥಿರವಾಗಿದೆ ಎಂದು ಸಮೀಕ್ಷೆ ಹೇಳಿತ್ತು. ಹಿಮಗಲ್ಲುಗಳು ಇರುವ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಿಸಕೂಡದು ಎಂದು ಸುಪ್ರೀಂ ಕೋರ್ಟ್ 2014ರಲ್ಲಿ ಹೇಳಿತ್ತು. ಆದರೆ, ಅಣೆಕಟ್ಟು-ಜಲವಿದ್ಯುತ್ ಯೋಜನೆಗಳು ಅಡೆತಡೆಯಿಲ್ಲದೆ ನಿರ್ಮಾಣಗೊಂಡವು. ಈಗ ಮತ್ತೆ ಸುಪ್ರೀಂ ಕೋರ್ಟ್ ರಂಗ ಪ್ರವೇಶಿಸಿದೆ.

ಜೋಶಿಮಠದಲ್ಲಿ 600ಕ್ಕೂ ಅಧಿಕ ಮನೆಗಳು ಬಿರುಕು ಬಿಟ್ಟಿದ್ದು, 6,000 ಜನರನ್ನು ಸ್ಥಳಾಂತರಿಸಲಾಗಿದೆ. ಸರಕಾರ ಪ್ರತೀ ಕುಟುಂಬಕ್ಕೆ ಆರು ತಿಂಗಳು ಮಾಸಿಕ 4,000 ರೂ. ನೆರವು ಘೋಷಿಸಿದೆ. ಪ್ರಕರಣವನ್ನು ರಾಷ್ಟ್ರೀಯ ದುರಂತವೆಂದು ಘೋಷಿಸಬೇಕೆಂದು ಸ್ವಾಮಿ ಮುಕ್ತೇಶ್ವರಾನಂದ ಸರಸ್ವತಿ ಅವರು ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಮನುಷ್ಯರು ಪ್ರಕೃತಿಯನ್ನು ಮಣಿಸಬಹುದು ಎಂದುಕೊಳ್ಳುತ್ತಾರೆ. ಆದರೆ, ಭೂಮಿ ಒಂದು ಹಂತದ ಬಳಿಕ ತನ್ನ ಧಾರಣ ಶಕ್ತಿಯನ್ನು ಕಳೆದುಕೊಂಡು ಉಗ್ರವಾಗಿ ಪ್ರತಿಕ್ರಿಯಿಸುತ್ತದೆ. ಸರಕಾರ ಹಾಗೂ ನ್ಯಾಯಾಂಗ ಹಿಮಾಲಯವನ್ನು ರಕ್ಷಿಸಲು ವಿಫಲವಾಗಿವೆ. ಚರಿತ್ರೆಯಿಂದ ಮನುಷ್ಯ ಪಾಠ ಕಲಿಯುವುದಿಲ್ಲ ಎನ್ನುವುದಕ್ಕೆ ಜೋಶಿಮಠ ದುರಂತ ಒಂದು ಉದಾಹರಣೆಯಷ್ಟೇ.