ಬಿಜೆಪಿಯವರಿಗೆ ಅಭಿವೃದ್ಧಿ ಬಗ್ಗೆ ಮಾತನಾಡುವ ಎದೆಗಾರಿಕೆ ಇಲ್ಲ: ಧ್ರುವನಾರಾಯಣ ವಾಗ್ದಾಳಿ

Update: 2023-01-13 12:08 GMT

ಮೈಸೂರು,ಜ.13: ಬಿಜೆಪಿಯವರಿಗೆ ಅಭಿವೃದ್ಧಿ ಬಗ್ಗೆ ಮಾತನಾಡುವ ಎದೆಗಾರಿಕೆ ಇಲ್ಲ ಹಾಗಾಗಿಯೇ ರಾಮನಗರದಲ್ಲಿ ರಾಮಂದಿರ, ಮಂಡ್ಯದಲ್ಲಿ ಆಂಜನೇಯ ದೇವಸ್ಥಾನ ಎಂಬ ಭಾವನಾತ್ಮಕ ವಿಚಾರಗಳನ್ನು ಜನರ ಮುಂದಿಟ್ಟು ರಾಜಕಾರಣ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು  ಕಳೆದ ಚುನಾವಣೆ ಸಂದರ್ಭದಲ್ಲಿ 300 ಭರವಸೆಯನ್ನು ರಾಜ್ಯದ ಜನರಿಗೆ ನೀಡಿದ್ದರು. ಅದರಲ್ಲಿ ಎಷ್ಟು ಭರವಸೆ ಈಡೇರಿಸಲಾಗಿದೆ ಎಂಬುದನ್ನು ಜನರ ಮುಂದೆ ಇಡುವ ಎದೆಗಾರಿಕೆ  ಅವರಿಗಿಲ್ಲ, ಹಾಗಾಗಿ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ರಾಮನಗರದಲ್ಲಿ ರಾಮಮಂದಿರ, ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಆಂಜನೇಯ ದೇವಸ್ಥಾನ ಎನ್ನುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಕ್ಷಿಣ ಭಾರತದಲ್ಲಿ 2008 ರಲ್ಲಿ ಮೊಟ್ಟಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಉತ್ತಮ ಆಡಳಿತ ನೀಡಲು ಸಾಧ್ಯವಾಗಲಿಲ್ಲ. ಈ ಅವಧಿಯಲ್ಲಿ ಭ್ರಷ್ಟಾಚಾರ ಸೇರಿದಂತೆ ಅನೇಕ ಕಾರಣಗಳಿಗೆ  6 ಸಚಿವರು ರಾಜೀನಾಮೆ ನೀಡಿದರು. ಮುಖ್ಯಮಂತ್ರಿಯೊಬ್ಬರು ಜೈಲಿಗೆ ಹೋದರು.‌ನಂತರ ಮೂರು ಪಕ್ಷವಾಗಿ ಹೋಳಾಯಿತು. ಈಗ ಮತ್ತೆ ಅಧಿಕಾರಕ್ಕೆ ಬಂದ ಬಿಜೆಪಿ ಆಡಳಿತದಲ್ಲಿ 3 ಸಚಿವರು ರಾಜೀನಾಮೆ ನೀಡಿದ್ದಾರೆ. ಇವತ ಆಡಳಿತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ದೇಶದಲ್ಲಿ ಅತೀ ಹೆಚ್ಚು ಭ್ರಷ್ಟಾಚಾರದಲ್ಲಿ ತೊಡಗಿರುವ ಯಾವುದಾದರು ರಾಜ್ಯ ಇದೆ ಎಂದರೆ ಅದು ಕರ್ನಾಟಕ ಮಾತ್ರ ಎಂದು ಕಿಡಿಕಾರಿದರು.

ಕಾಂಗ್ರೆಸ್ ಪಕ್ಷದ ವತಿಯಿಂದ ನಿನ್ನೆಯಿಂದ ಆರಂಭವಾದ ಪ್ರಜಾಧ್ವನಿ ಬಸ್ ಯಾತ್ರೆಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ನಿನ್ನೆ ಚಿಕ್ಕೋಡಿ, ಬೆಳಗಾಂ ನಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಮೈಸೂರು, ಚಾಮರಾಜನಗರಕ್ಕೆ ಜ.26 ರಂದು ಬಸ್ ಯಾತ್ರೆ ಆಗಮಿಸಲಿದ್ದು, ಮೈಸೂರಿನಲ್ಲಿ 1 ಲಕ್ಷಕ್ಕಿಂತಲೂ ಹೆಚ್ಚು ಜನ ಸೇರುವ ಸಾಧ್ಯತೆ ಇದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳ ಘೋಷಣೆ ಮಾಡುತ್ತಿತ್ತು. ಆದರೆ ಈ ಬಾರಿ ಚುನಾವಣೆಗೂ ಮುನ್ನ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತಿದೆ. ಈಗಾಗಲೆ ಹಾಲಿ ಸಂಸದರು ಮತ್ತು ಮಾಜಿ ಸಂಸದರನ್ನು ಒಂದೊಂದು ಕ್ಷೇತ್ರದ ಉಸ್ತುವಾರಿ ವಹಿಸಿ ವರದಿ ತರಿಸಿಕೊಳ್ಳಲಾಗಿದೆ. ಶೀಘ್ರದಲ್ಲೇ 125 ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದರು.

ಜ.16 ರಂದು ಬೆಂಗಳೂರಿನಲ್ಲಿ ಮಹಿಳಾ ಸಮಾವೇಶ ಆಯೋಜನೆ ಮಾಡಲಾಗಿದೆ. ಈ ಸಮಾವೇಶವನ್ನು ನಮ್ಮ ಪಕ್ಷದ ನಾಯಕಿ ಪ್ರಿಯಾಂಕ ವಾದ್ರ ಉದ್ಘಾಟಿಸಲಿದ್ದು, ಮೈಸೂರಿನಿಂದ 5 ಸಾವಿರಕ್ಕೂ ಹೆಚ್ಚು ಮಹಿಳಾ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ಹಾಗೂ ಪ್ರಜಾಧ್ವನಿ ಬಸ್ ಯಾತ್ರೆ ದಕ್ಷಿಣ ಉಸ್ತುವಾರಿ ಜೆ.ಸಿ.ಚಂದ್ರಶೇಖರ್, ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ರೋಜಿ ಜಾನ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಮಾಜಿ ಶಾಸಕರುಗಳಾದ ಕಳಲೆ ಕೇಶವಮೂರ್ತಿ, ವಾಸು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಸಿ.ಬಸವರಾಜು, ಕೆಪಿಸಿಸಿ ಸದಸ್ಯರುಗಳಾದ ಗುರುಪಾದಸ್ವಾಮಿ, ಹೆಡತಲೆ ಮಂಜುನಾಥ್, ಮಾಜಿ ಶಾಸಕ ಎಸ್.ಬಾಲರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Similar News