ಪ್ರೀತಂ ಆಕ್ರಮಣಕಾರಿ ನಡೆ; ರೇವಣ್ಣ ರಣತಂತ್ರ ಏನು?

Update: 2023-01-13 04:47 GMT

ಎಚ್.ಡಿ.ರೇವಣ್ಣ ಕುಟುಂಬ ಮತ್ತು ಪ್ರೀತಂ ಗೌಡ ಮಧ್ಯೆಯಷ್ಟೇ ಪೈಪೋಟಿಯೆ? ಜೆಡಿಎಸ್‌ನಿಂದ ಕಿತ್ತುಕೊಂಡ ಹಾಸನದಲ್ಲಿ ಈ ಸಲವೂ ಬಿಜೆಪಿಯದ್ದೇ ಗೆಲುವೇ? ಏನಿರಬಹುದು ಪ್ರೀತಂ ಆಕ್ರಮಣಕಾರಿ ನಡೆಯೆದುರು ರೇವಣ್ಣ ರಣತಂತ್ರ? ಇವರಿಬ್ಬರ ಜಿದ್ದಾಜಿದ್ದಿ ನಡುವೆ ಕಾಂಗ್ರೆಸ್‌ನಿಂದ ಕಣಕ್ಕಿಳಿಯುವವರು ಯಾರು?

ಹಾಸನ ಜಿಲ್ಲೆಯ ಪ್ರಮುಖ ಕ್ಷೇತ್ರಗಳಲ್ಲಿ ಹಾಸನ ವಿಧಾನಸಭಾ ಕ್ಷೇತ್ರವೂ ಒಂದು. ಜಿಲ್ಲೆಯ ಒಟ್ಟು ಏಳು ಕ್ಷೇತ್ರಗಳ ಪೈಕಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರವೇ ಬಿಜೆಪಿಯಿರುವುದು. ಉಳಿದ ಕ್ಷೇತ್ರಗಳಲ್ಲಿ ಜೆಡಿಎಸ್ ಇದೆ. ಹಾಸನದಲ್ಲಿ ಜೆಡಿಎಸ್ ಕೋಟೆಗೆ ಲಗ್ಗೆ ಹಾಕಿರುವ ಬಿಜೆಪಿಯ ಪ್ರೀತಂ ಗೌಡ ಇಲ್ಲಿ ರೇವಣ್ಣ ಕುಟುಂಬಕ್ಕೆ ದೊಡ್ಡ ಸವಾಲಾಗಿದ್ದಾರೆ. ಮತ್ತದನ್ನು ರೇವಣ್ಣ ಹೇಗೆ ಎದುರಿಸಲಿದ್ದಾರೆ, ಅವರ ರಾಜಕೀಯ ನಡೆಗಳು ಏನಿರಲಿವೆ ಎಂಬುದು ಕುತೂಹಲಕಾರಿಯಾಗಿದೆ.

ಪ್ರೀತಂ ಪ್ರಾಬಲ್ಯ


ಜೆಡಿಎಸ್ ಭದ್ರಕೋಟೆಯಾಗಿದ್ದ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ರಾಜಕಾರಣ ರಂಗೇರಿದೆ. ಬಿಜೆಪಿಯ ಪ್ರೀತಂ ಗೌಡ ಶಾಸಕರಾಗಿದ್ದಾರೆ. ಇಲ್ಲಿ ಇರುವುದು ‘ಪ್ರೀತಂ ಬಿಜೆಪಿ’, ಭಾರತೀಯ ಜನತಾ ಪಕ್ಷ ಅಲ್ಲ ಎಂದು ಕಾಂಗ್ರೆಸ್ ಹೇಳುವಷ್ಟು ಮಟ್ಟಿಗೆ ಶಾಸಕ ಪ್ರೀತಂ ಗಟ್ಟಿಯಾಗಿ ತಮ್ಮ ಹಿಡಿತ ಸಾಧಿಸಿದ್ದಾರೆ.

ಅವರ ಹೇಳಿಕೆಗಳು ರೇವಣ್ಣ ಕುಟುಂಬವನ್ನು ಕೆರಳಿಸುವ ಹಾಗಿರುತ್ತವೆ. ನನ್ನ ವಿರುದ್ಧ ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಸ್ಪರ್ಧಿಸಲು ಪಂಥಹ್ವಾನ ನೀಡಿ, 50 ಸಾವಿರ ಮತಗಳ ಅಂತರದಲ್ಲಿ ಒಂದು ಮತ ಕಡಿಮೆಯಾದರೆ ರಾಜೀನಾಮೆ ನೀಡಿ ಮತ್ತೆ ಸ್ಪರ್ಧಿಸುತ್ತೇನೆ ಎನ್ನುತ್ತಾರೆ ಅವರು.
ಅವರ ಇನ್ನೊಂದು ಮಾತು ಕೂಡ ವಿವಾದವೆಬ್ಬಿಸಿತ್ತು. ‘‘ಭವಾನಿ ರೇವಣ್ಣ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಮದ್ಯಪಾನ ಮಾಡಿ ಬಂದು ಮಾತನಾಡುತ್ತಾರೆ. ಅವರಿಗೆ ಥರ್ಟಿ, ಸಿಕ್ಸ್ಟಿ ಎಲ್ಲ ಸಾಲೋದಿಲ್ಲ’’ ಎಂದಿದ್ದರು ಒಮ್ಮೆ.
ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಜೆಡಿಎಸ್ ಗೆ ಕಿರಿಕಿರಿಯಾಗುವಂತೆ ಮಾಡುವ ಪ್ರೀತಂ ಗೌಡ ಹೇಳಿಕೆಗಳಿಗೆ ಜೆಡಿಎಸ್ ಮರು ಹೇಳಿಕೆ ನೀಡಲು ತತ್ತರಿಸುತ್ತದೆ. ಪ್ರೀತಂ ವಿರುದ್ಧ ಕಾಂಗ್ರೆಸ್, ಜೆಡಿಎಸ್ ಮತ್ತು ಆಮ್ ಆದ್ಮಿ ಪಾರ್ಟಿ ಸಹ ಮುಗಿಬೀಳುತ್ತವೆ. ಹೀಗಾಗಿ ಹಾಸನ ವಿಧಾನಸಭಾ ಕ್ಷೇತ್ರ ಸದಾ ಸುದ್ದಿಯಲ್ಲಿರುತ್ತದೆ.

1999ರಲ್ಲಿ ಕೆ.ಎಚ್. ಹನುಮೇಗೌಡ ಬಿಜೆಪಿಯ ಶಾಸಕರಾಗಿದ್ದರು. ಅವರು ಕಾಂಗ್ರೆಸ್‌ನಿಂದ ಎರಡು ಬಾರಿ ಹಾಗೂ ಪಕ್ಷೇತರರಾಗಿ ಒಂದು ಬಾರಿ ಗೆಲುವು ಸಾಧಿಸಿದ್ದರು. 1994ರಲ್ಲಿ ಜನತಾ ದಳದಿಂದ ಎಚ್.ಎಸ್. ಪ್ರಕಾಶ್ ಗೆದ್ದು, ಆನಂತರ 2004, 2008 ಹಾಗೂ 2013ರಲ್ಲಿ ಪ್ರಕಾಶ್ ಹ್ಯಾಟ್ರಿಕ್ ಗೆಲುವು ಸಾಧಿಸಿದರು. 2018ರ ಚುನಾವಣಿಯಲ್ಲಿ ಬಿಜೆಪಿಯ ಪ್ರೀತಂ ಗೌಡ ವಿರುದ್ಧ ಅವರು ಸೋತರು.
ಸದ್ಯಕ್ಕೆ ಹಾಸನ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಶಾಸಕ ಪ್ರೀತಂ ಗೌಡ ಅವರದ್ದೇ ಪ್ರಾಬಲ್ಯ. ಹಾಗಾಗಿ ಈ ಸಲದ ಚುನಾವಣೆಯಲ್ಲಿಯೂ ಬಿಜೆಪಿಯಿಂದ ಅವರೇ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಈ ಕಾರಣದಿಂದಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಅಳೆದೂ ತೂಗಿ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕಾಗಿದೆ.

ಜೆಡಿಎಸ್ ಹಾಗೂ ಕಾಂಗ್ರೆಸ್ ಲೆಕ್ಕಾಚಾರ ಏನು?

ಜೆಡಿಎಸ್‌ನಿಂದ ಎಚ್.ಡಿ. ರೇವಣ್ಣ ಪತ್ನಿ, ಜಿ.ಪಂ. ಮಾಜಿ ಸದಸ್ಯೆ ಭವಾನಿ ರೇವಣ್ಣ ಇಲ್ಲವೇ ಮಾಜಿ ಶಾಸಕ ಎಚ್.ಎಸ್. ಪ್ರಕಾಶ್ ಪುತ್ರ ಸ್ವರೂಪ್ ಹೆಸರುಗಳು ಪ್ರಬಲವಾಗಿ ಕೇಳಿಬರುತ್ತಿರುವೆ. ಈ ಮಧ್ಯೆ ಎಚ್.ಡಿ. ರೇವಣ್ಣ ಅವರೇ ಸ್ವತಃ ಸ್ಪರ್ಧಿಸಲು ಮುಂದಾಗಿದ್ದಾರೆ ಎಂಬ ಮಾತುಗಳೂ ಇವೆ.
ಕಾಂಗ್ರೆಸ್‌ನಿಂದ ಬಾಗೂರು ಮಂಜೇಗೌಡ, ಬನವಾಸೆ ರಂಗಸ್ವಾಮಿ, ಬಿ.ಕೆ. ರಂಗಸ್ವಾಮಿ ಪ್ರಬಲ ವಾದ ಆಕಾಂಕ್ಷಿಗಳು.
ಆಮ್ ಆದ್ಮಿ ಪಾರ್ಟಿಯಿಂದ ಅಗಿಲೆ ಯೋಗೇಶ್ ಅಭ್ಯರ್ಥಿ ಯಾಗಿದ್ದಾರೆ. ಇವರು ಬಿಜೆಪಿಯಿಂದ ಜೆಡಿಎಸ್ ಸೇರಿ, ಸದ್ಯ ಆಮ್ ಆದ್ಮಿ ಪಾರ್ಟಿಯಲ್ಲಿದ್ದಾರೆ.

2018ರ ವಿಧಾನಸಭಾ ಚುನಾವಣೆ ಫಲಿತಾಂಶವನ್ನೊಮ್ಮೆ ಗಮನಿಸುವುದಾದರೆ,
ಬಿಜೆಪಿಯ ಪ್ರೀತಂ ಜೆ. ಗೌಡ - 63,348 ಮತಗಳು
ಜೆಡಿಎಸ್‌ನ ಎಚ್.ಎಸ್.ಪ್ರಕಾಶ್ - 50,342 ಮತಗಳು
ಕಾಂಗ್ರೆಸ್‌ನ ಎಚ್.ಕೆ. ಮಹೇಶ್ - 38,101 ಮತಗಳು:

 ಜೆಡಿಎಸ್ ಕೋಟೆಗೆ ಲಗ್ಗೆ ಹಾಕಿದ ಪ್ರೀತಂ ಗೌಡ ಗೆಲುವಿನ ಅಂತರ ಬಹಳ ದೊಡ್ಡದಿರಲಿಲ್ಲ ಎನ್ನಿಸಿದರೂ, ಜೆಡಿಎಸ್ ಪ್ರಾಬಲ್ಯ ಇಡೀ ಜಿಲ್ಲೆಯಲ್ಲಿ ಇರುವ ಹಿನ್ನೆಲೆಯಲ್ಲಿ ನೋಡಿಕೊಂಡರೆ ಮತ್ತು ಹ್ಯಾಟ್ರಿಕ್ ಜಯ ಸಾಧಿಸಿದವರೊಬ್ಬರನ್ನು ಬದಿಗೆ ಸರಿಸಿ ಗೆದ್ದಿದ್ದಾರೆಂಬ ಕಾರಣಕ್ಕೆ ಗಮನ ಸೆಳೆಯುವಂಥದ್ದಾಗಿದೆ. ಈ ಸಲವಂತೂ ಅವರ ಪ್ರಭಾವ ಹೆಚ್ಚೇ ಇರಲಿದೆ ಎಂಬ ಮಾತುಗಳಿವೆ. ಹೀಗಾಗಿ, ಯಾವ ಪಕ್ಷದಿಂದ ಯಾರೇ ಅಭ್ಯರ್ಥಿಗಳಿದ್ದರೂ ಗೆಲ್ಲುವವರು ಯಾರು ಎಂಬ ಪ್ರಶ್ನೆ ಬಂದಾಗ, ಕ್ಷೇತ್ರದಲ್ಲಿ ಪ್ರೀತಂ ಗೌಡರೇ ಗೆಲ್ಲುವ ಸಾಧ್ಯತೆ ಹೆಚ್ಚು ಎಂಬುದು ಖಚಿತವೆಂಬಂತೆ ವ್ಯಕ್ತವಾಗುತ್ತಿರುವ ಅಭಿಪ್ರಾಯ.

ಪ್ರೀತಂ ಪ್ಲಸ್ ಪಾಯಿಂಟ್

ಶಾಸಕರಾಗಿ ಸಾಕಷ್ಟು ಕೆಲಸಗಳನ್ನು ಅವರು ಮಾಡಿರುವುದು ಹಾಗೂ ಜನರೊಂದಿಗೆ ಬೆರೆಯುವ ಹಾಗೂ ಮುಕ್ತವಾಗಿ ಮಾತನಾಡುವ ಸ್ವಭಾವವೇ ಅವರಿಗೆ ಪ್ಲಸ್ ಪಾಯಿಂಟ್ ಎನ್ನಲಾಗುತ್ತದೆ.

ಎಚ್.ಡಿ. ರೇವಣ್ಣ ಹಾಗೂ ಅವರ ಕುಟುಂಬ ಸಾಮಾನ್ಯ ಜನರೊಂದಿಗೆ ಮಾತನಾಡುವುದಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ತಮ್ಮದೇ ಧಾಟಿಯಲ್ಲಿ ವ್ಯವಹರಿಸುತ್ತಾರೆ. ಫೇಸ್ ವ್ಯಾಲ್ಯೂ ನೋಡಿ ಮಾತನಾಡುತ್ತಾರೆ ಎಂಬುದು ಆ ಕುಟುಂಬದ ಬಗೆಗಿನ ಸಾಮಾನ್ಯ ಆರೋಪಗಳು. ರೇವಣ್ಣ ಕುಟುಂಬದ ನಡೆ ಬಗ್ಗೆ ಜನರಲ್ಲಿ ಈ ಕಾರಣಕ್ಕೆ ತೀವ್ರ ಅಸಮಾಧಾನವಿದೆ ಎನ್ನಲಾಗುತ್ತಿದೆ.

ಆದರೆ, ಪ್ರೀತಂ ಹಾಗಲ್ಲ ಸದಾ ಜನರೊಂದಿಗೆ ಇರುತ್ತಾರೆ. ಜೊತೆಗೆ ರೇವಣ್ಣ ಕುಟುಂಬದ ವಿರುದ್ಧ ಮಾತನಾಡುವುದೇ ಸಾಧ್ಯವಿಲ್ಲ ಎಂಬಂತಹ ಸನ್ನಿವೇಶವಿದ್ದಲ್ಲಿ ಪ್ರೀತಂ ಗೌಡ ಅಬ್ಬರವಂತೂ ಜನರನ್ನು ಬೆರಗಾಗಿಸಿದೆ. ಸಂಘ ಪರಿವಾರಕ್ಕೆ ಬಿಸಿತುಪ್ಪಪ್ರೀತಂ ನಡೆ
ಈಗಾಗಲೇ ಚುನಾವಣೆಗೆ ತಯಾರಿ ನಡೆಸುತ್ತಿರುವ ಪ್ರೀತಂ ಗೌಡ ಅವರ ಮಾತಿನ ನಡೆ ಪಕ್ಷದೊಳಗೇ ಹಿರಿಯರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎಂಬುದು ಕೂಡ ಕ್ಷೇತ್ರದಲ್ಲಿ ಕೇಳಿಬರುತ್ತಿರುವ ಮಾತು.

ಮುಸ್ಲಿಮರ ಓಲೈಕೆಯಲ್ಲಿ ಪ್ರೀತಂ ತೊಡಗಿದ್ದಾರೆ. ಇಫ್ತಾರ್ ಪಾರ್ಟಿಗಳಲ್ಲಿ ಭಾಗಿಯಾಗುವುದು, ಮುಸ್ಲಿಮರ ನೂತನ ಹೊಟೇಲ್, ಅಂಗಡಿಗಳ ಉದ್ಘಾಟನೆ, ಮುಸ್ಲಿಮರ ಮನೆ ಮನೆಗೆ ಹೋಗಿ ಹಕ್ಕುಪತ್ರ ವಿತರಿಸುವುದು ಇವೆಲ್ಲವೂ ಸಂಘ ಪರಿವಾರಕ್ಕೆ ನುಂಗಲಾರದ ಬಿಸಿ ತುಪ್ಪವಾಗಿದೆ ಎನ್ನಲಾಗುತ್ತಿದೆ.

ಆದರೆ ಇದೇ ಪ್ರೀತಂ ಗೌಡ ಇನ್ನೊಂದೆಡೆ ಸಂಘ ಪರಿವಾರದ ನಾಯಕರನ್ನು ಓಲೈಸಲು ಹನುಮ ಜಯಂತಿಯನ್ನೂ ಅದ್ಧೂರಿಯಾಗಿ ಮಾಡಿದ್ದಾರೆ. ಕಲಾ ಭವನದಲ್ಲಿ ಪಾಂಚಜನ್ಯ ಗಣಪತಿ ಪ್ರತಿಷ್ಠಾಪಿಸಿ ಸಂಘಪರಿವಾರದವರನ್ನು ಖುಷಿಪಡಿಸಿದ್ದಾರೆ.
ಜೆಡಿಎಸ್‌ನಿಂದ ನಾಲ್ಕು ಬಾರಿ ಗೆದ್ದಿದ್ದ ಎಚ್.ಎಸ್. ಪ್ರಕಾಶ್ ಪ್ರೀತಂ ಗೌಡ ಎದುರು ಸೋತ ಬಳಿಕ ನಿಧನರಾಗಿದ್ದಾರೆ. ಅವರ ಮಗ ಸ್ವರೂಪ್ ಈಗ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ರೇವಣ್ಣ ಸ್ಪರ್ಧಿಸುವರೆ?
 ಹಾಸನ ಜಿಲ್ಲೆಯ ಕೇಂದ್ರ ಕ್ಷೇತ್ರವನ್ನೇ ಕಳೆದುಕೊಂಡ ಎಚ್.ಡಿ. ರೇವಣ್ಣ ಮತ್ತೆ ಶತಾಯಗತಾಯ ಅದನ್ನು ಮರಳಿ ದಕ್ಕಿಸಿಕೊಳ್ಳಲೇಬೇಕು ಎಂಬ ಪ್ರಯತ್ನದಲ್ಲಿದ್ದಾರೆ. ಸ್ವರೂಪ್‌ಗೆ ಟಿಕೆಟ್ ನೀಡಿ ಅನುಕಂಪದ ಮತಗಳು ಹಾಗೂ ಕ್ಷೇತ್ರದಲ್ಲಿ ಹೆಚ್ಚಿರುವ ಒಕ್ಕಲಿಗ ಸಮುದಾಯದ ದಾಸಗೌಡರ ಮತಗಳನ್ನು ಪಡೆಯುವ ಲೆಕ್ಕಾಚಾರದಲ್ಲಿದ್ದಾರೆ. ಜೊತೆಗೆ ಎಚ್.ಡಿ. ರೇವಣ್ಣ ಸಂಪೂರ್ಣ ತೊಡಗಿಸಿಕೊಂಡರೆ ಫಲಿತಾಂಶ ಪಡೆಯಬಹುದು ಎಂಬ ಲೆಕ್ಕಾಚಾರವೂ ಇದೆ. ಇನ್ನೊಂದೆಡೆ, ಭವಾನಿ ರೇವಣ್ಣ ಅವರನ್ನೇ ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವ ಅಥವಾ ಸ್ವತಃ ರೇವಣ್ಣ ಅವರೇ ಸ್ಪರ್ಧಿಸುವ ಆಲೋಚನೆಯನ್ನೂ ದೇವೇಗೌಡರ ಕುಟುಂಬ ಮಾಡುತ್ತಿದೆ.

ಕಾಂಗ್ರೆಸ್ ಕಂಟಕಗಳು ನಿವಾರಣೆಯಾಗುವವೆ?

ಈ ಎರಡು ಪಕ್ಷಗಳ ಪ್ರಬಲ ಪೈಪೋಟಿ ಮಧ್ಯೆ ಕಾಂಗ್ರೆಸ್ ಪರಿಸ್ಥಿತಿ ಮಾತ್ರ ಅಧೋಗತಿಗೆ ಇಳಿದಿದೆ. ಪರಿಚಿತ ಅಭ್ಯರ್ಥಿ ಎಚ್.ಕೆ. ಮಹೇಶ್ ಚುನಾವಣೆಯಿಂದ ದೂರವಾಗಿದ್ದಾರೆ. ಬಾಗೂರು ಮಂಜೇಗೌಡ, ಬನವಾಸೆ ರಂಗಸ್ವಾಮಿ ಟಿಕೆಟ್‌ಗಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಈ ಮಧ್ಯೆ ಬಿ.ಕೆ. ರಂಗಸ್ವಾಮಿ ತಾನೂ ಇದ್ದೇನೆ ಎಂದು ಹೇಳುತ್ತಿದ್ದಾರೆ.

ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಇಲ್ಲದಂತಾಗಿದೆ. ಕಚ್ಚಾಟ, ಗದ್ದಲ, ಆರೋಪ ಪ್ರತ್ಯಾರೋಪಗಳು ನಿರಂತರವಾಗಿವೆ. ಗುಂಪುಗಾರಿಕೆ ನಿಲ್ಲುತ್ತಿಲ್ಲ. ಇವೆಲ್ಲವೂ ಕಾಂಗ್ರೆಸ್ ಪಾಲಿನ ಕಂಟಕಗಳಾಗಿದ್ದು, ಅವನ್ನು ಬಗೆಹರಿಸಿಕೊಂಡು, ಸಮರ್ಥ ಪೈಪೋಟಿಯನ್ನು ಕ್ಷೇತ್ರದಲ್ಲಿ ಕೊಟ್ಟೀತೇ ಎಂಬುದು ಪ್ರಶ್ನೆಯಾಗಿದೆ.