×
Ad

ಸಿದ್ದರಾಮಯ್ಯ ಸೀಟು ಖರೀದಿಸಿರುವ ಸಂಗತಿ ನಿಜಕ್ಕೂ ನಾಚಿಕೆಗೇಡು: ಆಡಿಯೊ ಬಿಡುಗಡೆ ಮಾಡಿದ BJP

Update: 2023-01-13 14:55 IST

ಬೆಂಗಳೂರು, ಜ.13: 'ಕೊನೆಯ ಚುನಾವಣೆಗೆ ಭರ್ಜರಿ ಸಿದ್ಧತೆ ಮಾಡಿಕೊಂಡಿರುವ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಇಷ್ಟು ದಿನ ಹುಡುಕಾಟ ನಡೆಸಿ ಸೀಟು ಖರೀದಿಸಿರುವ ಸಂಗತಿ ನಿಜಕ್ಕೂ ನಾಚಿಕೆಗೇಡು' ಎಂದು ಬಿಜೆಪಿ ಆರೋಪಿಸಿದೆ. 

ಸಿದ್ದರಾಮಯ್ಯ ಅವರಿಗಾಗಿ ಜೆಡಿಎಸ್‌ ಉಚ್ಚಾಟಿತ ಶಾಸಕ ಶ್ರೀನಿವಾಸ ಗೌಡ ಅವರು ಕ್ಷೇತ್ರ ಬಿಟ್ಟು ಕೊಡುವುದು, ಅದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಅವರು ನೆರವು ನೀಡುವ ಭರವಸೆ ನೀಡಿದ್ದಾರೆ ಎಂದು ಶ್ರೀನಿವಾಸಗೌಡ ಅವರು ತಮ್ಮ ಆಪ್ತರೊಂದಿಗೆ ಹೇಳಿಕೊಂಡಿರುವುದು ಎನ್ನಲಾದ ಆಡಿಯೊವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಬಿಜೆಪಿ,  'ಸೀಟು ಖರೀದಿಗೆ ಶ್ರೀನಿವಾಸ ಗೌಡರ ಜತೆ 17 ಕೋಟಿ ರೂ.ಗೆ ಮಾಡಿಕೊಂಡಿರುವ ಡೀಲ್‌ ಪ್ರಜಾಪ್ರಭುತ್ವದ ಪಾಲಿನ ದುರಂತ' ಎಂದು ಹೇಳಿದೆ.  

'ಕಾಂಗ್ರೆಸ್  ಅಧ್ಯಕ್ಷರು ಟಿಕೆಟ್‌ ಮಾರಾಟಕ್ಕಿಟ್ಟರೆ, ವಿರೋಧ ಪಕ್ಷದ ನಾಯಕರು ಸೀಟನ್ನೇ ಖರೀದಿ ಮಾಡುವವರು. ಚುನಾವಣಾ ರಾಜಕಾರಣದಲ್ಲಿ ಹಿಂದೆಂದೂ ಕಂಡು ಕೇಳರಿಯದ ಅಕ್ರಮ-ಸಕ್ರಮ ಯೋಜನೆಗಳನ್ನು ಕಾಂಗ್ರೆಸ್ ಚಾಲನೆಗೆ ತಂದಿದೆ' ಎಂದು ಕುಟುಕಿದೆ. 

''ಹಲವು ಕೆಟ್ಟ ಪರಂಪರೆ ಹುಟ್ಟುಹಾಕಿದ ಕೀರ್ತಿ ಇರುವ ಕಾಂಗ್ರೆಸ್ ಪಕ್ಷದ ಕಿರೀಟಕ್ಕೆ ಕೋಲಾರ ಸೀಟು ಖರೀದಿ ಪ್ರಹಸನ ಮತ್ತೊಂದು ಗರಿ. ಅಸ್ತಿತ್ವಕ್ಕಾಗಿ ಮಾಡುವ ಕೊನೆಯ ಹೋರಾಟಗಳಲ್ಲಿ ಎಲ್ಲಾ ನೀತಿಗಳನ್ನೂ ಬದಿಗೊತ್ತಲಾಗುತ್ತದೆ. ಆದರೆ ಈ ಪ್ರಮಾಣದಲ್ಲಿ ಆಗುತ್ತಿರುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಮಾರಕ'' ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ. 

Similar News