×
Ad

ನಂದಿಬೆಟ್ಟದ ಬಳಿ ಆದಿಯೋಗಿ ಪ್ರತಿಮೆ ಪ್ರತಿಷ್ಠಾಪನೆಗೆ ಹೈಕೋರ್ಟ್ ಅನುಮತಿ

Update: 2023-01-13 18:10 IST

ಬೆಂಗಳೂರು, ಜ.13: ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟದ ಆವಲಗುರ್ಕಿ ಸಮೀಪ ಆದಿಯೋಗಿ ಪ್ರತಿಮೆ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಹೈಕೋರ್ಟ್ ಅವಕಾಶ ನೀಡಿದೆ. ಜತೆಗೆ ಯಾವುದೇ ಕಾಮಗಾರಿಯನ್ನು ನಡೆಸದೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನಿರ್ದೇಶಿಸಿದೆ.

ಈ ಸಂಬಂಧ ಚಿಕ್ಕಬಳ್ಳಾಪುರ ತಾಲೂಕಿನ ಕಸಬಾ ಹೋಬಳಿ ಚಂಬಳ್ಳಿಯ ಕೃಷಿಕ ಎಸ್.ಕ್ಯಾತಪ್ಪ, ಮಸ್ಟೂರು ಗ್ರಾಮದ ಜಿ.ಎಂ.ಶ್ರೀಧರ ಸೇರಿ ನಾಲ್ವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. 

ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿ ಜಗದೀಪ್ ಧನಕರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬರುತ್ತಿರುವ ಆಹ್ವಾನ ಪತ್ರಿಕೆಯನ್ನು ಮುಖ್ಯ ನ್ಯಾಯಮೂರ್ತಿ ಅವರಿದ್ದ ಪೀಠಕ್ಕೆ ಸಲ್ಲಿಸಿ, ಇಶಾ ಪ್ರತಿಷ್ಠಾನ ಪರ ವಕೀಲರು ಕಾರ್ಯಕ್ರಮಕ್ಕೆ ಅನುಮತಿ ಕೋರಿದರು. 

ಆದಿಯೋಗಿ ಪ್ರತಿಮೆ ಆರೋಪಿಸಿರುವ ಸ್ಥಳದಿಂದ 31 ಕಿ. ಮೀ ದೂರದಲ್ಲಿದೆ. ಜ.15ರಂದು ಕಾರ್ಯಕ್ರಮ ನಡೆಸಲು ಈ ಹಿಂದೆಯೇ ನಿರ್ಣಯಿಸಲಾಗಿದೆ. ಪಿಐಎಲ್ ಸಲ್ಲಿಕೆಗೂ ಮುನ್ನವೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಗಣ್ಯರ ಅನುಮತಿ ಮತ್ತು ಒಪ್ಪಿಗೆ ಪಡೆಯಲಾಗಿದೆ ಎಂದು ಇಶಾ ಪ್ರತಿಷ್ಠಾನ ಪರ ವಕೀಲರು ಪೀಠಕ್ಕೆ ವಿವರಿಸಿದರು.

ಇದನ್ನು ಪರಿಗಣಿಸಿದ ನ್ಯಾಯಪೀಠವು, ಆದಿಯೋಗಿ ಪ್ರತಿಷ್ಠಾಪನಾ ಕಾರ್ಯಕ್ರಮ ಪೂರ್ವ ನಿಗದಿತವಾಗಿದೆ. ಇದಕ್ಕೆ ಅಡ್ಡಿ ಮಾಡುವುದು ಸರಿಯಲ್ಲ. ಕಾರ್ಯಕ್ರಮ ಮುಂದುವರೆಸಬಹುದು" ಎಂದು ಹೇಳಿತು. ಈ ವೇಳೆ, ಯಾವುದೇ ಮರ ಕಡಿಯುವುದಿಲ್ಲ. ಕಟ್ಟಡ ನಿರ್ಮಿಸುವುದಿಲ್ಲ ಎಂದು ಇಶಾ ಫೌಂಡೇಶನ್ ಪರ ವಕೀಲರು ನ್ಯಾಯಾಲಯಕ್ಕೆ ಭರವಸೆ ನೀಡಿದರು. ಈ ಹೇಳಿಕೆಯನ್ನು ಪೀಠ ದಾಖಲಿಸಿಕೊಂಡಿತು.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಕಾರ್ಯಕ್ರಮದ ದಿನದಂದು ಪಟಾಕಿ ಹೊಡೆಯಲು ಸಿದ್ಧತೆ ನಡೆಯುತ್ತಿದ್ದು, ಇದರಿಂದ ವನ್ಯಜೀವಿಗಳಿಗೆ ತೊಂದರೆಯಾಗಲಿದೆ. ಹೀಗಾಗಿ ಪಟಾಕಿ ಹೊಡೆಯಬಾರದೆಂದು ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಉಪರಾಷ್ಟ್ರಪತಿ ಬರುವ ಕಾರ್ಯಕ್ರಮದಲ್ಲಿ ಆ ರೀತಿ ನಡೆಯುವುದಿಲ್ಲ ಎಂದು ಅಭಿಪ್ರಾಯಪಟ್ಟು, ಫೆ.2ಕ್ಕೆ ವಿಚಾರಣೆ ಮುಂದೂಡಿತು.

Similar News